ಹಿರಿಯ ರಂಗಕರ್ಮಿ ಐ.ಡಿ.ಬಾಬುರವರಿಗೆ ಸಿಜಿಕೆ ರಂಗಪುರಸ್ಕಾರ

ಬೀದಿ ನಾಟಕ ನಿಜ ಬದುಕನ್ನು ಬಿಂಬಿಸುತ್ತದೆ : ವಿಠ್ಠಪ್ಪ ಗೋರಂಟ್ಲಿ
ಹಿರಿಯ ರಂಗಕರ್ಮಿ ಐ.ಡಿ.ಬಾಬುರವರಿಗೆ ಸಿಜಿಕೆ ರಂಗಪುರಸ್ಕಾರ ಪ್ರದಾನ

ಕೊಪ್ಪಳ: ಬೀದಿನಾಟಕಕ್ಕೆ ಬಹುದೊಡ್ಡ ಇತಿಹಾಸವಿದೆ. ಸಮಾಜದಲ್ಲಿ ನಡೆಯುವ ದೌರ್ಜನ್ಯ, ಭ್ರಷ್ಟಾಚಾರ, ಅತ್ಯಾಚಾರ, ಅನ್ಯಾಯ ಜಾತಿಯತೆ, ಮೂಡನಂಬಿಕೆ ಇನ್ನಿತರ ಸಾಮಾಜಿಕ ಸಮಸ್ಯೆಗಳ ವಿರುದ್ಧ ಹೋರಾಡುವ ಕಲೆ ಬೀದಿರಂಗ ಕಲೆ. ರಂಗಕಲೆ ಜೀವನದ ಮೌಲ್ಯಗಳನ್ನು ಕಲಿಸುವ ಬಯಲು ರಂಗಶಾಲೆ. ಇಲ್ಲಿ ನೈಜಪಾತ್ರಗಳು ಬಹಿರಂಗವಾಗಿ ಸಾಮಾಜಿಕ ನ್ಯೂನೆತೆಗಳನ್ನು ಬಿಂಬಿಸುತ್ತವೆ ಎಂದು ಹಿರಿಯ ಸಾಹಿತಿ ವಿಠಪ್ಪ ಗೋರಂಟ್ಲಿ ಹೇಳಿದರು.
ನಗರದ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ಜೀವಯಾನ ಬಳಗ, ಕವಿ ಸಮೂಹ ಮತ್ತು ಕನ್ನಡ ನೆಟ್‌ಕಾಮ್ ಕೊಪ್ಪಳ, ಬೆಂಗಳೂರು ಆರ್ಟ್ ಪೌಂಡೇಷನ್ ಕರ್ನಾಟಕ ಬೀದಿ ನಾಟಕ ಅಕಾಡೆಮಿ, ಇವರ ಸಹಯೋಗದಲ್ಲಿ ಜರುಗಿದ ಸಿಜಿಕೆ ಬೀದಿರಂಗ ದಿನ ಮತ್ತು ಸಿಜಿಕೆ ರಂಗ ಪುರಸ್ಕಾರ ಕಾರ್ಯಕ್ರಮದ ಉದ್ಘಾಟನೆಯನ್ನು ಪಂಪಭಾರತದ ಸಂಭಾಷಣೆ ಓದುವ ಮೂಲಕ ನೇರವೇರಿಸಿ ಅವರು ಮಾತನಾಡಿದರು.
ಯಾವುದೇ ವರ್ಣಾಲಂಕಾರವಿಲ್ಲದೆ ಜೀವಂತ ಪಾತ್ರಗಳ ಮೂಲಕ ಜಾಗೃತಿ ಮೂಡಿಸುವಂತ ನೈಜಕಲೆ. ಪಶ್ಚಿಮ ಬಂಗಾಳದಲ್ಲಿ ಆರಂಭವಾಗಿ ಕಾರ್ಮಿಕರ ಕಷ್ಟಗಳನ್ನು ಬಿಂಬಿಸಿದ ಕಲೆ ಇಂದು ಬಹುದೊಡ್ಡ ಜವಾಬ್ದಾರಿಯನ್ನೊತ್ತು ಯಾವುದೇ ಧ್ವಂದ್ವ, ಆಶ್ಲೀಲ ಪದಗಳಿಲ್ಲದೆ ಕಳಕಳಿಯಿಂದ ತನ್ನ ಪಾತ್ರವನ್ನು ನಿಭಾಯಿಸುತ್ತಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಿರಿಯ ರಂಗಕರ್ಮಿ ಹಾಲ್ಕುರಿಕಿ ಶಿವಶಂಕರ ಮಾತನಾಡಿ, ಸಿಜಿಕೆ ಎಂದರೆ ರಂಗಭೂಮಿಯ ದೈತ್ಯಪ್ರತಿಭೆ. ಇಂದು ರಾಜಾದ್ಯಂತ ಸಿಜಿಕೆ ಬಿದಿರಂಗದಿನವನ್ನು ಆಚರಿಸಲಾಗುತ್ತದೆ. ದೇಹಕ್ಕೆ ವಿಕಲಾಂಗತೆ ಅಂಟಿಕೊಂಡಿದ್ದರೂ. ರಾಜ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿ ಹಲವಾರು ರಂಗ ಪ್ರತಿಭೆಗಳನ್ನು ಹುಟ್ಟುಹಾಕಿದ ಕೀರ್ತಿ ಸಿಜಿಕೆ ಅವರಿಗೆ ಸಲ್ಲುತ್ತದೆ. ಸಚಿವೆ ಉಮಾಶ್ರೀ ಅವರಂತ ಮಹಾನ್ ಕಲಾವಿದರ ಪ್ರತಿಭೆಗಳನ್ನು ಹೊರತಂದವರು. ಅವರ ಬೀದಿ ನಾಟಕಗಳು ಸಾಮಾಜಿಕ ಪರಿವರ್ತನೆಗೆ ನೀಡಿದ ಅಮೂಲ್ಯ ಪಾತ್ರಗಳಾಗಿವೆ ಎಂದರು.

