ಸ್ಪರ್ಧೆ ನಡೆದಾಗ ಮಾತ್ರ ಪ್ರತಿಭೆಗಳು ಹೊರ ಹೊಮ್ಮಲು ಸಾಧ್ಯ : ಕೆ. ರಾಘವೇಂದ್ರ ಹಿಟ್ನಾಳ

ಕೊಪ್ಪಳ ನ.: ಪ್ರತಿಯೊಬ್ಬರಲ್ಲಿಯೂ ಒಂದೊಂದು ಪ್ರತಿಭೆ ಅಡಗಿರುತ್ತದೆ, ಸ್ಪರ್ಧೆಗಳು ನಡೆದಾಗ ಮಾತ್ರ ಮಕ್ಕಳಲ್ಲಿನ ಪ್ರತಿಭೆಗಳು ಹೊರ ಹೊಮ್ಮಲು ಸಾಧ್ಯವಾಗುತ್ತದೆ ಎಂದು ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಹೇಳಿದರು. ಜಿಲ್ಲಾ ಪಂಚಾಯತ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಕೊಪ್ಪಳ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ಬಹದ್ದೂರಬಂಡಿ ರಸ್ತೆಯ ಸರಸ್ವತಿ ವಿದ್ಯಾಮಂದಿರ ಶಾಲೆ ಆವರಣದಲ್ಲಿ ಶುಕ್ರವಾರದಂದು ಆಯೋಜಿಸಲಾದ “ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸ್ಪರ್ಧೆ” ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳಲ್ಲಿ ಅಡಗಿದ ಪ್ರತಿಭೆಗಳನ್ನು ಗುರುತಿಸಲು ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಪರ್ಧೆಗಳಂತಹ ಕಾರ್ಯಕ್ರಮಗಳು ಅತ್ಯವಶ್ಯಕವಾಗಿದ್ದು, ಇಂತಹ ಕಾರ್ಯಕ್ರಮಗಳು ಹೆಚ್ಚ-ಹೆಚ್ಚಾಗಿ ನಡೆಯಬೇಕು. ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸ್ಪರ್ಧೆ ಇತ್ಯಾದಿ ಕಾರ್ಯ ಚಟುವಟಿಕೆಗಳಿಂದ ಆತ್ಮಸ್ಥೈರ್ಯ ತುಂಬುವುದಲ್ಲದೇ ಉತ್ತಮವಾದ ಜ್ಞಾನದ ಜೊತೆಯಲ್ಲಿ ಆರೋಗ್ಯವು ಸಹ ಸದೃಡವಾಗುತ್ತದೆ. ಮಕ್ಕಳು ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. “ಸಾಧನೆ ಎಂಬುವುದು ಇದ್ದರೆ ವಿಶ್ವವನ್ನೇ ಗೆಲ್ಲಬಹುದು” ಎಂದು ಡಾ. ಸರ್ವಪ್ಪಲ್ಲಿ ರಾಧಾಕೃಷ್ಣನ್ ಅವರು ಹೇಳುತ್ತಾರೆ. ಇಂದಿನ ಮಕ್ಕಳೆ ಈ ನಾಡಿನ ಭವ್ಯ ಪ್ರಜೆಗಳಾಗಿದ್ದು, ಮಕ್ಕಳು ಶಿಕ್ಷಣದ ಜೊತೆಗೆ ಕ್ರಿಡೆ, ಕಲೆ ಮತ್ತು ಸಾಂಸ್ಕøತಿ ಕಾರ್ಯಕ್ರಮ ಹಾಗೂ ಸ್ಪರ್ಧೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೈಹಿಕ ಹಾಗೂ ಮಾನಸಿಕವಾಗಿ ಸದೃಡರಾಗಿ ರಾಷ್ಟ್ರದ ಉತ್ತಮ ಪ್ರಜೆಗಳಾಗಿ. ಶಿಕ್ಷಕರು ರಾಷ್ಟ್ರದ ನಿರ್ಮಾತೃಗಳು ಎಂದರೆ ತಪ್ಪಲ್ಲ ಏಕೆಂದರೆ, ಮಕ್ಕಳ ಭವಿಷ್ಯವನ್ನು ರೂಪಿಸುವುದು ಅವರ ಕೈಯಲ್ಲಿರುತ್ತದೆ. ಆದ್ದರಿಂದ ಇಂತಹ ಅನೆಕ ಕಾರ್ಯಕ್ರಮಗಳನ್ನು ಶಿಕ್ಷಣ ಇಲಾಖೆಯು ಆಯೋಜಿಸಬೇಕು. ಕಾರ್ಯಕ್ರಮಗಳ ಸದುಪಯೋಗವನ್ನು ಪಡೆದುಕೊಂಡು ಮಕ್ಕಳು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ತಮ್ಮನ್ನು ತಾವು ಮತ್ತು ನಮ್ಮ ಜಿಲ್ಲೆಯನ್ನು ಗುರುತಿಸಿಕೊಳ್ಳಬೇಕು ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಹೇಳಿದರು. ಕೊಪ್ಪಳ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಉಮಾದೇವಿ ಸೊನ್ನದ ಅವರು ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವು ಸಹ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಪರ್ಧೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಇಂದು ಪ್ರಾಥಮಿಕ, ನಾಳೆ ಪ್ರಾಢ ವಿದ್ಯಾರ್ಥಿಗಳಿಗೆ ಸ್ಪರ್ಧೆಗಳು ನಡೆಯಲಿವೆ. ಸ್ಪರ್ಧೆಗಳಲ್ಲಿ ಕಂಠಪಾಠ, ಧಾರ್ಮಿಕ ಪಠನ, ಲಘು ಸಂಗೀತ, ಚದ್ಮವೇಷ, ಕ್ಲೇಮಾಡೆಲಿಂಗ್, ಆಶುಭಾಷಣ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಜಾನಪದ ನೃತ್ಯ, ದೇಶ ಭಕ್ತಿ ಗೀತೆ, ಕವಾಲಿ ಹಾಗೂ ಕ್ವೀಜ್ ಕಾಂಪಿಟೇಶನ್ ಸೇರಿದಂತೆ 20 ರಿಂದ 25 ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ವಿದ್ಯಾರ್ಥಿಗಳಲ್ಲಿ ಅಡಗಿದ ಪ್ರತಿಭೆಗಳನ್ನು ಗುರುತಿಸಲು ಈ ಕಾರ್ಯಕ್ರಮ ಒಂದು ಸುವರ್ಣ ಅವಕಾಶವಾಗಿದೆ. ಈಗಾಗಲೆ ತಾಲೂಕ ಮಟ್ಟದ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ಇದರಲ್ಲಿ ವಿಜೇತರಾದವರು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಲಿದ್ದಾರೆ. ನಿರ್ಣಾಯಕರು ನಿಷ್ಪಕ್ಷಪಾತವಾಗಿ ನಿರ್ಣಯವನ್ನು ನೀಡಬೇಕು. ಸೋಲು-ಗೆಲುವು ಮುಖ್ಯವಲ್ಲ, ಸ್ಪರ್ಧೆಗಳಲ್ಲಿ ಭಾಗಿಯಾಗುವುದು ಮುಖ್ಯವಾಗಿದ್ದು, ನಿರಂತರ ಪ್ರಯತ್ನ ಹಾಗೂ ಗೆಲ್ಲುವ ಚಲ ಹೊಂದಿದ್ದರೆ ಸಾಕು ಯಶಸ್ಸು ಕಂಡಿತವಾಗಿಯೂ ಸಿಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಸಮಾರಂಭದಲ್ಲಿ ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಚಂಡೂರ ಹನುಮಂತಗೌಡ ಪಾಟೀಲ, ತಾ.ಪಂ. ಅಧ್ಯಕ್ಷ ಬಾಲಚಂದ್ರನ್, ಎ.ಪಿ.ಎಂ.ಸಿ ಅಧ್ಯಕ್ಷ ಶಂಕರಗೌಡ ವೆಂಕನಗೌಡರ, ಮುನಿರಾಬಾದ್ ಡಯಟ್ ಉಪನಿರ್ದೇಶಕ ಬಸವರಾಜಸ್ವಾಮಿ ಎಂ., ಸರ್ಕಾರಿ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಬೀರಪ್ಪ ಅಂಡಗಿ, ಕ.ರಾ.ಸ.ನೌ. ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಶಿವಪ್ಪ ಜೋಗಿ, ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ಗೌಡರ್, ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಬಾಗೇವಾಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Please follow and like us:
error