ಜಿಲ್ಲೆಯ 23 ಪರೀಕ್ಷಾ ಕೇಂದ್ರಗಳಲ್ಲಿ ಟಿಇಟಿ ಪರೀಕ್ಷೆ : ಸುರೇಶ ಬಿ.ಇಟ್ನಾಳ

ಜಿಲ್ಲೆಯಲ್ಲಿ ಇದೇ ಮೊದಲ ಬಾರಿ ಜೂ.22 ರಂದು ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ನಡೆಸಲಾಗುತ್ತಿದ್ದು, ಜಿಲ್ಲೆಯ ಒಟ್ಟು 23 ಪರೀಕ್ಷಾ ಕೇಂದ್ರಗಳಲ್ಲಿ ಟಿಇಟಿ ಪರೀಕ್ಷೆಯನ್ನು ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಸುಗಮವಾಗಿ ನಡೆಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಡಾ|| ಸುರೇಶ ಬಿ.ಇಟ್ನಾಳ ಅವರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ  ಏರ್ಪಡಿಸಲಾಗಿದ್ದ ಶಿಕ್ಷಕರ ಅರ್ಹತಾ ಪರೀಕ್ಷೆ ಕುರಿತು ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
 ಪ್ರಾಥಮಿಕ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಜಿಲ್ಲೆಯ 4,970 ಅಭ್ಯರ್ಥಿಗಳು ಹಾಗೂ ಪ್ರೌಢ ಶಾಲಾ ಶಿಕ್ಷಕರ ಅರ್ಹತಾ ಪರೀಕ್ಷೆಗೆ 6,273 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆಯನ್ನು ಸುಗಮವಾಗಿ ನಡೆಸಲು ಅನುಕೂಲವಾಗುವಂತೆ 600 ಕೊಠಡಿ ಮೇಲ್ವಿಚಾರಕರು, 23 ಮುಖ್ಯ ಅಧೀಕ್ಷಕರು, ಜಾಗೃತ ಅಧಿಕಾರಿಗಳು, 6 ಮಾರ್ಗಾಧಿಕಾರಿಗಳು ಹಾಗೂ 5 ವೀಕ್ಷಕರನ್ನು ನಿಯೋಜಿಸಲಾಗಿದೆ. ಜಿಲ್ಲಾ ಕೇಂದ್ರ ಕೊಪ್ಪಳ ನಗರದಲ್ಲಿ 17 ಪರೀಕ್ಷಾ ಕೇಂದ್ರಗಳನ್ನು ಗುರುತಿಸಿದ್ದರೆ, ಗಂಗಾವತಿ ನಗರದಲ್ಲಿ 6 ಪರೀಕ್ಷಾ ಕೇಂದ್ರಗಳು ಸೇರಿ ಒಟ್ಟು 23 ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲಿದ್ದಾರೆ.  ಈ ಪರೀಕ್ಷೆಯಲ್ಲಿ ಶೇ. 60 ಕ್ಕಿಂತ ಹೆಚ್ಚು ಅಂಕ ಪಡೆದ ಅಭ್ಯರ್ಥಿಗಳು ಶಿಕ್ಷಕರ ನೇಮಕಾತಿಗೆ ಅರ್ಹರಾಗಲಿದ್ದಾರೆ.
ಡಿ.ಇಡಿ ಅಭ್ಯರ್ಥಿಗಳಿಗೆ ಪರೀಕ್ಷೆಯು ಬೆಳಿಗ್ಗೆ 9.30 ರಿಂದ 12.00 ರವರೆಗೆ ಮತ್ತು ಬಿ.ಇಡಿ ಅಭ್ಯರ್ಥಿಗಳಿಗೆ ಮಧ್ಯಾಹ್ನ 2.00 ರಿಂದ 4.30 ರವರೆಗೆ ಪರೀಕ್ಷೆ ನಡೆಯುತ್ತದೆ. ಒಟ್ಟು 150 ಅಂಕದ ಒಂದು ಪ್ರಶ್ನೆ ಪತ್ರಿಕೆ ಇರುತ್ತದೆ.  ಪರೀಕ್ಷೆಯನ್ನು ಸುಗಮವಾಗಿ ನಡೆಸಲು, ಪರೀಕ್ಷಾ ಕೇಂದ್ರದ ಸುತ್ತ ಮುತ್ತ ಕಲಂ 144 ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಪರೀಕ್ಷೆ ನಡೆಯುವ ಕೇಂದ್ರಗಳಿಗೆ ಪೊಲೀಸ್ ಇಲಾಖೆಯಿಂದ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷೆಗೆ ಗೈರುಹಾಜರಾದ ಅಭ್ಯರ್ಥಿಗಳ ಮಾಹಿತಿಯನ್ನು ಜಿಲ್ಲಾ ಕಛೇರಿಯ ನೋಡಲ್ ಅಧಿಕಾರಿಗಳಿಗೆ ದೂರವಾಣಿ ಮೂಲಕ ತಿಳಿಸಲು ಎಲ್ಲಾ ಮುಖ್ಯ ಅಧೀಕ್ಷಕರಿಗೆ ಅಪರ ಜಿಲ್ಲಾಧಿಕಾರಿ ಡಾ|| ಸುರೇಶ ಬಿ.ಇಟ್ನಾಳ ಅವರು ಸೂಚನೆ ನೀಡಿದರು.
ಸಭೆಯಲ್ಲಿ ಪರೀಕ್ಷಾ ನೋಡಲ್ ಅಧಿಕಾರಿ ಬಿ.ಹೆಚ್.ಗೋನಾಳ, ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕ ಎಂ.ಎಸ್.ಬಡದಾನಿ, ಸಹಾಯಕ ಖಜಾನಾಧಿಕಾರಿ ಮೈಲಾರರಾವ್ ಕುಲಕರ್ಣಿ, ಅಧೀಕ್ಷಕ ಸೋಮಶೇಖರ ಸೇರಿದಂತೆ ಪರೀಕ್ಷಾ ಮುಖ್ಯ ಅಧೀಕ್ಷಕರು, ಸ್ಥಳೀಯ ಜಾಗೃತ ದಳದ ಅಧಿಕಾರಿಗಳು ಹಾಗೂ ಮಾರ್ಗಾಧಿಕಾರಿಗಳು ಭಾಗವಹಿಸಿದ್ದರು.

Leave a Reply