ಹೊರಗಿನಿಂದ ಆಸ್ಪತ್ರೆಗೆ ಬೀಗ ಹಾಕಿ ಒಳಗಿದ್ದ ರೋಗಿ ಕೈಯಲ್ಲಿ ಚಾವಿ ಕೊಟ್ಟು ಹೋದ ವೈದ್ಯ !

ಭಾಗ್ಯನಗರ :  ಸರಕಾರಿ ಆಸ್ಪತ್ರೆಗಳೆಂದರೇ ಮೊದಲೇ ದುರವಸ್ಥೆ ಇದ್ದೇ ಇರುತ್ತೆ. ಅದರಲ್ಲೂ ಗ್ರಾಮೀಣ ಪ್ರದೇಶದ ಆಸ್ಪತ್ರೆಗಳಲ್ಲಿ ವೈದ್ಯರು ಆಡಿದ್ದೇ ಆಟ ಎನ್ನುವದು ಸಾಮಾನ್ಯವಾಗಿ ಬಿಟ್ಟಿದೆ. ಆದರೆ ರೋಗಿಗಳನ್ನು ಆಸ್ಪತ್ರೆಯೊಳಗೆ ಹಾಕಿ ಬೀಗ ಹಾಕಿಕೊಂಡು ಹೋಗಿರುವ ಘಟನೆ   ಭಾಗ್ಯನಗರ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ. ಹೊರಬರದಂತೆ ಒಳಹೋಗದಂತೆ ಹಾಕಿರುವ ದೊಡ್ಡ ಬೀಗ, ಗ್ರೀಲ್ ಹಿಂದೆ ನಿಂತುಕೊಂಡು ಮಾತನಾಡುತ್ತಿರುವ ಅಮಾಯಕ ಹೆಣ್ಣು ಮಗಳು ಇವೆಲ್ಲಾ ದೃಶ್ಯಗಳು ಕಂಡು ಬಂದಿದ್ದು ಕೊಪ್ಪಳದಲ್ಲಿ. ಹೌದು ಕೊಪ್ಪಳ ಜಿಲ್ಲೆಯ ಭಾಗ್ಯನಗರ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಂಡುಬಂದ ದೃಶ್ಯಗಳು ಇವು. ಹೊರಗಿನಿಂದ ಒಳಗೆ ಯಾರೂ ಇಲ್ಲ ಎನ್ನುವಂತೆ ಕಾಣುತ್ತದೆ. ಅಲ್ಲದೇ ಮುಖ್ಯ ದ್ವಾರಕ್ಕೆ ಬೀಗ ಹಾಕಲಾಗಿದೆ. ಬಂದವರು ವಾಪಸ್ ಹೋಗುತ್ತಿದ್ಧಾರೆ. ಆದರೆ ಗಾಯಗೊಂಡು ಬಂದ ವ್ಯಕ್ತಿ ಚಿಕಿತ್ಸೆ ಇಲ್ಲದೇ ಒದ್ದಾಡುತ್ತಿದ್ದರೆ ಕೇಳುವವರೂ ಹೇಳುವವರೂ ಯಾರು ಇಲ್ಲದಂತ ಪರಿಸ್ಥಿತಿ ಈ ಆಸ್ಪತ್ರೆಯದಾಗಿದೆ.

