​ಭಾಗ್ಯನಗರ ರೈಲ್ವೆ ಮೇಲ್ಸೇತುವೆ: ೧00 ಮೀ. ಭೂಮಿ ರೈಲ್ವೆಗೆ ಶೀಘ್ರ ಹಸ್ತಾಂತರ- ಎಂ. ಕನಗವಲ್ಲಿ

 ಕೊಪ್ಪಳ ತಾಲೂಕು ಭಾಗ್ಯನಗರದ ರೈಲ್ವೆ ಗೇಟ್ ಸಂಖ್ಯೆ 

62 ರಲ್ಲಿ ನಿರ್ಮಿಸಲಾಗುತ್ತಿರುವ ಮೇಲ್ಸೇತುವೆಗಾಗಿ ರೈಲ್ವೆ ಸ್ಟೇಷನ್ ರಸ್ತೆ ವರೆಗೆ 100 ಮೀ. ಭೂಮಿಯನ್ನು ರೈಲ್ವೆ ಇಲಾಖೆಗೆ ಶೀಘ್ರವೇ ಹಸ್ತಾಂತರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.
  ಭಾಗ್ಯನಗರ ರೈಲ್ವೆ ಗೇಟ್‍ಗೆ ಮೇಲ್ಸೇತುವೆ ನಿರ್ಮಾಣ ಕುರಿತಂತೆ ಭೂಮಿ ಹಾಗೂ ಕಟ್ಟಡಗಳ ಮಾಲೀಕರು, ಅಧಿಕಾರಿಗಳೊಂದಿಗೆ ಗುರುವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಕೊಠಡಿಯಲ್ಲಿ ಏರ್ಪಡಿಸಲಾದ ಸಭೆಯ ಬಳಿಕ, ಅವರು ಮಾತನಾಡಿದರು.

