​ವಿಜಯನಗರದ ಸಾಮ್ರಾಜ್ಯದ ಸ್ಥಾಪನೆಯ ವೀರಭೂಮಿ ಆನೆಗೊಂದಿ – ಡಾ‌.ಶರಣಬಸಪ್ಪ ಕೋಲಕಾರ 

ಕೊಪ್ಪಳ () ಜ.09:  ನಾಲ್ಕು ಸಾವಿರ ವರ್ಷಗಳ ಹಿಂದಿನಿಂದಲೂ ಮಾನವ ಚಟುವಟಿಕೆಯ ತಾಣವಾಗಿದ್ದ ಆನೆಗೊಂದಿ , ಕಂಪಿಲರಾಯ,ಗಂಡುಗಲಿ ಕುಮಾರರಾಮರ ಆಳ್ವಿಕೆಯಿಂದ ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಮುನ್ನುಡಿ ಬರೆದ ವೀರಭೂಮಿಯಾಗಿದೆ.ಪಂಪಾಂಬಿಕೆಯ ಸ್ಥಳವಾದ ಇಲ್ಲಿಗೆ ಪೌರಾಣಿಕ , ರಾಮಾಯಣ ಕಾವ್ಯದ ಹಾಗೂ ಅನೇಕ ರೋಚಕ ಐತಿಹಾಸಿಕ ಘಟನೆಗಳ ನಂಟಿನ ಅಂಶಗಳಿವೆ ಎಂದು ಡಾ.ಶರಣಬಸಪ್ಪ ಕೋಲಕಾರ ಹೇಳಿದರು.

ಆನೆಗೊಂದಿ ಉತ್ಸವದ ಅಂಗವಾಗಿ ಶ್ರೀ ವಿದ್ಯಾರಣ್ಯ ವೇದಿಕೆಯಲ್ಲಿ ಏರ್ಪಡಿಸಲಾಗಿದ್ದ

ವಿಚಾರ ಸಂಕಿರಣದಲ್ಲಿ ವಿಜಯನಗರ ಸ್ಥಾಪನೆಯಲ್ಲಿ ಆನೆಗೊಂದಿಯ ಪಾತ್ರ ವಿಷಯ ಕುರಿತು   ಮಾತನಾಡಿದರು,

 

