fbpx

ಹಣಕ್ಕಿಂತ ಗುಣ ಮುಖ್ಯವಾದಾಗ ಸಂಸ್ಕೃತಿ ಉಳಿಯುತ್ತದೆ-ಗವಿಶ್ರೀ

kajapa_koppal
ಕೊಪ್ಪಳ, ಎ. ೦೩. ನಮ್ಮ ನಡುವೆ ಇಂದು ಹಣದ ಹಪಾಹಪಿ ಹೆಚ್ಚಾಗಿದ್ದು, ಹಣದ ದುರಾಸೆಯಲ್ಲಿ ಎಲ್ಲವನ್ನೂ ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದೇವೆ, ಹಣಕ್ಕಿಂತ ಗುಣ ಮುಖ್ಯವಾದಾಗ ಮಾತ್ರ ಸಂಸ್ಕೃತಿ ಉಳಿಯುತ್ತದೆ ಎಂದು ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಹೇಳಿದರು.
ಅವರು ತಾಲೂಕಿನ ಹಳೇ ಬಂಡಿಹರ್ಲಾಪೂರದ ಮಹಾತ್ಮಗಾಂಧೀ ವೃತ್ತದಲ್ಲಿ ಕನ್ನಡ ಜಾನಪದ ಪರಿಷತ್ತು ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಹಿಟ್ನಾಳ ಹೋಬಳಿ ಘಟಕ ಉದ್ಘಾಟನೆ ಮತು ಜಾನಪದೋತ್ಸವ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು.
ಸಾಹಿತ್ಯ ಮತ್ತು ಸಂಗೀತದಲ್ಲಿ ಹಣವಿರುವ ನೀರಾವರಿ ಭಾಗದಲ್ಲಿ ಆಸಕ್ತಿ ಕಡಿಮೆ ಇರುವದು ಕಂಡು ಬರುತ್ತದೆ, ಕಜಾಪ ಇಲ್ಲಿ ಅದನ್ನು ಬಿತ್ತುವ ಕಾರ್ಯ ಮಾಡುತ್ತಿರುವದು ಶ್ಲಾಘನೀಯವಾದುದು, ಜನರು ಬದುಕಲ್ಲಿ ಶಿಸ್ತು ಮತ್ತು ಸಂಯಮಗಳನ್ನು ರೂಢಿಸಿಕೊಳ್ಳಬೇಕು, ಶಿಕ್ಷಣವಂತರಾಗಬೇಕು, ಸ್ವಚ್ಛವಾದ ಸುಂದರ ಬದುಕು ನಡೆಸಬೇಕು, ಮನುಷ್ಯ ಅಂತಿಮವಾಗಿ ಏನನ್ನೂ ತೆಗೆದುಕೊಂಡು ಹೋಗುವದಿಲ್ಲ, ಆದರೆ ಉಳಿಸಿ ಹೋಗುವದಿದ್ದರೆ ಅದು ತನ್ನ ಒಳ್ಳೆಯತನ ಮಾತ್ರ. ಸತ್ತಾಗ ನಾಲ್ಕು ಜನ ಖುಷಿಯಿಂದ ಹೆಗಲು ಕೊಡುವಂಥ ಕೆಲಸ ಮಾಡಿ ಹೋಗಬೇಕು, ಹಣಗಳಿಸಿಟ್ಟು ದುಷ್ಠ ಮಕ್ಕಳನ್ನು ಹೆತ್ತರೆ ಪ್ರಯೋಜನವಿಲ್ಲ ಅದೇ ಮಕ್ಕಳನ್ನೇ ಸುಂದರವಾದ ಮೂರ್ತಿಯಾಗಿ ಮಾಡಿದರೆ ಬದುಕು ಕಟ್ಟಿಕೊಳ್ಳುತ್ತಾರೆ ಎಂದರು.
ಕಜಾಪ ರಾಜ್ಯ ಕಾರ್ಯಾಧ್ಯಕ್ಷ ಡಾ|| ಎಸ್. ಬಾಲಾಜಿ ಮಾತನಾಡಿ, ಕನ್ನಡ ಉಳಿಯಲು ಅನೇಕರು ಅನೇಕ ರೀತಿಯ ಕೆಲಸ ಮಾಡುತ್ತಿದ್ದಾರೆ, ಜನಪದದ ವಿವಿಧ ಪ್ರಕಾರಗಳನ್ನು ಇಂದಿನ ಯುವ ಪೀಳಿಗೆ ಸರಿಯಾಗಿ ಕಲಿತು ಮುನ್ನಲೆಗೆ ತಂದರೆ ಕನ್ನಡ ತಾನಾಗಿಯೇ ಉಳಿಯುತ್ತದೆ, ಜನಪದವೆಂದರೆ ಅದು ನಮ್ಮ ಸೊಗಸಾದ ಬದುಕು, ಅಂಥಹ ಬದುಕನ್ನು ರಕ್ಷಿಸಬೇಕು ಎಂದು ಕರೆ ನೀಡಿದರು.
