fbpx

​ಬ್ಯಾಂಕ್ ಖಾತೆ ಕುರಿತು ಮೊಬೈಲ್ ಕರೆಗಳಿಗೆ ಸ್ಪಂದಿಸಬೇಡಿ

ಕೊಪ್ಪಳ – ಬ್ಯಾಂಕ್ ಖಾತೆಯ ಎಟಿಎಂ ಕಾರ್ಡ್ ಅನ್ನು ಬ್ಲಾಕ್ ಮಾಡಲಾಗುತ್ತಿದೆ,  ಸರಿಪಡಿಸಲು ಬ್ಯಾಂಕ್ ಎಟಿಎಂ ಕಾರ್ಡ್ ಸಂಖ್ಯೆ ಅಥವಾ ಪಿನ್ ಸಂಖ್ಯೆಯನ್ನು ನೀಡುವಂತೆ ಮೊಬೈಲ್‍ನಲ್ಲಿ ಕೋರುವ ಯಾವುದೇ ಕರೆಗಳಿಗೆ ಸಾರ್ವಜನಿಕರು ಸ್ಪಂದಿಸಬೇಡಿ, ಬದಲಿಗೆ ಅಂತಹವರ ವಿರುದ್ಧ ದೂರು ದಾಖಲಿಸಿ ಎಂದು ದೂರಸಂಪರ್ಕ ನಿಯಂತ್ರಣಾ ಪ್ರಾಧಿಕಾರದ ಸಲಹೆಗಾರ ಶ್ರೀನಿವಾಸ ಗಲಗಲಿ ಅವರು ಹೇಳಿದರು. 

ಗ್ರಾಹಕರ ಹಕ್ಕು ಮತ್ತು ಸವಲತ್ತುಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ, ದೂರಸಂಪರ್ಕ ನಿಯಂತ್ರಣಾ ಪ್ರಾಧಿಕಾರ (ಟ್ರಾಯ್), ಪ್ರಾದೇಶಿಕ ಕಛೇರಿ, ಬೆಂಗಳೂರು ಇವರ ವತಿಯಿಂದ ಜಿಲ್ಲಾ ಆಡಳಿತ ಭವನದ ಆಡಿಟೊರಿಯಮ್ ಹಾಲ್ ನಲ್ಲಿ ಗುರುವಾರದಂದು ಏರ್ಪಡಿಸಿದ ಗ್ರಾಹಕರ ನೇರಸಂಪರ್ಕ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಪಾಲ್ಗೊಂಡು ಮಾತನಾಡಿದರು.  ಕರ್ನಾಟಕ ರಾಜ್ಯದಲ್ಲಿ 9 ಸರ್ವೀಸ್ ಪ್ರೊವೈಡರ್, 65.70 ಮಿಲಿಯನ್ ಮೊಬೈಲ್ ಮತ್ತು 2.23 ಮಿಲಿಯನ್ ಸ್ಥಿರ ದೂರವಾಣಿ ಗ್ರಾಹಕರಿದ್ದಾರೆ. ಹೆಚ್ಚಿನ ಗ್ರಾಹಕರಿಗೆ ಟ್ರಾಯ್‍ನ ನಿಯಮಾವಳಿಗಳ ಬಗ್ಗೆ ಮಾಹಿತಿಯ ಅರಿವಿಲ್ಲ.  ‘ಬ್ಯಾಂಕ್ ಗ್ರಾಹಕ ಸೇವಾ ಕೇಂದ್ರದಿಂದ ಮಾತನಾಡುತ್ತಿದ್ದೇವೆ, ತಮ್ಮ ಬ್ಯಾಂಕ್ ಎಟಿಎಂ ಕಾರ್ಡ್ ಅನ್ನು ಬ್ಲಾಕ್ ಮಾಡಲಾಗುತ್ತಿದೆ, ಸರಿಪಡಿಸಲು ಕಾರ್ಡ್ ಸಂಖ್ಯೆ ಅಥವಾ ಪಿನ್ ಸಂಖ್ಯೆ ನೀಡಿ’, ಅಥವಾ ‘ತಮ್ಮ ಮೊಬೈಲ್ ಸಂಖ್ಯೆಗೆ ಲಕ್ಷಗಟ್ಟಲೆ ಲಾಟರಿ ಹಣ ಬಂದಿದೆ’ ಎಂಬುದಾಗಿ ಮೊಬೈಲ್‍ಗಳಿಗೆ ಕರೆಗಳು ಬರುತ್ತವೆ.  