ಹೆಚ್ವಿನ ಲಾಭಕ್ಕೆ ರೈತರು ಆನ್‌ಲೈನ್ ಮಾರಾಟಕ್ಕೆ ಮುಂದಾಗಿ : ರಾಜಶೇಖರ ಹಿಟ್ನಾಳ 


ಕೊಪ್ಪಳ ಸೆ.  :  ರೈತರು ಬೆಳೆದ ಬೆಳೆಗೆ ಆಕರ್ಷಕ ಬೆಲೆ ನೀಡುವ ನೀಟ್ಟಿನಲ್ಲಿ ಆನ್‌ಲೈನ್ ಮಾರುಕಟ್ಟೆ ವ್ಯವಸ್ಥೆಯು ಜಾರಿಯಾಗಲಿದ್ದು, ಹೆಚ್ವಿನ ಲಾಭಕ್ಕಾಗಿ ರೈತರು ಆನ್‌ಲೈನ್ ಮಾರಾಟಕ್ಕೆ ಮುಂದಾಗಿ ಎಂದು ಕೊಪ್ಪಳ ಜಿಲ್ಲಾ ಪಂಚಾಯತ ಅಧ್ಯಕ್ಷ ರಾಜಶೇಖರ ಹಿಟ್ನಾಳ ಅವರು ಕರೆ ನೀಡಿದರು.
ಕೊಪ್ಪಳ ತೋಟಗಾರಿಕೆ ಇಲಾಖೆ ವತಿಯಿಂದ ಜಿಲ್ಲೆಯ ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟಾ ಗ್ರಾಮದ ನಿರೀಕ್ಷಣಾ ಮಂದಿರದಲ್ಲಿ ಬುಧವಾರದಂದು ಆಯೋಜಿಸಲಾದ “ದ್ರಾಕ್ಷಿ ಬೆಳೆಯ ತಾಂತ್ರಿಕ ಕಾರ್ಯಾಗಾರ” ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿ ಮತ್ತು ತೋಟಗಾರಿಕೆಯಲ್ಲಿ ಹೆಚ್ಚಿನ ಲಾಭವಿಲ್ಲದ ಕಾರಣ ಇಂದಿನ ಯುವಕರು ಕೃಷಿಕಡೆ ಹೆಚ್ಚಿನ ಗಮನ ಹರಿಸುತ್ತಿಲ್ಲ. ದ್ರಾಕ್ಷಿ ಬೆಳೆಗೆ ಸರಕಾರ ಹೆಚ್ಚಿನ ಉತ್ತೇಜನ ನೀಡಿದೆ. ದ್ರಾಕ್ಷಿ ಬೆಳೆಗಾರರು ಸಂಘಟನೆಯನ್ನು ಮಾಡಿಕೊಂಡು ಸರಕಾರದಿಂದ ಬರುವ ಸವಲತ್ತನ್ನು ಪಡೆದುಕೊಳ್ಳಬೇಕು. ಅಲ್ಲದೇ ತೋಟಗಾರಿಕೆ ಬೆಳೆಗಾರರು ಆನ್ ಲೈನ್ ಮಾರಾಟಕ್ಕೆ ಮುಂದಾದರೆ ಹೆಚ್ವಿನ ಲಾಭ ಪಡೆದುಕೊಳ್ಳಬಹುದು. ಸವಲತ್ತಿನ ಜೊತೆಗೆ ಹೊಸ ಹೊಸ ಟೆಕ್ನಾಲಜಿಗಳನ್ನು ಅಳವಡಿಸಿಕೊಂಡು ಉತ್ತಮ ಫಸಲು ಪಡೆಯಲು ಮುಂದಾಗಬೇಕು. ಜೊತೆಗೆ ಆತ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ ಅಧ್ಯಕ್ಷ ರಾಜಶೇಖರ ಹಿಟ್ನಾಳ ಅವರು ಕರೆ ರೈತರಿಗೆ ನೀಡಿದರು.
ಸಂಸದ ಸಂಗಣ್ಣ ಕರಡಿ ಮಾತನಾಡಿ, ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಲೋಕಸಭೆ ಸದಸ್ಯ ಸಂಗಣ್ಣ ಕರಡಿ ಮಾತನಾಡಿ, ರೈತರು ನಿರಂತರವಾಗಿ ನಿಸರ್ಗದ ವಿರುದ್ಧ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ. ನಮ್ಮ ದೇಶದಲ್ಲಿ ರೈತ ಮತ್ತು ಸೈನಿಕ ಇಬ್ಬರ ಬದುಕೂ ಅತಂತ್ರವಾಗಿದೆ. ಕೃಷಿಯಲ್ಲಿ ಸಿಗುವ ನೆಮ್ಮದಿ ಬೇರೆ ಯಾವ ಕೆಲಸದಲ್ಲೂ ಸಿಗಲು ಸಾಧ್ಯವಿಲ್ಲ. ಬದುಕಿನಲ್ಲಿ ನೆಮ್ಮದಿ ಸಿಗಬೇಕಾದರೆ ಕೃಷಿಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ದ್ರಾಕ್ಷಿ ಆರೋಗ್ಯಕ್ಕೆ ಒಳ್ಳೆಯದು, ವೈನ್ ಸೇವನೆಯಿಂದ ಹೃದಯಘಾತ ದಂತಹ ಹಲವಾರು ಕಾಯಿಲೆಗಳನ್ನು ಗುಣಪಡಿಸಬಹುದು. ರೈತರು ಮಣ್ಣು, ನೀರಿನ ಪರೀಕ್ಷೆಯನ್ನು ಮಾಡಿಸಿ, ಸರಿಹೊಂದುವಂತಹ ಬೆಳೆಗಳನ್ನು ಬೆಳೆಯಲು ಮುಂದಾಗಬೇಕು. ಜೊತೆಗೆ ಕೃಷಿಹೊಂಡ, ಚೆಕ್ ಡ್ಯಾಂಗಳನ್ನು ನಿರ್ಮಿಸಿಕೊಂಡು ಮಳೆ ನೀರನ್ನು ಹಿಡಿದಿಟ್ಟುಕೊಳ್ಳಲು ಮುಂದಾಗಬೇಕು. ಆತ್ಮವಿಸ್ವಾಸವನ್ನು ಹೆಚ್ಚಿಸಿಕೊಂಡು, ಆತ್ಮಹತ್ಯೆಯಂತಹ ಕೆಲಸಕ್ಕೆ ಕೈ ಹಾಕಬಾರದು. ಕಾರ್ಯಾಗಾರಗಳು ರೈತರಿಗೆ ಹೊಸ ಚೈತನ್ಯವನ್ನುಂಟು ಮಾಡುತ್ತವೆ. ರೈತರು ಹತಾಶಯರಾಗದೇ ಹೊಸ ಹೊಸ ತಾಂತ್ರಿಕತೆಯನ್ನು ಉಪಯೋಗಿಸಿಕೊಂಡು ಹೊಸ ತಳಿಗಳನ್ನು ಬಳಕೆಮಾಡಿಕೊಂಡು ಉತ್ತಮ ಬೆಳೆ ಬೆಳೆಯಲು ಮುಂದಾಗಬೇಕು ಎಂದರು.
