ಎದುರಿಗೆ ಇರುವುದಷ್ಟೇ ಸತ್ಯ, ಅದೇ ಬದುಕು ಎನ್ನುವುದು ಉಪ್ಪಿ-2.

ಚಿತ್ರ ನಿಮಗೆ
ತೆರೆಯ ಮೇಲೆ ಏನು ಕಾಣುತ್ತದೆಯೋ ಅದೇ ಸತ್ಯ. ಕಾಣದೆ ಇರುವುದು ಸುಳ್ಳು. ಆದರೆ ಅದೆಲ್ಲವೂ
ಸತ್ಯವೇ? ಉಪ್ಪಿ ಅಲ್ಲೂ ಟ್ವಿಸ್ಟ್ ಇಡುತ್ತಾರೆ. ಕಾಣುವುದು ಕಂಡಾಗಲಷ್ಟೇ ಸತ್ಯ,
ಅದೇಕೆ, ಇದೇಕೆ ಎನ್ನುವ ಪ್ರಶ್ನೆಗಳ ಇರುವೆ ಬಿಟ್ಟುಕೊಳ್ಳಬಾರದು. ಇದು ಪಕ್ಕಾ ಉಪೇಂದ್ರ
ಚಿತ್ರ. ನಾನು, ನಾನು ಎನ್ನುವವ ಒಬ್ಬ, ಎಲ್ಲವನ್ನು ನನಗೆ ಬೇಕು ಎನ್ನುತ್ತಾನೆ,
ಅರಿಷಡ್ವರ್ಗಗಳನ್ನೂ ತನ್ನಲ್ಲೇ ಆಹ್ವಾನಿಸಿಕೊಂಡಿದ್ದಾನೆ, ನೀನು ಎನ್ನುವವ ನನಗೇನು ಬೇಡ
ಎನ್ನುತ್ತಾನೆ, ಮುಂದೇನು, ಹಿಂದೇನು ಎಂಬುದನ್ನು ಯೋಚಿಸುವುದೇ ಇಲ್ಲ, ಇವರಿಬ್ಬರನ್ನು
ಬಿಟ್ಟು ಮತ್ತೊಬ್ಬನಿದ್ದಾನೆ. ಈ ಮೂವರ ಸಮ್ಮಿಲನದ ಚಿತ್ರವೇ ಉಪ್ಪಿ-2. ಈ ಮೂವರು
ಒಬ್ಬನೇನಾ.. ನಾಯಕಿಗೆ ಗೊಂದಲವುಂಟಾಗುತ್ತದೆ. ಹಾಗೆಯೇ ಪ್ರೇಕ್ಷಕನಿಗೂ. ಅದಕ್ಕೆ ಉಪ್ಪಿ
ಕೊಡುವ ಕಾರಣ ಹೌದು ಎಂದರೆ ಹೌದು.. ಇಲ್ಲ ಎಂದರೆ ಇಲ್ಲ. ಮನುಷ್ಯನ ಮೆದುಳಿನಲ್ಲಿ ಮೂರು
ವಿಧ, ಭವಿಷ್ಯವನ್ನು ಚಿಂತಿಸುವವರು, ಭೂತವನ್ನ ನೆನೆದು ಬದುಕುವವರು, ಇವತ್ತಿಗೆ
ಬದುಕುವವರು, ನಮ್ಮಲ್ಲಿ ಮೊದಲೆರೆಡು ಬಗೆಯ ಜನರು ಕಾಣಸಿಗುತ್ತಾರೆ, ಆದರೆ ಮೂರನೆಯ ವಿಧದ
ವ್ಯಕ್ತಿ ಅಪರೂಪ, ಆ ತರಹದ ಒಬ್ಬನೇ ಒಬ್ಬ ವ್ಯಕ್ತಿ ಇದ್ದಾನೆ ಎಂಬುದಾಗಿ ನಾಯಕಿಗೆ
ತಿಳಿದಾಗ ಅವನನ್ನು ಹುಡುಕಿಕೊಂಡು ಹೋಗುತ್ತಾಳೆ, ಇತ್ತ ಅದೇ ನೀನು ಎನ್ನುವ
ವ್ಯಕ್ತಿಯನ್ನು ರೌಡಿಗಳ ಗುಂಪು ಹುಡುಕುತ್ತಿದೆ, ಪೋಲಿಸರೂ ಹುಡುಕುತ್ತಿದ್ದಾರೆ.
