You are here
Home > Koppal News >  132 ಕೋಟಿ ರೂ.ವೆಚ್ಚದ ಇಂಜಿನಿಯರಿಂಗ್ ಕಾಲೇಜು ಇಡೀ ರಾಜ್ಯಕ್ಕೆ ಮಾದರಿ ಆಗಲಿದೆ

 132 ಕೋಟಿ ರೂ.ವೆಚ್ಚದ ಇಂಜಿನಿಯರಿಂಗ್ ಕಾಲೇಜು ಇಡೀ ರಾಜ್ಯಕ್ಕೆ ಮಾದರಿ ಆಗಲಿದೆ

ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕು ತಳಕಲ್ ನಲ್ಲಿ 132 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ವಾಗಲಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಇಡೀ ಕರ್ನಾಟಕ ರಾಜ್ಯಕ್ಕೆ ಒಂದು ಮಾದರಿ ಕಾಲೇಜು ಆಗಲಿದೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಹೇಳಿದರು.  ತಳಕಲ್ ಗ್ರಾಮದ ಬಳಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ನಿರ್ಮಾಣ ವಾಗಲಿರುವ ಪ್ರದೇಶಕ್ಕೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ರಾಜ್ಯದಲ್ಲಿಯೇ ಅತ್ಯುತ್ತಮ ಹಾಗೂ ಮಾದರಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಉದ್ದೇಶಿಸಿದೆ.  ಇದಕ್ಕಾಗಿ 32 ಎಕರೆ ವಿಸ್ತಾರದ ಜಮೀನನ್ನು ಈಗಾಗಲೆ ಸರ್ಕಾರದ ವಶಕ್ಕೆ ಪಡೆಯಲಾಗಿದ್ದು, ಕಾಲೇಜು ನಿರ್ಮಾಣಕ್ಕಾಗಿ ಸರ್ಕಾರ ಈಗಾಗಲೆ 132 ಕೋಟಿ ರೂ. ಗಳನ್ನು ಮಂಜೂರು ಮಾಡಿದೆ.  ರಾಜ್ಯದಲ್ಲಿಯೇ ಮೊದಲ ಬಾರಿಗೆ ಈ ಇಂಜಿನಿಯರಿಂಗ್ ಕಾಲೇಜಿನಲ್ಲಿ 250 ವಿದ್ಯಾರ್ಥಿನಿಯರು ಹಾಗೂ 500 ವಿದ್ಯಾರ್ಥಿಗಳ ವಾಸ್ತವ್ಯಕ್ಕೆ ಹಾಸ್ಟೆಲ್ ಸೌಲಭ್ಯ ಕಲ್ಪಿಸಲಾಗುವುದು.  ಬೋಧಕರು, ಬೋಧಕೇತರ ಸಿಬ್ಬಂದಿ ವರ್ಗದವರಿಗೂ ಇದೇ ಸ್ಥಳದಲ್ಲಿ ವಸತಿಗೃಹ ಒದಗಿಸಲಾಗುವುದು.  ಕಾಲೇಜು ಕಟ್ಟಡ ನಿರ್ಮಾಣಕ್ಕೆ 24 ತಿಂಗಳ ಕಾಲಮಿತಿ ಇದ್ದು, ಮಹಾರಾಷ್ಟ್ರದ ಬಿ.ಜಿ. ಶಿರ್ಕೆ ಕನ್ಸಟ್ರಕ್ಷನ್ಸ್ ಕಂಪನಿ ಗುತ್ತಿಗೆ ಪಡೆದುಕೊಂಡಿದೆ.  ಆದರೂ 2018 ರ ಮಾರ್ಚ್ ಅಂತ್ಯದೊಳಗೆ ಕಟ್ಟಡವನ್ನು ಪೂರ್ಣಗೊಳಿಸಿ ನೀಡುವುದಾಗಿ ಕಂಪನಿ ಭರವಸೆ ನೀಡಿದೆ.  ಬರುವ ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ಮುಖ್ಯಮಂತ್ರಿಗಳನ್ನು ಆಹ್ವಾನಿಸಿ, ಕೊಪ್ಪಳ ಮೆಡಿಕಲ್ ಕಾಲೇಜು ಉದ್ಘಾಟನೆ, ಇಂಜಿನಿಯರಿಂಗ್ ಕಾಲೇಜು ಭೂಮಿಪೂಜೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ಕೊಡಿಸಲಾಗುವುದು.  ಇಂಜಿನಿಯರಿಂಗ್ ಕಾಲೇಜಿಗೆ ಸದ್ಯ ಬಿಇ ಮೆಕ್ಯಾನಿಕಲ್, ಬಿಇ ಕಂಪ್ಯೂಟರ್ ಸೈನ್ಸ್ ಸೇರಿದಂತೆ 06 ಕೋರ್ಸ್ಗ್ಳಿಗೆ ಮಂಜೂರಾತಿ ನೀಡಲಾಗಿದೆ.  ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ರೈಲ್ವೆ ಇಂಜಿನಿಯರಿಂಗ್ ಕೋರ್ಸ್ ಪ್ರಾರಂಭಿಸಲು ಕೇಂದ್ರ ರೈಲ್ವೆ ಸಚಿವರೊಂದಿಗೆ ಚರ್ಚೆ ನಡೆಸಿದ್ದು, ಅವರು ಕೂಡ ತಾತ್ವಿಕ ಒಪ್ಪಿಗೆ ನೀಡಿದ್ದಾರೆ.  ಇದೇ ಇಂಜಿನಿಯರಿಂಗ್ ಕಾಲೇಜಿನಲ್ಲಿ ರೈಲ್ವೆ ಇಂಜಿನಿಯರಿಂಗ್ ಕೋರ್ಸ್ ಪ್ರಾರಂಭಿಸಲು ಯತ್ನಿಸಲಾಗುವುದು.  ಎರಡು ವರ್ಷದೊಳಗೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶೈಕ್ಷಣಿಕ ತರಗತಿಗಳು ಪ್ರಾರಂಭವಾಗಲಿವೆ.  ಬರುವ ದಿನಗಳಲ್ಲಿ ಇಂಜಿನಿಯರಿಂಗ್ ಪಿಜಿ ಕೇಂದ್ರವನ್ನು ಇಲ್ಲಿಯೇ ಪ್ರಾರಂಭಿಸಲಾಗುವುದು.  ಇದಕ್ಕೆ ಬೇಕಾಗುವ 20 ಎಕರೆ ಜಮೀನನ್ನು ಒದಗಿಸಲಾಗುವುದು.  ಗಂಗಾವತಿಯಲ್ಲಿ ಬರುವ ಶೈಕ್ಷಣಿಕ ವರ್ಷದಿಂದ ಇಂಜಿನಿಯರಿಂಗ್ ಕಾಲೇಜು ಪ್ರಾರಂಭವಾಗಲಿದ್ದು, ಅಗತ್ಯವಿರುವ 07 ಕೋಟಿ ರೂ. ಅನುದಾನವನ್ನು ಈಗಾಗಲೆ ಒದಗಿಸಲಾಗಿದೆ ಎಂದು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಹೇಳಿದರು.ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಬಂಡಿವಡ್ಡರ್, ಬಿ.ಜಿ. ಶಿರ್ಕೆ ಕನ್ಸಟ್ರಕ್ಷನ್ಸ್ ಕಂಪನಿಯ ಡೆಪ್ಯುಟಿ ಚೀಫ್ ಎಕ್ಸಿಕ್ಯೂಟಿವ್ ಅಧಿಕಾರಿ ಬಿ.ಜಿ. ಸಾಂಗ್ಲಿ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

Top