​ಸಕಾಲದಲ್ಲಿ ಸೇವೆ ವಿಳಂಬ : ಕೊಪ್ಪಳ ತಹಸಿಲ್ದಾರರಿಗೆ ದಂಡ ವಿಧಿಸಿ ಉಪವಿಭಾಗಾಧಿಕಾರಿ ಆದೇಶ

ಕೊಪ್ಪಳ ಆ. ): ಸಕಾಲ ಯೋಜನೆಯಡಿ ಕೈ ಬರಹದ ಪಹಣಿ ನೀಡುವಲ್ಲಿ ವಿಳಂಬ ಮಾಡಿದ್ದಕ್ಕಾಗಿ, ಕೊಪ್ಪಳ ತಹಸಿಲ್ದಾರರು ಅರ್ಜಿದಾರರಿಗೆ 20 ರೂ. ದಂಡ ಮೊತ್ತ ಪಾವತಿಸುವಂತೆ ಉಪವಿಭಾಗಾಧಿಕಾರಿ ಗುರುದತ್ ಹೆಗ್ಡೆ ಅವರು ಆದೇಶಿಸಿದ್ದಾರೆ.
  ಕೊಪ್ಪಳ ತಾಲೂಕು ಹ್ಯಾಟಿ ಗ್ರಾಮದ ಖಾಜಾಸಾಬ್ ಮತ್ತು ಮಾಬುಸಾಬ್ ಎಂಬುವವರು ಗ್ರಾಮದ ಸರ್ವೆ ನಂಬರ್ 15/ಡಿ ಗೆ ಸಂಬಂಧಿಸಿದ 1945 ರ ಕೈಬರಹದ ಪಹಣಿ ನೀಡುವಂತೆ 2016 ರ ಅಕ್ಟೋಬರ್ 17 ರಂದು ಸಕಾಲ ಯೋಜನೆಯಡಿ ಅರ್ಜಿ ಸಲ್ಲಿಸಿದರು.  ಸಕಾಲ ಯೋಜನೆಯಡಿ ಪಹಣಿಯನ್ನು ನವೆಂಬರ್ 26 ರ ಒಳಗಾಗಿ ಅರ್ಜಿದಾರರಿಗೆ ನೀಡಬೇಕಿತ್ತು.  ಆದರೆ ನವೆಂಬರ್ 28 ರಂದು ಅರ್ಜಿಯನ್ನು ತಹಸಿಲ್ದಾರರು ಅನುಮೋದಿಸಿದ್ದರು.  ಆದರೆ ಅನುಮೋದನೆಯ ನಂತರ ಅರ್ಜಿದಾರರು, ತಹಸಿಲ್ದಾರರ ಕಚೇರಿಗೆ ಬಂದು, ಅನುಮೋದಿತ ಪ್ರತಿ ನೀಡುವಂತೆ ಕೋರಿದಾಗ್ಯೂ, ಕೊಪ್ಪಳ ತಹಸಿಲ್ದಾರರು ಈವರೆಗೂ ದೃಢೀಕೃತ ಕೈಬರಹ ಪಹಣಿಯನ್ನು ಒದಗಿಸಿರುವುದಿಲ್ಲ.  ಸಕಾಲ ಯೋಜನೆಯಡಿ ನಿಗದಿತ ಕಾಲಮಿತಿಯೊಳಗೆ ಸೇವೆ ಒದಗಿಸಿಲ್ಲ ಎಂಬುದಾಗಿ ಅರ್ಜಿದಾರರು ಉಪವಿಭಾಗಾಧಿಕಾರಿಗಳ ಕಚೇರಿಗೆ ಮೇಲ್ಮನವಿ ಸಲ್ಲಿಸಿದ್ದರು.  ಈ ಕುರಿತು ಪರಿಶೀಲನೆ ನಡೆಸಿದ ಉಪವಿಭಾಗಾಧಿಕಾರಿಗಳು, ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮದಡಿ, ಸೇವೆ ಒದಗಿಸಲು ವಿಳಂಬ ಮಾಡಿದ್ದಕ್ಕಾಗಿ ದಂಡದ ಮೊತ್ತವನ್ನು ಸಂಬಳದಿಂದ ಕಡಿತಗೊಳಿಸಿ, ಅರ್ಜಿದಾರರಿಗೆ ಪಾವತಿಸುವಂತೆ ಕೊಪ್ಪಳ ತಹಸಿಲ್ದಾರರಿಗೆ ಆದೇಶಿಸಿದ್ದಾರೆ.

  ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮದಡಿ, ನಿಗದಿಪಡಿಸಲಾಗಿರುವ ಸೇವೆಗಳಿಗೆ, ಕಾಲಮಿತಿಯೊಳಗೆ ಸೇವೆಯನ್ನು ಒದಗಿಸುವುದು, ಸಂಬಂಧಪಟ್ಟ ಇಲಾಖಾ ಅಧಿಕಾರಿ, ಸಿಬ್ಬಂದಿಗಳ ಕರ್ತವ್ಯವಾಗಿರುತ್ತದೆ.  ನಿಗದಿತ ಕಾಲಮಿತಿಯೊಳಗೆ ಸೇವೆ ಲಭ್ಯವಾಗದಿದ್ದಲ್ಲಿ, ಅರ್ಜಿದಾರರು ಉಪವಿಭಾಗಾಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿರುತ್ತದೆ.  ನಿಯಮ ಉಲ್ಲಂಘನೆ ಕಂಡುಬಂದಲ್ಲಿ, ಅಧಿಕಾರಿ/ಸಿಬ್ಬಂದಿಗೆ 20 ರೂ. ನಿಂದ 500 ರೂ. ವರೆಗೂ ದಂಡ ವಿಧಿಸಲು ನಿಯಮದಲ್ಲಿ ಅವಕಾಶವಿರುತ್ತದೆ ಎಂದು ಉಪವಿಭಾಗಾಧಿಕಾರಿ ಗುರುದತ್ ಹೆಗ್ಡೆ ಅವರು ತಿಳಿಸಿದ್ದಾರೆ.

Please follow and like us:
error