ಹೆಚ್-1 ಎನ್-1 686 ಶಂಕಿತ ಪ್ರಕರಣಗಳ ತಪಾಸಣೆ ನಡೆಸಲಾಗಿದೆ

 ರಾಜ್ಯದಲ್ಲಿ ಡಿಸೆಂಬರ್‍ನಿಂದ ಮಾರ್ಚ್‍ವರೆಗೆ ಹೆಚ್-1 ಎನ್-1 ಪ್ರಕರಣಗಳನ್ನು ಕಾಣಿಸಿಕೊಳ್ಳುತ್ತವೆ. ಈವರೆಗೆ 686 ಶಂಕಿತ ಪ್ರಕರಣಗಳ ತಪಾಸಣೆ ನಡೆಸಲಾಗಿದೆ. ಈ ಪೈಕಿ 189 ಪ್ರಕರಣಗಳಲ್ಲಿ ರೋಗ ದೃಢಪಟ್ಟಿವೆ. ಇದರಲ್ಲಿ 125 ಗುಣಮುಖರಾಗಿದ್ದಾರೆ. ಜನವರಿ ತಿಂಗಳಲ್ಲಿ ಎಂಟು ಹಾಗೂ ಫೆಬ್ರವರಿ ತಿಂಗಳಲ್ಲಿ ಏಳು ಮಂದಿ, ಒಟ್ಟಾರೆ ಈವರೆಗೆ ಈ ರೋಗಕ್ಕೆ 15 ಮಂದಿಗೆ ಬಲಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ಸದನಕ್ಕೆ ತಿಳಿಸಿದರು.
ಹೆಚ್-1 ಎನ್-1 ರೋಗ ನಿಯಂತ್ರಣಕ್ಕೆ ಎಲ್ಲಾ ಅಗತ್ಯ ಕ್ರಮ ಕೈಗೊಂಡಿದೆ. ಪ್ರತಿ ಜಿಲ್ಲಾ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಇಂತಹ ರೋಗಿಗಳ ಚಿಕಿತ್ಸೆಗಾಗಿ ಪ್ರತ್ಯೇಕ ವಾರ್ಡ್‍ಗಳನ್ನು ಮೀಸಲಿರಿಸಲಾಗಿದೆ. ಅಲ್ಲದೆ. ದಾಖಲಾಗುವ ಹೆಚ್-1 ಎನ್-1 ರೋಗಿಗಳಿಗೆ ಉಚಿತ ಔಷಧಿ ನೀಡುವಂತೆ ಖಾಸಗಿ ಆಸ್ಪತ್ರೆಗಳಿಗೂ ಸೂಚನೆ ನೀಡಲಾಗಿದೆ ಎಂದು   ಸಿದ್ದರಾಮಯ್ಯ ಅವರು ಮಾಹಿತಿ ನೀಡಿದರು.
ಪ್ರಸಕ್ತ ವರ್ಷ ರಾಜ್ಯದಲ್ಲಿ 9.93 ಲಕ್ಷ ಶೌಚಾಲಯಗಳ ನಿರ್ಮಾಣ ಮಾಡುವ ಗುರಿಗೆ ಪ್ರತಿಯಾಗಿ ಜನವರಿ ಮಾಸಾಂತ್ಯಕ್ಕೆ 6.05 ಲಕ್ಷ ಶೌಚಾಲಯಗಳನ್ನು ನಿರ್ಮಿಸಿ ದಾಖಲೆ ಸ್ಥಾಪಿಸಿರುವ ರಾಜ್ಯ ಕರ್ನಾಟಕವಾಗಿದೆ. ಈ ಸಾಲಿನಲ್ಲಿ ನಿರ್ಮಿಸಿರುವ ಎಲ್ಲಾ ಶೌಚಾಲಯಗಳನ್ನೂ ಸಾಮಾಜಿಕ ಪರಿಶೋಧನೆಯ ಮೂಲಕ ಪರಿಶೀಲನೆ ಮಾಡಲಾಗುವುದು.
