ಜಾತಿ ಧರ್ಮ ಭಾಷೆಗಳ ಎಲ್ಲೆ ಮೀರಿದ ಸಂಭ್ರಮ
ಕೊಪ್ಪಳ : ಐತಿಹಾಸಿಕ ಆನೆಗೊಂದಿ ಉತ್ಸವಕ್ಕೆ ಸುತ್ತಲಿನ ಗ್ರಾಮಸ್ಥರು ರಂಗವಲ್ಲಿಯ ಮೆರಗು ನೀಡಿ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಆನೆಗೊಂದಿ ಮತ್ತು ಸಾಣಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳ ಮುಖ್ಯ ಬೀದಿಯುದ್ದಕ್ಕೂ ಬಣ್ಣಬಣ್ಣದ ರಂಗೋಲಿಗಳು ರಾರಾಜಿಸುತ್ತಿವೆ.
ರಸ್ತೆಯ ಇಕ್ಕೆಲಗಳನ್ನು ಸ್ವಚ್ಛಗೊಳಿಸಿ, ಸಾರಿಸಿ ಸಿಂಗರಿಸಲಾಗಿದೆ.ಪ್ಲಾಸ್ಟಿಕ್ ಫ್ಲೆಕ್ಸ್,ವಿನೈಲ್ ಬಳಕೆ ಕಡಿಮೆ ಮಾಡಿ ಮಾವಿನ ತೋರಣ,ಬಾಳೆ ಗೊನೆಗಳಿಂದ ಗ್ರಾಮಸ್ಥರು ತಮ್ಮ ಊರುಗಳನ್ನು ಅಲಂಕರಿಸಿಕೊಂಡಿರುವುದು ವಿಶೇಷವಾಗಿದೆ.
ಜಾತಿ ಧರ್ಮ, ಭಾಷೆ ಮತ್ತಿತರ ಗಡಿಗಳ ಮೇಲೆ ಎಲ್ಲೆ ಮೀರಿ ಹಿಂದೂ, ಮುಸ್ಲಿಂ ,ಕ್ರೈಸ್ತ ಕುಟುಂಬಗಳು ತಮ್ಮ ಮನೆಗಳ ಮುಂದೆ ರಂಗೋಲಿ ಹಾಕಿ ನಿಜಾರ್ಥದ ಭಾವೈಕ್ಯತೆ ಮೆರೆಯುತ್ತಿರುವ ದೃಶ್ಯಗಳನ್ನು ವಿದೇಶಿ ಪ್ರವಾಸಿಗರು ಕುತೂಹಲದಿಂದ ವೀಕ್ಷಿಸಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿರುವ ದೃಶ್ಯಗಳು ಆನೆಗೊಂದಿ ಮಾರ್ಗದುದ್ದಕ್ಕೂ ಉತ್ಸವದ ಮೊದಲ ದಿನ ಕಂಡು ಬಂದವು.
ಆನೆಗೊಂದಿ ಉತ್ಸವ ನಮ್ಮ ಭಾಗದ ಸಾಂಸ್ಕೃತಿಕ ಮತ್ತು ಚಾರಿತ್ರಿಕ ಹಿರಿಮೆ ಸಾರುವ ಹೆಮ್ಮೆಯ ಆಚರಣೆಯಾಗಿದೆ, ಉತ್ಸವದ ಯಶಸ್ಸಿಗೆ ಗ್ರಾಮಸ್ಥರೆಲ್ಲರೂ ಕೈಜೋಡಿಸಿದ್ದಾರೆ ಎಂದು ಸಾಣಾಪುರ ಗ್ರಾಮ ಪಂಚಾಯತಿ ಅಧ್ಯಕ್ಷ ನರಸಿಂಹಪ್ಪ ಹೇಳಿದರು.
ಆನೆಗೊಂದಿ ಉತ್ಸವಕ್ಕೆ ರಂಗವಲ್ಲಿಯ ಮೆರಗು
Please follow and like us: