You are here
Home > Koppal News > 25 ಲಕ್ಷದ ಯೋಜನೆಗೆ 75 ಲಕ್ಷ ಹಾಳು ಮಾಡಲು ಸಿದ್ದರಾದ ಅಧಿಕಾರಿಗಳು

25 ಲಕ್ಷದ ಯೋಜನೆಗೆ 75 ಲಕ್ಷ ಹಾಳು ಮಾಡಲು ಸಿದ್ದರಾದ ಅಧಿಕಾರಿಗಳು

ಕೊಪ್ಪಳ : ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಯಲ್ಲಿ ಚರಂಡಿ ನಿರ್ಮಾಣಕ್ಕಾಗಿ ಉಪಯೋಗಿಸಬೇಕಾದ 25 ಲಕ್ಷರೂಗಳನ್ನು ಖರ್ಚು ಮಾಡಲು ರಾಷ್ಟ್ರೀಯ ಹೆದ್ದಾರಿ ಇಲಾಖೆ ನಾನಾ ದಾರಿ ಹುಡುಕುತ್ತಿದೆ. ಅವೈಜ್ಞಾನಿಕವಾಗಿ ಯೋಜನೆ ರೂಪಿಸಿ ರಸ್ತೆಯ ಒಂದೇ ಬದಿಯಲ್ಲಿ ಚರಂಡಿ ನಿರ್ಮಿಸಲು ಮುಂದಾಗಿ ಅಶೋಕ ಸರ್ಕಲ್ ಹತ್ತಿರದ ಸಾಹಿತ್ಯ ಭವನದ ಹಿಂದಿನ ನಗರಸಭೆ ಮಳಿಗೆಗಳನ್ನು ಖಾಲಿ ಮಾಡಿಸಿ ಒಡೆಯಲು ಮುಂದಾಗಿತ್ತು. ನಗರಸಭೆಯ ಈ ಕ್ರಮವನ್ನು ವಿರೋಧಿಸಿ ವರ್ತಕರು, ಸಾರ್ವಜನಿಕರು ರಸ್ತೆ ತಡೆ ನಡೆಸಿದಾಗ ಸರಿಯಾದ ಸಮಜಾಯಿಷಿ ನೀಡಲಾಗದೆ ನಗರಸಭೆ ಅಧ್ಯಕ್ಷ ಮತ್ತು ನಗರಸಭೆ ಅಧಿಕಾರಿಗಳು ತಡವರಿಸಿದರು.25 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಲು 75 ಲಕ್ಷ ಮೌಲ್ಯದ ಸರಕಾರಿ ಆಸ್ತಿಯನ್ನು ಒಡೆಯಲು ಅಧಿಕಾರಿಗಳು ಸಿದ್ದರಾಗಿದ್ದರು. ಅಧಿಕಾರಿಗಳ ಈ ಅವೈಜ್ಞಾನಿಕ ನೀತಿಗೆ ಜನತೆ ಛೀಮಾರಿ ಹಾಕಿತು.
ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಭಿಯಂತರರು ಸಹ ಯಾವುದೇ ಸೂಕ್ತ ರೀತಿಯ ಸಮಜಾಯಿಷಿನೀಡದೇ ಜಿಲ್ಲಾಧಿಕಾರಿಗಳು ತೆರವು ಕಾರ್ಯಾಚರಣೆಗೆ ಅನುಮತಿ ನೀಡಿದ್ದಾರೆ ಎಂದರು. ಆದರೆ ಈ ವಿಷಯದ ಬಗ್ಗೆ ಜಿಲ್ಲಾಧಿಕಾರಿಗಳು ಜನರಿಗೆ ಹಾದಿ ತಪ್ಪಿಸುವುದಕ್ಕಿಂತ ಮೊದಲು ಸೂಕ್ತ ರೀತಿಯ ಕಾಮಗಾರಿ ಕೈಗೊಳ್ಳಲು ಸೂಚಿಸಿದರು. ನಂತರ ತೆರವು ಕಾರ್ಯಾಚರಣೆಗೆ ತಡೆ ನೀಡಲು ಆದೇಶಿಸಿದರು. ಅನಾವಶ್ಯಕ ಗೊಂದಲದಿಂದ ಮಳಿಗೆಗಳಲ್ಲಿದ್ದ ಅಂಗಡಿಕಾರರು ಹಾನಿ ಅನುಭವಿಸುವಂತಾಯಿತು.

Leave a Reply

Top