ಯಾವುದೇ ಬ್ಯಾಂಕ್‍ಗಳು ತಮ್ಮ ಗ್ರಾಹಕರಿಂದ ಈ ರೀತಿಯ ಮಾಹಿತಿಯನ್ನು ಕೇಳುವುದಿಲ್ಲ.  ಸಾರ್ವಜನಿಕರು ಇಂತಹ ಕರೆಗಳಿಗೆ ಸ್ಪಂದಿಸಬಾರದು, ಒಂದು ವೇಳೆ ಸ್ಪಂದಿಸಿ, ವಿವರ ನೀಡಿದರೆ, ಅವರ ಬ್ಯಾಂಕ್ ಖಾತೆಯಲ್ಲಿನ ಹಣವನ್ನು ಕಳೆದುಕೊಳ್ಳುವ ಸಾಧ್ಯತೆಗಳು ಹೆಚ್ಚು.  ಯಾರೂ ಸಹ ಇಂತಹ ಕರೆಗಳಿಗೆ ದಯವಿಟ್ಟು ಸ್ಪಂದಿಸಬೇಡಿ, ಬದಲಿಗೆ ಅಂತಹವರ ವಿರುದ್ಧ ದೂರು ನೀಡಬೇಕು ಎಂದರು. ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡಲು ಟ್ರಾಯ್ ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.   ಗ್ರಾಹಕರ ಹಕ್ಕು ಮತ್ತು ಸವಲತ್ತುಗಳು ಹಾಗೂ ಸೇವಾ ಸಂಸ್ಥೆಗಳು ತಮ್ಮ ಗ್ರಾಹಕರಿಗೆ ಸೇವೆಯನ್ನು ಹೇಗೆ ಪೂರೈಸಬೇಕು.    ಪ್ರಾಧಿಕಾರದ ಪ್ರಮುಖ ನಿಬಂಧನೆಗಳಾದ ಮೊಬೈಲ್ ನಂಬರ್ ಪೋರ್ಟಬಿಲಿಟಿ, ಅನಪೇಕ್ಷಿತ ವಾಣಿಜ್ಯ ಸಂದೇಶಗಳು, ದೂರು ನಿರ್ವಾಹಣಾ ಪ್ರಕ್ರಿಯೆ ಮುಂತಾದವುಗಳ ಕುರಿತು ವಿವರಣೆ ನೀಡಿದ ಶ್ರೀನಿವಾಸ ಅವರು, ಮೊಬೈಲ್ ಸೇವೆ ಕುರಿತಂತೆ ಗ್ರಾಹಕರು ದೂರು ಕೇಂದ್ರದಲ್ಲಿ ದೂರು ನೊಂದಾಯಿಸಬೇಕು. ಒಂದು ವೇಳೆ ಗ್ರಾಹಕರಿಗೆ ದೂರು ನಿವಾರಣೆಯ ಕುರಿತು ಅತೃಪ್ತಿಯಿದ್ದಲ್ಲಿ, ಮೇಲ್ಮನವಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಬಹುದು. ಗ್ರಾಹಕರು  www.tccms.gov.in ವೆಬ್ ಸೈಟ್ ನಲ್ಲಿ   ಗ್ರಾಹಕರ ಸಂಖ್ಯೆ, ಸಾಮಾನ್ಯ ಮಾಹಿತಿ ಸಂಖ್ಯೆ, ದೂರು ಕೇಂದ್ರದ ಸಂಖ್ಯೆ ಮತ್ತು ಮೇಲ್ಮನವಿ ಪ್ರಾಧಿಕಾರದ ವಿವರಗಳನ್ನು ಪಡೆಯಬಹುದು.  