ಪ್ರಜಾವಾಣಿ ಪತ್ರಿಕೆ ವರದಿಗಾರ ಹಾಗೂ ಸಾಮಾಜಿಕನಾಟಕ ಬರಹಗಾರ ಶರತ ಹೆಗಡೆ ಮಾತನಾಡಿ. ರಂಗಕಲೆ ಎಂಬುದು ಹೈಕ ಭಾಗದಲ್ಲಿ ಇನ್ನು ಪಕ್ವವಾಗಬೇಕಾಗಿದೆ. ಪ್ರತಿಭೆಗಳಿಗೇನು ಇಲ್ಲಿ ಕೊರತೆ ಇಲ್ಲ. ಹಿರಿಯ ರಂಗಕರ್ಮಿಗಳು ಯುವ ಪ್ರತಿಭೆಗಳನ್ನು ಹೊರತರುವ ಪ್ರಯತ್ನಮಾಡಬೇಕಾಗಿದೆ. ಕೇವಲ ಮಲೆನಾಡು.ಬೆಂಗಳೂರು, ಮೈಸೂರು ನಗರಗಳಲ್ಲಿ ರಂಗಕಲೆ ಬೆಳೆಯುತ್ತಿದೆ. ಈಭಾಗದಲ್ಲಿಯೂ ರಂಗ ಕಲೆ ಬೆಳೆಯಲು ಎಲ್ಲರೂ ಕೈಜೋಡಿಸಬೇಕು ಎಂದರು.
ಕಳೆದ ೫-೬ ದಶಕಗಳಿಂದ ನಿರಂತರವಾಗಿ ತಮ್ಮನ್ನು ತಾವು ರಂಗಭೂಮಿಗೆ ಸಮರ್ಪಿಸಿಕೊಂಡಿರುವ ೮೦ ವರ್ಷದ ಹಿರಿಯ ಸಂಗೀತ ನಿರ್ದೇಶಕ ಹಾಗೂ ನಾಟಕಕಾರ ಐ.ಡಿ ಬಾಬು ಅವರಿಗೆ ಸಿಜೆಕೆ ರಂಗ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಐ.ಡಿ.ಬಾಬು ರಂಗಕಲೆಗೆ ಯಾವುದೇ ಶಿಕ್ಷಣ ಬೇಕಾಗಿಲ್ಲ. ಬದ್ಧತೆ ಮತ್ತು ಪ್ರಾಮಾಣಿಕತೆ ಬೇಕು. ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿ ಮಾಡುವ ಬಹುದೊಡ್ಡ ಶಕ್ತಿ ರಂಗಕಲೆಗಿದೆ. ಇದು ಸಾಮಾಜಿಕ ಪರಿವರ್ತನೆಗೆ ಅತ್ಯಂತ ಪ್ರಬಲ ಅಸ್ತ್ರ. ನನ್ನ ಜೀವನದಲ್ಲಿ ೬೦೦ ನಾಟಕಗಳನ್ನು ನಿರ್ದೇಶಿಸಿದ್ದೇನೆ. ನನ್ನ ಪ್ರಾಣ, ಉಸಿರು, ಜೀವನ ಎಲ್ಲವೂ ರಂಗಕಲೆಯೇ ಮತ್ತೇನು ಇಲ್ಲ ಎಂದು ಹೇಳಿದರು.
ಸಾಹಿತಿ ಮಹಾಂತೇಶ ಮಲ್ಲನಗೌಡ ಮಾತನಾಡಿದರು. ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಸೌಭಾಗ್ಯ ಎಂ ಸಾಮಾಜ ಶಾಸ್ತ್ರ ಉಪನ್ಯಾಸಕಿ ಲಲಿತ ಅಂಗಡಿ, ವೀರ ಕನ್ನಡಿಗ ಸಂಘಟನೆ ಅಧ್ಯಕ್ಷ ಶಿವಾನಂದ ಹೊದ್ಲೂರು ಉಪಸ್ಥಿತರಿದ್ದರು.
ಕಾಲೇಜಿನ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ಪತ್ರಕರ್ತ ಸಿರಾಜ ಬಿಸರಳ್ಳಿ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿ ನಿರೂಪಿಸಿದರು, ಸಂಘಟಕರಾದ ರಾಜಾಬಕ್ಷಿ ಎಚ್.ವಿ ವಂದಿಸಿದರು.

 

Please follow and like us:
error

Related posts

Leave a Comment