ಸಿವಿಸಿ ಮನೆಯಲ್ಲಿ ಯಡಿಯೂರಪ್ಪಗೆ ಆತಿಥ್ಯ

ಕೊಪ್ಪಳ, ಡಿ. ೧೯: ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ. ಚಂದ್ರಶೇಖರ ಅವರ ನಗರದ ನಿವಾಸದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಮಂಗಳವಾರ ಉಪಹಾರ ಸೇವಿಸಿ, ವಿವಿಧ ನಾಯಕರೊಂದಿಗೆ ಅನೌಪಚಾರಿಕ ಮಾತುಕತೆ ನಡೆಸಿದರು.
ಕೊಪ್ಪಳ ಜಿಲ್ಲೆಯಲ್ಲಿ ಪರಿವರ್ತನಾ ಯಾತ್ರೆಯ ಕೊನೆಯ ಸಾರ್ವಜನಿಕ ಸಭೆ ಕುಕನೂರಿನಲ್ಲಿ ಮಂಗಳವಾರ ನಿಗದಿಯಾಗಿದ್ದ ಹಿನ್ನೆಲೆಯಲ್ಲಿ ಹೊಸಪೇಟೆಯಿಂದ ಅಲ್ಲಿಗೆ ತೆರಳುವಾಗ, ಮಾರ್ಗಮಧ್ಯೆ ಯಡಿಯೂರಪ್ಪ ಅವರು ಸಿ.ವಿ. ಚಂದ್ರಶೇಖರ ಮನೆಗೆ ಆಗಮಿಸಿದ್ದರು. ಬೆಳಗ್ಗೆ ಆಗಮಿಸಿದ ನಾಯಕನನ್ನು ಸಿ.ವಿ. ಚಂದ್ರಶೇಖರ ಹಾಗೂ ಅವರ ಧರ್ಮಪತ್ನಿ ಲಕ್ಷ್ಮೀದೇವಿ ಅವರು ಆತ್ಮೀಯತೆಯಿಂದ ಬರಮಾಡಿಕೊಂಡರು.
ತಮ್ಮ ಎಂದಿನ ಬಿಗು ಶೈಲಿಯನ್ನು ಬಿಟ್ಟು ಯಡಿಯೂರಪ್ಪ ಅವರು ಸಿ.ವಿ. ಚಂದ್ರಶೇಖರ ದಂಪತಿಗಳನ್ನು ಆತ್ಮೀಯತೆಯಿಂದ ಮಾತನಾಡಿಸಿದರು. ಅಮೆರಿಕದಲ್ಲಿ ಅಧ್ಯಯನ ಮಾಡುತ್ತಿರುವ ಸಿವಿಸಿ ಅವರ ಸುಪುತ್ರ ಸಿ. ಬಸವರಾಜ ಜೊತೆಗೂ ಮಾತನಾಡಿದರು. ಒಬ್ಬನೇ ಮಗ ಎಂಬುದು ಗೊತ್ತಾದಾಗ ಅಚ್ಚರಿಪಟ್ಟ ಅವರು, ಉತ್ತಮ ಭವಿಷ್ಯ ಆತನಿಗಿದ ಎಂದು ಸಿವಿಸಿ ಅವರಿಗೆ ಹಸ್ತಲಾಘವ ಮಾಡಿ ಅಭಿನಂದಿಸಿದರು.
ತಮ್ಮ ನಾಯಕ ನಗುಮುಖದಿಂದ ಬೆರೆತಿರುವುದನ್ನು ನೋಡಿ ಹರ್ಷಗೊಂಡ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು, ಅವರೊಂದಿಗೆ ಫೊಟೊ ತೆಗೆಸಿಕೊಂಡು ಸಂಭ್ರಮಿಸಿದರು. ನಂತರ, ಬಿಜೆಪಿ ನಾಯಕರಾದ ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ಲಕ್ಷ್ಮಣ ಸವದಿ, ಸಂಸದ ಸಂಗಣ್ಣ ಕರಡಿ, ಶಾಸಕ ದೊಡ್ಡನಗೌಡ ಪಾಟೀಲ, ಮಾಜಿ ಶಾಸಕ ವಿರುಪಾಕ್ಷಪ್ಪ ಅಗಡಿ ಮುಂತಾದವರ ಜೊತೆಗೆ ಉಪಾಹಾರ ಸೇವಿಸಿದರು.
ರವಾ ಬಾತ್, ಪಡ್ಡು, ಇಡ್ಲಿ-ಸಾಂಬಾರ್ ಸೇವಿಸಿದ ಯಡಿಯೂರಪ್ಪ ಅವರು ಕೆಲ ಸಮಯ ಪಕ್ಷದ ಹಿರಿಯ ನಾಯಕರೊಂದಿಗೆ ಅನೌಪಚಾರಿಕವಾಗಿ ಮಾತನಾಡಿದರು. ಗುಜರಾತ್ ಚುನಾವಣೆಯ ಫಲಿತಾಂಶ, ಅದು ನೀಡಿರುವ ಸಂದೇಶ, ಪರಿವರ್ತನಾ ಯಾತ್ರೆಗೆ ದೊರೆಯುತ್ತಿರುವ ಬೆಂಬಲ, ಮುಂದೆ ನಡೆಯಬೇಕಿರುವ ಮಹತ್ವದ ಕೆಲಸಗಳ ಕುರಿತು ಚರ್ಚಿಸಿದರು ಎನ್ನಲಾಗಿದೆ.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಧುರಾ ಕರ್ಣಂ, ಮಹಿಳಾ ಘಟಕದ ಹೇಮಲತಾ ನಾಯಕ್, ಪಕ್ಷದ ಹಲವಾರು ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Please follow and like us:
error