ಮೊಬೈಲ್ ಪೋರ್ಟಬಿಲಿಟಿ ಪ್ರಕ್ರಿಯೆ 15 ದಿನಗಳ ಒಳಗೆ ಪೂರ್ಣಗೊಳ್ಳಬೇಕು.  ದೇಶದ 20. 4 ಕೋಟಿ ಚಂದಾದಾರರು ಈವರೆಗೆ ಇದರ ಸೌಲಭ್ಯ ಬಳಸಿದ್ದಾರೆ.  ಅನಪೇಕ್ಷಿತ ವಾಣಿಜ್ಯಾತ್ಮಕ ಸಂದೇಶಗಳು/ ಟೆಲಿಮಾರ್ಕೆಟಿಂಗ್ ಕರೆಗಳನ್ನು  ತಡೆಹಿಡಿಯಲು  ಗ್ರಾಹಕರು ತಮ್ಮ ಆದ್ಯತೆಯನ್ನು  ನೋಂದಾಯಿಸಲು ಟೋಲ್ ಫ್ರೀ ಸಂಖ್ಯೆಯಾದ 1909 ಗೆ ಕರೆ ಮಾಡಬಹುದು ಅಥವಾ  ಎಸ್.ಎಂ.ಎಸ್ ಕಳುಹಿಸಬಹುದು. ನೋಂದಾವಣಿಯಾದ ಮೇಲೂ ಸಂದೇಶ ಬಂದಲ್ಲಿ, 3 ದಿನಗೊಳಗಾಗಿ 1909 ಗೆ ಕರೆ ಅಥವಾ ಎಸ್.ಎಂ.ಎಸ್ ಮಾಡುವುದರ ಮೂಲಕ ಸರ್ವೀಸ್ ಪ್ರೊವೈಡರ್‍ಗೆ ದೂರನ್ನು ಸಲ್ಲಿಸಬಹುದು.  2013 ರಿಂದ ಈವರೆಗೆ ಇಂತಹ ಸುಮಾರು 1. 70 ಲಕ್ಷ ದೂರುಗಳು ಸಲ್ಲಿಕೆಯಾಗಿವೆ.  ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆಗಳನ್ನು ವಿನಾಕಾರಣ ಯಾವುದೇ ಅಪ್ಲಿಕೇಶನ್‍ಗಳಿಗೆ ಶೇರ್ ಮಾಡಬಾರದು.  ಉದಾಹರಣೆಗೆ ಟ್ರೂ ಕಾಲರ್‍ನಂತಹ ಅಪ್ಲಿಕೇಶನ್ ಡೌನ್‍ಲೋಡ್ ಮಾಡಿಕೊಳ್ಳುವಾಗ ಮೊಬೈಲ್ ಸಂಖ್ಯೆ ಶೇರ್ ಮಾಡಿಕೊಳ್ಳಲು ತಮಗರಿವಿಲ್ಲದಂತೆ ಒಪ್ಪಿಗೆಯನ್ನು ನೀಡಿರುತ್ತೀರಿ.  ಇದೇ ರೀತಿ ವಿವಿಧ ಅಪ್ಲಿಕೇಶನ್ ಡೌನ್‍ಲೋಡ್ ಮಾಡಿಕೊಂಡಾಗ, ತಮ್ಮ ಮೊಬೈಲ್ ಸಂಖ್ಯೆಗಳು ಹತ್ತು ಹಲವು ಟೆಲಿ ಮಾರ್ಕೆಟಿಂಗ್ ಗಳಿಗೆ ಅಥವಾ ವಂಚಕರಿಗೆ ದೊರೆಯುತ್ತವೆ.  