​ರೈತರು ಕರ್ಮಯೋಗಿಗಳಾದರೆ ಶಿಕ್ಷಕರು ಜ್ಞಾನಯೋಗಿಗಳು : ಕರಡಿ ಸಂಗಣ್ಣ


 ದೇಶದ ಬೆನ್ನೆಲಬು ಎನಿಸಿಕೊಂಡಿರುವ ರೈತರು ಕರ್ಮಯೋಗಿಗಳಾದರೆ, ದೇಶದ ಭವಿಷ್ಯವನ್ನು ರೂಪಿಸುವ ಶಿಕ್ಷಕರು ಜ್ಞಾನಯೋಗಿ ಹಾಗೂ ಜ್ಞಾನದ ಗಣಿಗಳಾಗಿದ್ದಾರೆ ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರು ಬಣ್ಣಿಸಿದರು.
 ಕೊಪ್ಪಳ ಜಿಲ್ಲಾ ಪಂಚಾಯತ, ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಬೆಂಗಳೂರು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಹಯೋಗದಲ್ಲಿ ಭಾರತ ರತ್ನ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನದ ಅಂಗವಾಗಿ ಜಿಲ್ಲಾಡಳಿತ ಭವನದ ಅಡಿಟೋರಿಯಂ ಹಾಲ್‍ನಲ್ಲಿ ಮಂಗಳವಾರದಂದು ಏರ್ಪಡಿಸಲಾದ ಶಿಕ್ಷಕರ ದಿನಾಚರಣೆ,  ಜಿಲ್ಲಾ ಅತ್ಯುತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮತ್ತು ತಾಲೂಕ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭದ ಉದ್ಘಾಟನೆ ನೆರೆವೇರಿಸಿ ಅವರು ಮಾತನಾಡಿದರು. 

 ಶಿಕ್ಷಕ ಸೋತಾಗ ದೇಶ ಸೋಲುತ್ತದೆ ಎಂಬುವುದು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಅಭಿಪ್ರಾಯವಾಗಿತ್ತು.  ಶಿಕ್ಷಕರಾದವರು ಜೀವನದಲ್ಲಿ ಉದಾಸಿಯಾಗಬಾರದು, ನಿರಾಸೆಗೆ ಒಳಗಾಗಬಾರದು. ನಿರ್ಲಕ್ಷ್ಯದಿಂದ ಪಾಠ ಮಾಡಬಾರದು.  ಶಿಕ್ಷಕರು ಉತ್ಸಾಹಿಗಳಾಗಿರಬೇಕು.  ಹೊಸಹೊಸ ಚಿಂತನೆಗಳನ್ನು ಮಾಡತಕ್ಕಂತಹ ಆಶಾವಾದಿಗಳಾಗಿ ಬದುಕನ್ನು ಕಟ್ಟುಕೊಳ್ಳಿ ಎಂದು ಡಾ. ರಾಧಾಕೃಷ್ಣನ್ ರವರು ಶಿಕ್ಷಕರಿಗೆ ಕಿವಿ ಮಾತನ್ನು ಹೇಳಿದ್ದರು.  ಅವರು ಸಮಾಜಕ್ಕೆ ನೀಡಿದ ಕೊಡುಗೆಗಳು ಅಜರಾಮರವಾಗಿ  ಉಳಿದಿವೆ.  ಅವರ ಜೀವನವೇ ನಮಗೆ ದಾರಿ ದೀಪವಾಗಿದೆ.  ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ಎಲ್ಲರೂ ಸಾಗಬೇಕಾಗಿದೆ.  ಎಲ್ಲಾ ಕ್ಷೇತ್ರಗಳಲ್ಲಿ ಸ್ವಾರ್ಥತನ ಕಾಣಬಹುದು, ಆದರೇ ಶಿಕ್ಷಣ ಕ್ಷೇತ್ರದಲ್ಲಿ ಸ್ವಾರ್ಥತನ ಕಾಣಲು ಸಾಧ್ಯವಿಲ್ಲ.  ಮುಂದಿನ ಪೀಳಿಗೆಯನ್ನು ತಯಾರು ಮಾಡುವ ಕರ್ತವ್ಯ, ಹಾಗೂ ಮಕ್ಕಳ ಭವಿಷ್ಯವನ್ನು ರೂಪಿಸುವ ಹೊಣೆ ಶಿಕ್ಷಕರ ಕೈಯಲ್ಲಿದೆ.  ಈ ಹೊಣೆಗಾರಿಕೆಯನ್ನು ಶಿಕ್ಷಕರು ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸುವುದು ಅಗತ್ಯವಾಗಿದೆ ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರು ಹೇಳಿದರು.

