15 ಶಾಸಕರ ರಾಜೀನಾಮೆ ಪತ್ರ ಯಡಿಯೂರಪ್ಪನವರ ಕೈಯಲ್ಲಿ?

ಬೆಂಗಳೂರು, ಜ.5: ಕೆಜೆಪಿ ಕಾರ್ಯಕಾರಿಣಿ ಯಲ್ಲಿ ಪಾಲ್ಗೊಂಡ 15 ಮಂದಿ ಬಿಜೆಪಿ ಶಾಸಕರು ಈಗಾಗಲೇ ತಮ್ಮ ರಾಜೀನಾಮೆ ಪತ್ರಗಳನ್ನು ಬಿ.ಎಸ್. ಯಡಿಯೂರಪ್ಪನವರಿಗೆ ನೀಡಿದ್ದಾರೆಯೇ? ಮೂಲಗಳು ಹೌದೆಂದು ತಿಳಿಸಿವೆ. ಕೆಜೆಪಿ ಕಾರ್ಯಕಾರಿಣಿಯಲ್ಲಿ ಪಾಲ್ಗೊಂಡ 15ಮಂದಿ ಬಿಜೆಪಿ ಶಾಸಕರು ರಾಜೀನಾಮೆ ಪತ್ರಗಳನ್ನು ಯಡಿಯೂರಪ್ಪನವರಿಗೆ ಸಲ್ಲಿಸಿದ್ದಾರೆ. ಸೂಕ್ತ ಸಂದರ್ಭದಲ್ಲಿ ರಾಜ್ಯಪಾಲರು ಮತ್ತು ವಿಧಾನಸಭಾಧ್ಯಕ್ಷರಿಗೆ ಪತ್ರಗಳನ್ನು ಕಳುಹಿಸುವ ಕುರಿತು ಯಡಿಯೂರಪ್ಪ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಹಾವೇರಿ ಶಾಸಕ ನೆಹರೂ ಓಲೇಕಾರ್ ತಿಳಿಸಿದ್ದಾರೆ. ಕೆಜೆಪಿಯ ಜತೆ ಸುಮಾರು ೩೫ಕ್ಕೂ ಹೆಚ್ಚು ಶಾಸಕರು ಕೈಜೋಡಿಸಲಿದ್ದಾರೆ. ತಮ್ಮ ಕ್ಷೇತ್ರಗಳಲ್ಲಿ ನಿಗದಿತ ಕಾರ್ಯಕ್ರಮಗಳಿದ್ದ ಕಾರಣ ಕೆಲವು ಶಾಸಕರು ಕೆಜೆಪಿ ಕಾರ್ಯಕಾರಿಣಿಯಲ್ಲಿ ಭಾಗವಹಿಸಿರಲಿಲ್ಲ. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಜನವರಿ ಕೊನೆಯ ವಾರದೊಳಗೆ ಸರಕಾರ ಪತನವಾಗುವುದು ಬಹುತೇಕ ಖಚಿತವಾಗಿದೆ. ಜಗದೀಶ್ ಶೆಟ್ಟರ್‌ರ ಜನವಿರೋಧಿ ಆಡಳಿತಕ್ಕೆ ಜನ ತೆರೆ ಎಳೆಯಲು ಬಯಸುತ್ತಿದ್ದು ಇದಕ್ಕೆ ತಮ್ಮ ನಾಯಕ ಯಡಿಯೂರಪ್ಪ ಮಂಗಳ ಹಾಡಲಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಜೆಟ್ ಮಂಡನೆ ಮಾಡುವುದಾಗಿ ಹೇಳಿರುವುದು ಅವರ ಪರಮಾಧಿಕಾರ. ಆದರೆ ಅಲ್ಲಿಯವರೆಗೆ ಸರಕಾರ ಇರುತ್ತದೆಯೇ ಎಂಬುದೇ ಅನುಮಾನ ಎಂದು ಕೆಜೆಪಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾರ್ಮಿಕವಾಗಿ ಹೇಳಿದ್ದಾರೆ. ಡಾಲರ‍್ಸ್ ಕಾಲನಿಯಲ್ಲಿರುವ ತನ್ನ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿಯಾಗಿ ಬಜೆಟ್ ಮಂಡನೆ ಮಾಡುವುದು ಅವರ ಅಧಿಕಾರ.
ಅದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ಆದರೆ, ಬಜೆಟ್ ಅಧಿವೇಶನದವರೆಗೆ ಸರಕಾರ ಉಳಿಯಬೇಕಲ್ಲವೇ? ಎಂದು ಪ್ರಶ್ನಿಸಿದರು. ಕೆಜೆಪಿ ಕಾರ್ಯಕಾರಿಣಿಯಲ್ಲಿ ಕೈಗೊಂಡ ನಿರ್ಣಯದ ಪ್ರಕಾರ ಸರಕಾರ ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರಿಯಬಾರದೆಂಬುದು ನಮ್ಮ ನಿರ್ಧಾರ. ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದು ಯಡಿಯೂರಪ್ಪ ಪುನರುಚ್ಚರಿಸಿದರು.