ಕಾರ್ಯಾಗಾರದ ಅಧ್ಯಕ್ಷತೆಯನ್ನು ಸಹಿಸಿದ ಯಲಬುರ್ಗಾ ಶಾಸಕ ಹಾಲಪ್ಪ ಆಚಾರ ಅವರು ಮಾತನಾಡಿ, ರೈತರು ಕೃಷಿಚಟುವಟಿಕೆಯಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಉತ್ತಮ ಇಳುವರಿ ಪಡೆಯಲು ಮುಂದಾಗಬೇಕು. ಒಣ ಬೇಸಾಯದ ಮಸಾರಿ ಭಾಗದಲ್ಲಿ ದ್ರಾಕ್ಷಿಬೆಳೆ ಬೆಳೆಯುವುದು ಅನಿವಾರ್ಯ. ಇಲ್ಲಿನ ವಾತಾವರಣ ದ್ರಾಕ್ಷಿ ಬೆಳೆಗೆ ಹೇಳಿ ಮಾಡಿಸಿದಂತಿದೆ. ಸುಮಾರು ೧೯೮೨-೮೩ ರಲ್ಲಿ ನಮ್ಮ ಜಿಲ್ಲೆಯಲ್ಲಿ ದ್ರಾಕ್ಷಿ ಬೆಳೆಯಲು ಪ್ರಾರಂಭಿಸಲಾಯಿತು. ಇಂದಿನ ರೈತರಿಗೆ ದ್ರಾಕ್ಷಿ ಬೆಳೆಯಲು ಕಷ್ಟವೇನಿಲ್ಲ. ಕಾರಣ ತಂತ್ರಜ್ಞಾನ ಎಲ್ಲರ ಮನೆಯ ಬಾಗಿಲಿಗೆ ಬಂದು ನಿಂತಿರುವುದರಿಂದ ಅದನ್ನು ಉಪಯೋಗಿಸಿಕೊಳ್ಳಬೇಕು ಅಷ್ಟೇ. ರೈತರು ಸರಕಾರದ ಸವಲತ್ತುಗಳನ್ನು ಉಪಯೋಗಿಸಿಕೊಳ್ಳಲು ಮುಂದಾಗಬೇಕು ಎಂದರು.
ಕಾರ್ಯಾಗಾರದಲ್ಲಿ ಜಿ.ಪಂ. ಉಪಾಧ್ಯಕ್ಷೆ ಲಕ್ಷ್ಮಮ್ಮ ಸಿದ್ದಪ್ಪ ನೀರಲೂಟಿ, ಸದಸ್ಯೆ ಹೋಳಿಯಮ್ಮ ಶರಣಗೌಡ ಪೋಲಿಸ್ ಪಾಟೀಲ್, ಯಲಬುರ್ಗಾ ತಾ.ಪಂ. ಅಧ್ಯಕ್ಷೆ ಲಕ್ಷ್ಮಿ ದ್ಯಾಮಪ್ಪ ಗೌಡ್ರ, ಉಪಾಧ್ಯಕ್ಷ ವಿಶ್ವನಾಥ ಮರಿ ಬಸಪ್ಪನವರ, ಹಿರೇವಂಕಲಕುಂಟಾ ಗ್ರಾ.ಪಂ. ಅಧ್ಯಕ್ಷ ಮಂಜುನಾಥ ಸಜ್ಜನ್, ಸ್ಥಾಯಿ ಸಮೀತಿ ಅಧ್ಯಕ್ಷ ರುದ್ರಪ್ಪ ಮರಕಟ್, ಜಿಲ್ಲಾ ಹಾಪ್ ಕಾಮ್ಸ್ ಅಧ್ಯಕ್ಷ ಯಂಕಣ್ಣ ಯರಾಶಿ, ತೋಟಗಾರಿಕೆ ಉಪ ನಿರ್ದೇಶಕ ಕೃಷ್ಣ ಉಕ್ಕುಂದ ಸೇರಿದಂತೆ ಹಲವು ಗಣ್ಯರು ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Please follow and like us:
error