​ ಅಜ್ಜನ ಜಾತ್ರೆಯಲ್ಲಿ  ಫಲಪುಷ್ಪ ಪ್ರದರ್ಶನ

ಕೊಪ್ಪಳದ ಈ ವರ್ಷ ಜಾತ್ರೆಯಲ್ಲಿ ಫಲ-ಪುಷ್ಪ ಪ್ರದರ್ಶನ ಸಾರ್ವಜನಿಕರ ಕಣ್ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.  ಫಲ-ಪುಷ್ಪ ಪ್ರದರ್ಶನದಲ್ಲಿ ಗುಲಾಬಿ ಮತ್ತು ಚೆಂಡು ಹೂ ಸೇರಿದಂತೆ ವಿವಿಧ ಹೂಗಳಿಂದ ನಿರ್ಮಿಸಿರುವ, ಐತಿಹಾಸಿಕ ಮಹತ್ವವನ್ನು ಬಿಂಬಿಸುವ ಅಶೋಕ ಸ್ತಂಭ ಸಹಿತದ ಅಶೋಕ ವೃತ್ತ ಎಲ್ಲರನ್ನು ಆಕರ್ಷಿಸುತ್ತಿದೆ.  ಅದರ ಜೊತೆಗೆ ವಿಶಿಷ್ಟ ಹೂಗಳಿಂದ ನಿರ್ಮಿಸಿರುವ  ಉದ್ಯಾನವನ ಹಾಗೂ ಕಲಾವಿದರ ಕೈ ಚಳಕದಲ್ಲಿ ರಂಗೋಲಿ ರೂಪದಲ್ಲಿ ಅರಳಿರುವ ಅಭಿನವ ಶ್ರೀ ಗವಿಸಿದ್ದೇಶ್ವರರ ಚಿತ್ರವಂತೂ ನೋಡುಗರನ್ನು ತನ್ನತ್ತ ಸೆಳೆಯುತ್ತಿದೆ.  ವಿವಿಧ ಪುಷ್ಪಗಳಿಂದ  ವಿಶೇಷ ಉದ್ಯಾನವನ ಹಾಗೂ ಅಶೋಕ ಸ್ತಂಭ ಸಹಿತದ ವೃತ್ತ ನಿರ್ಮಿಸಲು ಸುಮಾರು 20 ಸಾವಿರ ಕೆಂಪು ಗುಲಾಬಿ ಹೂಗಳನ್ನು ಬಳಸಲಾಗಿದ್ದು, ಅದರ ಜೊತೆಗೆ ಸುಮಾರು 6 ರಿಂದ 7 ಸಾವಿರ ಚೆಂಡು ಹೂಗಳನ್ನು ಬಳಸಿಕೊಳ್ಳಲಾಗಿದೆ. ಫಲ-ಪುಷ್ಪ ಪ್ರದರ್ಶನದಲ್ಲಿ ವಿವಿಧ ತರಕಾರಿಗಳ ವಿಶೇಷ ಕೆತ್ತನೆ, ತರಕಾರಿಗಳನ್ನು ಬಳಸಿ ನಿರ್ಮಿಸಲಾಗಿರುವ ಸ್ವಚ್ಛ ಭಾರತ ಅಭಿಯಾನದ ಪ್ರೇರಣೆ, ವರ್ಟಿಕಲ್ ಗಾರ್ಡನ್, ಶಿವಮೊಗ್ಗ ಜಿಲ್ಲೆಯ ಕಲಾವಿದ ಹರೀಶ್ ಅವರ ಕೈಚಳಕದಲ್ಲಿ ರಂಗೋಲಿ ಕಲೆಯಲ್ಲಿ ಮೂಡಿ ಬಂದಿರುವ ಅಭಿನವ ಶ್ರೀ ಗವಿಸಿದ್ದೇಶ್ವರ ಅವರ ಚಿತ್ರ ನಿಜಕ್ಕೂ ಆಕರ್ಷಕವಾಗಿದೆ.  ಜೊತೆಗೆ ಕಲ್ಲಂಗಡಿ, ಕುಂಬಳಕಾಯಿಯಲ್ಲಿ ವಿವಿಧ ಮಹನೀಯರ ಭಾವಚಿತ್ರದ ಕೆತ್ತನೆ,  ಹೂಗಳನ್ನು ಬಳಸಿ ನಿರ್ಮಿಸಿರುವ ನವಿಲು, ಕೊಕ್ಕರೆ, ಈಶ್ವರ ಲಿಂಗದ ಮಾದರಿಗಳು ನೋಡುಗರ ಕಣ್ಮನ ಸೆಳೆಯುತ್ತಿವೆ.  ಒಟ್ಟಾರೆ ಈ ಬಾರಿಯ ಶ್ರೀ ಗವಿಸಿದ್ದೇಶ್ವರ ಜಾತ್ರೆಯ ಸಂದರ್ಭವನ್ನು ಸಮರ್ಥವಾಗಿ ಬಳಕೆ ಮಾಡಿಕೊಂಡಿರುವ ತೋಟಗಾರಿಕೆ ಇಲಾಖೆ ಆಕರ್ಷಕ ಫಲ-ಪುಷ್ಪ ಪ್ರದರ್ಶನವನ್ನು ಆಯೋಜಿಸುವ ಮೂಲಕ, ತೋಟಗಾರಿಕೆ ಪ್ರದೇಶ ವಿಸ್ತರಣೆಯತ್ತ ತನ್ನ ಪ್ರಯತ್ನವನ್ನು ಇಲ್ಲಿ ಸಾಕಾರಗೊಳಿಸಿದೆ. ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಫಲ-ಪುಷ್ಪ ಪ್ರದರ್ಶನದ ಉದ್ಘಾಟನೆ ನೆರವೇರಿಸಿದರು, ಜಿ.ಪಂ. ಅಧ್ಯಕ್ಷ ಶೇಖರಪ್ಪ ನಾಗರಳ್ಳಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡು, ಪ್ರದರ್ಶನದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.  ತೋಟಗಾರಿಕೆ ಇಲಾಖೆ ಉಪನಿರ್ದೆಶಕ ಕೃಷ್ಣ ಉಕ್ಕುಂದ ಅವರು ಗಣ್ಯರಿಗೆ ಪ್ರದರ್ಶನದ ಸಂಪೂರ್ಣ ವಿವರ ನೀಡಿದರು.  ತೋಟಗಾರಿಕೆ ಸಲಹಾ ತಜ್ಞ ವಾಮನಮೂರ್ತಿ ಅವರು ಪ್ರದರ್ಶನದಲ್ಲಿ ಬಳಸಲಾಗಿರುವ ಹೂಗಳು ಹಾಗೂ ಹಣ್ಣುಗಳ ಬಗ್ಗೆ ಮಾಹಿತಿ ಒದಗಿಸಿದರು.  ಈ ತೋಟಗಾರಿಕೆ ಇಲಾಖೆಯಲ್ಲಿ ಲಭ್ಯವಿರುವ  ವಿವಿಧ ಯೋಜನೆಗಳ ಬಗ್ಗೆ ಫ್ಲೆಕ್ಸ್‍ಗಳ ಮೂಲಕ ಮಾಹಿತಿ ನೀಡುವ ಕಾರ್ಯವನ್ನು ಅಚ್ಚುಕಟ್ಟಾಗಿ ಇಲ್ಲಿ 


ನಿರ್ವಹಿಸಲಾಗಿದೆ.

Leave a Reply