ಸುಧಾರಿತ ತಂತ್ರಜ್ಞಾನದಿಂದ ಗುಣಮಟ್ಟದ ಹಣ್ಣುಗಳನ್ನು ಪಡೆಯಲು ಸಾಧ್ಯ- ಯಂಕಣ್ಣ ಯರಾಶಿ

ತೋಟಗಾರಿಕೆಯಲ್ಲಿ ಸುಧಾರಿತ, ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಲ್ಲಿ, ರಫ್ತು ಮಾಡಲರ್ಹ ಗುಣಮಟ್ಟದ ಹಣ್ಣುಗಳನ್ನು ಬೆಳೆದು, ಹೆಚ್ಚಿನ ಲಾಭ ಪಡೆಯಲು ಸಾಧ್ಯ ಎಂದು ಕೊಪ್ಪಳ ಜಿಲ್ಲಾ ಹಾಪ್‌ಕಾಮ್ಸ್ ಅಧ್ಯಕ್ಷ ಯಂಕಣ್ಣ ಯರಾಶಿ ಅವರು ಹೇಳಿದರು.
ತೋಟಗಾರಿಕೆ ಇಲಾಖೆ ಹಾಗೂ ಹಾಪ್‌ಕಾಮ್ಸ್ ಸಹಯೋಗದಲ್ಲಿ ದ್ರಾಕ್ಷಿ ಹಾಗೂ ದಾಳಿಂಬೆ ಮೇಳದ ಅಂಗವಾಗಿ ಕೊಪ್ಪಳದ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ದ್ರಾಕ್ಷಿ ಹಾಗೂ ದಾಳಿಂಬೆ ಬೆಳೆಗಾರರಿಗೆ ಮಂಗಳವಾರದಂದು ಆಯೋಜಿಸಿದ್ದ ಮಾಹಿತಿ ಕಾರ್ಯಗಾರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಕೊಪ್ಪಳ ಜಿಲ್ಲೆ ತೋಟಗಾರಿಕೆ ಬೆಳೆಗಳಾದ ದ್ರಾಕ್ಷಿ, ದಾಳಿಂಬೆ, ಬಾಳೆ, ಪಪ್ಪಾಯ, ಕಲ್ಲಂಗಡಿ ಹೀಗೆ ಎಲ್ಲ ಬಗೆಯ ಹಣ್ಣುಗಳನ್ನು ಉತ್ತಮವಾಗಿ ಬೆಳೆಯಲು ಪೂರಕ ವಾತಾವರಣವಿರುವ ಜಿಲ್ಲೆಗಳಲ್ಲೊಂದಾಗಿದೆ. ಇಲ್ಲಿನ ರೈತರು ಕಷ್ಟಪಟ್ಟು ಹಣ್ಣು ಬೆಳೆಗಳನ್ನು ಬೆಳೆಯುತ್ತಾರೆ. ಆದರೆ ಗುಣಮಟ್ಟದ ಹಣ್ಣುಗಳನ್ನು ಬೆಳೆಯುವುದರತ್ತ ಗಮನ ನೀಡುತ್ತಿಲ್ಲ. ಇದರ ಜೊತೆಗೆ ಮಾರುಕಟ್ಟೆ ವ್ಯವಸ್ಥೆಯ ಬಗ್ಗೆ ಅರಿವು ಹೊಂದಿಲ್ಲ, ಇದರಿಂದ ಬೆಳೆಗೆ ತಕ್ಕ ಬೆಲೆ ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಬೆಳೆಗಾರರು ಆರ್ಥಿಕವಾಗಿ ಹಿಂದುಳಿಯುತ್ತಿದ್ದಾರೆ. ತೋಟಗಾರಿಕೆಯಲ್ಲಿನ ಆಧುನಿಕ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ಪಡೆಯಲು ರೈತರು, ಈ ಹಿಂದೆ ಬಿಜಾಪುರ, ಬಾಗಲಕೋಟೆ ಜಿಲ್ಲೆಗೆ ಹೋಗಬೇಕಿತ್ತು. ಆದರೆ ಇದೀಗ, ಕೊಪ್ಪಳ ಜಿಲ್ಲೆಯಲ್ಲಿ ಸುಧಾರಿತ ತಂತ್ರಜ್ಞಾನಗಳನ್ನು ರೈತರೊಂದಿಗೆ ಹಂಚಿಕೊಳ್ಳಲು ಅನೇಕ ಕಾರ್ಯಗಾರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ರೈತರು ಇಂತಹ ಮಾಹಿತಿ ಕಾರ್ಯಗಾರದಲ್ಲಿ ಪಾಲ್ಗೊಂಡು, ವಿಚಾರಗಳನ್ನು ತಿಳಿದುಕೊಳ್ಳಬೇಕು. ಕೊಪ್ಪಳ ಜಿಲ್ಲೆಯಲ್ಲಿ ತರಕಾರಿ ಹಾಗೂ ತೋಟಗಾರಿಕೆ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆಯ ಕೊರತೆ ತೀವ್ರವಾಗಿದ್ದು, ಜಿಲ್ಲಾ ಮಟ್ಟದಲ್ಲಿ ತೋಟಗಾರಿಕೆ ಬೆಳೆಗಳಿಗೆ ಸುಸಜ್ಜಿತ ಮಾರುಕಟ್ಟೆ, ಕೋಲ್ಡ್ ಸ್ಟೋರೇಜ್ ಗೋದಾಮು ನಿರ್ಮಾಣವಾಗಬೇಕಿದೆ. ರೈತರು ರಫ್ತು ಮಾಡಲರ್ಹ ಗುಣಮಟ್ಟದ ಹಣ್ಣುಗಳನ್ನು ಬೆಳೆಯುವುದು ಹೇಗೆ, ಬೇಸಾಯ ಕ್ರಮಗಳು, ತಂತ್ರಜ್ಞಾನಗಳ ಅಳವಡಿಕೆ, ತಳಿಗಳ ಕುರಿತು ಮಾಹಿತಿಯನ್ನು ಪಡೆಯಲು ಮುಂದಾಗಬೇಕು ಎಂದು ಯಂಕಣ್ಣ ಯರಾಶಿ ಅವರು ಹೇಳಿದರು.
ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ ಅವರು ಮಾತನಾಡಿ, ಕೊಪ್ಪಳ ಜಿಲ್ಲೆ ಹಣ್ಣಿನ ಕಣಜವಾಗಿದೆ. ಜಿಲ್ಲೆಯಲ್ಲಿ ತೋಟಗಾರಿಕೆ ವಿಸ್ತರಣೆಗಾಗಿ ಇಲಾಖೆ ಇಂತಹ ಮೇಳಗಳನ್ನು ಆಯೋಜಿಸುತ್ತಿದೆ. ತಂತ್ರಜ್ಞಾನಗಳನ್ನು ರೈತರಿಗೆ ತಲುಪಿಸಲು ಮುಂದಾಗಿದೆ. ಕೃಷಿ ಮತ್ತು ತೋಟಗಾರಿಕೆ ಬೆಳೆಗಳಲ್ಲಿ ಬಹಳಷ್ಟು ವ್ಯತ್ಯಾಸವಿದೆ. ಕೃಷಿ ಉತ್ಪನ್ನಗಳನ್ನು ಹೆಚ್ಚು ಕಾಲ ಇಡಬಹುದಾಗಿದ್ದು, ತೋಟಗಾರಿಕೆ ಉತ್ಪನ್ನಗಳನ್ನು ಇಡಲು ಸಾಧ್ಯವಿಲ್ಲ. ಹೀಗಾಗಿ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಲ್ಲಿ, ಹೆಚ್ಚು ದಿನಗಳ ಕಾಲ ಇಡಲು ಹಾಗೂ ತೋಟಗಾರಿಕೆ ಉಪ ಉತ್ಪನ್ನಗಳನ್ನು ಸಿದ್ಧಪಡಿಸಿ, ಮೌಲ್ಯವರ್ಧಿತ ಪದಾರ್ಥಗಳನ್ನು ಸಿದ್ಧಪಡಿಸುವುದರ ಬಗ್ಗೆ ತಿಳಿದುಕೊಳ್ಳಬೇಕು. ಈಗಿನ ದಿನಮಾನಗಳಲ್ಲಿ ಯಾವುದೇ ಪದಾರ್ಥಗಳು ಅಥವಾ ಪ್ಯಾಕಿಂಗ್ ವ್ಯವಸ್ಥೆ ಆಕರ್ಷಕವಾಗಿರಬೇಕು. ಇದರ ಕಡೆಗೂ, ಗಮನ ನೀಡಬೇಕಿದೆ. ಇಸ್ರೇಲ್‌ನಂತಹ ಸಣ್ಣ ಹಾಗೂ ಅತಿ ಕಡಿಮೆ ನೀರು ಹೊಂದಿರುವ ದೇಶವಾಗಿದ್ದರೂ, ತಂತ್ರಜ್ಞಾನದ ಅಳವಡಿಕೆಯಿಂದ, ಉತ್ತಮ ಗುಣಮಟ್ಟ ಹಾಗೂ ಹೆಚ್ಚು ಇಳುವರಿ ಬರುವ ಹಣ್ಣುಗಳನ್ನು ಬೆಳೆಯಲಾಗುತ್ತಿದೆ. ತಂತ್ರಜ್ಞಾನವನ್ನು ರೈತರಿಗೆ ತಲುಪಿಸುವುದಕ್ಕಾಗಿಯೇ ಇಂತಹ ಮೇಳಗಳನ್ನು ಆಯೋಜಿಸಲಾಗುತ್ತಿದೆ. ಇಲಾಖೆಯಿಂದ ರೈತರಿಗೆ ಅಗತ್ಯ ನೆರವು ಒದಗಿಸಲು ಇಲಾಖೆ ಸರ್ವ ಸನ್ನದ್ಧವಾಗಿದ್ದು, ರೈತರ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಮುನಿರಾಬಾದ್ ತೋಟಗಾರಿಕೆ ಕಾಲೇಜಿನ ಡೀನ್ ಗಂಗಾಧರಪ್ಪ, ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥ ಡಾ. ಎಂ.ಬಿ. ಪಾಟೀಲ್ ಕಾರ್ಯಗಾರ ಕುರಿತು ಮಾತನಾಡಿದರು. ಬಿಜಾಪುರದ ಶ್ರೀಶೈಲ ವಾಗ್ಮೋರೆ ಅವರು ದ್ರಾಕ್ಷಿ ಬೆಳೆ ಕುರಿತು ಹಾಗೂ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ಸತೀಶ್ ಅವರು ದಾಳಿಂಬೆ ಬೆಳೆ ಕುರಿತು ರೈತರಿಗೆ ಸುಧಾರಿತ ಬೇಸಾಯ ಕ್ರಮಗಳು, ನವೀನ ತಂತ್ರಜ್ಞಾನಗಳು ಹಾಗೂ ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಮಲ್ಲನಗೌಡ ಪಾಟೀಲ್, ಶಾಮರಾವ್ ಕುಲಕರ್ಣಿ, ಪೂರ್ಣಿಮಾ, ತುಕಾರಾಂರಾವ್ ಸೇರಿದಂತೆ ಹಲವು ಗಣ್ಯರು, ಪ್ರಗತಿಪರ ರೈತರು ಉಪಸ್ಥಿತರಿದ್ದರು. ದ್ರಾಕ್ಷಿ ಹಾಗೂ ದಾಳಿಂಬೆ ಬೆಳೆಯುವ ಜಿಲ್ಲೆಯ ನೂರಾರು ರೈತರು ಕಾರ್ಯಗಾರದಲ್ಲಿ ಭಾಗವಹಿಸಿದ್ದರು

Please follow and like us:
error