“ಅಂದಕ್ಕೆ ಆನೆಗೊಂದಿ ಮತ್ತು ಚೆಂದಕ್ಕೆ ಹಂಪಿ” ಎಂಬ ನಾಣ್ಣುಡಿ ನಮ್ಮ ಭಾಗದಲ್ಲಿ ಪ್ರಚಲಿತವಾಗಿದೆ.ನದಿ, ಬೆಟ್ಟ, ವೃಕ್ಷ,ಪಕ್ಷಿ ಸಂಪತ್ತಿನಿಂದ ಆನೆಗೊಂದಿ ನೈಸರ್ಗಿಕವಾಗಿಯೇ ಅಂದವಾಗಿದೆ . ಹಂಪಿಯನ್ನು ಮಾನವ ಪ್ರಯತ್ನಗಳಿಂದ ಚೆಂದಗೊಳಿಸಲಾಗಿದೆ ಎಂಬುದನ್ನು ಈ ಮಾತು ಸೂಚಿಸುತ್ತದೆ.ಸುಮಾರು ನಾಲ್ಕು ಸಾವಿರ ವರ್ಷಗಳ ಹಿಂದೆ ಇಲ್ಲಿ ಮಾನವ ಸಂಕುಲ  ವಾಸವಾಗಿತ್ತು ಎಂಬ ದಾಖಲೆಗಳಿವೆ. ಕಡೆಬಾಗಿಲಿನ ಸಮೀಪ ದೊರೆತ ಮಡಿಕೆ ಚೂರು ಮತ್ತು ಪ್ರಾಚ್ಯ ದಾಖಲೆಗಳನ್ನು ಅಮೇರಿಕ ಸಂಸ್ಥೆ ಪರಿಶೀಲಿಸಿ ಇದರ ಕಾಲವನ್ನು ನಿಖರಗೊಳಿಸಿದೆ.ಇಲ್ಲಿ ಬೆಟ್ಟ ಗುಡ್ಡಗಳಲ್ಲಿ ಇಂದಿಗೂ ಹಳೆಶಿಲಾಯುಗದ ಕಾಲದ ಅನೇಕ ಶಿಲಾಚಿತ್ರಗಳು ಕಾಣಸಿಗುತ್ತವೆ.ಇಲ್ಲಿ ಹನ್ನೊಂದನೇ ಶತಮಾನದಲ್ಲಿ ಸ್ಥಾಪಿತವಾದ ಪಂಪಾಂಬಿಕೆ ದೇಗುಲವಿದೆ.ಆದರೆ ಅದು ಜಯಲಕ್ಷ್ಮಿ ದೇವಾಲಯ ಎಂದು ತಪ್ಪಾಗಿ ಅರ್ಥೈಸಲಾಗಿದೆ. ವಾನ ಭದ್ರೇಶ್ವರ, ಸೋಮೇಶ್ವರ, ಜಂಬುನಾಥೇಶ್ವರ ,ಕಿನ್ನೂರೇಶ್ವರ ಹೀಗೆ ನಾಲ್ಕು ಗಡಿ ಲಿಂಗಗಳು ಈ ಪಂಪಾಂಬಿಕೆಗೆ ಇದ್ದವು. ಪಂಪಾಂಬಿಕೆ ಅಥವಾ ಹಂಪಮ್ಮ ಆನೆಗೊಂದಿಯವಳು ಆಕೆಯನ್ನು ಮದುವೆಯಾಗಿ ಇಲ್ಲಿಗೆ ಬಂದ ಶಿವನು ಪಂಪಾಪತಿ ಎನಿಸಿಕೊಂಡ ಎಂಬ ಪೌರಾಣಿಕ ಹಿನ್ನೆಲೆ ಈ ಸ್ಥಳಕ್ಕೆ ಇದೆ.ಇಲ್ಲಿ ವಾನರು ಎಂಬ ಬುಡಕಟ್ಟು ಸಮುದಾಯ ಇತ್ತು ರಾಮಾಯಣದ ಕರ್ತೃ ಮಹರ್ಷಿ ವಾಲ್ಮೀಕಿಗೆ ಆನೆಗೊಂದಿ ಮತ್ತು ದಕ್ಷಿಣ ಭಾರತದ ಭೌಗೋಳಿಕ ಪರಿಚಯ ಚೆನ್ನಾಗಿಯೇ ಇದ್ದ ಪರಿಣಾಮವಾಗಿ ಈ ಪ್ರದೇಶಕ್ಕೆ ರಾಮಾಯಣ ಮಹಾಕಾವ್ಯದ ನಂಟು ಇದೆ.ಇಲ್ಲಿನ ಕೋಟೆಯ ಲಕ್ಷಣಗಳನ್ನು ಅಭ್ಯಸಿಸಿದಾಗ 13 ನೇ ಶತಮಾನದಲ್ಲಿ ಮೊದಲ ಬಾರಿಗೆ ವಾರಂಗಲ್ಲಿನ ಕಾಕತೀಯರು ಮೊದಲ ಕೋಟೆ ಕಟ್ಟಿದರು. ಹುಚ್ಚಪ್ಪಯ್ಯನ ಮಠ ಹೊಯ್ಸಳ ಶೈಲಿಯಲ್ಲಿದೆ.ಅದ್ಭುತ ಸಾಂಸ್ಕೃತಿಕ ವೀರ ಗಂಡುಗಲಿ ಕುಮಾರರಾಮನ ಕುಮ್ಮಟದುರ್ಗ ಕ್ರಿ.ಶ.1327 ರಲ್ಲಿ ಪತನವಾದ ಬಳಿಕ  ಕುಮಾರರಾಮನ ಅಕ್ಕ ಮಾರಾಂಬಿಕೆಯ ಪತಿ ಸಂಗಮನ ನೇತೃತ್ವದಲ್ಲಿ ಚಳವಳಿ ಈ ಭಾಗದಲ್ಲಿ ಜಾಗೃತವಾಯಿತು.ಆತನ ಮಕ್ಕಳಾದ ಹಕ್ಕ ಬುಕ್ಕರಿಂದ ವಿಜಯನಗರ ಸಾಮ್ರಾಜ್ಯ  ಸ್ಥಾಪನೆಯ ಅಸ್ತಿಭಾರ ಆನೆಗೊಂದಿಯಲ್ಲಿ ಹಾಕಲಾಯಿತು. ಹಕ್ಕ ( ಹರಿಹರರಾಯ) ಆನೆಗೊಂದಿಯಿಂದಲೇ ಆಳ್ವಿಕೆ ನಡೆಸಿದ, ನಂತರ ಬುಕ್ಕರಾಯ ಸಾಮ್ರಾಜ್ಯದ ಇನ್ನಷ್ಟು ರಕ್ಷಣೆಯ ಕಾರಣದಿಂದ ಹಂಪಿಗೆ ರಾಜಧಾನಿ ಸ್ಥಳಾಂತರಿಸಿದ.ಆನೆಗೊಂದಿ ಸೇನಾ ನೆಲೆಯಾಗಿ ಮುಂದುವರೆಯಿತು.ನಂತರ  ಜೈನರು ,ವೈಷ್ಣವರ ಮಧ್ಯೆ ಸಂಘರ್ಷ ಆರಂಭವಾದಾಗ ಬುಕ್ಕರಾಯ ಬಹುಸಂಖ್ಯಾತರು ಅಲ್ಪಸಂಖ್ಯಾತರ ಹಿತ ಕಾಯಬೇಕು ಎಂದು ಆದೇಶ ನೀಡಿ ಸಮನ್ವಯ ,ಸಹಬಾಳ್ವೆ ನೀತಿ ಅನುಸರಿಸಿದ.ಚಿತ್ರದುರ್ಗದ ನಾಯಕ ವಂಶದ ಸ್ಥಾಪಕ ಮತ್ತಿಯ ತಿಮ್ಮಣ್ಣನಾಯಕನನ್ನು ಆನೆಗೊಂದಿ ಸೆರೆಮನೆಯಲ್ಲಿ ಬಂಧಿಸಿಡಲಾಗಿರುತ್ತದೆ ಆತ ಇಲ್ಲಿಯೇ ಕೊನೆಯುಸಿರೆಳೆಯುತ್ತಾನೆ. ಯಲಹಂಕದ ನಾಡಪ್ರಭು ಕೆಂಪೇಗೌಡನನ್ನು 1560 ರ ಸುಮಾರಿನಲ್ಲಿ ಅಳಿಯ ರಾಮರಾಯ ಐದು ವರ್ಷಗಳ ಕಾಲ ಆನೆಗೊಂದಿ ಸೆರೆಮನೆಯಲ್ಲಿ ಬಂಧಿಸಿಟ್ಟಿದ್ದ. ನಂತರ ಅಪಾರ ಪ್ರಮಾಣದ ದಂಡ ತೆತ್ತು ಆತ ಬಿಡುಗಡೆ ಹೊಂದುತ್ತಾನೆ.ವಿಜಯನಗರ ಪತನಾನಂತರ ಒಂದು ಶತಮಾನದ ಬಳಿಕ ವಿದ್ಯಾವಿಜಯನಗರ ಹೆಸರಿನಲ್ಲಿ ನರಪತಿ ರಾಜವಂಶಸ್ಥರು 1948 ರವರೆಗೂ ಆಳ್ವಿಕೆ ನಡೆಸಿದರು. ಗಜಲಕ್ಷ್ಮಿ ಅವರ ಲಾಂಛನವಾಗಿತ್ತು.ರಾಣಿ ಕುಪ್ಪಮ್ಮನವರು ಬ್ರಿಟಿಷರ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿ ಖಂಡಿಸಿ ತನ್ನ ತಮ್ಮ ಶ್ರೀರಂಗದೇವರಾಯನನ್ನು ಪಟ್ಟಕ್ಕೆ ತರುತ್ತಾಳೆ. ಅಪಾರ ಸಾಂಸ್ಕೃತಿಕ , ದಾಸ ಸಾಹಿತ್ಯದ ನೆಲೆಯೂ ಆನೆಗೊಂದಿಯಾಗಿತ್ತು ಎಂದರು.

