ಹುಬ್ಬಳ್ಳಿ ಚೆನ್ನೈ ರೈಲ್ವೇ ವಿಸ್ತರಣೆಗೆ ಸಂಸದ ಕರಡಿ ಸಂಗಣ್ಣ ಮನವಿ

ಕೊಪ್ಪಳ, ಪೆ.೦೬: ಹುಬ್ಬಳ್ಳಿಯಿಂದ ಚೆನ್ನೈವರೆಗೆ ಸಂಚರಿಸುತ್ತಿರುವ ರೈಲ್ವೆಯನ್ನು ಕೊಪ್ಪಳ, ಹೊಸಪೇಟೆ, ಗುಂತಕಲ್, ರೇಣುಗುಂಟ ಮಾರ್ಗವಾಗಿ ಸಂಚರಿಸಲು ಅನುಮೋದಿಸಬೇಕೆಂದು ಒತ್ತಾಯಿಸಿ ಕೊಪ್ಪಳ ಲೋಕಸಭಾ ಸದಸ್ಯ ಕರಡಿ ಸಂಗಣ್ಣ ಅವರು ರೈಲ್ವೇ ಮಂಡಳಿಯ ಅಧ್ಯಕ್ಷರಾದ ವಿ.ಕೆ ಯಾದವ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಕೊಪ್ಪಳ ಜಿಲ್ಲೆಯು ಉಕ್ಕಿನ ನಗರಿಯಾಗಿದ್ದು ಸಾಕಷ್ಟು ಕಾರ್ಖಾನೆಗಳು ಸ್ಥಾಪಿತಗೊಂಡಿದೆ. ಕನಕಗಿರಿ ಮತ್ತು ಗಂಗಾವತಿ ಭಾಗದಲ್ಲಿ ವಾಣಿಜ್ಯೋದ್ಯಮ ಅತಿ ಹೆಚ್ಚಾಗಿ ಬೆಳೆಯುತ್ತಿದ್ದು, ಕೊಪ್ಪಳ ಜಿಲ್ಲಾ ಕೇಂದ್ರವಾಗಿದ್ದು ನಾಗರಿಕರ ಮತ್ತು ವ್ಯಾಪಾರಸ್ಥರ ಅನುಕೂಲಕ್ಕಾಗಿ ಹುಬ್ಬಳ್ಳಿಯಿಂದ ಚೆನ್ನೈ ವರೆಗೆ ಸಂಚರಿಸುತ್ತಿರುವ ರೈಲ್ವೆಯನ್ನು ಕೊಪ್ಪಳ ಜಿಲ್ಲೆಗೆ ವಿಸ್ತರಿಸಿ ಹೊಸಪೇಟೆ, ಗುಂತಕಲ್, ರೇಣುಗುಂಟ ಮಾರ್ಗವಾಗಿ ಸಂಚರಿಸಲು ಅನುಮೋದನೆ ನೀಡಬೇಕೆಂದರು ಹಾಗೂ ಹೊಸಪೇಟೆಯಿಂದ ಬೆಂಗಳೂರಿಗೆ ಸಂಚರಿಸುತ್ತಿರುವ ಪ್ಯಾಸೆಂಜರ್ ರೈಲನ್ನು ಕೊಪ್ಪಳಕ್ಕೆ ವಿಸ್ತರಿಸಿ ಜಿಲ್ಲೆಯ ಜನರ ಭಾವನೆಗಳಿಗೆ ಸ್ಪಂದಿಸಬೇಕು ಎಂದು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ರೈಲ್ವೆ ಬಳಕೆದಾರರ ಮಂಡಳಿಯ ಸದಸ್ಯರಾದ ಬಾಬುಲಾಲ್ ಜೈನ್ ಉಪಸ್ಥಿತರಿದ್ದರು ಎಂದು ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ ಬಿ.ಗಿರೀಶಾನಂದ ಜ್ಞಾನಸುಂದರ ತಿಳಿಸಿದ್ದಾರೆ.

Related posts