ಸಿಎಎ ಬಗ್ಗೆ ಕಾಂಗ್ರೆಸ್ ಇಬ್ಬಗೆಯ ನೀತಿಯನ್ನು ಅನುಸರಿಸುತ್ತಿದೆ-ಚಂದ್ರು ಹಲಗೇರಿ

। ಮನೆ ಮನೆಗೆ ತೆರಳಿ ಕಾಯ್ದೆ ಬಗ್ಗೆ ತಿಳಿ ಹೇಳಿ


ಕೊಪ್ಪಳ, ಡಿ.೩೦: ಸಿಎಎ ಬಗ್ಗೆ ಕಾಂಗ್ರೆಸ್ ಇಬ್ಬಗೆಯ ನೀತಿಯನ್ನು ಅನುಸರಿಸುತ್ತಿದೆ. ಕಾರ್ಯಕರ್ತರು ಮನೆ ಮನೆಗೆ ತೆರಳಿ ಕಾಯ್ದೆ ಬಗ್ಗೆ ತಿಳಿ ಹೇಳಿ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಪಾ‍ಟೀಲ ಹಲಗೇರಿ ಹೇಳಿದರು.
ಅವರು ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ ಬಗ್ಗೆ ನಗರ ಮತ್ತು ಗ್ರಾಮೀಣ ಮಂಡಲದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯ ಕುಷ್ಟಗಿ ಶಾಸಕರಾದ ಅಮರೇಗೌಡ ಬಯ್ಯಾಪುರ ಅವರು ದೇಶ ಪ್ರೇಮಿಗಳಾದ ಸುಭಾಷಚಂದ್ರ ಬೋಸ್ ಹಾಗೂ ಸರ್ದಾರ್ ವಲ್ಲಭಾಯಿ ಪಟೇಲ್ ಅವರು ಉಗ್ರಗಾಮಿಗಳು ಎಂಬ ಹೇಳಿಕೆಯನ್ನು ನೀಡಿ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದ್ದಾರೆ. ಹೈದರಾಬಾದ್ ಕರ್ನಾಟಕ ವಿಮೋಚನೆಯ ರೂವಾರಿಗಳಾದ ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಕಾರ್ಯವನ್ನು ಕುಷ್ಟಗಿಯ ಶಾಸಕ ಬಯ್ಯಾಪುರ ಅವರು ಮರೆತಂತಿದೆ. ಒಂದು ವೇಳೆ  ವಿಮೋಚನೆಯಾಗದೆ ಇದ್ದಂತಹ ಪಕ್ಷದಲ್ಲಿ ಇಂದಿನ ಪೌರತ್ವ ತಿದ್ದುಪಡಿ ಕಾಯಿದೆಯ ಅಡಿಯಲ್ಲಿ ಈ ಭಾಗದ ಜನ ಸೇರುವಂತಹ ಪ್ರಸಂಗ ನಿರ್ಮಾಣವಾಗಿರುತ್ತಿತ್ತು. ಈ ರೀತಿಯ ದ್ವಂದ್ವ ಹೇಳಿಕೆಗಳನ್ನು ಬಿಟ್ಟು ಕಾಂಗ್ರೆಸ್ಸಿನ ನಾಯಕರು ಅಭಿವೃದ್ಧಿ ಕೆಲಸಕ್ಕೆ ಕೈ ಜೋಡಿಸಬೇಕೆಂದು ಹೇಳಿದರು.
ವಾಸ್ತವದಲ್ಲಿ ಭಾರತದಲ್ಲಿ ನೆಲೆಸಿರುವ ಸಹೋದರ ಸಮಾನರಾದ ಮುಸ್ಲಿಂ ಸಮುದಾಯಕ್ಕೆ ಈ ಕಾಯಿದೆಯಿಂದ ಯಾವುದೇ ಧಕ್ಕೆಯಾಗುವುದಿಲ್ಲವೆಂಬ ನಿಜಾಂಶವನ್ನು ಕಾರ್ಯಕರ್ತರು ಮನೆ ಬಾಗಿಲಿಗೆ ಹೋಗಿ ತಿಳಿಸಿ ಜನ ಜಾಗೃತಿ ಮಾಡಬೇಕೆಂದು ಕರೆ ನೀಡಿದರು. 

ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಬಿಜೆಪಿ ಮುಖಂಡ ಪೀರಾ ಹುಸೇನ್ ಹೊಸಳ್ಳಿ ವಕೀಲರು ಮಾತನಾಡಿ ಪೌರತ್ವ ತಿದ್ದುಪಡಿ ಕಾಯಿದೆಯಿಂದ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಅಫ್ಘಾನಿಸ್ತಾನದಲ್ಲಿ ನೆಲೆಸಿರುವ ಅಲ್ಪಸಂಖ್ಯಾತ ಹಿಂದು, ಕ್ರೈಸ್ತ, ಸಿಖ, ಪಾರಸಿ ಬೌದ್ಧ, ಜೈನ ಸಮುದಾಯಗಳಿಗೆ ಭಾರತದ ಪೌರತ್ವವನ್ನು ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಕಾಯಿದೆಯನ್ನು ಜಾರಿ ಮಾಡಿದೆ ಈ ಕಾಯಿದೆ ಜಾರಿಯಾಗುವುದರಿಂದ ಭಾರತದಲ್ಲಿ ನೆಲೆಸಿರುವ ಯಾವುದೇ ಒಬ್ಬ ಮುಸ್ಲಿಂ ಜನಾಂಗದವರಿಗೆ ತೊಂದರೆ ಯಾಗುವುದಿಲ್ಲ ಎಂದು ಹೇಳಿದರು.

ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ ಚಂದ್ರಶೇಖರ ಮಾತನಾಡಿ ಪೌರತ್ವ ಕಾಯ್ದೆಯ ಭಾರತದ ಏಕತೆ, ಸಮಗ್ರತೆ ಹಾಗೂ ಅಖಂಡತೆಯನ್ನು ಎತ್ತಿ ಹಿಡಿದು ಸಂವಿಧಾನದ ಆಶಯಕ್ಕೆ ಪೂರಕವಾಗಿದೆ. ವಿರೋಧ ಪಕ್ಷಗಳಾದ ಕಾಂಗ್ರೆಸ್ ಹಾಗೂ ಸಿಪಿಐ ಪಕ್ಷಗಳು ಸರ್ಕಾರದ ವಿರುದ್ಧ ಧ್ವನಿ ಎತ್ತಿ ತ್ರಿಶಂಕು ಸ್ಥಿತಿ ನಿರ್ಮಾಣ ಮಾಡಲು ಅಲ್ಪಸಂಖ್ಯಾತ ಸಮುದಾಯದ ಬಾಂಧವರಾದ ಮುಸ್ಲಿಂ ಜನಾಂಗದವರಿಗೆ ತಪ್ಪು ಮಾಹಿತಿಯನ್ನು ನೀಡಿ ದೇಶದ ತುಂಬೆಲ್ಲ ಗಲಭೆ ಸೃಷ್ಟಿಸುತ್ತಿದ್ದಾರೆ ಆದ ಕಾರಣ ಪ್ರಜ್ಞಾವಂತರಾದ ನಾವುಗಳು ಈ ಕಾಯ್ದೆಯ ಬೆಂಬಲಕ್ಕೆ ನಿಲ್ಲಬೇಕಾಗಿದೆ ಎಂದು ಹೇಳಿದರು.

ನಗರ ಮಂಡಲ ಅಧ್ಯಕ್ಷ ಸುನೀಲ ಹೆಸರೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಪಾಧ್ಯಕ್ಷ ರಾಜು ಬಾಕಳೆ, ಗ್ರಾಮೀಣ ಮಂಡಲ ಅಧ್ಯಕ್ಷ ಪ್ರದೀಪ್ ಹಿಟ್ನಾಳ್, ಜಿಲ್ಲಾ ಮಾಧ್ಯಮ ಪ್ರಮುಖ ಬಿ.ಗಿರೀಶಾನಂದ ಜ್ಞಾನಸುಂದರ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ನಗರ ಮಂಡಲ ಪ್ರಧಾನ ಕಾರ್ಯದರ್ಶಿ ರವಿಚಂದ್ರ ಮಾಲಿಪಾಟೀಲ್ ನಿರೂಪಿಸಿದರು ಬಿಜೆಪಿ ಮುಖಂಡ ಮಹೇಶ ಹಾದಿಮನಿ ವಂದಿಸಿದರು. ಕಾರ್ಯಕ್ರಮದಲ್ಲಿ ನಗರ ಮತ್ತು ಗ್ರಾಮೀಣ ಮಂಡಲದ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.

Please follow and like us:
error