100 ಕೋಟಿ ಪ್ಯಾಕೇಜ್ ಪರಿಹಾರ ನೀಡಲು ಕೇಂದ್ರಕ್ಕೆ ಮನವಿ : ಆರ್. ಶಂಕರ್

Koppal News ಮಳೆಯ ಕೊರತೆಯಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ರೈತರ ಬೆಳೆಗಳು ಸಂಪೂರ್ಣ ನಾಶವಾಗಿದ್ದು, 100 ಕೋಟಿ ರೂ. ಪ್ಯಾಕೇಜ್ ಪರಿಹಾರವನ್ನು ನೀಡುವಂತೆ ಕೇಂದ್ರಕ್ಕೆ ರಾಜ್ಯ ಸರ್ಕಾರದಿಂದ ಮನವಿ ಮಾಡಲಾಗುವುದು ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಆರ್. ಶಂಕರ್ ಅವರು ಹೇಳಿದರು. 
ಕೊಪ್ಪಳ ಜಿಲ್ಲೆಯ ವಿವಿಧೆಡೆ ಬರಪೀಡಿತ, ಬೆಳೆಹಾನಿ ಪ್ರದೇಶಗಳ ಪರಿವೀಕ್ಷಣೆಗಾಗಿ ಶನಿವಾರದಂದು ತಾಲೂಕಿನ ವನಬಳ್ಳಾರಿ, ಹೊಸೂರು, ಮೆತಗಲ್, ಕುಕನಪಳ್ಳಿ ಗ್ರಾಮಗಳ ಬಳಿಯ ಹೊಲಗಳಲ್ಲಿ ಅನಾವೃಷ್ಟಿಯಿಂದ ಉಂಟಾಗಿರುವ ಬೆಳೆಹಾನಿ ಪ್ರದೇಶಗಳ ಪರಿವೀಕ್ಷಣೆ ನಡೆಸಿ, ಬಳಿಕ ಅವರು ಮಾತನಾಡಿದರು.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯ ಅಭಾವದಿಂದಾಗಿ ರೈತರು ಬೆಳೆದ ಬೆಳೆಗಳು ಸಂಪೂರ್ಣ ನಾಶವಾಗಿದೆ. ದನ-ಕರುಗಳಿಗೆ, ಜಾನುವಾರುಗಳಿಗೆ ಸಹ ಆ ಮೇವು ಯೋಗ್ಯವಲ್ಲದಂತಾಗಿದೆ. ರೈತರು ಸಂಕಷ್ಟಕ್ಕೆ ಸಿಲುಕಿದ್ದು, ರಾಜ್ಯದ ಕೆಲ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಬೇಕಾಗಿದೆ. ಮುಂದಿನ ಸಂಪುಟದಲ್ಲಿ ಈ ಬಗ್ಗೆ ಚರ್ಚಿಸಿ, ತೀರ್ಮಾನ ಕೈಗೊಳ್ಳಲಾಗುವುದು. ಅಲ್ಲದೇ ರಾಜ್ಯಕ್ಕೆ ರೂ. 100 ಕೋಟಿ ಪ್ಯಾಕೇಜ್ ಪರಿಹಾರವನ್ನು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಗುವುದು. ಅಲ್ಪ ಪ್ರಮಾಣದಲ್ಲಿ ಮಳೆಯಾಗಿರುವ ಪೈಕಿ ಕೊಪ್ಪಳ ಜಿಲ್ಲೆಯು ಒಂದು. ಜಿಲ್ಲೆಯಲ್ಲಿಯೂ ಸಹ ಮಳೆಯ ಪ್ರಮಾಣ ತೀರಾ ಕಡಿಮೆ ಇದ್ದು, ರೈತರ ಬೆಳೆಗಳು ಸಂಪೂರ್ಣ ನಷ್ಟಕ್ಕೆ ಒಳಗಾಗಿದೆ. ನಿಗದಿತ ಅವಧಿಯೊಳಗೆ ಮಳೆಯಾಗದೇ ಇರುವುದು ಬೆಳೆ ನಷ್ಟಕ್ಕೆ ಮುಖ್ಯ ಕಾರಣ. ಅರಣ್ಯ ನಾಶದದಿಂದ ಮಳೆ ಪ್ರಮಾಣವು ನಿರಂತರವಾಗಿ ಕಡಿಮೆಯಾಗುತ್ತಿದ್ದು, ಎಲ್ಲರೂ ಅರಣ್ಯ ಸಂರಕ್ಷಣೆ ಮಾಡಬೇಕಾಗಿದೆ. ಈ ದಿಸೆಯಲ್ಲಿ ಎಲ್ಲರೂ ಗಿಡ-ಮರಗಳನ್ನು ಹೆಚ್ಚು-ಹೆಚ್ಚಾಗಿ ಬೆಳಸಬೇಕು. ಇದರಿಂದಾಗಿ ನಮ್ಮೆಲ್ಲರಿಗೂ ಮತ್ತು ಮುಂದೆ ಬರುವಂತಹ ಪೀಳಿಗೆಗೂ ಕೂಡ ಅನುಕೂಲವಾಗಲಿದೆ. ಆದ್ದರಿಂದ ಪರಿಸರ ಸಂರಕ್ಷಣೆಗಾಗಿ ಎಲ್ಲರೂ ಸಹಕರಿಸಿ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಆರ್. ಶಂಕರ್ ಅವರು ಹೇಳಿದರು. ಅಲ್ಲದೆ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಕಂಡುಬಂದಿರುವ ಹಿನ್ನೆಲೆಯಲ್ಲಿ ಯಾವುದೇ ಸಭೆ, ಸಮಾರಂಭಗಳಲ್ಲಿ ಹಾರ-ತುರಾಯಿ ಸ್ವೀಕರಿಸದಿರಲು ನಿರ್ಧರಿಸಲಾಗಿದೆ ಎಂದರು.

ಅಮಾನತು ಕ್ರಮಕ್ಕೆ ಸೂಚನೆ :
ವಿಕಲಚೇತನರಿಗೆ ತ್ರಿಚಕ್ರ ಮೋಟಾರು ವಾಹನ ವಿತರಣೆಯಲ್ಲಿ ಅಂಗವಿಕಲರ ಕಲ್ಯಾಣಾಧಿಕಾರಿಗಳು, ಲಂಚ ಕೇಳಿದ ಆರೋಪ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಕುರಿತು ಪರಿಶೀಲಿಸಿ, ಸಂಬಂಧಪಟ್ಟ ಅಧಿಕಾರಿಯ ಅಮಾನತಿಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಸಂಸದ ಕರಡಿ ಸಂಗಣ್ಣ, ಶಾಸಕರುಗಳಾದ ಬಸವರಾಜ ದಢೇಸೂಗೂರು, ಪರಣ್ಣ ಮುನವಳ್ಳಿ, ಜಿ.ಪಂ. ಸದಸ್ಯರಾದ ರಾಮಣ್ಣ ಚೌಡ್ಕಿ, ಗವಿಸಿದ್ದಪ್ಪ ಕರಡಿ, ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ, ಉಪ ವಿಭಾಗಾಧಿಕಾರಿ ಸಿ.ಡಿ. ಗೀತಾ, ಕೊಪ್ಪಳ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶ್‍ಪಾಲ್ ಕ್ಷೀರಸಾಗರ ಸೇರಿದಂತೆ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮತ್ತು ಹಲವು ಗಣ್ಯರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು

Please follow and like us:
error