​ದಡಾರ-ರುಬೆಲ್ಲಾ ಲಸಿಕೆ ಎಸ್. ಎಫ್.ಎಸ್. ಶಾಲೆಯಲ್ಲಿ ಚಾಲನೆ

ಕೊಪ್ಪಳ – ದಡಾರ ಮತ್ತು ರುಬೆಲ್ಲಾ ಲಸಿಕಾ ಅಭಿಯಾನಕ್ಕೆ ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಕೊಪ್ಪಳದ ಎಸ್‍.ಎಫ್‍.ಎಸ್ ಶಾಲೆಯಲ್ಲಿ ಚಾಲನೆ ನೀಡಿದರು.  ಲಸಿಕಾ ಅಭಿಯಾನವನ್ನು ಜ್ಯೊತಿ ಬೆಳಗಿಸುವ ಮೂಲಕ ಚಾಲನೆ ನೀಡಿದ ಜಿಲ್ಲಾಧಿಕಾರಿಗಳು, ಜಿಲ್ಲೆಯ ಎಲ್ಲ ಮಕ್ಕಳಿಗೆ ತಪ್ಪದೆ ದಡಾರ-ರುಬೆಲ್ಲಾ ಲಸಿಕೆ ತಲುಪಿಸುವ ಕಾರ್ಯವನ್ನು ಸಮರ್ಪಕವಾಗಿ ಕೈಗೊಳ್ಳಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.  ಇದೇ ಶಾಲೆಯಲ್ಲಿ ಓದುತ್ತಿರುವ ಜಿಲ್ಲಾಧಿಕಾರಿಗಳ ಪುತ್ರಿಗೆ ಅವರ ಸಮ್ಮುಖದಲ್ಲೇ ದಡಾರ-ರುಬೆಲ್ಲಾ ಲಸಿಕೆಯ ಚುಚ್ಚುಮದ್ದು ಇದೇ ಸಂದರ್ಭದಲ್ಲಿ ನೀಡಲಾಯಿತು.  ಲಸಿಕೆಯು ಸುರಕ್ಷಿತವಾಗಿದ್ದು, ಲಸಿಕೆ ಕುರಿತಂತೆ ಮಕ್ಕಳ ಪಾಲಕರು/ಪೋಷಕರು ಯಾವುದೇ ಬಗೆಯ ವದಂತಿಗಳಿಗೆ ಕಿವಿಗೊಡಬಾರದು.  ಮಕ್ಕಳಿಗೆ ಮಾರಕ ರೋಗ ಬಾರದಂತೆ ಲಸಿಕೆಯು ತಡೆಗಟ್ಟುತ್ತದೆ.   ಲಸಿಕೆ ಅಭಿಯಾನವನ್ನು ಫೆ. 07 ರಿಂದ 28 ರವರೆಗೆ ಹಮ್ಮಿಕೊಳ್ಳಲಾಗುತ್ತಿದೆ.  ಜಿಲ್ಲೆಯಲ್ಲಿ 09 ತಿಂಗಳಿನಿಂದ 15 ವರ್ಷದೊಳಗಿನ ಸುಮಾರು 4.5 ಲಕ್ಷ ಮಕ್ಕಳಿಗೆ ಈ ಲಸಿಕೆ ಹಾಕುವ ಗುರಿ ಹೊಂದಲಾಗಿದೆ.  ಯಾವುದೇ ಮಕ್ಕಳು ಲಸಿಕೆಯಿಂದ ವಂಚಿತವಾಗಬಾರದು.  ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಪೂರ್ವ ತಯಾರಿಯೊಂದಿಗೆ, ಸಮರ್ಪಕವಾಗಿ ಮಕ್ಕಳಿಗೆ ಲಸಿಕೆ ತಲುಪಿಸುವ ಕಾರ್ಯ ಕೈಗೊಳ್ಳಬೇಕು.  ಮಕ್ಕಳಿಗೆ ಲಸಿಕೆ ಹಾಕಿಸುವ ನಿಟ್ಟಿನಲ್ಲಿ ತಂದೆ-ತಾಯಿಯರ ಪಾತ್ರ ಮಹತ್ವದ್ದಾಗಿದ್ದು, ಸ್ವಯಂ ಪ್ರೇರಣೆಯಿಂದ ಅವರು ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿಗಳು ಈ ಸಂದರ್ಭದಲ್ಲಿ ಹೇಳಿದರು.   ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಉಪವಿಭಾಗಾಧಿಕಾರಿ ಗುರುದತ್ ಹೆಗಡೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ, ಆರ್‍ಸಿಹೆಚ್ ಅಧಿಕಾರಿ ಡಾ. ಅಲಕಾನಂದ ಸೇರಿದಂತೆ ಹಲವು ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply