ಕಪ್ಪು ಹಣದ ಬಗ್ಗೆ 15 ದಿನಗಳಲ್ಲಿ ಕ್ರಮ : ಸರಕಾರಕ್ಕೆ ಸಂಸದೀಯ ಸಮಿತಿಯ ಸೂಚನೆ

ಹೊಸದಿಲ್ಲಿ, ನ.: ಕಪ್ಪು ಹಣದ ಕುರಿತು ಸರಕಾರವು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸಂಸದೀಯ ಸಮಿತಿಯೊಂದರ ಸದಸ್ಯರು ಶುಕ್ರವಾರ ಬಯಸಿದ್ದು, ತೆರಿಗೆಗಳ್ಳರ ಹೆಸರುಗಳನ್ನು ಬಹಿರಂಗಪಡಿಸುವಂತೆ ಕೇಂದ್ರ ವಿತ್ತ ಸಚಿವಾಲಯಕ್ಕೆ ಸೂಚಿಸಿದ್ದಾರೆ. ಕಪ್ಪು ಹಣದ ಬಗ್ಗೆ ವಿತ್ತ ಸಚಿವಾಲಯದ ಅಧಿಕಾರಿಗಳ ವಿಚಾರಣೆ ನಡೆಸಿದ ಸಂಸದೀಯ ಸಮಿತಿ, ಕ್ರಮಕ್ಕಾಗಿ 15 ದಿನಗಳ ಗಡುವನ್ನು ನಿಗದಿಪಡಿಸಿದೆ.
ಆದಾಯ ತೆರಿಗೆ ಇಲಾಖೆಯು ಈಗಾಗಲೇ ಜಿನೇವಾದ ಎಚ್‌ಎಸ್‌ಬಿಸಿಯಲ್ಲಿ ರೂ. 400 ಕೋಟಿಗೂ ಹೆಚ್ಚು ಠೇವಣಿಯಿರಿಸಿದ್ದ 100 ಮಂದಿ ತೆರಿಗೆಗಳ್ಳರಿಂದ ರೂ. 140 ಕೋಟಿಗಳಷ್ಟು ತೆರಿಗೆ ಸಂಗ್ರಹಿಸಿದೆ. ಒಟ್ಟು 782 ಎಚ್‌ಎಸ್‌ಬಿಸಿ ಖಾತೆಗಳ ಪರಿಶೀಲನೆ ಪ್ರಕೃತ ನಡೆಯುತ್ತಿದೆಯೆಂದು ಮೂಲಗಳು ತಿಳಿಸಿವೆ. ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಸರಕಾರ ಎದುರಿಸಬೇಕಾದ ವಿಪಕ್ಷ ಬಾಣಗಳಲ್ಲಿ ಕಪ್ಪು ಹಣದ ವಿಚಾರವೂ ಒಂದಾಗಲಿದೆ.
ಫ್ರಾನ್ಸ್ ಹಾಗೂ ಇತರ ದೇಶಗಳು ನೀಡಿರುವ ಮಾಹಿತಿ ಯಲ್ಲಿ ಹೆಸರಿಸಲಾಗಿರುವವರ ವಿರುದ್ಧ ಕಾನೂನು ಕ್ರಮವನ್ನೂ ತ್ವರಿತಗೊಳಿಸುವಂತೆ ಸಮಿತಿಯು ಈ ಹಿಂದೆ ಸರಕಾರಕ್ಕೆ ಸೂಚಿಸಿತ್ತು.
ಹಿರಿಯ ಬಿಜೆಪಿ ನಾಯಕ ಹಾಗೂ ಮಾಜಿ ವಿತ್ತ ಸಚಿವ ಯಶವಂತ ಸಿನ್ಹಾ ನೇತೃತ್ವದ ಸಂಸದೀಯ ಸಮಿತಿಯ ಸಭೆಯೊಂದು ಶುಕ್ರವಾರ ನಡೆಯಿತು.
ಫ್ರೆಂಚ್ ಸರಕಾರದಿಂದ ಸರಕಾರಕ್ಕೆ ಮಾಹಿತಿ ಬಂದ ಬಳಿಕ ಆದಾಯ ತೆರಿಗೆ ಇಲಾಖೆಯು ಜಿನೇವಾದ ಬ್ಯಾಂಕ್‌ಗಳಲ್ಲಿ ಹಣ ರಾಶಿ ಹಾಕಿರುವ 700 ಭಾರತೀಯರ ಬಗ್ಗೆ ತನಿಖೆ ಆರಂಭಿಸಿದೆ. ಅಣ್ಣಾ ಹಝಾರೆ ಹಾಗೂ ಬಾಬಾ ರಾಮ್‌ದೇವ್ ಕಪ್ಪು ಹಣದ ವಿಚಾರದಲ್ಲಿ ಆಂದೋಲನದ ನಡೆಸಿದ ಬಳಿಕ ಈ ಬಗ್ಗೆ ಸಾರ್ವಜನಿಕರೂ ದನಿಯೆತ್ತ ತೊಡಗಿದ್ದಾರೆ. ಸ್ವಿಸ್ ಬ್ಯಾಂಕ್‌ಗಳಲ್ಲಿ ಹಣವಿರಿಸಿರುವ 700 ಮಂದಿ ಭಾರತೀಯರ ಹೆಸರುಗಳನ್ನು ಬಹಿರಂಗಪಡಿಸುವಂತೆ ಹಿರಿಯ ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಸರಕಾರವನ್ನು ಒತ್ತಾಯಿಸಿದ್ದಾರೆ

Related posts

Leave a Comment