ಡಿನೋಟಿಫಿಕೇಶ್‌ ಪ್ರಕರಣ – ಜಾಮೀನು ವಜಾ: ನ್ಯಾಯಾಲಯಕ್ಕೆ ಶರಣಾದ ಯಡಿಯೂರಪ್ಪ; ಅ.22ರವರೆಗೆ ನ್ಯಾಯಾಂಗ ಬಂಧನ

ಯಡಿಯೂರಪ್ಪ ಕೋರ್ಟಿಗೆ ಶರಣು,ನ್ಯಾಯಾಂಗ ಬಂಧನ
ಮಕ್ಕಳ ಪರವಾಗಿ ಜಮೀನು ಡೀನೋಟಿಫೈ ಮಾಡಿದ ಆರೋಪದಲ್ಲಿ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಅರೆಸ್ಟ್ ವಾರಂಟ್ ಪಡೆದ ಪೊಲೀಸರು ಒಂದು ಕಡೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಅವರ ವಿವಿಧ ನಿವಾಸಗಳಲ್ಲಿ ಹುಡುಕಾಡುತ್ತಿದ್ದರೆ,ಸಂಜೆ ನಾಲ್ಕು ಮುಕ್ಕಾಲು ಸುಮಾರಿಗೆ ಸ್ವತಃ ಯಡಿಯೂರಪ್ಪ ಅವರು ನ್ಯಾಯಾಲಯಕ್ಕೆ ಶರಣಾಗುವ ಮೂಲಕ ಎಲ್ಲ ಊಹಾಪೋಹಗಳಿಗೆ ತೆರೆ ಬಿತ್ತು,ಮಾಜಿ ಮುಖ್ಯಮಂತ್ರಿಗೆ ಲೋಕಾಯುಕ್ತ ನ್ಯಾಯಾಲಯವು ಒಂದು ವಾರ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.
ಕಾನೂನನ್ನು ಗೌರವಿಸುತ್ತೇನೆ ಎಂದು ಹೇಳುತ್ತಿದ್ದ ಮಾಜಿ ಮುಖ್ಯಮಂತ್ರಿ,ಸಂಜೆ ಲೋಕಾಯುಕ್ತ ವಿಶೇಷ ಕೋರ್ಟ್‌ಗೆ ಶರಣಾಗಿದ್ದು,ಅವರಿಗೆ ನ್ಯಾಯಾಲಯವು ಅಕ್ಟೋಬರ್ 22ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.ಇದರೊಂದಿಗೆ ಅವರು ಕೆಲವು ದಿನ ಜೈಲಿನಲ್ಲೇ ಕಳೆಯಬೇಕಾದ ಅನಿವಾರ್ಯತೆ ಎದುರಾಗಿದ್ದು,ಮಾಜಿ ಮುಖ್ಯಮಂತ್ರಿಯೊಬ್ಬರು ಜೈಲು ಪಾಲಾದ ಇತಿಹಾಸವೊಂದು ಕರ್ನಾಟಕದಲ್ಲಿ ಸೃಷ್ಟಿಯಾಯಿತು.
ಈ ಮೂಲಕ,ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಭೂಹಗರಣದ ಆರೋಪಗಳಿಂದಾಗಿ ಜೈಲು ಸೇರಬೇಕಾದ ಅನಿವಾರ್ಯತೆ ಎದುರಾಗಿದೆ.ಇದೇ ವೇಳೆ,ಈ ಏಳು ದಿನದ ಅವಧಿಯಲ್ಲಿ ಯಡಿಯೂರಪ್ಪ ಅವರು ಹೈಕೋರ್ಟಿಗೆ ಮೊರೆ ಹೋಗಿ, ಜಾಮೀನು ಪಡೆಯಲು ಪ್ರಯತ್ನಿಸುವ ಸಾಧ್ಯತೆಯಿದೆ.
ಹಿಂದಿನ ವರದಿ:
ಬೆಂಗಳೂರು,ಅ.15:ಡಿನೋಟಿಫಿಕೇಶ್‌ಗೆ ಪ್ರಕರಣಕ್ಕೆ ಸಂಬಂಧಿಸಿ ಅರೆಸ್ಟ್ ವಾರೆಂಟ್‌ಗೊಳಗಾಗಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಇಂದು (ಶನಿವಾರ)ಸಂಜೆ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.ನ್ಯಾಯಾಲಯವು ಅವರಿಗೆ ಅಕ್ಟೋಬರ್ 22ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.
ಲೋಕಾಯುಕ್ತ ವಿಶೇಷ ನ್ಯಾಯಾಲಯವು ಬಂಧನಕ್ಕೆ ಆದೇಶ ಹೊರಡಿಸಿದ ಬೆನ್ನಲ್ಲೇ ತಲೆಮರೆಸಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ,ಸಂಜೆಯ 4ಗಂಟೆಯ ಸುಮಾರಿಗೆ ನ್ಯಾಯಾಲಯದೆದುರು ಶರಣಾಗಿದ್ದಾರೆ.
ಕಟಕಟೆಯಲ್ಲಿ ನಿಂತು ವಿಚಾರಣೆ ಎದುರಿಸಿದ ಅವರಿಗೆ ನ್ಯಾಯಾಲಯವು ಅ.22ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.ಯಡಿಯೂರಪ್ಪರನ್ನು ಪರಪ್ಪನ ಅಗ್ರಾಹಾರ ಜೈಲಿನಲ್ಲಿಡಲಾಗಿದೆ.ಅವರಿಗೆ ಖೈದಿ ನಂಬರ್ 10462 ನೀಡಲಾಗಿದೆ.
