ಸಿಎಂ ಸಿದ್ದರಾಮಯ್ಯ ಒಬ್ಬ ಅಯೋಗ್ಯ,ಬೊಗಳೆದಾಸಯ್ಯ- ಯಡಿಯೂರಪ್ಪ

ಬರೀ ಸುಳ್ಳುಗಳನ್ನು ಹೇಳುತ್ತಾ ಬೊಗಳೆ ಬಿಡುತ್ತಿರುವ ಸಿಎಂ ಸಿದ್ದರಾಮಯ್ಯ ಒಬ್ಬ ಅಯೋಗ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜರಿದಿದ್ದಾರೆ. ಕೊಪ್ಪಳದ ಗಂಗಾವತಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯಡಿಯೂರಪ್ಪ, ನಾನು ಲಂಚತೆಗೆದುಕೊಂಡೋದನ್ನು ಅವರು ನೋಡಿದ್ದಾರಾ? ಅಥವಾ ನಾನು ಲಂಚ ತೆಗೆದುಕೊಂಡಿರುವ ಕುರಿತಂತೆ ಯಾವ

ನ್ಯಾಯಾಲಯ ಹೇಳಿದೆ ಎಂದು ಪ್ರಶ್ನಿಸಿದ ಅವರು ನನ್ನ ಮೇಲೆ 42 ಕೇಸ್‍ಗಳಿವೆ ಎಂದು ಹೇಳುವ ಸಿದ್ದರಾಮಯ್ಯ ಅವುಗಳ ಪೈಕಿ 10 ಕೇಸ್‍ಗಳನ್ನಾದರೂ ಯಾವುವು ಹೇಳಲಿ ಎಂದು ಸವಾಲು ಹಾಕಿದರು. ಸಿದ್ದರಾಮಯ್ಯ ಮೇಲೆ ಎಸಿಬಿಯಲ್ಲಿ 56 ದೂರುಗಳಿವೆ. ಆ ಕುರಿತಂತೆ ನಾನು ಬೇಕಾದರೆ ಪಟ್ಟಿಯನ್ನು ಕೊಡುತ್ತೇನೆ ಎಂದರು. ಸಿದ್ದರಾಮಯ್ಯ ಬಗ್ಗೆ ಅವರ ಪಕ್ಷದಲ್ಲೆ ಒಮ್ಮತವಿಲ್ಲ. ಅವರ ಪಕ್ಷದ ರಾಜ್ಯಾಧ್ಯಕ್ಷ ಏಕೆ ಬರುತ್ತಿಲ್ಲ ಎಂದು ಪ್ರಶ್ನೆ ಮಾಡಿದರು. ಹೊನ್ನಾವರ ಸೇರಿದಂತೆ ರಾಜ್ಯದಲ್ಲಿ 20 ಜನ ಹಿಂದು ಯುವಕರ ಕೊಲೆಯಾಗಿದೆ. ಇದು ಸತ್ಯ ತಾನೆ ಎಂದ ಅವರು ಬಿಜೆಪಿ, ಆರ್‍ಎಸ್‍ಎಸ್ ಕಾರ್ಯಕರ್ತರ ಮೇಲೆ ಸಿದ್ದರಾಮಯ್ಯ ಸರ್ಕಾರ ಸುಳ್ಳುಕೇಸ್ ಹಾಕುತ್ತಿದೆ.ಆದರೆ, ಗೃಹ ಸಚಿವ ರಾಮಲಿಂಗಾರೆಡ್ಡಿ ಬೇಜಬ್ದಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರ ಬಗ್ಗೆ ನನಗೆ ಮೊದಲು ಗೌರವವಿತ್ತು. ಆದರೆ, ಇತ್ತೀಚಿಗೆ ಅವರು ನೀಡುತ್ತಿರುವ ಹೇಳಿಕೆಗಳು ಸರಿಯಾಗಿಲ್ಲ ಎಂದರು. ನಾವು ಜಾತಿಯನ್ನು ಒಡೆಯುವ ಕೆಲಸ ಮಾಡುತ್ತಿಲ್ಲ. ಜಾತಿ ಜಾತಿಯ ನಡುವೆ ವಿಷಬೀಜ ಬಿತ್ತಿ ಸಮಾಜವನ್ನು ಒಡೆಯುತ್ತಿರುವುದು ಸಿದ್ದರಾಮಯ್ಯ.