 ಸಮಾರಂಭದ ಅಧ್ಯಕ್ಷತೆ ವಹಿಸಿದ ಕೊಪ್ಪಳ ಜಿಲ್ಲಾ ಪಂಚಾಯತಿ ಅಧ್ಯಕ್ಷ ರಾಜಶೇಖರ ಹಿಟ್ನಾಳ ಅವರು ಮಾತನಾಡಿ, ಒಂದು ದೇಶ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕಾದರೆ ಶಿಕ್ಷಣ ಅತ್ಯವಶ್ಯಕವಾಗಿದೆ.  ರಾಜ್ಯ ಸರ್ಕಾರ ಶಿಕ್ಷಣಕ್ಕೆ ಅತೀ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದೆ.  ಶಿಕ್ಷಣಕ್ಕಾಗಿ ವಿದ್ಯಾಸಿರಿ, ಕ್ಷೀರಭಾಗ್ಯ, ಶೂಭಾಗ್ಯ ಹೀಗೆ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ ಅಲ್ಲದೆ  ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಲ್ಯಾಪ್‍ಟ್ಯಾಪ್ ವಿತರಣೆಯನ್ನು ಮಾಡಲಾಗುತ್ತಿದೆ.  ಶಿಕ್ಷಕರ ಒತ್ತಾಯದ ಮೇರೆಗೆ ಕೊಪ್ಪಳ ಜಿಲ್ಲೆಯಲ್ಲಿ ಗುರು ಭವನ ನಿರ್ಮಾಣ ಮಾಡಲು ಸಕಲ ಸಿದ್ದತೆಗಳನ್ನು ಕೈಗೊಳ್ಳಲಾಗುತ್ತಿದೆ.  ಶಿಕ್ಷಕರ ವೃತ್ತಿಪರ ಅಭಿವೃದ್ಧಿಗಾಗಿ ಸರ್ಕಾರ ರಾಜ್ಯ ಮಟ್ಟದಲ್ಲಿ ಇಂದು “ಗುರು ಚೇತನ” ಎಂಬ ಕಾರ್ಯಕ್ರಮವನ್ನು ಮೊಟ್ಟಮೊದಲಿಗೆ ಹಮ್ಮಿಕೊಂಡಿದೆ.  ನವರಾಷ್ಟ್ರ ನಿರ್ಮಾಪಕರುಗಳೆಂದರೆ ಶಿಕ್ಷಕರು.  ಹೃದಯ ಎಲ್ಲರಲ್ಲಿಯೂ ಇದೆ, ಆದರೇ ಹೃದಯವಂತಿಕೆ ಎಲ್ಲರಲ್ಲಿಯೂ ಇರುವುದಿಲ್ಲ.  ಹೃದಯವಂತಿಕೆಯ ವ್ಯಕ್ತಿಗಳನ್ನು ನಿರ್ಮಾಣ ಮಾಡುವುದು ಶಿಕ್ಷಕರ ಕೈಯಲ್ಲಿದೆ.  ಮಕ್ಕಳಿಗೆ ದೇಶದ ಬಗ್ಗೆ ಸೇವಾ ಮನೋಭಾವನೆಯನ್ನು ಬೆಳಸುವಂತಹ ಕಾರ್ಯವಾಗಬೇಕು.  ಶೌಚಾಲಯ ನಿರ್ಮಾಣದ ಕುರಿತು ಕೊಪ್ಪಳದಲ್ಲಿ ಹಮ್ಮಿಕೊಂಡಿದ್ದ “ಬೃಹತ್ ಮಾನವ ಸರಪಳಿ” ಕಾರ್ಯಕ್ರಮ ಇಂದು ರಾಷ್ಟ್ರ ಮಟ್ಟಕ್ಕೆ ಹೆಸರಾಗಿದೆ.  ಇದರಲ್ಲಿ ಜಿಲ್ಲಾ ಪಂಚಾಯತಿಯೊಂದಿಗೆ ಸಹಕರಿಸಿದ ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಪಾತ್ರ ಪ್ರಮುಖವಾಗಿದೆ ಎಂದರು.

ಸಮಾರಂಭದಲ್ಲಿ ಕೊಪ್ಪಳ ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶಾಂತಾ ರಮೇಶ ನಾಯಕ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಸಹಾಯಕ ಆಯುಕ್ತ ಗುರುದತ್ ಹೆಗ್ಡೆ, ಜಿ.ಪಂ. ಸದಸ್ಯರುಗಳಾದ ಗವಿಸಿದ್ದಪ್ಪ ಕರಡಿ, ರಾಮಣ್ಣ ಚೌಡಕಿ, ಭೀಮಣ್ಣ ಅಗಸಿಮುಂದಿನ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮನ್ನವರ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಶಂಭುಲಿಂಗನಗೌಡ ಪಾಟೀಲ್ ಹಲಗೇರಿ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಪ್ಪ ಜೋಗಿ, ಸರಕಾರಿ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಬೀರಪ್ಪ ಅಂಡಗಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ. ಹೆಚ್. ಗೋನಾಳ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಜಿ. ದಾಸರ ಸೇರಿದಂತೆ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಹಾಗೂ ತಾಲೂಕ ಅಧ್ಯಕ್ಷರು ಪಾಲ್ಗೊಂಡಿದ್ದರು.

“ಗುರು ಚೇತನ” ಕಾರ್ಯಕ್ರಮದ ಲಾಂಛನ ಹಾಗೂ ತರಬೇತಿಯ ಮಾದರಿ ಪುಸ್ತಕಗಳನ್ನು ವೇದಿಕೆ ಮೇಲೆಯ ಎಲ್ಲ ಗಣ್ಯರು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಿದರು.  ಅಲ್ಲದೇ ಕೊಪ್ಪಳ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗಾಗಿ ಪ್ರಾಥಮಿಕ ಶಾಲಾ ವಿಭಾಗದಿಂದ ಮತ್ತು ಪ್ರೌಢ ಶಾಲಾ ವಿಭಾಗದಿಂದ ಆಯ್ಕೆಯಾದ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹಾಗೂ ತಾಲೂಕ ನಿವೃತ್ತ ಶಿಕ್ಷಕರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

Please follow and like us:
error