​ಆ. 18 ರಂದು ಗದಗ-ವಾಡಿ ನೂತನ ರೈಲ್ವೆ ಮಾರ್ಗ ಕಾಮಗಾರಿಗೆ ಚಾಲನೆ

 ಬಹು ನಿರೀಕ್ಷಿತ ಗದಗ–ವಾಡಿ ರೈಲ್ವೆ ಮಾರ್ಗ ಯೋಜನೆ ಗದಗ, ಕೊಪ್ಪಳ, ರಾಯಚೂರು, ಯಾದಗಿರಿ ಮತ್ತು ಕಲಬುರ್ಗಿ ಜಿಲ್ಲೆಗಳಿಗೆ ವರದಾನವಾಗಲಿದೆ ಎಂದು ರಾಜ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ಆರ್.ವಿ. ದೇಶಪಾಂಡೆ ಅವರು ತಿಳಿಸಿದ್ದಾರೆ.
  ಯೋಜನೆ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಚಿವರು,  ಈ ಯೋಜನೆಯ ಮಾರ್ಗದ ಒಟ್ಟು ಉದ್ದ 252.5 ಕಿ.ಮೀ. ಆಗಿರುತ್ತದೆ. ಈ ಯೋಜನೆಯನ್ನು  ಕರ್ನಾಟಕ ಸರ್ಕಾರ ಮತ್ತು ರೈಲ್ವೆ ಮಂತ್ರಾಲಯವು ಜಂಟಿಯಾಗಿ ಶೇ. 50:50 ವೆಚ್ಚ ಹಂಚಿಕೆಯಡಿ  ಒಟ್ಟು ರೂ.1922.14 ಕೋಟಿಗಳ ಅಂದಾಜು ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಇದರಲ್ಲಿ ರಾಜ್ಯ ಸರ್ಕಾರದ ಭಾಗವು ರೂ.961.07 ಕೋಟಿಗಳಾಗಿರುತ್ತವೆ.  
ಈ ಮಾರ್ಗಕ್ಕೆ ಅಗತ್ಯವಿರುವ ಭೂಮಿಯನ್ನು ರಾಜ್ಯ ಸರ್ಕಾರವು ಉಚಿತವಾಗಿ, ನೈರುತ್ಯ ರೈಲ್ವೆ ಇಲಾಖೆಗೆ ನೀಡಲು ಕ್ರಮ ಕೈಗೊಂಡಿದೆ. ರಾಜ್ಯ ಸರ್ಕಾರವು ಈ ಯೋಜನೆಯ ಭೂಸ್ವಾಧೀನಕ್ಕಾಗಿ ರೂ.161.34 ಕೋಟಿಗಳನ್ನು ಹಾಗೂ ನಿರ್ಮಾಣಕ್ಕಾಗಿ ರೂ.50.28 ಕೋಟಿಗಳನ್ನು ಈಗಾಗಲೇ ಬಿಡುಗಡೆ ಮಾಡಿದೆ. ಭೂಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ.
ಈ ಯೋಜನೆ ಚಾಲನೆಗೊಳ್ಳುವಲ್ಲಿ ಮುಖ್ಯಮಂತ್ರಿಯವರಾದ ಶ್ರೀ ಸಿದ್ದರಾಮಯ್ಯನವರ ಪ್ರೋತ್ಸಾಹ ಮತ್ತು ಕೊಡುಗೆಗಳನ್ನು ಈ ಸಂದರ್ಭದಲ್ಲಿ ಸ್ಮರಿಸುವುದು ಅಗತ್ಯ.
ಈ ಗದಗ-ವಾಡಿ ನೂತನ ರೈಲ್ವೆ ಮಾರ್ಗದ ಯೋಜನೆಯಿಂದಾಗಿ ಮುಖ್ಯವಾಗಿ ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಪ್ರದೇಶಗಳ ಹಿಂದುಳಿದ ಭಾಗಗಳ ಅಭಿವೃದ್ಧಿಗೆ ಚಾಲನೆ ಸಿಗುವುದಲ್ಲದೇ ಆ ಭಾಗಗಳ ಉದ್ಯೋಗ ಸೃಷ್ಟಿಗೆ ಮತ್ತು ಕೃಷಿ, ತೋಟಗಾರಿಕೆ, ಕೈಗಾರಿಕೋದ್ಯಮ, ಪ್ರವಾಸೋದ್ಯಮ, ಸಂಚಾರ-ಸಾಗಾಟ ವಲಯಗಳ ಬೆಳವಣಿಗೆಗೆ ಅನುಕೂಲವಾಗಲಿದೆ ಎಂದು ಸಚಿವ ಆರ್.ವಿ. ದೇಶಪಾಂಡೆ ತಿಳಿಸಿದ್ದಾರೆ.

Please follow and like us:
error