ಕೆಲವು ಸಂಸ್ಥೆಗಳು ಮೊಬೈಲ್ ಟವರ್ ಅನುಸ್ಥಾಪನೆಗೆ ಹೆಚ್ಚಿನ ಬಾಡಿಗೆ ನೀಡುವ ನೆಪದಲ್ಲಿ ಜನರಿಂದ ಹಣ ಪಡೆದು, ನಂತರ ಮಾಯವಾಗುತ್ತಿವೆ.  ಮೊಬೈಲ್ ಟವರ್ ಅನುಸ್ಥಾಪನೆಯಲ್ಲಿ ಟ್ರಾಯ್ ನೇರವಾಗಿ ಅಥವಾ ಪರೋಕ್ಷವಾಗಿ ಯಾವುದೇ ಪಾತ್ರ ವಹಿಸುವುದಿಲ್ಲ.  ಸಾರ್ವಜನಿಕರು ಇಂತಹ ವಂಚನೆಗೆ ಒಳಗಾಗುವುದನ್ನು ತಡೆಯಲು ಜಾಗೃತಿ ಮೂಡಿಸುವುದೊಂದೇ ದಾರಿ ಎಂದರು.ಉತ್ತಮ ಗುಣಮಟ್ಟದ ಶಬ್ದ ಮತ್ತು ಚಿತ್ರ, ಹೈ ಡೆಫನೇಷನ್ ಟಿ ವಿ, ವೀಡಿಯೋ ಆನ್ ಡಿಮ್ಯಾಂಡ್, ಬ್ರಾಡ್ ಬ್ಯಾಂಡ್ ಸೇವೆ, ಬಿಲ್ಲಿಂಗ್ ನಲ್ಲಿ ಪಾರದರ್ಶಕತೆ ಮತ್ತು ಉತ್ತಮ ದೂರು ನಿರ್ವಹಣಾ ವ್ಯವಸ್ಥೆ ಮುಂತಾದ ಡಿಜಿಟೈಜೆಷನ್ ಲಾಭಗಳ ಬಗ್ಗೆ ಕಾರ್ಯಕ್ರಮದಲ್ಲಿ ವಿವರಗಳನ್ನು ನೀಡಲಾಯಿತು.  ಅಲ್ಲದೆ ಗ್ರಾಹಕರ ಕೈಪಿಡಿಯನ್ನು ಇದೇ ಸಂದರ್ಭದಲ್ಲಿ ಉಚಿತವಾಗಿ ವಿತರಿಸಲಾಯಿತು.  ಟ್ರಾಯ್‍ನ ಹಿರಿಯ ಸಂಶೋಧನಾ ಅಧಿಕಾರಿ ಲತಾ ಹೆಚ್.ಸಿ. ಅವರು ಉಪಸ್ಥಿತರಿದ್ದರು.  ಕಾರ್ಯಕ್ರಮದಲ್ಲಿ ಏರ್‍ಟೆಲ್, ವೋಡಫೋನ್, ಐಡಿಯಾ, ಜಿಯೋ, ರಿಲಯನ್ಸ್, ಟಾಟಾ ಡೊಕೋಮೊ, ಬಿಎಸ್‍ಎನ್‍ಎಲ್ ಮೊಬೈಲ್ ಸೇವಾ ಕಂಪನಿಗಳ ಪ್ರತಿನಿಧಿಗಳು ಪಾಲ್ಗೊಂಡು, ಗ್ರಾಹಕ ಸೇವೆಗಾಗಿ ಇರುವ ಸೌಲಭ್ಯಗಳನ್ನು ವಿವರಿಸಿದರು.  ನಂತರ ನಡೆದ ಗ್ರಾಹಕರ ಸಂಪರ್ಕ ಕಾರ್ಯಕ್ರಮದಲ್ಲಿ ಹಲವು ಸಾರ್ವಜನಿಕರು ವಿವಿಧ ಮೊಬೈಲ್ ಕಂಪನಿಗಳಿಂದ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಟ್ರಾಯ್ ಅಧಿಕಾರಿಗಳ ಗಮನಕ್ಕೆ ತಂದರು.

Please follow and like us:
error

Leave a Reply

error: Content is protected !!