ಜಿಲ್ಲಾ ಕೇಂದ್ರದಿಂದ ಕೇವಲ 1 ಕಿಮಿ ದೂರದಲ್ಲಿರುವ ಭಾಗ್ಯನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಜೈಲಿನಂತೆ  ಆಸ್ಪತ್ರೆಗೆ ಬೀಗ ಹಾಕಿ ರೋಗಿ ಕೈಯಲ್ಲಿ ಚಾವಿ ಕೊಟ್ಟು ಆಸ್ಪತ್ರೆ ಸಿಬ್ಬಂದಿಗಳು ಹೋಗಿದ್ದಾರೆ . ವೈದ್ಯರಿಲ್ಲದೇ ನರ್ಸ್ ಗಳಿಲ್ಲದೇ ರೋಗಿಗಳ ಪರದಾಡುವಂತಾಗಿದೆ.
ಹೆರಿಗೆಗೆಂದು ಬಂದ ರೋಗಿಗಳ ಪರದಾಡುತ್ತಿದ್ದಾರೆ.ಆಸ್ಪತ್ರೆಯನ್ನು ಬಂದ್ ಮಾಡಿಕೊಂಡು ಹೋಗಿರುವುದರಿಂದ ಒಳಗೆ ಕುಳಿತ ರೋಗಿಗಳು ಆತಂಕಕ್ಕೊಳಗಾಗಿದ್ದಾರೆ. ಭಯ ಆತಂಕದಲ್ಲಿ ಒಳಗಡೆಯೇ ಕುಳಿತಕೊಳ್ಳಬೇಕಾದ ಅನಿವಾರ್ಯತೆ ಹೆರಿಗೆಯ ಹೆಣ್ಣುಮಗಳ ಸಂಬಂದಿಕರದಾಗಿದೆ. ಮೀಟಿಂಗ್ ಇದೆ ಎಂದು ನೆಪ ಹೇಳಿ ಆಸ್ಪತ್ರೆಯಿಂದ  ಸಿಬ್ಬಂದಿ ಹೋಗಿದ್ದಾರೆ. ಮಂಜುಳಾ ಗುಡ್ಲಾನೂರ ಎನ್ನುವ ಮಹಿಳೆಗೆ  ನಿನ್ನೆ ರಾತ್ರಿ ಹೆರಿಗೆಯಾಗಿದೆ. ಹೆರಿಗೆ ಆದರೂ ಬೆಳಿಗ್ಗೆಯಿಂದ ರೊಗಿಗಳನ್ನು ನೊಡಲು ವೈದ್ಯರಿಲ್ಲದೇ ಪರದಾಟ.ಸಾಕಷ್ಟು ರೊಗಿಗಳು ಆಸ್ಪತ್ರೆಗೆ ಬಂದು ವೈದ್ಯರಿಲ್ಲದೇ ವಾಪಸ್  ಹೋಗಿದ್ಧಾರೆ.  ಆಸ್ಪತ್ರೆಗೆ ಬೇಟಿ ನೀಡಿದ್ದು ಗೊತ್ತಾದ ತಕ್ಷಣ  ಊರಿನಲ್ಲಿದ್ದ ಇನ್ನೊರ್ವ ನರ್ಸ್ ವಿಜಯಲಕ್ಷ್ಮಿ ‌ಆಸ್ಪತ್ರೆಗೆ ಬಂದಿದ್ದಾರೆ. ಅಲ್ಲದೇ ಬೆಳಿಗ್ಗೆ ತನಕ ಎಲ್ಲರೂ ಇದ್ರೂ ಈಗ ಹೊರಗೆ ಹೋಗಿದ್ಧಾರೆ ಎಂದು ಸಮಜಾಯಿಷಿ ನೀಡಲು ಪ್ರಯತ್ನಿಸಿದರು.

ಆದರೆ ನಂತರ ಸತ್ಯ ಹೇಳಿದ್ದೇನೆಂದರೆ ಬೆಳಿಗ್ಗೆ ಡ್ಯೂಟಿ ಇದ್ದ ಬಸಮ್ಮ ಎನ್ನುವ ನರ್ಸ್ ಖಾಸಗಿ ಕಾರ್ಯಕ್ರಮಕ್ಕೆ ತೆರಳಿದ್ದು ಇಲ್ಲಿದ್ದ ರೋಗಿಗಳಿಗೆ ಮೀಟಿಂಗ್ ಇದೆ ಎಂದು ಹೇಳಿ ಹೋಗಿದ್ಧಾರೆ . ಅಷ್ಟೇ ಆಗಿದ್ದರೆ ಸಾಕಿತ್ತು. ಆದರೆ ಆಸ್ಪತ್ರೆಗೆ ಬೀಗ ಹಾಕಿ ರೋಗಿಗಳ ಕೈಯಲ್ಲಿ ಕೊಟ್ಟು ಹೋಗಿದ್ದಾರೆ. ಇದರಲ್ಲಿ ನನ್ನ ತಪ್ಪೇನೂ ಇಲ್ಲ ಎಂದು ವಿಜಯಲಕ್ಷ್ಮೀ ಹೇಳಿಕೊಂಡರು.  ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ  ಪ್ರತಿಕ್ರೀಯೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಸೂಕ್ತ ಕ್ರಮದ ಭರವಸೆ ನೀಡಿದ್ದಾರೆ.ಸಾರ್ವಜನಿಕರಿಗೆ ಉಪಯೋಗವಾಗಲಿ, ಅವರಿಗೆ ವೈದ್ಯಕೀಯ ಚಿಕಿತ್ಸೆಗಳು ಸರಿಯಾಗಿ ಲಭ್ಯವಾಗಲಿ ಎಂದು ಸರಕಾರ  ಆಸ್ಪತ್ರೆಗಳನ್ನು ಕಟ್ಟಿಸಿದರೆ ಕೊಪ್ಪಳ ಜಿಲ್ಲೆಯಲ್ಲಿ  ಆರೋಗ್ಯ ಇಲಾಖೆಯು ಅಧ್ವಾನಗೊಂಡಿದೆ. ಯಾವುದೇ ಅಧಿಕಾರಿಗಳ ಭಯವಿಲ್ಲದೇ ಬೇಕಾಬಿಟ್ಟಿಯಾಗಿ ನಡೆದುಕೊಳ್ಳುತ್ತಿದ್ಧಾರೆ. ಇವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುವದು ಸಾರ್ವಜನಿಕರ ಒತ್ತಾಯವಾಗಿದೆ.

Please follow and like us:
error

Related posts

Leave a Comment