ನ್ಯಾಯಾಲಯಕ್ಕೆ ಶರಣಾದ ವೇಳೆ ಯಡಿಯೂರಪ್ಪರ ಪರ ವಕೀಲ ರವಿ ಬಿ.ನಾಯಕ್ ವಾದಿಸಿದ್ದು,ಅನಾರೋಗ್ಯಕ್ಕೆ ತುತ್ತಾಗಿರುವ ಬಿಎಸ್‌ವೈಗೆ ಕಾರಾಗೃಹದಲ್ಲಿ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸುವಂತೆ ನ್ಯಾಯಾಧೀಶರಲ್ಲಿ ಮನವಿ ಮಾಡಿದ್ದರು.ಇದಕ್ಕೆ ಸ್ಪಂದಿಸಿದ ನ್ಯಾಯಾಲಯವು ಕಾರಾಗೃಹದಲ್ಲಿ ಯಡಿಯೂರಪ್ಪರಿಗೆ ಸೂಕ್ತ ಚಿಕಿತ್ಸೆಗೆ ಕ್ರಮ ಕೈಗೊಳ್ಳುವಂತೆ ಜೈಲು ಅಧಿಕಾರಿಗಳಿಗೆ ಸೂಚಿಸಿದೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತನ್ನ ಅಧಿಕಾರವಧಿಯಲ್ಲಿ ತಮ್ಮ ಆಪ್ತ ಹಾಗೂ ಸಂಬಂಧಿಕರಿಗೆ ಸರಕಾರಿ ಜಮೀನನ್ನು ಅಕ್ರಮವಾಗಿ ಡಿನೋಟಿಫಿಕೇಶನ್ ಮಾಡಿಸಿದ ಆರೋಪ ಎದುರಿಸುತ್ತಿದ್ದಾರೆ. ಈ ಬಗ್ಗೆ ವಕೀಲರಾದ ಸಿರಾಜಿನ್ ಬಾಷಾ ಲೋಕಾಯುಕ್ತ ನ್ಯಾಯಾಲಯದಲ್ಲಿ ಎರಡನೆ ಹಾಗೂ ಮೂರನೆ ಖಾಸಗಿ ಮೊಕದ್ದಮೆ ದಾಖಲಿಸಿದ್ದರು.ಬಾಷಾರ ಪ್ರಮಾಣೀಕೃತ ಹೇಳಿಕೆ ಪಡೆದುಕೊಂಡಿದ್ದ ನ್ಯಾಯಾಲಯವು ಅ.8ರಂದು ಯಡಿಯೂರಪ್ಪರಿಗೆ ಸಮನ್ಸ್ ಜಾರಿಗೊಳಿಸಿತ್ತು.ಈ ವೇಳೆ ಜಾಮೀನು ಕೋರಿ ಯಡಿಯೂರಪ್ಪ ಪರ ವಕೀಲರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಕೂಡಾ ಪೂರ್ಣಗೊಳಿಸಿದ್ದ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿತ್ತು.
ಇದೇ ವೇಳೆ ಈ ಪ್ರಕರಣದ ವಿಚಾರಣೆ ನಡೆಯುತ್ತಿದ್ದು,ಇಂದು ನಡೆದ ವಿಚಾರಣೆಯ ವೇಳೆ ಅನಾರೋಗ್ಯದ ಕಾರಣ ನೀಡಿ ಯಡಿಯೂರಪ್ಪ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ.ಆದರೆ ನ್ಯಾಯಾಲಯವು ಯಡಿಯೂರಪ್ಪರ ಅನುಪಸ್ಥಿತಿಯಲ್ಲೇ ತೀರ್ಪು ಪ್ರಕಟಿಸಿದ್ದು,ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.ಅಲ್ಲದೇಯಡಿಯೂರಪ್ಪರ ಬಂಧನಕ್ಕೆ ಜಾಮೀನು ರಹಿತಿ ಅರೆಸ್ಟ್ ವಾರೆಂಟ್ ಹೊರಡಿಸಿತ್ತು. ಅದರಂತೆ ಯಡಿಯೂಪ್ಪ ಇದೀಗ ಜೈಲು ಸೇರಿದ್ದಾರೆ.
ದಕ್ಷಿಣ ಭಾರತದಲ್ಲಿ ಮೊತ್ತ ಮೊದಲ ಬಾರಿಗೆ ಬಿಜೆಪಿಯನ್ನು ಅಧಿಕಾರಕ್ಕೇರುವಂತೆ ಮಾಡಿದ್ದ ಬಿ.ಎಸ್.ಯಡಿಯೂರಪ್ಪ ಬಳಿಕ ಭ್ರಷ್ಟಾಚಾರ ಆರೋಪದಲ್ಲಿ ಅಧಿಕಾರ ಕಳೆದುಕೊಂಡಿದ್ದರು. ಬಳಿಕ ಸಂಕಷ್ಟದಲ್ಲಿ ಸಿಲುಕಿದ್ದ ಯಡಿಯೂರಪ್ಪ ಇದೀಗ ಜೈಲು ಪಾಲಾಗಿದ್ದಾರೆ.
ಯಡಿಯೂರಪ್ಪರ ಸಚಿವ ಸಂಪುಟದಲ್ಲಿ ಸಚಿವರಾಗಿದ್ದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು,ಜನಾರ್ದನ ರೆಡ್ಡಿ ವಿವಿಧ ಪ್ರಕರಣಗಳಲ್ಲಿ ಈಗಾಗಲೇ ಕಂಬಿ ಎಣಿಸುತ್ತಿದ್ದು,ಅವರ ಸಾಲಿಗೆ ಇದೀಗ ಮಾಜಿ ಮುಖ್ಯಮಂತ್ರಿ ಕೂಡಾ ಸೇರ್ಪಡೆಗೊಂಡಿರುವುದು ಮಾತ್ರ ವಿಪರ್ಯಾಸ.

Leave a Reply