ಹಬ್ಬಗಳ ಆಚರಣೆ : ಸಮಾಜಘಾತುಕ ಶಕ್ತಿಗಳ ಮೇಲೆ ತೀವ್ರ ನಿಗಾ- ಡಾ. ಅನೂಪ್ ಶೆಟ್ಟಿ

: ಜಿಲ್ಲೆಯಲ್ಲಿ ಆಚರಿಸಲಾಗುವ ಗೌರಿ-ಗಣೇಶ ಹಬ್ಬ ಹಾಗೂ ಬಕ್ರೀದ್ ಹಬ್ಬಗಳ ಸಮಯದಲ್ಲಿ ಮೆರವಣಿಗೆ ಸಾಗುವ ಮಾರ್ಗದಲ್ಲಿ ಹಾಗೂ ಸೂಕ್ಷ್ಮ ಸ್ಥಳಗಳಲ್ಲಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಕಿಡಿಗೇಡಿಗಳ ಹಾಗೂ ವದಂತಿ ಹಬ್ಬಿಸುವವರ ಮತ್ತು ಸಮಾಜಘಾತುಕ ಶಕ್ತಿಗಳ ಚಲನವಲನಗಳ ಮೇಲೆ ಸೂಕ್ತ ನಿಗಾ ವಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ್ ಶೆಟ್ಟಿ ಅವರು ತಿಳಿಸಿದ್ದಾರೆ.

  ಇದೇ ಸೆ. 25 ರಿಂದ ಗೌರಿ-ಗಣೇಶ ಹಬ್ಬ ಹಾಗೂ ಸೆ. 02 ರಂದು ಬಕ್ರೀದ್ ಹಬ್ಬ ಆಚರಣೆಯನ್ನು ಜಿಲ್ಲೆಯಲ್ಲಿ ಆಚರಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು 800 ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿ, ಸಿಬ್ಬಂದಿಗಳನ್ನು ಹಾಗೂ 500 ಕ್ಕೂ ಹೆಚ್ಚು ಗೃಹ ರಕ್ಷಕ ದಳದವರನ್ನು ಅಲ್ಲದೆ ಹೆಚ್ಚುವರಿಯಾಗಿ ಕೆಎಸ್‍ಆರ್‍ಪಿ ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ.  ಜಿಲ್ಲೆಯ ಪ್ರಮುಖ ಹೆದ್ದಾರಿ ಹಾಗೂ ರಸ್ತೆಗಳಲ್ಲಿ ಪೊಲೀಸ್ ಇಲಾಖೆಯಿಂದ ಚೆಕ್‍ಪೋಸ್ಟ್ ಗಳನ್ನು ಸೃಜಿಸಲಾಗಿದ್ದು, ಜಿಲ್ಲೆಗೆ ಆಗಮಿಸುವ ಹಾಗೂ ಹೊರಹೋಗುವ ವಾಹನಗಳನ್ನು ತಪಾಸಣೆ ಮಾಡಲಾಗುವುದು.  ಹಬ್ಬಗಳ ಆಚರಣೆ ಸಮಯದಲ್ಲಿ ಮತೀಯ ಭಾವನೆಗಳನ್ನು ಕೆರಳಿಸುವ ಹಾಡುಗಳನ್ನು ಬಳಸದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದ್ದು, ಅಂತಹ ಹಾಡುಗಳನ್ನು ಬಳಸಿದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು.  ಜಿಲ್ಲೆಯಾದ್ಯಂತ ಡಿ.ಜೆ. ಬಳಕೆಯನ್ನು ನಿಷೇಧಿಸಿ ಈಗಾಗಲೆ ಜಿಲ್ಲಾಧಿಕಾರಿಗಳ ಆದೇಶ ಹೊರಡಿಸಿದ್ದು, ಉಲ್ಲಂಘನೆ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.  ಗೌರಿ-ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುವ ಆಯೋಜಕರು ಪೆಂಡಾಲಿನಲ್ಲಿ ಸಿಸಿ ಟಿವಿಗಳನ್ನು ಅಳವಡಿಸುವಂತೆ ಕೋರಲಾಗಿದೆ.  ಅಲ್ಲದೆ ಸ್ಥಳದಲ್ಲಿ ಒಬ್ಬರು ದಿನದ 24 ಗಂಟೆಯೂ ಇರುವ ರೀತಿಯಲ್ಲಿ ವ್ಯವಸ್ಥೆಗೊಳಿಸುವಂತೆ ಕೋರಲಾಗಿದೆ.  ಒಟ್ಟಾರೆ ಜಿಲ್ಲೆಯಲ್ಲಿ ಗೌರಿ-ಗಣೇಶ ಹಾಗೂ ಬಕ್ರೀದ್ ಹಬ್ಬವನ್ನು ಸಂಭ್ರಮದಿಂದ ಶಾಂತಿಯುತವಾಗಿ ಆಚರಣೆ ಮಾಡುವಲ್ಲಿ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ್ ಶೆಟ್ಟಿ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Please follow and like us:
error