ಸಿಪಿಐ ಮೌನೇಶ್ ಪಾಟೀಲ್ ಅಮಾನತಿಗೆ ಪ್ರಗತಿಪರ ಸಂಘಟನೆಗಳ ಆಗ್ರಹ

Koppal ಪ್ರಗತಿಪರ ಸಂಘಟನೆಯ ಮುಖಂಡರು ಹಾಗೂ ಹಿರಿಯ ಬರಹಗಾರರ ಮೇಲೆ ಜಾಮೀನುರಹಿತ ಪ್ರಕರಣ ದಾಖಲಿಸಿರುವ ಕೊಪ್ಪಳ ನಗರ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಮೌನೇಶ್ ಪಾಟೀಲ್ ಅವರನ್ನು ಸೇವೆಯಿಂದ ಅಮಾನತುಗೊಳಿಸಬೇಕೆಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡ ಜೆ.ಭಾರದ್ವಾಜ್ ಆಗ್ರಹಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಪಿಎಂಸಿ ಕಾಯ್ದೆ ತಿದ್ದುಪಡಿ ವಿಚಾರ ಸೇರಿದಂತೆ ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ಈಚೆಗೆ ಪ್ರತಿಭಟನೆಗೆ ಮುಂದಾಗಿದ್ದು, ಈ ವಿಷಯವನ್ನು ಪೊಲೀಸ್ ಇಲಾಖೆಗೆ ತಿಳಿಸಿದಾಗ್ಯೂ ಕೊರೊನಾ‌ ನಿರ್ಬಂಧಗಳ ಪಾಲನೆಯ ಜೊತೆಗೆ ಸಾಂಕೇತಿಕ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಿಪಿಐ ಮೌನೇಶ್ ಪಾಟೀಲ್, ಸಂಘಟನೆಯ ಮುಖಂಡರ ವಿರುದ್ಧ ರೇಗಾಡಿದ್ದಲ್ಲದೇ ಅಗೌರವದಿಂದ ವರ್ತಿಸಿದ್ದಾರೆ.‌ ಅವರ ಮಾತಿಗೆ ಬೆಲೆ‌ ನೀಡಿ ಹೋರಾಟ ಕೈಬಿಟ್ಟರೂ ಸಹ ಅನಗತ್ಯವಾಗಿ ಜಾಮೀನುರಹಿತ ಪ್ರಕರಣ ದಾಖಲಿಸಿದ್ದಾರೆ. ಅದೇ ದಿನ ಜಿಲ್ಲೆಯ ವಿವಿಧ ಭಾಗಗಳಲ್ಲಿ ಪ್ರತಿಭಟನೆಗಳು ನಡೆದಿದ್ದು, ಎಲ್ಲೂ ಸಹ ಕೇಸ್ ದಾಖಲಾಗಿಲ್ಲ. ಆದರೆ ಕೊಪ್ಪಳದಲ್ಲಿ ಮಾತ್ರ ಕೇಸ್ ದಾಖಲಿಸಲಾಗಿದೆ ಎಂದು ದೂರಿದರು.

ಮುಖಂಡ ಬಸವರಾಜ ಸೂಳೀಭಾವಿ ಮಾತನಾಡಿ, ಸಾಮಾಜಿಕ ಜಾಲತಾಣದಲ್ಲಿ ಚಡ್ಡಿ ಚಿತ್ರ ಹಾಕಿದ್ದಕ್ಕೆ ಹೋರಾಟಗಾರ ಬಸವರಾಜ ಶೀಲವಂತರ್ ಅವರ ಮೇಲೂ ಸಹ ನಾನ್ ಬೇಲೆಬಲ್ ಕೇಸ್ ದಾಖಲಿಸಲಾಗಿದೆ. ಚಡ್ಡಿ ಎಂದರೆ ಆರ್‌ಎಸ್ಎಸ್ ಚಡ್ಡಿ ಒಂದೇನಾ? ಎಂದು ಪ್ರಶ್ನಿಸಿದ ಅವರು, ಈಚೆಗೆ ಕವಿ ಸಿರಾಜ್ ಬಿಸರಳ್ಳಿ ಕವನ ವಾಚಿಸಿದ್ದಕ್ಕೂ ಕೇಸ್ ಹಾಕಲಾಗಿತ್ತು. ಮೊದಲು ಪ್ರಗತಿಪರರ ವಿರುದ್ಧ ಕೇಸ್ ಹಾಕುವವರ ವಿರುದ್ಧ ಕ್ರಮ ಜರುಗಬೇಕು. ಸರಕಾರ ಕೊರೊನಾ ನಿಯಂತ್ರಣದ ಹೆಸರಿನಲ್ಲಿ 144 ಸೆಕ್ಷನ್ ಜಾರಿ ಮಾಡಿ ಜನರನ್ನು ಕತ್ತಲೆಯಲ್ಲಿಟ್ಟು, ಜನವಿರೋಧಿ ಕಾಯ್ದೆಗಳ ಜಾರಿಗೆ ಪಿತೂರಿ ನಡೆಸಿದೆ. ಇದನ್ನು ವಿರೋಧಿಸುವವರ ಅಭಿವ್ಯಕ್ತಿ ಸ್ವಾತಂತ್ರ್ಯ ಕಸಿದು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ಮುಖಂಡ ಡಾ.ಕೆ.ಜನಾರ್ದನ ಮಾತನಾಡಿ, ಪ್ರಗತಿಪರ ಹೋರಾಟಗಾರರ ವಿರುದ್ಧ ಅನಗತ್ಯವಾಗಿ ಕೇಸ್ ದಾಖಲಿಸುವ ನಗರ ಠಾಣೆಯ ಸಿಪಿಐ ಮೌನೇಶ್ ಪಾಟೀಲ್ ಬಿಜೆಪಿ ವಕ್ತಾರರಂತೆ‌ ವರ್ತಿಸುತ್ತಿದ್ದಾರೆ. ತಕ್ಷಣವೇ ಇವರನ್ನು ಅಮಾನತುಗೊಳಿಸಬೇಕು ಇಲ್ಲವೇ ವರ್ಗಾವಣೆಯನ್ನಾದರೂ ಮಾಡಬೇಕು. ಇಲ್ಲದಿದ್ದರೆ ಭೌತಿಕ ಅಂತರ ಕಾಯ್ದುಕೊಳ್ಳುವ ಮೂಲಕ ನಿರಂತರ ಪ್ರತಿಭಟನೆಗೆ ಮುಂದಾಗಲಾಗುವುದು ಎಂದು ಎಚ್ಚರಿಸಿದರು.

Please follow and like us:
error