ಬಿಜೆಪಿ ಸರಕಾರ ಪತನಕ್ಕೆ ಪದೇ ಪದೇ ಡೆಡ್‌ಲೈನ್ ವಿಧಿಸುತ್ತಿರುವ ಬಗ್ಗೆ ಬಿಜೆಪಿ ನಾಯಕರು ನೀಡಿರುವ ಹೇಳಿಕೆಗಳಿಗೆ ಜನವರಿ ೧೫ರವರೆಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ. ತಮ್ಮ ಬಗ್ಗೆ ಹಗುರವಾಗಿ ಮಾತನಾಡುತ್ತಿರುವ ಬಿಜೆಪಿ ಮುಖಂಡರಿಗೆ ಸಂಕ್ರಾಂತಿಯ ಬಳಿಕ ತಕ್ಕ ಉತ್ತರ ನೀಡಲಿದ್ದೇವೆ ಎಂದು ಎಚ್ಚರಿಸಿದರು. ಸರಕಾರಕ್ಕೆ ಅಗತ್ಯವಿರುವ ಬಹುಮತವಿಲ್ಲ ಎಂದು ಪದೇ ಪದೇ ಸ್ಪಷ್ಟಪಡಿಸಿದ್ದೇನೆ. ಆದರೂ ಬಿಜೆಪಿ ನಾಯಕರು ಸರಕಾರ ಸುಭದ್ರವಾಗಿದೆ ಎಂದಿದ್ದಾರೆ. ಹೀಗಾಗಿ ಇದೇ ಚರ್ಚೆಯನ್ನು ಮುಂದುವರಿಸುವುದರಲ್ಲಿ ಅರ್ಥವಿಲ್ಲ. ಸಂಕ್ರಾಂತಿಯ ಬಳಿಕ ಈ ಎಲ್ಲ ಗೊಂದಲಗಳಿಗೆ ತೆರೆ ಬೀಳಲಿದೆ ಎಂದು ಯಡಿಯೂರಪ್ಪ
ಹೇಳಿದರು. ರಾಜ್ಯದ ಅಭಿವೃದ್ಧಿಯನ್ನು ಬಿಜೆಪಿ ಸರಕಾರ ಸಂಪೂರ್ಣ ಕಡೆಗಣಿಸಿದೆ. ತನ್ನ ಅವಧಿಯಲ್ಲಿ ಜಾರಿಗೊಳಿಸಿದ್ದ ಯಾವ ಯೋಜನೆಗಳಿಗೂ ಹಣಕಾಸು ಬಿಡುಗಡೆ ಮಾಡದೆ ಜನವಿರೋಧಿಯಾಗಿದೆ. ಇಂತಹ ಸರಕಾರ ಅಧಿಕಾರದಲ್ಲಿರಬಾರದು ಎಂಬುದು ರಾಜ್ಯದ ಜನರ ಅಭಿಪ್ರಾಯವಾಗಿದೆ. ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಶಾಸಕರು ತಮ್ಮ ಜತೆ ಕೈಜೋಡಿಸಿ ಬೆನ್ನೆಲುಬಾಗಿ ನಿಂತಿದ್ದಾರೆ. ಮುಂದಿನ ದಿನಗಳಲ್ಲಿ ಕೈಗೊಳ್ಳುವ ಎಲ್ಲ ನಿಲುವುಗಳಿಗೆ ಬೆಂಬಲ ನೀಡುವ ಸ್ಪಷ್ಟ ಸಂದೇಶ ನೀಡಿದ್ದಾರೆ. ಹೀಗಾಗಿ ಶೀಘ್ರದಲ್ಲೇ ರಾಜಕೀಯ ಗೊಂದಲಗಳು ನಿವಾರಣೆಯಾಗಲಿದ್ದು ರಾಜ್ಯದಲ್ಲಿ ಬದಲಾವಣೆಯ ಗಾಳಿ ಬೀಸಲಿದೆ ಎಂದು ಯಡಿಯೂರಪ್ಪ ಪ್ರತಿಪಾದಿಸಿದರು. ಪಕ್ಷ ಸಂಘಟನೆಯ ನಿಟ್ಟಿನಲ್ಲಿ ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಿಗೆ
ಭೇಟಿ ನೀಡಿದ್ದ ಸಂದರ್ಭದಲ್ಲಿ ಬಿಜೆಪಿ ಸರಕಾರದ ಬಗ್ಗೆ ಭಾರೀ ಅಸಮಾಧಾನ ಕೇಳಿಬಂದಿದೆ. ಮುಖ್ಯಮಂತ್ರಿ ಶೆಟ್ಟರ್‌ರ ಆಡಳಿತ ವೈಖರಿಗೆ ಜನ ಬೇಸತ್ತು ಹೋಗಿದ್ದು ಆದಷ್ಟು ಶೀಘ್ರ ಸರಕಾರ ಪತನವಾಗಲಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಂಕ್ರಾಂತಿಯ ನಂತರ ತನ್ನ ಬೆಂಬಲಿಗರೊಂದಿಗೆ ಚರ್ಚಿಸಿ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗುವುದು. ಕೆಜೆಪಿಯ ಜತೆ ಕೈಜೋಡಿಸುವಂತೆ ಯಾವುದೇ ನಾಯಕರಿಗೂ ಬಲವಂತಪಡಿಸುವ ಪ್ರಶ್ನೆಯೇ ಇಲ್ಲ ಎಂದು ಅವರು ಪುನರುಚ್ಚರಿಸಿದರು.
Please follow and like us:
error