​ಮಕ್ಕಳ ಶಿಕ್ಷಣ ವಿಕಾಸದ ಸಂದೇಶ ಸಾರುತ್ತಿರುವ ಮಳಿಗೆಗಳು 

ಕೊಪ್ಪಳ :  ಹಬ್ಬ ಉತ್ಸವಗಳು ಸಂಭ್ರಮದ ಜೊತೆಗೆ 
ಜನಜಾಗೃತಿಯ ಜಾತ್ರೆಗಳೂ ಆಗಬೇಕು ಎಂಬುದು ಸರ್ಕಾರದ ಆಶಯ, ಉತ್ಸವಕ್ಕೆ ಆಗಮಿಸಿದ ಜನರಿಗೆ ಮಕ್ಕಳ ಶಿಕ್ಷಣ ಮತ್ತು ಅವರ ಹಕ್ಕುಗಳ ಕುರಿತು ತಿಳುವಳಿಕೆ ಮೂಡಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳು ಪ್ರತ್ಯೇಕವಾಗಿ ಸ್ಥಾಪಿಸಿರುವ ಮಳಿಗೆಗಳು ಶ್ರಮಿಸುತ್ತಿವೆ.
ಅಕ್ಷರದ ರಥ, ಇಸ್ರೋ ಸಾಧನೆಗಳು,ಪರಿಸರ ಮಿತ್ರ ಶಾಲೆ, ವರ್ಲಿ ಕಲೆಯೊಂದಿಗೆ ಸಿಂಗರಿಸಲ್ಪಟ್ಟಿರುವ ಶಾಲೆಗಳು, ಗಣಿತ,ವಿಜ್ಞಾನ ಕಲಿಕಾ ವಿಧಾನಗಳು, ಮಗ್ಗಿ,ವರ್ಣಮಾಲೆ ಮೊದಲಾದ ವಿಷಯಗಳ ವರ್ಣರಂಜಿತ ಕಲಾಕೃತಿಗಳು , ಶ್ರವ್ಯ ಮತ್ತು ದೃಶ್ಯ ಸಾಧನಗಳೊಂದಿಗೆ ಗಂಗಾವತಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಸ್ಥಾಪಿಸಿರುವ ಮಳಿಗೆ ವಿಭಿನ್ನವಾಗಿ ಜನರನ್ನು ಆಕರ್ಷಿಸುತ್ತಿದೆ.ಸೋಮು ಕುದರಿಹಾಳ,ಮಧುಕುಮಾರ,ಯೋಗೇಶ,ಸುರೇಶ,ರಂಗನಾಥ ,ಮೆಹಬೂಬ್ ಕಿಲ್ಲೇದಾರ ಮತ್ತಿತರರು ಈ ಮಳಿಗೆಯನ್ನು ಅಚ್ಚುಕಟ್ಟಾಗಿ ಸಿದ್ಧಪಡಿಸಿದ್ದಾರೆ.

ಬಾಲ್ಯ ವಿವಾಹ ನಿಷೇಧ, ಮಕ್ಕಳಿಗೆ ಕಡ್ಡಾಯ ಶಿಕ್ಷಣ ಹಾಗೂ ಸಂಬಂಧಿಸಿದ ಕಾಯ್ದೆಗಳ ಬಗ್ಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಳಿಗೆಯ ಮೂಲಕ ರವಿ ಪವಾರ,ಯಮನಮ್ಮ, ರವಿ ಗಿಣಗೇರಿ ಮತ್ತಿತರರು ಸಾರ್ವಜನಿಕರಿಗೆ ಮನಮುಟ್ಟುವ ರೀತಿಯಲ್ಲಿ ಮಾಹಿತಿ ನೀಡುತ್ತಿದ್ದಾರೆ. ಸುತ್ತಲಿನ ಸಮಾಜದಲ್ಲಿ ಬಾಲ್ಯ ವಿವಾಹಗಳು ಕಂಡು ಬಂದರೆ ಪ್ರಜ್ಞಾವಂತ ನಾಗರಿಕರು 1098 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬೇಕು , ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ತಿಳಿಹೇಳುತ್ತಿರುವ ದೃಶ್ಯಗಳು ಕಂಡುಬಂದವು.

Please follow and like us:
error