  ಭಾಗ್ಯನಗರದಿಂದ ರೈಲ್ವೆ ಸ್ಟೇಷನ್ ರೋಡ್‍ವರೆಗಿನ 100 ಮೀ. ಭೂಮಿಯನ್ನು ರೈಲ್ವೆ ಇಲಾಖೆಗೆ ಶೀಘ್ರ ಹಸ್ತಾಂತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ.  ರೈಲ್ವೆ ಇಲಾಖೆಗೆ ಭೂಮಿ ಹಸ್ತಾಂತರಿಸಿದಲ್ಲಿ, 05 ತಿಂಗಳ ಒಳಗಾಗಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸುವುದಾಗಿ ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.  ರೈಲ್ವೆ ಗೇಟ್ ಮೇಲ್ಸೇತುವೆ ನಿರ್ಮಾಣಕ್ಕಾಗಿ ಅಗತ್ಯವಿರುವ ಭೂಮಿಯನ್ನು ಭೂ ಮಾಲೀಕರಿಂದ ನೇರವಾಗಿ ಖರೀದಿಸಲು ಸರ್ಕಾರ ಮಂಜೂರಾತಿ ನೀಡಿದ ನಂತರ, ನಿರಂತರವಾಗಿ ಸಭೆಗಳನ್ನು ನಡೆಸಿ, ಭೂಮಿ ಪಡೆಯಲು ಕ್ರಮ ಕೈಗೊಳ್ಳಲಾಗಿದ್ದು, ಜಿಲ್ಲಾಡಳಿತದಿಂದ ಯಾವುದೇ ವಿಳಂಬ ಆಗಿಲ್ಲ.  ಭೂಮಿಯನ್ನು ಅವರ ಒಪ್ಪಿಗೆಯೊಂದಿಗೆ, ನೇರವಾಗಿ ಖರೀದಿಸುವ ಪ್ರಕ್ರಿಯೆ ಅತ್ಯಂತ ಉತ್ತಮವಾಗಿದ್ದು, ಇದರಿಂದಾಗಿ ಭೂ ಮಾಲೀಕರು ನ್ಯಾಯಾಲಯಕ್ಕೆ ಹೋಗುವ ಅವಶ್ಯಕತೆ ಉದ್ಭವವಾಗುವುದಿಲ್ಲ. ಅನಗತ್ಯ ವಿಳಂಬ ಉಂಟಾಗುವುದನ್ನು ತಡೆಯಬಹುದಾಗಿದ್ದು, ವಿಳಂಬದಿಂದಾಗಿ ಕಾಮಗಾರಿ ಯೋಜನಾ ವೆಚ್ಚದ ಹೆಚ್ಚಳ ಆಗಿ, ಆರ್ಥಿಕ ಹೊರೆ ಉಂಟಾಗುವುದನ್ನೂ ಸಹ ತಡೆಗಟ್ಟಬಹುದಾಗಿದೆ.   ಹೀಗಾಗಿ ಭೂ ಮಾಲೀಕರ ಒಪ್ಪಿಗೆಯೊಂದಿಗೆ ನೇರವಾಗಿ ಖರೀದಿಸುವ ಪ್ರಕ್ರಿಯೆಯನ್ನು ಸರ್ಕಾರದ ಒಪ್ಪಿಗೆ ಪಡೆದು ಕೈಗೊಳ್ಳಲಾಗಿದೆ.  ಭಾಗ್ಯನಗರ ರೈಲ್ವೆ ಗೇಟ್‍ಗೆ ಮೇಲ್ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆಯಬೇಕಿರುವ ಭೂಮಿ/ಕಟ್ಟಡ ಒಟ್ಟು 17 ಜನರಿಗೆ ಸೇರಿದ್ದಾಗಿದ್ದು, ಭೂಮಿಯ ಮಾಲೀಕರ ಒಪ್ಪಿಗೆಯನ್ನು ಪಡೆದುಕೊಂಡೇ ವಶಕ್ಕೆ ಪಡೆಯಬೇಕಿದೆ.  ಈ ನಿಟ್ಟಿನಲ್ಲಿ ಭೂ ಮಾಲೀಕರಿಂದ ಭೂಮಿಯನ್ನು ನೇರವಾಗಿ ಖರೀದಿಸಿ, ವಶಕ್ಕೆ ಪಡೆಯಲು ಸರ್ಕಾರ ಮಂಜೂರಾತಿ ನೀಡಿರುವ ಪತ್ರ 2017 ರ ಮಾರ್ಚ್ 21 ರಂದು ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿದೆ.  ಸರ್ಕಾರದ ಮಂಜೂರಾತಿ ಪತ್ರ ಬಂದ ಬಳಿಕವೇ ಸರ್ವೆ ಕಾರ್ಯವನ್ನು ಕೈಗೊಳ್ಳಲಾಗಿದೆ. ಏಪ್ರಿಲ್ 05, 06 ಹಾಗೂ ಮೇ. 06 ರಂದು ಹೀಗೆ ಮೂರು ಬಾರಿ ಭೂ ಮಾಲೀಕರೊಂದಿಗೆ ಸಭೆ ನಡೆಸಲಾಗಿದೆ.  ಅಲ್ಲದೆ ಭೂಮಿಯ ಸರ್ವೆ ಕಾರ್ಯವನ್ನು ಮತ್ತೊಮ್ಮೆ ನಡೆಸಲಾಗಿದೆ.  ಭೂ ಮಾಲೀಕರುಗಳು ತಮಗೆ ಸಂಬಂಧಿಸಿದ ಆಸ್ತಿಗಳ ದಾಖಲೆಗಳನ್ನು ಸಲ್ಲಿಸಿದ ಬಳಿಕವಷ್ಟೇ ಮೌಲ್ಯ ನಿರ್ಧರಿಸಲು ಅವಕಾಶವಿದೆ.  17 ಜನರ ಪೈಕಿ 16 ಜನರ ಭೂಮಿ/ಕಟ್ಟಡಗಳಿಗೆ ಸಂಬಂಧಿಸಿದಂತೆ ಈಗಾಗಲೆ ಮೌಲ್ಯ ವನ್ನು ನಿರ್ಧರಿಸಲಾಗಿದ್ದು, ಇನ್ನೂ ಒಂದು ಆಸ್ತಿಗೆ ಸಂಬಂಧಿಸಿದಂತೆ ಮೌಲ್ಯಮಾಪನ ಆಗುವುದು ಬಾಕಿ ಇದೆ.  ಭೂಮಿಯ ಮಾಲೀಕರುಗಳು ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸುವಲ್ಲಿ ವಿಳಂಬ ಮಾಡಿದ ಕಾರಣದಿಂದಾಗಿ ಪ್ರಕ್ರಿಯೆಯೂ ವಿಳಂಬವಾಗಿದೆ.  ಮಾರ್ಗಸೂಚಿಯನ್ವಯ ಭಾಗ್ಯನಗರದಿಂದ ಕನಕಾಚಲ ಟಾಕೀಸ್ ವರೆಗೂ ಒಂದು ದರ ಹಾಗೂ ಮಂಜುನಾಥ ಲಾಡ್ಜ್‍ನಿಂದ ರೈಲ್ವೆ ಸ್ಟೇಷನ್ ರಸ್ತೆಯವರೆಗೆ ಒಂದು ದರ ಹೀಗೆ ಎರಡು ಬಗೆಯಲ್ಲಿ ದರವನ್ನು ನಿರ್ಧರಿಸಲಾಗುತ್ತಿದೆ.  ರಾಷ್ಟ್ರೀಯ ಹೆದ್ದಾರಿ-63 ಬಳಿ ಇಬ್ಬರ ಆಸ್ತಿ ಇದ್ದು, ಮಾರ್ಗಸೂಚಿಯಂತೆ ದರ ನಿಗದಿಪಡಿಸಲಾಗಿದೆ.   ಕಳೆದ ಜೂನ್ 05 ರಂದು ಕಟ್ಟಡಗಳ ಮೌಲ್ಯವನ್ನು ನಿಗದಿಪಡಿಸಲಾಗಿದೆ.  ಸಂಬಂಧಪಟ್ಟ ಭೂಮಿ/ಕಟ್ಟಡಗಳ ಮಾಲೀಕರಿಗೆ ಪರಿಹಾರ ಮೊತ್ತ ಪಾವತಿಸಲು ಒಟ್ಟು 7 ಕೋಟಿ ರೂ. ಅನುದಾನದ ಅವಶ್ಯಕತೆಯಿದ್ದು, ಸರ್ಕಾರ 02 ಕೋಟಿ ರೂ. ಬಿಡುಗಡೆ ಮಾಡಿದೆ.  ಇನ್ನೂ  5 ಕೋಟಿ ರೂ. ಅನುದಾನ ಬಿಡುಗಡೆ ಆಗಬೇಕಿದೆ.  ಭೂ ಸ್ವಾಧೀನ ಪ್ರಕ್ರಿಯೆಗೆ ಮುಂದಾದರೆ, ಪ್ರಕ್ರಿಯೆ ಪೂರ್ಣಕ್ಕೆ ಸುಮಾರು 2-3 ವರ್ಷ ಬೇಕಾಗುತ್ತದೆ.  ಹೀಗಾಗಿ ಸರ್ಕಾರದ ಸೂಚನೆಯಂತೆ ಭೂ ಮಾಲೀಕರಿಂದ ಮಾತುಕತೆ ಮೂಲಕ ನೇರವಾಗಿ ಖರೀದಿಸಲಾಗುತ್ತಿದೆ.  ಯಾವುದೇ ಕಾರಣಕ್ಕೂ ಜಿಲ್ಲಾಡಳಿತದಿಂದ ಭೂ ವಶಕ್ಕೆ ಪಡೆಯುವಲ್ಲಿ ವಿಳಂಬ ಆಗುತ್ತಿಲ್ಲ.  ಗದಗ-ವಾಡಿ ರೈಲ್ವೆ ಮಾರ್ಗಕ್ಕೆ ಸಂಬಂಧಿಸಿದಂತೆ, ಯಲಬುರ್ಗಾ ಮತ್ತು ಕುಷ್ಟಗಿ ತಾಲೂಕಿನಲ್ಲಿ ಸುಮಾರು 625 ಎಕರೆ ಭೂಮಿಯನ್ನು ರೈತರ ಒಪ್ಪಿಗೆ ಮುಖಾಂತರವೇ ಸ್ವಾಧೀನ ಮಾಡಿಕೊಳ್ಳಲಾಗಿದೆ.  ಅದೇ ರೀತಿ ಗಿಣಿಗೇರಾ-ಮೆಹಬೂಬ್‍ನಗರ ರೈಲ್ವೆ ಮಾರ್ಗದಲ್ಲಿ ಗಂಗಾವತಿ ತಾಲೂಕಿನಲ್ಲಿ 76 ಎಕರೆ ಭೂಮಿಯನ್ನು ರೈತರಿಂದ ನೇರವಾಗಿ ಖರೀದಿ ಮಾಡಲಾಗಿದ್ದು,  ಒಟ್ಟಾರೆ ಕೊಪ್ಪಳ ಜಿಲ್ಲೆಯಲ್ಲಿನ ರೈಲ್ವೆ ಇಲಾಖೆಗೆ ಸಂಬಂಧಿಸಿದ ಕಾಮಗಾರಿಗಳಿಗೆ ಭೂಮಿಯನ್ನು ಪಡೆಯುವಲ್ಲಿ ಪ್ರಾಮಾಣಿಕ ಯತ್ನ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.

