ಹುಲಿಗೆಮ್ಮ ಜಾತ್ರೆ ನಿಮಿತ್ಯ ತುಂಗಭದ್ರ ಜಲಾಶಯದಿಂದ ನದಿಗೆ ನೀರು ಬಿಡಲು ಕ್ರಮ: ಎಂ.ಕನಗವಲ್ಲಿ

DSC_0914ಕೊಪ್ಪಳ ಮೇ.೧೩ ಕೊಪ್ಪಳ ತಾಲೂಕಿನ ಹುಲಿಗಿಯ ಹುಲಿಗೆಮ್ಮ ದೇವಿ ಜಾತ್ರೆಯ ಮಹಾರತೋತ್ಸವ ಮೇ.೩೦ ರಂದು ಜರುಗಲಿದ್ದು ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಬಿಡಲು ಸೂಕ್ತ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಹುಲಿಗೆಮ್ಮ ದೇವಿ ದೇವಸ್ಥಾನದ ಆಡಳಿತಾಧಿಕಾರಿಯೂ ಆದ ಎಂ.ಕನಗವಲ್ಲಿ ಅವರು ಹೇಳಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹುಲಿಗೆಮ್ಮ ದೇವಿ ಜಾತ್ರೆ ಆಚರಣೆ ಸಂಬಂಧ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಧಾರ್ಮಿಕ ದತ್ತಿ ಇಲಾಖೆಯ ಅಧೀನದಲ್ಲಿರುವ ತಾಲೂಕಿನ ಹುಲಿಗೆಮ್ಮ ಜಾತ್ರಾ ಮಹೋತ್ಸವದ ನಿಮಿತ್ಯ ವಿವಿಧ ದಾರ್ಮಿಕ ಕಾರ್ಯಗಳು ಮೇ.೨೨ ರಿಂದ ಆರಂಭಗೊಳ್ಳಲಿದ್ದು ರಾಜ್ಯದ ಹಲವು ಕಡೆಯಿಂದ ಭಕ್ತರು ಆಗಮಿಸುವ ನಿರೀಕ್ಷೆ ಇದ್ದು ಭಕ್ತರು ಧಾರ್ಮಿಕ ಕಾರ್ಯ ಕೈಗೊಳ್ಳಲು ಮೇ ೨೬ ರಿಂದ ಜೂ.೩ ರ ವರೆಗೆ ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಬಿಡಲು ಸೂಕ್ತ ಕ್ರಮ ವಹಿಸಲಾಗುವುದು ಎಂದರು. ದಿನದ ೨೪ ಗಂಟೆ ವಿದ್ಯುತ್ ಪೂರೈಸಬೇಕು ಎಂದು ಜೆಸ್ಕಾಂ ಅಧಿಕಾರಿಗೆ ಸೂಚನೆ ನೀಡಿದರು. ಜೆಸ್ಕಾಂ ಅಧಿಕಾರಿ ಮಾತನಾಡಿ ದೇವಸ್ಥಾನದ ಮುಂಭಾಗದಲ್ಲಿ ರೂ.೫ ಲಕ್ಷ ವೆಚದಲ್ಲಿ ಎರಡು ಟ್ರಾನ್ಸ್‌ಪಾರ್ಮ್‌ಗಳನ್ನು ಅಳವಡಿಸುವ ಕಾರ್ಯನಡೆದಿದ್ದು ಇನ್ನು ಎರಡು ದಿನದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು ವಿವರಣೆ ನೀಡಿದರು. ಈಗಲೇ ಕುಡಿಯುವ ನೀರು ಪೂರೈಕೆಮಾಡಲಾಗುತ್ತಿದ್ದು ಹೆಚ್ಚುವರಿಯಾಗಿ ಜಾತ್ರೆಗೆ ಬಂದ ಭಕ್ತರಿಗೆ ನೀರಿನ ಅಭಾವವಾಗದಂತೆ ನೋಡಿಕೊಳ್ಳಬೇಕು. ಜನರು ಹೆಚ್ಚು ತಂಗುವ ಸ್ಥಳಗಳಲ್ಲಿ ಟ್ಯಾಂಕರ್ ಮೂಲಕ ಶುದ್ಧ ಕುಡಿಯುವ ನೀರು ಪೂರೈಸಬೇಕು. ದೇವಸ್ಥಾನ ಹಾಗೂ ದೇವಸ್ಥಾನದ ಹೊರಭಾಗದಲ್ಲಿ ಆಕರ್ಶಕವಾಗಿ ಕಾಣುವಂತೆ ಅಲಂಕಾರಿಕ ವಿದ್ಯುತ್ ದೀಪ ಅಳವಡಿಸಬೇಕು. ಹೋಟೆಲ್ ಮಿಠಾಯಿ ಮುಂತಾದ ಅಂಗಡಿಗಳಲ್ಲಿ ಸ್ವಚ್ಛತೆಯ ಕುರಿತು ನೋಟಿಸ್ ಜಾರಿಮಾಡಿ ಸ್ವಚ್ಛತೆ ಕಾಪಾಡಬೇಕು. ಜಾತ್ರಾ ವೇಳೆಯಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಮುಜಾಗ್ರತಾ ಕ್ರಮ ಕೈಗೊಳ್ಳುವಂತೆ ಹಾಗೂ ದೇವಸ್ಥಾನದ ಹತ್ತಿರದಲ್ಲಿ ೨೪ ಗಂಟೆ ತೆರೆದಿರುವಂತೆ ಎರಡು ಕಡೆ ಆರೋಗ್ಯ ಚಿಕಿತ್ಸಾ ಕೇಂದ್ರಗಳನ್ನ ತೆರೆಯಬೇಕು ಹಾಗೂ ಅಂಬುಲೆನ್ಸ್ ಸೇವೆ ಒದಗಿಸಬೇಕು. ದೇವಸ್ಥಾನದ ಆವರಣದಲ್ಲಿ ನಿರಂತರ ಸ್ವಚ್ಛತಾ ಕಾರ್ಯ ನಡೆಯುತ್ತಲಿರಬೇಕು ಹಾಗೂ ಬ್ಲಿಚಿಂಗ್ ಪೌಡರ್ ಸಿಂಪಡಿಸಿ ನೊಣ ಹಾಗೂ ಸೊಳ್ಳೆಗಳ ನಿಯಂತ್ರಣ ಮಾಡಬೇಕು. ಸೂಕ್ತ ರೀತಿಯಲ್ಲಿ ಕಸ ವಿಲೇವಾರಿ ಮಾಡಿ ದೇವಸ್ಥಾನದ ಆವರಣವನ್ನ ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು. ನದಿ ನೀರು ಕಲುಶಿತ ಗೊಳ್ಳದಂತೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ದೇವಸ್ಥಾನದ ನದಿ ದಂಡೆಯಲ್ಲಿ ಅಕ್ರಮವಾಗಿ ಹಾಕಿಕೊಂಡಿರುವ ಅಂಗಡಿ ಹಾಗೂ ಶೆಡ್‌ಗಳನ್ನ ಶೀಘ್ರ ತೆರವುಗೊಳಿಸುವಂತೆ ಹಾಗೂ ಅವುಗಳಿಗೆ ನೀಡಲಾಗಿರುವ ವಿದ್ಯುತ್ ಪೂರೈಕೆ ಕಡಿತಗೊಳಿಸಲು ಸಂಬಂದಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಶಿವಪುರ ಹಾಗೂ ದೇವಸ್ಥಾನದ ಹಿಂಭಾಗ ಸೇರಿದಂದೆ ಸುತ್ತಮುತ ಪೊಲೀಸ್ ಇಲಾಖೆಯಿಂದ ೬ ಕಡೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ಪೊಲೀಸ್ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ವಿವರಣೆ ನೀಡಿದರು. ಟ್ರಾಫಿಕ್ ವ್ಯವಸ್ಥೆ ಹಾಗೂ ಸಿಸಿಟಿವಿ ಅಳವಡಿಕೆಗೆ ಸಂಬಂಧಿಸಿದಂತೆ ಎಸ್‌ಪಿ ಅವರೊಂದಿಗೆ ಖುದ್ದು ಸ್ಥಳಪರಿಶೀಲನೆಗೆ ತೆರಳುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು. ಅಪರಾಧ ತಡೆ, ಪ್ರಾಣಿಬಲಿ ನಿಷೇಧ ದಳ ಮಕ್ಕಳ ರಕ್ಷಣೆ ತಂಡಗಳು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕು. ೧ ಸಾವಿರ ಪೊಲೀಸ್ ನಿಯೋಜನೆಗೆ ಮಾಡಿ ಹೆಲ್ಪ್ ಲೈನ್ ತೆರೆಯುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಂಚಾರಕ್ಕೆ ವಿಷೇಶ ೫೦ ಬಸ್‌ಗಳ ವ್ಯವಸ್ಥೆ ಮಾಡಿ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಎಲ್ಲಾ ಮಾರ್ಗಗಳಿಗೆ ಬಸ್‌ಗಳ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು. ತುಂಬಾ ಬಿಸಿಲಿರುವುದರಿಂದ ಅಲ್ಲಲ್ಲಿ ನೆರಳಿನ ವ್ಯವಸ್ಥೆ ಮಾಡಬೇಕು. ದೇವಸ್ಥಾನದ ಸ್ವಾಗತ ಕಮಾನಿನಿಂದ ದೇವಸ್ಥಾನದ ರಸ್ತೆಯಲ್ಲಿ ಅಂಗಡಿ ಹಾಗೂ ಇರತೆ ತಳ್ಳುಬಂಡಿಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡುವಂತೆ ಪಿಡಿಓ ಹಾಗು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು. ಪ್ರಾಣಿ ಬಲಿ ಸಂಪೂರ್ಣ ನಿಷೇಧಿಸಲಾಗಿದ್ದು ಈ ಕುರಿತು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ದೇವಸ್ಥಾನದ ಆವರಣದಲ್ಲಿ ಅಲ್ಲಲ್ಲಿ ಕಸದ ಡಬ್ಬಿ ಇಡಲು ಹಾಗೂ ಪ್ಲಾಸ್ಟಿಕ್ ನಿಷೇಧ ಬಗ್ಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಶ್ರದ್ಧಾ ಭಕ್ತಿಯಿಂದ ಜರುಗುವ ಜಾತ್ರಾ ಮಹೋತ್ಸವಕ್ಕೆ ಏನೆಲ್ಲಾ ಕ್ರಮ ವಹಿಸಬೇಕಾಗಿದೆ ಅಚ್ಚುಕಟ್ಟಾಗಿ ನಿರ್ವಹಿಸುವಂತೆ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು ಜಿ.ಪಂ ಅಧ್ಯಕ್ಷ ಶೇಖರಪ್ಪ ಬಿ. ನಾಗರಳ್ಳಿ, ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಜಿ.ಪಂ ಸದಸ್ಯೆ ಗಾಯತ್ರಿ ವೆಂಕಟೇಶ್, ಗ್ರಾ.ಪಂ ಸದಸ್ಯೆ ರೇಣುಕಾ ರಾಮಣ್ಣ, ಹುಲಿಗಿ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಸಿ.ಎಸ್.ಚಂದ್ರಮೌಳಿ, ಡಿವೈಎಸ್‌ಪಿ ಶ್ರೀಕಾಂತ ಕಟ್ಟಿಮನಿ, ಜಿ.ಪಂ ಮಾಜಿ ಅಧ್ಯಕ್ಷ ಜನಾರ್ಧನ ಹುಲಿಗಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Leave a Reply