ಯುವ ಮುಖಂಡ ಕೆ.ಎಂ. ಸೈಯ್ಯದ್ ಮಾತನಾಡಿ, ಜಾನಪದ ಪರಿಷತ್ತು ಮಾಡುತ್ತಿರುವ ಕಾರ್ಯಕ್ಕೆ ಸದಾ ಜೊತೆಯಾಗಿರುತ್ತೇನೆ, ಅಕ್ಷರ ಜ್ಞಾನವಿಲ್ಲದಿದ್ದರೂ ಜನಪದರಿಗೆ ಲೋಕಜ್ಞಾನವಿತ್ತು ಆದರೆ ನಾವು ಅದನ್ನು ಮರೆತು ಹಾಳಾಗುತ್ತಿದ್ದೇವೆ ಎಂದು ವಿಷಾಧಿಸಿದು. ಕಜಾಪ ಜಿಲ್ಲಾ ಅಧ್ಯಕ್ಷ ಮಂಜನಾಥ ಜಿ. ಗೊಂಡಬಾಳ ಅಧ್ಯಕ್ಷತೆವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ಜನಪದರ ರಕ್ಷಣೆಗೆ ಕಜಾಪ ಅವಿರತವಾಘಿ ಶ್ರಮಿಸುತ್ತದೆ, ಎಲ್ಲಾ ತಾಲೂಕ ನಗರ, ಹೋಬಳಿ ಮತ್ತು ಗ್ರಾಮ ಘಟಕಗಳನ್ನು ಮಾಡುವ ಮೂಲಕ ಜನಪದ ಸಂಸ್ಕೃತಿಯನ್ನು ಬೆಳೆಸುವ ಕಾರ್ಯಮಾಡುತ್ತಿದೆ ಎಂದರು.
ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ನಗರಗಡ್ಡಿಮಠದ ಶ್ರೀ ಶಾಂತಲಿಂಗೇರ್ಶವರ ಸ್ವಾಮೀಜಿ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಪ್ರದೀಪಗೌಡ ಮಾಲಿಪಾಟೀಲ್, ಜಿಲ್ಲಾ ವಕ್ತಾರ ಮೌನೇಶ ವಡ್ಡಟ್ಟಿ, ಜಿಲ್ಲಾ ಜೆಡಿಎಸ್ ಮುಖಂಡ ವಿರೇಶ ಮಹಾಂತಯ್ಯನಮಠ, ಗ್ರಾಮ ಪಂಚಾಯತ ಅಧ್ಯಕ್ಷೆ ರೇಣುಕಮ್ಮ ಕಟಗಿ, ವಾಣಿಜ್ಯೋಧ್ಯಮಿ ಐಎಲ್‌ಸಿ ಚಂದ್ರಶೇಖರ್, ಮಾಜಿ ತಾಲೂಕ ಪಂಚಾಯತ ಅಧ್ಯಕ್ಷ ದೇವಪ್ಪ ಮೇಕಾಳಿ, ಸದಸ್ಯ ಅಬ್ಬುಲಿಗೆಪ್ಪ, ಎಪಿಎಂಸಿ ಸದಸ್ಯ ವಿಶ್ವನಾಥರಾಜು, ಕೆ. ವೆಂಕಟಯ್ಯ, ಕಾಶಯ್ಯಸ್ವಾಮಿ ಗವಿಮಠ, ವೆಂಕಟೇಶ ಟಿಡಿಬಿ, ಮೆಹಬೂಬಸಾಬ ಗೊರೆಬಾಳ, ಹನುಮಂತ ಕರಡಿ, ಸಿದ್ದಿಭಾಷಾ ಗೋರೆಬಾಳ ಅನೇಕರು ಇದ್ದರು.
ನಟ, ನಿರ್ದೇಶಕ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಸಂಗಮೇಶ ಉಪಾಸೆ, ಹಿರಿಯ ಸುಗಮ ಸಂಗೀತ ಕಲಾವಿದ ಸದಾಶಿವ ಪಾಟೀಲ ಮತ್ತು ಸಂಗಡಿಗರು, ಕೊಪ್ಪಳದ ರಿಧಂ ಡ್ಯಾನ್ಸ್ ಅಕಾಡೆಮಿಯ ಬಸವರಾಜ ಮಾಲಗಿತ್ತಿ ತಂಡ, ಗೀಗೀಪದ ಕಲಾವಿದೆ ಸುಮಿತ್ರಾಬಾಯಿ ಅಗಳಕೇರಾ, ಕಲಾವಿದ, ಶಿಕ್ಷಕ ಜೀವನಸಾಬ ಬಿನ್ನಾಳ, ಮಂಜುನಾಥ ಆಗೋಲಿ, ಹಾಸ್ಯ ಕಲಾವಿದ ವೈಶಂಪಾಯನ, ಹನುಮಂತ ಎಸ್. ಇತರರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿ ನೆರೆದಿದ್ದ ಸಹಸ್ರಾರು ಜನರನ್ನು ರಂಜಿಸಿದರು.
ಸದಾಶಿವ ಪಾಟೀಲ ಸಂಗಡಿಗರು ಪ್ರಾರ್ಥಿಸಿದರು, ಹೋಬಳಿ ಅಧ್ಯಕ್ಷ ಧರ್ಮಣ್ಣ ಹಟ್ಟಿ ಸ್ವಾಗತಿಸಿದರು, ಸಂಚಾಲಕ ಮಂಜುನಾಥ ಮುಂಡರಗಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಜಿಲ್ಲಾ ಕಾರ್ಯದರ್ಶಿ ಉಮೇಶ ಸುರ್ವೆ ನಿರೂಪಿಸಿದರು, ನಾಗರತ್ನ ಹುಲಗಿ ವಂದಿಸಿದರು.

Please follow and like us:
error

Leave a Reply

error: Content is protected !!