​ಕೊಪ್ಪಳದಲ್ಲಿ 5600 ಕೋಟಿ ರು. ಜಲಾಶಯ ನಿರ್ಮಾಣ


ವಿಧಾನ ಪರಿಷತ್ ನಲ್ಲಿ ಸದಸ್ಯರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಎಂ.ಬಿ. ಪಾಟೀಲ್ ಸಚಿವರು, ತುಂಗಭದ್ರ ಜಲಾಶಯದಲ್ಲಿ ತುಂಬಿರುವ ಹೂಳಿನಿಂದಾಗಿ ನಿರುಪಯೋಗವಾಗಿ ಹರಿದು ಹೋಗುತ್ತಿರುವ ನೀರನ್ನು ಉಳಿಸಿಕೊಳ್ಳುವ ಸಲುವಾಗಿ ಸರ್ಕಾರ ಕೊಪ್ಪಳದ ಗಂಗಾವತಿ ತಾಲ್ಲೂಕಿನ ನವಲಿಯಲ್ಲಿ 35 ಟಿಎಂಸಿ ಸಾಮರ್ಥ್ಯದ ಜಲಾಶಯವನ್ನು ನಿರ್ಮಿಸಲು ಯೋಜನೆ ರೂಪಿಸಿದೆ. ಹಲವು ವರ್ಷಗಳಿಂದಲೂ ತುಂಗಭದ್ರಾ ಜಲಾಶಯದಲ್ಲಿ ತುಂಬಿರುವ ಹೂಳು ಎತ್ತಲು ಸಾಕಷ್ಟು ಮನವಿಗಳು ಬಂದಿವೆ. ಆದರೆ ಕಳೆದ 6 ದಶಕಗಳಿಂದಲೂ ಜಲಾಶಯದಲ್ಲಿ ತುಂಬಿರುವ ಹೂಳನ್ನು ಸಂಪೂರ್ಣವಾಗಿ ತೆಗೆಯುವುದು ತಾಂತ್ರಿಕವಾಗಿ ಆಸಾಧ್ಯ ಎಂದು ತಿಳಿದಿದೆ. ಹೀಗಾಗಿ ಹೂಳಿನಿಂದ ಪೋಲಾಗುತ್ತಿರುವ ನೀರನ್ನು ಉಳಿಸಿಕೊಳ್ಳುವ ಸಲುವಾಗಿ ಕೊಪ್ಪಳದಲ್ಲಿ ನಿರ್ವಹಣಾ ಜಲಾಶಯ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು. ಹೊಸಪೇಟೆಯಲ್ಲಿರುವ ತುಂಗಭದ್ರ ಜಲಾಶಯಕ್ಕೆ ಪ್ರತೀ ವರ್ಷ ಸುಮಾರು ಅರ್ಧ ಟಿಎಂಸಿಯಷ್ಟು ಹೂಳು ಹರಿದು ಬರುತ್ತಿದೆ. ಹೂಳು ತೆಗೆಯುವುದು ತಾಂತ್ರಿಕವಾಗಿ ಅಸಾಧ್ಯ ಎಂದು ಎಲ್ಲರಿಗೂ ತಿಳಿದಿದೆ. ಆದರೂ ಹೂಳು ತೆಗೆದರೆ ಆ ಹೂಳನ್ನು ವಿಸರ್ಜಿಸಲೆಂದೇ ಸುಮಾರು 66 ಸಾವಿರ ಎಕರೆ ಭೂಮಿ ಬೇಕು. ಹೀಗಾಗಿ ಕೊಪ್ಪಳದ ನವಲಿ ಬಳಿ 18 ಸಾವಿರ ಎಕರೆ ಪ್ರದೇಶದಲ್ಲಿ ನಿರ್ಹವಹಣಾ ಜಲಾಶಯವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ತುಂಗಭದ್ರಾ ಜಲಾಶಯದಲ್ಲಿ ತುಂಬಿರುವ ಹೂಳಿನಿಂದಾಗಿ ಪೋಲಾಗಿ ಹರಿಯುವ ನೀರನ್ನು ಈ ನೂತನ ಜಲಾಶಯದಲ್ಲಿ ಶೇಖರಿಸಿ ವಿವಿಧ ಉದ್ದೇಶಗಳಿಗೆ ಬಳಸಿಕೊಳ್ಳಲಾಗುತ್ತದೆ. ಪ್ರಸ್ತುತ ಉದ್ದೇಶಿಸಿರುವ ಜಾಗ ಒಣಭೂಮಿಯಿಂದ ಕೂಡಿದೆ. ಕೃಷಿ ಕಾರ್ಯಕ್ಕೆ ಬಳಕೆ ಮಾಡಲಾಗದ ಭೂಮಿಯಾಗಿದ್ದು, ಇಲ್ಲಿ ಸರ್ಕಾರ ಜಲಾಶಯ ನಿರ್ಮಾಣ ಮಾಡಲಿದೆ. ಜಲಾಶಯ ನಿರ್ಮಾಣಕ್ಕೆ ಸುಮಾರು 5600 ಕೋಟಿ ರು.ವೆಚ್ಚವಾಗಲಿದೆ ಎಂದು ಎಂಬಿ ಪಾಟೀಲ್ ತಿಳಿಸಿದ್ದಾರೆ.

Leave a Reply