ಕುಡಿಯುವ ನೀರಿನ ಯೋಜನೆಗಳಿಗೆ ರಾಜ್ಯದಲ್ಲಿ ಯಾವುದೇ ಅನುದಾನದ ಕೊರತೆ ಇಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನ ಅಡಿಯಲ್ಲಿ 1569 ಕೋಟಿ ರೂ ಬಿಡುಗಡೆ ಮಾಡಿ, 1313 ಕೋಟಿ ರೂ ಈಗಾಗಲೇ ವೆಚ್ಚ ಮಾಡಲಾಗಿದೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಕೃಷಿ ಭಾಗ್ಯ ಯೋಜನೆಯನ್ವಯ ಮಳೆಯಾಶ್ರಿತ ರೈತರಿಗೆ ಮಳೆ ನೀರು ಸಂಗ್ರಹಣೆ ಮತ್ತು ಪುರ್ನಬಳಕೆಗೆ ಆಧ್ಯತೆ ನೀಡುವ ಕೃಷಿ ಭಾಗ್ಯ ಯೋಜನೆಯ ಮೊದಲನೆಯ ಹಂತದಲ್ಲಿ ಐದು ಒಣ ಭೂಮಿ ವಲಯದ 107 ತಾಲ್ಲೂಕುಗಳಲ್ಲಿ ಜಾರಿಗೆ ತರಲಾಗಿದೆ. ಮಳೆ ನೀರಿನ ಸಂರಕ್ಷಣೆ, ಸಂಗ್ರಹಣೆ ಮತ್ತು ಬಳಕೆ ಮಾಡಿಕೊಂಡು ಲಾಭದಾಯ ಬೆಳೆ ಪದ್ದತಿಯ ಅಳವಡಿಕೆಯ ಮೂಲಕ ಉತ್ತಮ ಆದಾಯ ತರುವ ಬೆಳೆಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಕೃಷಿಯಲ್ಲಿ ಸುಸ್ಥಿರ ಅಭಿವೃದ್ಧಿಯ ಆಶಯ ಹೊಂದಲಾಗಿದೆ. ಈ ಯೋಜನೆಯನ್ವಯ ಪ್ರತಿ ತಾಲ್ಲೂಕಿಗ 210 ಫಲಾನುಭವಿಗಳಿಗೆ ಅವಕಾಶ ನೀಡಲಾಗಿದೆ. ಇದಕ್ಕಾಗಿ ಒಟ್ಟು 500 ಕೋಟಿ ರೂ ಮೀಸಲಿರಿಸಲಾಗಿದೆ. ಮುಂದಿನ ವರ್ಷ ಈ ಯೋಜನೆಗೆ ಸರ್ಕಾರವು ಮತ್ತಷ್ಟು ಒತ್ತು ನೀಡಲಿದೆ.
ಡಾ ಟಿ. ಎನ್. ಪ್ರಕಾಶ್ ಕಮ್ಮಡಿ ಅವರ ಅಧ್ಯಕ್ಷತೆಯಲ್ಲಿ ರಚಿಸಿರುವ ಕೃಷಿ ಬೆಲೆ ಆಯೋಗವು ವಿವಿಧ ಬೆಳೆಗಳಿಗೆ ಬೆಲೆ ನಿರ್ಧಾರಕ್ಕೆ ಪೂರಕವಾದ ಬೆಳೆಗಳ ಉತ್ಪಾದನಾ ವೆಚ್ಚವನ್ನು ಆಯಾ ವಲಯಗಳಲ್ಲಿ ವೈಜ್ಞಾನಿಕವಾಗಿ ದರ ನಿಗದಿಪಡಿಸಲು ಮುಂದಾಗಿದೆ.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ನೀರೀಕ್ಷಿತ ಪ್ರಮಾಣದಲ್ಲಿ ಮಳೆ ಬೀಳದೆ ಅಂತರ್ಜಲ ಮಟ್ಟದಲ್ಲಿ ಕುಸಿತ ಉಂಟಾಗಿ ಮಾವು ಬೆಳೆ ಹಾನಿಯಾಗಿದೆ. ಅದಕ್ಕಾಗಿ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಪ್ರತಿ ಹೆಕ್ಟೇರ್‍ಗೆ 12,000 ರೂ ಪರಿಹಾರ ನೀಡುವ ಪ್ರಸ್ತಾವನೆ ಸರ್ಕಾರದ ಪರಿಶಿಲನೆಯಲ್ಲಿದೆ ಎಂದು ಮುಖ್ಯಮಂತ್ರಿ ಪ್ರಕಟಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಚುನಾವಣಾ ಪೂರ್ವದಲ್ಲಿ ಜನತೆಗೆ ನೀಡಿದ್ದ 165 ಭರವಸೆಗಳ ಪೈಕಿ 95 ಭರವಸೆಗಳನ್ನು ಈಡೇರಿಸಿದ್ದೇವೆ.   ರಮೇಶ್ ಕುಮಾರ್ ನೇತೃತ್ವದ ಪ್ರಣಾಳಿಕಾ ಸಮಿತಿಯ ಶಿಫಾರಸ್ಸುಗಳನ್ನು ತಮ್ಮ ಮೊದಲ ಎರಡು ಆಯವ್ಯಯಗಳಲ್ಲಿಯೇ ಈಡೇರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿರುವುದಾಗಿ ಪ್ರಕಟಿಸಿದರು.
ತಮ್ಮ ಸರ್ಕಾರ ಇಂದಿಗೆ ಒಂದು ವರ್ಷ ಒಂಭತ್ತು ತಿಂಗಳು ಪೂರ್ಣಗೊಳಿಸಿದೆ. ಈ ಅವಧಿಯಲ್ಲಿ ಯಾವುದೇ ಹಗರಣ ಅಥವಾ ಭ್ರಷ್ಠಾಚಾರ ನಡೆದಿಲ್ಲ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೀ ಯೋಜನೆಗಳಾದ ಅನ್ಯಭಾಗ್ಯ, ಕ್ಷೀರ ಭಾಗ್ಯ, ಕೃಷಿ ಭಾಗ್ಯ, ಋಣ ಮುಕ್ತ ಭಾಗ್ಯ ಹಾಗೂ ವಿದ್ಯಾಸಿರಿ ಫಲಾನುಭವಿಗಳಿಂದ ಸರ್ಕಾರದ ಕಾರ್ಯ ನಿರ್ವಹಣೆ ಹೇಗಿದೆ ಎಂಬುದನ್ನು ವಿಚಾರಿಸಿ ತಿಳಿಯಿರಿ ಎಂದು ಶ್ರೀ ಸಿದ್ದರಾಮಯ್ಯ ಅವರು ಪ್ರತಿಪಕ್ಷಗಳಿಗೆ ಕಿವಿ ಮಾತು ಹೇಳಿದರು.
ತಮ್ಮ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವವಿದೆ. ಪಕ್ಷದ ವೇದಿಕೆಯಲ್ಲಿ ತಮ್ಮ ಅಭಿಪ್ರಾಯ ಹಾಗೂ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಮುಖ್ಯಮಂತ್ರಿ ಅಥವಾ ಸಚಿವರ ವಿರುದ್ಧ ಯಾವುದೇ ಶಾಸಕರೂ ಅಸಮಾಧಾನ ವ್ಯಕ್ತಪಡಿಸಿಲ್ಲ. ಶಾಸಕಾಂಗ ಪಕ್ಷದ ಸಭೆ ಹಾಗೂ ಮುಖಂಡರ ಸಭೆಯಲ್ಲಿ ಮಾಧ್ಯಮಗಳು ಹಾಜರಿಲ್ಲದೆಯೇ ಮಾಧ್ಯಮಗಳಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳು ಸತ್ಯಕ್ಕೆ ದೂರವಾದುದು. ಅರ್ಕಾವತಿ ಬಡಾವಣೆ ವಿಚಾರ ಕುರಿತಂತೆ ಪ್ರತಿಪಕ್ಷಗಳ ಬೇಡಿಕೆಯಂತೆಯೇ ರಾಜ್ಯ ಸರ್ಕಾರವು ನ್ಯಾಯಮೂರ್ತಿ ಶ್ರೀ ಕೆಂಪಣ್ಣ ಆಯೋಗವನ್ನು ನೇಮಕ ಮಾಡಿದೆ. ಅರ್ಕಾವತಿ ಬಡಾವಣೆಗೆ ಸಂಬಂಧಿಸಿದಂತೆ ದೂರು ಅಥವಾ ಸಲಹೆಗಳಿದ್ದಲ್ಲಿ ಆಯೋಗಕ್ಕೆ ಹೇಳಿಕೆಗಳ ಜೊತೆಗೆ ಆಧಾರ, ಸಾಕ್ಷಿ, ಪುರಾವೆ ಹಾಗೂ ದಾಖಲೆಗಳನ್ನು ನೀಡಬಹುದಾಗಿದೆ ಎಂದು ಸಲಹೆ ಮಾಡಿದರು.
ತಮ್ಮ ಅಧಿಕಾರಾವಧಿಯಲ್ಲಿ ಒಂದಿಂಚೂ ಭೂಮಿಯನ್ನು ಕಾನೂನುಬಾಹಿರವಾಗಿ ಡಿ-ನೋಟಿಫೈ ಮಾಡಿಲ್ಲ ಎಂದು ಮುಖ್ಯಮಂತ್ರಿಯವರು ಉತ್ತರಿಸಿದಾಗ, ಜಾತ್ಯಾತೀತ ಜನತಾ ದಳದ ನಾಯಕ   ಹೆಚ್. ಡಿ. ಕುಮಾರ ಸ್ವಾಮಿ ಅವರು ದಾಖಲೆಗಳಿವೆ ಎಂದು ತಮ್ಮ ಆಸನದ ಬಳಿ ಇದ್ದ ಕೆಲವು ಕಾಗದ ಪತ್ರಗಳನ್ನು ಪ್ರದರ್ಶಿಸಲು ಯತ್ನಿಸಿದಾಗ, ಸಭಾಧ್ಯಕ್ಷ  ಕಾಗೋಡು ತಿಮ್ಮಪ್ಪ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಸರ್ಕಾರದ ಮೇಲೆ ನಿಯಂತ್ರಣ ಮಾಡುವ ಅಧಿಕಾರ ತಮಗಿಲ್ಲ. ತಾವು ಕೇವಲ ಸಲಹೆ ನೀಡಬಹುದು. ಅದೂ ಕೂಡಾ ಸರ್ಕಾರದ ಉತ್ತರದ ಬಳಿಕ. ಪದೇ ಪದೇ ಆಕ್ಷೇಪ ಎತ್ತುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಎಚ್ಚರಿಸಿದರು.
ಅರ್ಕಾವತಿ ವಿಷಯಕ್ಕೆ ಸಂಬಂದಿಸಿದಂತೆ ಪ್ರತಿಪಕ್ಷ ನಾಯಕ  ಜಗದೀಶ್ ಶೆಟ್ಟರ್ ಅವರು ಕೆಲವು ಮಾಹಿತಿ ನೀಡಲು ಮುಂದಾದಾಗ ಮುಖ್ಯಮಂತ್ರಿಯವರು ಮಾತನಾಡಿ, 2010 ರ ಒಂದೇ ವರ್ಷದ ಅವಧಿಯಲ್ಲಿಯೇ ಭಾರತೀಯ ಜನತಾ ಪಕ್ಷದ ಸರ್ಕಾರದಲ್ಲಿ ಅತಿ ಹೆಚ್ಚು 1961 ಎಕರೆ ಡಿ-ನೋಟಿಫೈ ಮಾಡಲಾಗಿದೆ.ತಮ್ಮ 21 ತಿಂಗಳ ಅಧಿಕಾರಾವಧಿಯಲ್ಲಿ ನ್ಯಾಯಾಲಯದ ಸೂಚನೆಯಂತೆ 22.28 ಎಕರೆ ಭೂಮಿಯನ್ನು ಡಿ-ನೋಟಿಫೈ ಮಾಡಲಾಗಿದೆ. ಅಕ್ರಮವಾಗಿ ತಮ್ಮ ಸರ್ಕಾರ ಯಾವುದೇ ಡಿ-ನೋಟಿಫೈ ಮಾಡಿಲ್ಲ ಎಂದು ಎಲ್ಲಾ ಪ್ರತಿಪಕ್ಷಗಳ ಆರೋಪಗಳನ್ನು ತಳ್ಳಿಹಾಕಿದರು.ಸರ್ಕಾರದ ಉತ್ತರದಿಂದ ಅತೃಪ್ತಗೊಂಡ ಪ್ರತಿಪಕ್ಷ ಭಾರತೀಯ ಜನತಾ ಪಕ್ಷದ ಸದಸ್ಯರು ಧರಣಿ ನಿರತರಾದಾಗ, ಆಡಳಿತ ಪಕ್ಷದ ಸದಸ್ಯರು ಪ್ರತಿಪಕ್ಷದ ಕ್ರಮವನ್ನು ಆಕ್ಷೇಪಿಸಿದರು.ಸಭಾಧ್ಯಕ್ಷ   ಕಾಗೋಡು ತಿಮ್ಮಪ್ಪ ಅವರು ರಾಜ್ಯಪಾಲರ ವಂದನಾ ನಿರ್ಣಯವನ್ನು ಮತಕ್ಕೆ ಹಾಕಿ, ನಿರ್ಣಯಕ್ಕೆ ಧ್ವನಿಮತದಿಂದ ಅಂಗೀಕಾರ ಪಡೆಯಿತು ಎಂದು ಪ್ರಕಟಿಸಿದರು.
Please follow and like us:
error