​ಉದ್ಯೋಗ-ನೀರು-ಜಾನುವಾರುಗಳಿಗೆ ಮೇವು ಆದ್ಯತೆ: ಸಚಿವ ಬಸವರಾಜ ರಾಯರಡ್ಡಿ

 ಕೊಪ್ಪಳ ಜಿಲ್ಲೆಯಲ್ಲಿ ತೀವ್ರ ಬರ ಪರಿಸ್ಥಿತಿ ತಲೆದೋರಿದ್ದು, ಕೂಲಿಕಾರರಿಗೆ ಉದ್ಯೋಗ, ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಸಮರ್ಪಕ ಮೇವು ಒದಗಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಹೇಳಿದರು.  ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಬರ ಪರಿಹಾರ ಕಾಮಗಾರಿಗಳ ಪರಿಶೀಲನೆಗಾಗಿ ವಿವಿಧ ಗ್ರಾಮಗಳಿಗೆ ಸೋಮವಾರದಂದು ಭೇಟಿ ನೀಡಿದ ಸಂದರ್ಭದಲ್ಲಿ ರಾಂಪುರ ಗ್ರಾಮದ ಕೆರೆ ಹೂಳೆತ್ತುವ ಕಾಮಗಾರಿ ಪರಿಶೀಲಿಸಿ, ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.


ಪ್ರತಿ ವಿಧಾನಸಭೆಗೆ ತಲಾ ಒಂದು ಗೋಶಾಲೆಯಂತೆ ಜಿಲ್ಲೆಯಲ್ಲಿ ಒಟ್ಟು 05 ಗೋಶಾಲೆಯನ್ನು ಸದ್ಯ ಪ್ರಾರಂಭಿಸಲಾಗುತ್ತಿದೆ.  ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ವೆಂಕಟಗಿರಿ, ಕನಕಗಿರಿ ಕ್ಷೇತ್ರದಲ್ಲಿ ಕನಕಗಿರಿಯಲ್ಲಿ ಸೋಮವಾರದಂದು ಗೋಶಾಲೆ ಪ್ರಾರಂಭಿಸ ಲಾಗಿದೆ.  ಎರಡು ದಿನಗಳ ಒಳಗಾಗಿ ಕುಷ್ಟಗಿ ತಾಲೂಕಿನ ಕಲಕೇರಿ, ಕೊಪ್ಪಳ ತಾಲೂಕಿನ ಅಳವಂಡಿ, ಯಲಬುರ್ಗಾ ತಾಲೂಕಿನ ತಲ್ಲೂರಿನಲ್ಲಿ ಗೋಶಾಲೆ ಪ್ರಾರಂಭಿಸಲಾಗುವುದು.  ಗೋಶಾಲೆಯಲ್ಲಿ ಸಮರ್ಪಕ ಮೇವು, ನೀರು, ಶೆಡ್ ವ್ಯವಸ್ಥೇ, ಅಗತ್ಯವಿದ್ದಲ್ಲಿ, ರೈತರು ಉಳಿದುಕೊಳ್ಳಲು ಸಹ ವ್ಯವಸ್ಥೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.  ಅಗತ್ಯ ಕಂಡುಬಂದಲ್ಲಿ, ಬರುವ ತಿಂಗಳು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೊಂದು ಗೋಶಾಲೆ ಪ್ರಾರಂಭಿಸಲಾಗುವುದು.  ಗೋಶಾಲೆಗಳಿಗೆ ಮೇವು ಪೂರೈಕೆ ಸಮರ್ಪಕವಾಗಿ ನಡೆಯುವಂತೆ ಮೇವು ದಾಸ್ತಾನಿಗೂ ಕ್ರಮ ಕೈಗೊಳ್ಳಲಾಗಿದ್ದು, ಸರ್ಕಾರ ಗೋಶಾಲೆಗಳಿಗಾಗಿ ಸಾಕಷ್ಟು ಅನುದಾನ ಒದಗಿಸಿದೆ ಎಂದು ಜಿಲ್ಲಾ ಉಸ್ತುವಾರಿ  ಮಂತ್ರಿ ಬಸವರಾಜ ರಾಯರಡ್ಡಿ ಹೇಳಿದರು. ಬೇಸಿಗೆಯಲ್ಲಿ ಜನರಿಗೆ ಕುಡಿಯುವ ನೀರು ಪೂರೈಕೆಯಲ್ಲಿ ತೊಂದರೆಯಾಗದಂತೆ, ಈಗಾಗಲೆ ಜಿಲ್ಲೆಯ ಎಲ್ಲ ಗ್ರಾಮೀಣ ಪ್ರದೇಶಗಳಲ್ಲಿನ ಬೋರ್‍ವೆಲ್‍ಗಳ ಬಗ್ಗೆ ಲಭ್ಯವಿರುವ ನೀರಿನ ಪ್ರಮಾಣ ಸಹಿತ ವೈಜ್ಞಾನಿಕವಾಗಿ ಸಮೀಕ್ಷೆ ಕೈಗೊಂಡು, ವರದಿ ಸಿದ್ಧವಾಗಿದೆ.  ಜೂನ್ 15 ರವರೆಗೆ ಗ್ರಾಮಗಳಿಗೆ ಜನಸಂಖ್ಯಾವಾರು ಬೇಕಾಗಬಹುದಾದ ನೀರಿನ ಪ್ರಮಾಣ ಹಾಗೂ ಲಭ್ಯವಿರುವ ನೀರಿನ ಪ್ರಮಾಣವನ್ನು ಪರಿಗಣಿಸಿ, ಬೇಕಾಗಬಹುದಾದ ನೀರಿನ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ.  ಅಗತ್ಯವಿರುವೆಡೆ ಖಾಸಗಿ ಬೋರ್‍ವೆಲ್‍ಗಳನ್ನು ತಿಂಗಳಿಗೆ 10 ರಿಂದ 12 ಸಾವಿರ ರೂ. ಬಾಡಿಗೆ ನೀಡಿ, ಪಡೆಯುವಂತೆಯೂ ಸೂಚನೆ ನೀಡಲಾಗಿದೆ.  ಜನರು ಗುಳೇ ಹೋಗುವುದನ್ನು ತಪ್ಪಿಸಲು, ಎಲ್ಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿಗಳನ್ನು ಪ್ರಾರಂಭಿಸಿ, ಕೆಲಸ ಕೇಳುವವರಿಗೆ ಉದ್ಯೋಗ ನೀಡಲು ಸೂಚನೆ ನೀಡಲಾಗಿದ್ದು, ಕೂಲಿ ಮೊತ್ತವನ್ನು 15 ದಿನಗಳ ಒಳಗಾಗಿ ಆಯಾ ಕೂಲಿಕಾರರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲು ಕ್ರಮ ಕೈಗೊಳ್ಳಲಾಗಿದೆ.  ಬರುವ ಮೇ. 31 ರವರೆಗೂ ಸಮರ್ಪಕ ಕೂಲಿ ಕೆಲಸ ದೊರಕಿಸಲು ಕ್ರಿಯಾ ಯೋಜನೆ ಸಿದ್ಧವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಮಂತ್ರಿಗಳು ಹೇಳಿದರು. ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಲಕ್ಷ್ಮಮ್ಮ ನೀರಲೂಟಿ, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಜಿ.ಪಂ. ಉಪಕಾರ್ಯದರ್ಶಿ ಎನ್.ಕೆ. ತೊರವಿ ಸೇರಿದಂತೆ ವಿವಿಧ ಅಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

Please follow and like us:
error

Related posts

Leave a Comment