ಸ್ಥಳಾಂತರವಾದ ಮತದಾರರ ಹೆಸರು ತನಿಖೆ ಮಾಡಿ ನಿಯಮಾನುಸಾರ ತೆಗೆದುಹಾಕಿ : ಗೌರವ ಗುಪ್ತಾ

ಕೊಪ್ಪಳ ನ. : ಸ್ಥಳಾಂತರಗೊಂಡ ಎಲ್ಲಾ ಮತದಾರರ ಸ್ಥಳ ತನಿಖೆ ಮಾಡಿ, ಅಂತಹ ಹೆಸರುಗಳನ್ನು ನಿಯಮಾನುಸಾರ ತೆಗೆದು ಹಾಕಿ ಎಂದು ಕೊಪ್ಪಳ ಜಿಲ್ಲೆಯ ಮತದಾರರ ಪಟ್ಟಿ ವೀಕ್ಷಕರು ಆಗಿರುವ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ಗೌರವ ಗುಪ್ತಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮತದಾರರ ಪಟ್ಟಿ ಪರಿಷ್ಕರಣೆ-2019 ಕುರಿತು ಸಹಾಯಕ ಆಯುಕ್ತರು ಹಾಗೂ ಮತದಾರರ ನೊಂದಣಾಧಿಕಾರಿಗಳು, ತಹಶೀಲ್ದಾರರು ಹಾಗೂ ಸಹಾಯಕ ಮತದಾರರ ನೊಂದಣಾಧಿಕಾರಿಗಳೊಂದಿಗೆ ಮತ್ತು ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿ ಸಂಭಾಂಗಣದಲ್ಲಿ ಸೋಮವಾರದಂದು ಏರ್ಪಡಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯಕ್ಕೆ ಅನುಕೂಲವಾಗುವಂತೆ ಎಲ್ಲಾ ಮತಗಟ್ಟೆಗಳಿಗೆ ರಾಜಕೀಯ ಪಕ್ಷಗಳು ಬೂತ್ ಲೆವೆಲ್ ಏಜೆಂಟ್‍ಗಳನ್ನು ನೇಮಿಸಬೇಕು. ಈಗಾಗಲೇ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿ ಎಲ್ಲಾ ರಾಜಕೀಯ ಪಕ್ಷಗಳಿಗೆ ನೀಡಲಾಗಿದ್ದು, ಈ ಮತದಾರರ ಪಟ್ಟಿಯನ್ನು ಪರಿಶೀಲಿಸಿ ಮತದಾರರ ಪಟ್ಟಿಯಿಂದ ಯಾವುದೇ ಅರ್ಹ ಮತದಾರರು ಹೊರಗುಳಿಯದಂತೆ ಸೇರ್ಪಡೆ ಕಾರ್ಯದಲ್ಲಿ ಸಹಕರಿಸಬೇಕು. ಯಾವುದಾದರೂ ಅನಧಿಕೃತ ಮತದಾರರು, ಡಬಲ್ ಮತದಾರರು ಮತದಾರರ ಪಟ್ಟಿಯಲ್ಲಿ ಕಂಡು ಬಂದಲ್ಲಿ ಪರಿಶೀಲಿಸಿ, ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುವಂತೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಕ್ರಮ ವಹಿಸಬೇಕು. ನ. 23 ರಿಂದ 25 ರವರೆಗೆ ವಿಶೇಷ ನೋಂದಣಿ ಅಭಿಯಾನವನ್ನು ಏರ್ಪಡಿಸಲಾಗಿದ್ದು, ಈ ಅಭಿಯಾನದ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಅರ್ಹ ಮತದಾರರ ನೊಂದಣಿಯಾಗಲು ಸಹಕರಿಸಬೇಕು. ವಿವಾಹದ ನಂತರ ಖಾಯಂ ಸ್ಥಳಾಂತರಗೊಂಡ ಮಹಿಳಾ ಮತದಾರರನ್ನು ಹಾಗೂ ಇತರೆ ಕಾರಣಗಳಿಂದ ಖಾಯಂ ಸ್ಥಳಾಂತರಗೊಂಡ ಎಲ್ಲಾ ಮತದಾರರನ್ನು ಸ್ಥಳ ತನಿಖೆ ಮಾಡಿ ಮತದಾರರ ನೊಂದಣಿ ನಿಯಮಗಳನ್ವಯ ನಿಯಮಾನುಸಾರ ತೆಗೆದುಹಾಕಲು ಕ್ರಮ ಕೈಗೊಳ್ಳಬೇಕು. ಸ್ವೀಕೃತವಾದ ಎಲ್ಲಾ ಅರ್ಜಿಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಿ ಅಲ್ಲದೇ ಜಾಗರೂಕತೆಯಿಂದ ಕಾರ್ಯನಿರ್ವಹಿಸಿ ಎಂದು ಕೊಪ್ಪಳ ಜಿಲ್ಲೆಯ ಮತದಾರರ ಪಟ್ಟಿ ವೀಕ್ಷಕರು ಆಗಿರುವ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ಗೌರವ ಗುಪ್ತಾ ಅವರು ಜಿಲ್ಲೆಯ ಎಲ್ಲಾ ತಹಶೀಲ್ದಾರರಿಗೆ ಹಾಗೂ ಇತರೆ ಸಿಬ್ಬಂದಿಗಳಿಗೆ ಸೂಚನೆ ನೀಡಿದರು.
ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಮಾತನಾಡಿ, ಯೋಜಿತ-2019ರ ಅನ್ವಯ ಕೊಪ್ಪಳ ಜಿಲ್ಲೆಯು 794760 ಗಂಡು, 785891 ಹೆಣ್ಣು ಸೇರಿದಂತೆ ಒಟ್ಟು 1580651 ಜನಸಂಖ್ಯೆಯನ್ನು ಹೊಂದಿದೆ. ಡ್ರಾಫ್ಟ್ ರೋಲ್ಸ್ ಪ್ರಕಾರ ಚುನಾವಣೆ ಡಬ್ಲ್ಯೂ.ಆರ್.ಟಿ. 01-01-2019 ಅರ್ಹತಾ ದಿನಾಂಕದಂತೆ 536712 ಗಂಡು, 536049 ಹೆಣ್ಣು ಮತ್ತು 43 ಇತರರು ಸೇರಿ ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು ಶೇ.67.87 ರಷ್ಟು ಮತದಾರರಿದ್ದಾರೆ ಎಂದು ತಿಳಿಸಿದರು.
ಸಭೆಯಲ್ಲಿ ಸಹಾಯಕ ಆಯುಕ್ತರಾದ ಸಿ.ಡಿ. ಗೀತಾ, ಕೊಪ್ಪಳ ತಹಶೀಲ್ದಾರ ಜೆ.ಬಿ. ಮಜ್ಗಿ, ಗಂಗಾವತಿ ತಹಶೀಲ್ದಾರ ವಿರೇಶ ಬಿರಾದರ, ಕನಕಗಿರಿ ತಹಶೀಲ್ದಾರ ರವಿ ಅಂಗಡಿ, ಕಾರಟಗಿ ತಹಶೀಲ್ದಾರ ಕಿರಣ ಕುಮಾರ್, ಕುಷ್ಟಗಿ ತಹಶೀಲ್ದಾರ ಗುರುಬಸವರಾಜ, ಯಲಬುರ್ಗಾ ತಹಶೀಲ್ದಾರ ರಮೇಶ ಅಳವಂಡಿಕರ, ಕುಕನೂರ ತಹಶೀಲ್ದಾರ ರವಿರಾಜ ದೀಕ್ಷಿತ್, ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ರಾಜು ಬಾಕಳೆ, ಅಕ್ಬರ್ ಪಾಶಾ, ಮೌನೇಶ ವಡ್ಡಟ್ಟಿ ಹಾಗೂ ಶಂಕರ ಸಿಂಗ್ರಿ ಸೇರಿದಂತೆ ಸಹಾಯಕ ಮತ್ತು ಮತದಾರರ ನೊಂದಣಾಧಿಕಾರಿಗಳು ಉಪಸ್ಥಿತರಿದ್ದರು.

Please follow and like us:
error