ಗಂಡುಗಲಿ ಕುಮಾರರಾಮ ಎಂಬ ವಿಷಯದ ಕುರಿತು ಡಾ.ಅರುಣ ಜೋಳದ ಕೂಡ್ಲಿಗಿ ಮಾತನಾಡಿ, ದಕ್ಷಿಣ ಕರ್ನಾಟಕದ ಸೋಲಿಗರು,ನೀಲಗಾರರಿಂದ ಹಿಡಿದು ಬೆಳಗಾವಿಯ ಅನೇಕ ಭಾಗಗಳಲ್ಲಿ ಜನಪದರ ಮೂಲಕ ಆನೆಗೊಂದಿಯ ಕುಮಾರರಾಮ ಪುನರ್ ಸೃಷ್ಟಿಯಾಗಿದ್ದಾನೆ.ಕೆರೆ ಕಟ್ಟೆಗಳನ್ನು ನಿರ್ಮಿಸಿ ಜನಪರವಾದ ,ಕೃಷಿಕರ ಪರವಾದ ಆಡಳಿತ ನೀಡಿದ ಕುಮಾರರಾಮನನ್ನು ಎಲ್ಲಾ ಕಾಲಕ್ಕೂ ಸ್ಮರಿಸುತ್ತಾರೆ.ನಂಜುಂಡಕವಿಯು ಸಾಂಗತ್ಯದಲ್ಲಿ, ಪಾಂಚಾಳಗಂಗನ ಚೆನ್ನರಾಮನ ಸಾಂಗತ್ಯ ,  ಮಹಲಿಂಗರಂಗ ಜನಪದ ಕೃತಿಗಳನ್ನು ಒಟ್ಟಿಗಿರಿಸಿ ತೌಲನಿಕ ಅಧ್ಯಯನ ಮಾಡಿದಾಗ ಕುಮಾರರಾಮನ ಕುರಿತು ಮತ್ತಷ್ಟು ಹೊಳಹುಗಳು, ಆಯಾಮಗಳು ದೊರೆಯುವ ಅವಕಾಶಗಳಿವೆ .ಬಿ.ಎಸ್.ಗದ್ದಗಿಮಠ ಅವರ ಕುಮಾರರಾಮನ ದುಂದುಮೆ ಎಂಬ ಕೃತಿಯಲ್ಲಿ ಕುಮಾರರಾಮನ ಕುರಿತು ಕರುನಾಡ ಕಂದ ಎಂಬ ಕಾವ್ಯ ಸಂಪಾದಿತವಾಗಿದೆ.ಸಂತಾನ ಪ್ರಾಪ್ತಿಯಾಗದ ದಂಪತಿಗಳ ಫಲವಂತಿಕೆಯ ಆಚರಣೆಗಳು ಕುಮಾರರಾಮನ ಹೆಸರಿನಲ್ಲಿವೆ.ಬೇಡರ ಕುಮಾರರಾಮ ಹಾಗೂ ಮಾದಿಗರ ಹಂಪಣ್ಣ ಸಹಭೋಜನ ಮಾಡುತ್ತಿದ್ದರು ಎಂಬ ಮಹತ್ವದ ಅಂಶವನ್ನು ಜನಪದ ಕಾವ್ಯಗಳು ಪುನರಾವರ್ತಿತವಾಗಿ ಸಾರಿ ಹೇಳುವುದರ ಹಿಂದೆ ಸಾಮಾಜಿಕ ಸಮಾನತೆಯ ಆಶಯಗಳಿವೆ ಎಂದರು.
ವಿಚಾರ ಸಂಕಿರಣ ಉದ್ಘಾಟಿಸಿದ ಕನ್ನಡ ಪುಸ್ತಕ ಪ್ರಾಧಿಕಸರದ ಸದಸ್ಯ ಅಶೋಕ ರಾಯ್ಕರ್ ಮಾತನಾಡಿ, ವಿಜಯನಗರ ಸಾಮ್ರಾಜ್ಯದ ಅಮೂಲ್ಯ ಬೀಜ ಆನೆಗೊಂದಿಯಲ್ಲಿ ಬಿತ್ತಲಾಯಿತು.ಮುಂದೆ ಅದು ಹೆಮ್ಮರವಾಗಿ ಹಂಪಿಯಲ್ಲಿ ಸಾಮ್ರಾಜ್ಯ ವಿಸ್ತರಣೆಯಾಗಿ ಭಾರತದ  ಸಂಸ್ಕೃತಿಯನ್ನು ವೈಭವದ ಔನ್ನತ್ಯಕ್ಕೆ ಕೊಂಡೊಯ್ದಿತ್ತು ಎಂದರು.

