ಜಿದ್ದಾಜಿದ್ದಿ ಕಣವಾದ ಬಳ್ಳಾರಿ : 12 ನಾಮಪತ್ರ ಅಂಗೀಕಾರ

ಬಿಜೆಪಿಯ ಅಶೋಕ್, ನಾಗೇಂದ್ರರ ನಾಮಪತ್ರ ತಿರಸ್ಕೃತ ♦ ಶ್ರೀರಾಮುಲು, ರಾಮ್‌ಪ್ರಸಾದ್, ಗಾದಿಲಿಂಗಪ್ಪರ ಮಧ್ಯೆ ಹಣಾಹಣಿ
ಬಳ್ಳಾರಿ, ನ.12: ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಚುನಾವಣಾ ಕಣ ರಂಗೇರಿದೆ. ನಾಮಪತ್ರ ಸಲ್ಲಿಸಿದ್ದ 14 ಮಂದಿಗಳ ಪೈಕಿ ಇಬ್ಬರ ನಾಮಪತ್ರಗಳು ತಿರಸ್ಕೃತ ಗೊಂಡಿದ್ದು, 12 ಮಂದಿಯ ನಾಮಪತ್ರ ಗಳು ಅಂಗೀಕಾರಗೊಂಡಿವೆ. ಪಕ್ಷೇತರ ಅಭ್ಯರ್ಥಿ ಶ್ರೀರಾಮುಲು, ಕಾಂಗ್ರೆಸ್ ಅಭ್ಯರ್ಥಿ ರಾಮ್‌ಪ್ರಸಾದ್ ಹಾಗೂ ಬಿಜೆಪಿ ಅಭ್ಯರ್ಥಿ ಗಾದಿ ಲಿಂಗಪ್ಪ ನವರ ನಾಮಪತ್ರಗಳು ಅಂಗೀಕಾರಗೊಂಡಿದ್ದು, ಈ ಮೂರು ಮಂದಿಯ ಮಧ್ಯೆ ತೀವ್ರ ಹಣಾಹಣಿ ಏರ್ಪಟ್ಟಿದೆ. 14 ಮಂದಿಯ ನಾಮಪತ್ರಗಳನ್ನು ಇಂದು ಪರಿಶೀಲನೆ ನಡೆಸಿದ ಚುನಾವಣಾಧಿಕಾರಿ ಶಶಿಕಾಂತ್ ಸೆಂಥಿಲ್, ಇಬ್ಬರ ನಾಮಪತ್ರಗಳು ತಿರಸ್ಕೃತಗೊಂಡಿರುವುದನ್ನು ಸುದ್ದಿಗಾರರಗೆ ಸ್ಪಷ್ಟಪಡಿಸಿದರು.
ಗುರುವಾರ ಬಿಜೆಪಿ ವರಿಷ್ಠರ ಆದೇಶದ ಮೇರೆಗೆ ನಾಮಪತ್ರ ಸಲ್ಲಿಸಿದ್ದ ರಾಜ್ಯ ಬಿಜೆಪಿ ಎಸ್.ಟಿ.ಮೋರ್ಚಾದ ಅಶೋಕ್ ಕುಮಾರ್ ಹಾಗೂ ರಾಷ್ಟ್ರೀಯ ಎಸ್.ಟಿ.ಮೋರ್ಚಾದ ಕಾರ್ಯದರ್ಶಿ ನಾಗೇಂದ್ರರ ನಾಮಪತ್ರಗಳು ತಿರಸ್ಕೃತಗೊಂಡಿವೆ. ಅವರು ‘ಬಿ’ಫಾರಂ ಸಲ್ಲಿಸದ ಕಾರಣ ಅವರ ನಾಮಪತ್ರಗಳು ತಿರಸ್ಕೃತಗೊಂಡಿವೆ ಎಂದು ಚುನಾವಣಾಧಿಕಾರಿ ತಿಳಿಸಿದರು.
14 ಮಂದಿ ಅಭ್ಯರ್ಥಿಗಳು ಒಟ್ಟು 20 ನಾಮಪತ್ರಗಳನ್ನು ಸಲ್ಲಿಸಿದ್ದು, ಇಬ್ಬರ ನಾಮಪತ್ರಗಳು ತಿರಸ್ಕೃತಗೊಂಡಿರುವ ಹಿನ್ನೆಲೆಯಲ್ಲಿ 12 ಮಂದಿ ಕಣದಲ್ಲುಳಿದಂತಾಗಿದೆ.  ಈ ಮಧ್ಯೆ ಶ್ರೀರಾಮುಲು ಪರ ವಕೀಲರು ಬಿಜೆಪಿಯ ಗಾದಿ ಲಿಂಗಪ್ಪನವರ ನಾಮಪತ್ರ ಅಂಗೀಕರಿಸದಂತೆ ಚುನಾವಣಾಧಿಕಾರಿಗೆ ಮನವಿ ಮಾಡಿದ್ದರು. ಗಾದಿ ಲಿಂಗಪ್ಪ ಗುತ್ತಿಗೆದಾರರಾಗಿರುವ ಹಿನ್ನೆಲೆಯಲ್ಲಿ ಅವರ ನಾಮಪತ್ರವನ್ನು ತಿರಸ್ಕರಿಸಬೇಕು ಎಂದು ಅವರು ಒತ್ತಾಯಿಸಿದ್ದರು.
ಆದರೆ ಗಾದಿ ಲಿಂಗಪ್ಪ ಮರಳು ವ್ಯಾಪಾರಿಯಾಗಿದ್ದು, ಅವರು ಗುತ್ತಿಗೆದಾರರಲ್ಲ ಎಂದು ಗಾದಿ ಲಿಂಗಪ್ಪ ಪರ ಕೆಲವು ಕಾರ್ಯಕರ್ತರು ಸ್ಪಷ್ಟನೆ ನೀಡಿದ ಹಿನ್ನೆಲೆಯಲ್ಲಿ ಅವರ ನಾಮಪತ್ರ ಅಂಗೀಕರಿಸಿರುವುದಾಗಿ ಶಶಿಕಾಂತ್ ಸ್ಪಷ್ಟನೆ ನೀಡಿದರು.
ಶ್ರೀರಾಮುಲು, ರಾಮ್‌ಪ್ರಸಾದ್ ಹಾಗೂ ಗಾದಿ ಲಿಂಗಪ್ಪರ ಮಧ್ಯೆ ತೀವ್ರ ಸ್ಪರ್ಧೆ ಏರ್ಪಡಲಿದ್ದು, ಗೆಲುವು ಸಾಧಿಸುವುದಕ್ಕಾಗಿ ಮೂವರು ರಣತಂತ್ರ ರೂಪಿಸಿದ್ದು, ಪ್ರಚಾರ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

Leave a Reply