ದೇಶದ ಪ್ರಧಾನಿಬಗ್ಗೆ ಹಗುರವಾಗಿ ಸಿದ್ದರಾಮಯ್ಯ ಮಾತನಾಡುತ್ತಾರೆ. ಮನಬಂದಂತೆ ಮಾತನಾಡುವ ಇಂತಹ ಮುಖ್ಯಮಂತ್ರಿಗೆ ಜನರು ಚುನಾವಣೆಯಲ್ಲಿ ಪಾಠ ಕಲಿಸುತ್ತಾರೆ. ಈಗಾಗಲೇ 102 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯ ನವಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆ ನಡೆದಿದ್ದು ಉತ್ಸಾಹದಿಂದ ಮುಂದುವರೆಯುತ್ತಿದೆ. ಸರ್ಕಾರದ ವಿರುದ್ದ ಜನರ ಅಸಮಧಾನ ಆಕ್ರೋಶದಿಂದಾಗಿ ಪರಿವರ್ತನಾ ಯಾತ್ರೆಗೆ ಭಾರಿ ಜನಬೆಂಬಲ ವ್ಯಕ್ತವಾಗುತ್ತಿದೆ. ಹೀಗಾಗಿ ರಾಜ್ಯದಲ್ಲಿ 150 ಸೀಟ್ ಗೆಲ್ಲುತ್ತೇವೆ. ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಿಎಂ ಸಿದ್ದರಾಮಯ್ಯ ಅಭಿವೃದ್ದಿ ವಿಚಾರದಲ್ಲಿ ಸುಳ್ಳು ಹೇಳುತ್ತಿದ್ದಾರೆ. 45 ಸಾವಿರ ಹುದ್ದೆಗಳು ಖಾಲಿ ಇವೆ. ಭರ್ತಿ ಮಾಡುವ ಗೋಜಿಗೆ ಹೋಗಿಲ್ಲ. ಹೈ.ಕ. ಭಾಗವನ್ನು ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ. ಹೈ.ಕ. ಭಾಗದ ಅಭಿವೃದ್ದಿಗೆ 4512 ಕೋಟಿ ನೀಡಬೇಕಿತ್ತು. ಆದರೆ, ಪೂರ್ಣ ಪ್ರಮಾಣದ ಅನುದಾನ ಬಿಡುಗಡೆ ಮಾಡಲಿಲ್ಲ. ಬಿಡುಗಡೆಯಾದ ಹಣದಲ್ಲಿ ಸಂಪೂರ್ಣವಾಗಿ ಬಳಕೆ ಮಾಡಿಕೊಂಡಿಲ್ಲ. ಅಭಿವೃದ್ಧಿ ಮಾಡಿರೋದು ಪ್ರಮಾಣಿಕವಾಗಿದ್ರೆ ಶ್ವೇತಪತ್ರ ಹೊರಡಿಸಬೇಕು. ಇಲ್ಲವಾದರೆ ಕುರಿತು ನಾನು ಕಪ್ಪು ಪತ್ರ ಹೊರಡಿಸುವೆ ಎಂದು ಸವಾಲ್ ಹಾಕಿದರು. ಇನ್ನು ಇವಿಎಂ ನ್ಯೂನ್ಯತೆ ಕುರಿತು ಚುನಾವಣಾ ಆಯೋಗ ರಾಜಕೀಯ ಪಕ್ಷಗಳ ಸಭೆ ಕರೆದಿತ್ತು. ಇವಿಎಂ ತಪ್ಪಿನ ಕುರಿತು ಯಾವ ಪಕ್ಷವೂ ಸಾಬೀತು ಮಾಡಲಿಲ್ಲ. ಆದರೆ, ಈಗ ಗುಜರಾತ್, ಹಿಮಾಚಲ ಪ್ರದೇಶದ ಚುನಾಚಣೆ ನೋಡಿ ಏನೇನೋ ಮಾತಾಡ್ತಾರೆ ಎಂದು ಯಡಿಯೂರಪ್ಪ ಇದೇ ಸಂದರ್ಭದಲ್ಲಿ ಹೇಳಿದರು.