ಹಳ್ಳಿಯೊಂದರಲ್ಲಿ ಮುಂದಿನ ಯೋಚನೆಯನ್ನೇ ಮಾಡದೆ, ಈ ಕ್ಷಣವೇ ಸತ್ಯ ಎನ್ನುವ ಅದೇ
ತತ್ವವನ್ನು ನಂಬಿಕೊಂಡಿರುವ ಎಲ್ಲದಕ್ಕೂ ನೀನು ಎನ್ನುವ ವ್ಯಕ್ತಿಯೊಬ್ಬನಿದ್ದಾನೆ. ನಾಯಕಿ
ಅವನ ಹಿಂದೆ ಬೀಳುತ್ತಾಳೆ, ಅವನ ಬದುಕಿನ ತತ್ವ ಅವಳಿಗೆ ಹೌದು ಎನಿಸುತ್ತದೆ. ಅದೇ ಸತ್ಯ
ಎನಿಸಿ ಆ ನಿರ್ಲಿಪ್ತ ವ್ಯಕ್ತಿಯನ್ನು ಪ್ರೀತಿಸುತ್ತಾಳೆ, ಮದುವೆಗೂ ತಯಾರಾಗುತ್ತಾಳೆ.
ಆದರೆ ಆಕೆಗೆ ಮತ್ತೊಂದು ಸತ್ಯದ ಅನಾವರಣವಾಗುತ್ತದೆ. ಈಗಿರುವ ‘ನೀನು’ ಎನ್ನುವ ವ್ಯಕ್ತಿ
ಒಬ್ಬ ಮೋಸಗಾರ. ಆತನೇ ‘ನಾನು’ ಎನ್ನುವ ವ್ಯಕ್ತಿ. ಕೋಟ್ಯಾಂತರ ಆಸ್ತಿಗಾಗಿ ‘ನೀನು’
ಎನ್ನುವ ಮುಖವಾಡ ಹಾಕಿದ್ದಾನೆ ಎಂಬುದು.. ಹಾಗಾದರೆ ‘ನಾನು’ ಸತ್ಯವಾ? ‘ನೀನು’ ಸತ್ಯವಾ?
ಹಾಗಾದರೆ ‘ನಾನು’ ಎನ್ನುವ ಲೋಲುಪ ಎಲ್ಲಿ? ಎಲ್ಲವನ್ನು ತೊರೆದ ಬಾಬಾ ಯಾರು? ನಾಯಕ ವೇಷ
ಹಾಕಿಕೊಂಡಿರುವ ಮೋಸಗಾರನಾ? ಅಥವಾ ಪೋಲಿಸ್ ಅಧಿಕಾರಿಯಾ? ಯೋಚನೆ ಮಾಡದೆ ಖುಷಿ
ಪಡೆದುಕೊಳ್ಳಿ, ಯೋಚನೆ ಮಾಡಿ ಖುಷಿ ಕಳೆದುಕೊಳ್ಳಬೇಡಿ, ನನಗೆ ಯಾವುದರಲ್ಲೂ ಆಸೆಯಿಲ್ಲ,
ಹಾಗಾದರೆ ಸಾಯಬಹುದಲ್ಲ ಎಂದರೆ ಸಾಯುವ ಆಸೆಯೂ ನನಗಿಲ್ಲ ಎಂಬಂತಹ ಮಾತುಗಳು ಖುಷಿ
ಕೊಡುವುದರ ಜೊತೆಗೆ ಮೆಚ್ಚುಗೆ ಗಳಿಸುತ್ತವೆ. ಚಿತ್ರದ ನಿರೂಪಣೆ ಪ್ರಾರಂಭವಾಗುವುದೇ