  ಸಭೆಯಲ್ಲಿ ಉಪಸ್ಥಿತರಿದ್ದ ರೈಲ್ವೆ ಇಲಾಖೆ ಸೆಕ್ಷನ್ ಅಧಿಕಾರಿ ಸುಧಾಕರ್ ಅವರು, ಭಾಗ್ಯನಗರ ರೈಲ್ವೆ ಗೇಟ್ ಮೇಲ್ಸೇತುವೆ ಕಾಮಗಾರಿಗೆ ಸಂಬಂಧಿಸಿದಂತೆ 100 ಮೀ. ಭೂಮಿಯನ್ನು ರೈಲ್ವೆ ಇಲಾಖೆಗೆ ಹಸ್ತಾಂತರಿಸಿದಲ್ಲಿ, 05 ತಿಂಗಳ ಒಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.

  ಸಭೆಯಲ್ಲಿ ಉಪವಿಭಾಗಾಧಿಕಾರಿ ಗುರುದತ್ ಹೆಗ್ಡೆ, ಲೋಕೋಪಯೋಗಿ ಇಲಾಖೆ, ಕಂದಾಯ ಇಲಾಖೆ, ನಗರಸಭೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.  ಭಾಗ್ಯನಗರ ರೈಲ್ವೆ ಗೇಟ್‍ಗೆ ಮೇಲ್ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆಯಬೇಕಿರುವ ಭೂಮಿ/ಕಟ್ಟಡ ಮಾಲೀಕರೊಂದಿಗೆ ಜಿಲ್ಲಾಧಿಕಾರಿಗಳು ಸಭೆ ಕೈಗೊಂಡರು.

Please follow and like us:
error

Related posts

Leave a Comment