ಕೊಪ್ಪಳ ಜಿಲ್ಲೆಯ ರಂಗಭೂಮಿ ಎಂಬ ವಿಷಯದ ಕುರಿತು ಎಸ್.ವಿ.ಪಾಟೀಲ ಮಾತನಾಡಿದರು.ಹಿರಿಯ ಸಾಹಿತಿ ಹೆಚ್.ಎಸ್.ಪಾಟೀಲ ವಿಚಾರ ಸಂಕಿರಣದ ಅಧ್ಯಕ್ಷತೆವಹಿಸಿದ್ದರು.

ನಿವೃತ್ತ ಜಿಲ್ಲಾ ವಾರ್ತಾಧಿಕಾರಿ ಬಸವರಾಜ ಆಕಳವಾಡಿ, ಪತ್ರಕರ್ತರಾದ ಮೆಹಬೂಬ

 ಹುಸೇನ್ ಕನಕಗಿರಿ, ಎಂ.ಪರಶುರಾಮಪ್ರಿಯ ಮತ್ತಿತರರು ಪ್ರತಿಕ್ರಿಯೆ ನೀಡಿದರು.
ಜೀವನಸಾಬ ಬಿನ್ನಾಳ ಕಾರ್ಯಕ್ರಮ ನಿರೂಪಿಸಿದರು.

Please follow and like us:
error