ಉಪೇಂದ್ರ ಚಿತ್ರದ ಶೈಲಿಯಲ್ಲಿ. ಅಲ್ಲಿ ದಾಮಿನಿ ನಾಯಕನನ್ನು ಹುಡುಕುತ್ತಾ
ಬರುತ್ತಿದ್ದಂತೆಯೇ ಆತನ ಪಾತ್ರ ಪರಿಚಯವಾಗುತ್ತಾ ಸಾಗುತ್ತದೆ. ಇಲ್ಲಿಯೂ ನಾಯಕಿ
ಹುಡುಕುತ್ತಾ ಬರುತ್ತಿದ್ದಂತೆಯೇ ಆತನ ಪಾತ್ರದ ಅನಾವರಣಗೊಳ್ಳುತ್ತದೆ. ಗುರುಕಿರಣ್ ಸಂಗೀತ
ಖುಷಿ ಕೊಡುತ್ತದೆ. ಆದರೆ ಉಪೇಂದ್ರ ಚಿತ್ರದ ತುಣುಕು ಮತ್ತದರ ಹಿನ್ನೆಲೆ ಸಂಗೀತ ಬಂದಾಗ
ಆಗುವ ರೋಮಾಂಚನ ‘ಉಪ್ಪಿ-2’ ಚಿತ್ರದ ಹಿನ್ನೆಲೆ ಸಂಗೀತಕ್ಕಿಲ್ಲದಿರುವುದು ಬೇಸರದ ಸಂಗತಿ.
ಉಪೇಂದ್ರ ಸಾವಧಾನವಾಗಿ ಅಭಿನಯಿಸಿದ್ದಾರೆ. ನಾಯಕಿ ಊರ್ವಶಿ ಮಾದಕವಾಗಿ ಕಾಣಿಸುತ್ತಾರೆ.
ಪಾರುಲ್ ಯಾದವ್ ಅಲ್ಲಿ ಬಂದು ಇಲ್ಲಿ ಹೋಗುತ್ತಾರೆ. ಎಲ್ಲಾ ಮಸಾಲೆ ಅಂಶಗಳ ನಡುವೆ
ತಮ್ಮದೇ ಶೈಲಿಯಲ್ಲಿ ಉಪೇಂದ್ರ ತತ್ವ ಹೇಳಲು ಹೊರಟಿದ್ದಾರೆ. ಸಾಂಪ್ರದಾಯಿಕ ಸಿನಿಮಾ
ಕತೆ-ಚಿತ್ರಕತೆಯಲ್ಲಿ ನಂಬಿಕೆ ಇಟ್ಟವರಿಗೆ ಸಿನಿಮಾ ಇಷ್ಟವಾಗುತ್ತದೆಯೇ..? ಗೊತ್ತಿಲ್ಲ.
ಚಿತ್ರದ ಆರಂಭ ಅಂತ್ಯ ಯಾವುದಕ್ಕೂ ಸ್ಪಷ್ಟೀಕರಣ ನೀಡದ ಉಪೇಂದ್ರ ಕೊನೆಯಲ್ಲಿ ಗೊಂದಲದ
ಗೂಡಾಗಿದ್ದ ನಾಯಕಿಗೆ ನೀನು ಖುಷಿನಾ ಎನ್ನುತ್ತಾರೆ. ಅದು ಪ್ರೇಕ್ಷಕನಿಗೂ
ಅನ್ವಯಿಸುತ್ತದೆ. ಹೌದು ಎಂದರೆ ಹೌದು.. ಇಲ್ಲ ಎಂದರೆ ಇಲ್ಲ. ಯಾಕೆಂದರೆ ಇದು
ಉಪ್ಪಿಟ್ಟು.
Please follow and like us:
error