ಆಳ್ವಾಸ್ ನುಡಿಸಿರಿ 2010: 10 ಮಂದಿಗೆ ನುಡಿಸಿರಿ ಪ್ರಶಸ್ತಿ

ಮಂಗಳೂರು, ಅ.19: ಇದೇ ತಿಂಗಳ 29ರಿಂದ 31ರವರೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಮೂಡಬಿದ್ರೆಯ ವಿದ್ಯಾಗಿರಿಯಲ್ಲಿ ಆಯೋಜಿಸುತ್ತಿರುವ ಕನ್ನಡ ನಾಡುನುಡಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ 2010ರ ನುಡಿಸಿರಿ ಪ್ರಶಸ್ತಿಗೆ ಡಾ.ಜಿ.ಎಸ್.ಅಮೂರ, ಡಾ.ಎಂ.ವೀರಪ್ಪ ಮೊಯ್ಲಿ ಸೇರಿದಂತೆ 10 ಮಂದಿ ಗಣ್ಯರನ್ನು ಆಯ್ಕೆ ಮಾಡಲಾಗಿದೆ. ಅ.31ರಂದು ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು. ಡಾ.ಜಿ.ಎಸ್ ಅಮೂರ (ಸಾಹಿತ್ಯ), ಡಾ.ಎಂ.ವೀರಪ್ಪ ಮೊಯ್ಲಿ (ಸಾಮಾಜಿಕ), ಡಾ.ಎಂ.ಎಂ.ಕಲ್ಬುರ್ಗಿ (ಸಂಶೋಧನೆ), ಸಂತೋಷಕುಮಾರ್ ಗುಲ್ವಾಡಿ (ಮಾಧ್ಯಮ), ಡಾ.ಶಿವಮೊಗ್ಗ ಸುಬ್ಬಣ್ಣ (ಸುಗಮ ಸಂಗೀತ), ಡಾ.ಬಲಿಪ ನಾರಾಯಣ ಭಾಗವತರು (ಯಕ್ಷಗಾನ), ಡಾ.ಎಂ.ಲೀಲಾವತಿ (ಚಲನಚಿತ್ರ), ಪ್ರೊ.ಬಿ.ಜಯಪ್ರಕಾಶ ಗೌಡ (ಸಂಘಟನೆ), ಡಾ.ಬ್ರ.ಕು.ಬಸವರಾಜ ರಾಜಋಷಿ(ಆಧ್ಯಾತ್ಮ), ಡಾ.ಕೆ.ಪಿ.ಪುತ್ತೂರಾಯ(ಸಾಹಿತ್ಯ) ಈ ಬಾರಿಯ ನುಡಿಸಿರಿ ಪ್ರಶಸ್ತಿ ಪುರಸ್ಕೃತರು. ಪ್ರಶಸ್ತಿಯು 10 ಸಾವಿರ ನಗದು, ಮಾನಪತ್ರ, ಸ್ಮರಣಿಕೆ, ಶಾಲು, ಫಲಪುಷ್ಪ ಗೌರವಗಳನ್ನೊಳಗೊಂಡಿರುತ್ತದೆ.ಕನ್ನಡ ಮನಸ್ಸು : ಜೀವನಮೌಲ್ಯಗಳು ಎಂಬ ಮುಖ್ಯ ಪರಿಕಲ್ಪನೆಯಡಿ ಹೆಸರಾಂತ ಲೇಖಕಿ ವೈದೇಹಿಯವರ ಸರ್ವಾಧ್ಯಕ್ಷತೆಯಲ್ಲಿ ಸಮ್ಮೇಳನ ಮೂಡಿಬರಲಿದೆ.

Please follow and like us:
error