ಸಾರ್ವಜನಿಕರ ಅನುಕೂಲಕ್ಕೆ ಉಪಹಾರ ಕೇಂದ್ರ ಸ್ಥಾಪನೆ : ಯಶ್‌ಪಾಲ್ ಕ್ಷೀರಸಾಗರ

ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನವನಕ್ಕೆ ಉತ್ತಮ ಸ್ಪಂಧನೆ

ಕೊಪ್ಪಳ ಡಿ.  : ಅರಣ್ಯ ಇಲಾಖೆ ವತಿಯಿಂದ ಕೊಪ್ಪಳ ತಾಲೂಕಿನ ರುದ್ರಾಪುರ-ಕಾಸನಕಂಡಿ ಗ್ರಾಮದಲ್ಲಿ ನಿರ್ಮಾಣ ಮಾಡಲಾದ ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನವನಕ್ಕೆ ಎಲ್ಲರಿಂದಲೂ ಉತ್ತಮ ಸ್ಪಂಧನೆ ವ್ಯಕ್ತವಾಗುತ್ತಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಉದ್ಯಾನವನದಲ್ಲಿ ಉಪಹಾರ ಕೇಂದ್ರ ಸ್ಥಾಪಿಸಲಾಗುವುದು ಎಂದು ಕೊಪ್ಪಳ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಉದ್ಯಾನವನದ ಅಧ್ಯಕ್ಷರಾದ ಯಶ್‌ಪಾಲ್ ಕ್ಷೀರಸಾಗರ ಅವರು ಹೇಳಿದರು.
ಸಾಲು ಮರದ ತಿಮ್ಮಕ್ಕ ವೃಕ್ಷೆದ್ಯಾನವನದಲ್ಲಿ ಉಪಹಾರ ಮಂದಿರ ಸ್ಥಾಪನೆ ಕುರಿತು ಕೊಪ್ಪಳ ಪ್ರಾದೇಶಿಕ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿಯಲ್ಲಿ ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನವನಕ್ಕೆ ಪ್ರೇಕ್ಷಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪ್ರತಿದಿನ ರೂ. ೨೦೦೦ ಸಂಗ್ರಹವಾಗುತ್ತಿದೆ. ಶನಿವಾರ ಭಾನುವಾರ ಮತ್ತು ಇತರೇ ಸಾರ್ವಜನಿಕ ರಜಾ ದಿನಗಳಂದು ೧೦ ರಿಂದ ೧೫ ಸಾವಿರ ರೂ. ಸಂಗ್ರಹವಾಗುತ್ತಿದೆ. ಉದ್ಯಾನವನವು ಪ್ರಾರಂಭವಾದ ಆಗಸ್ಟ್. ೧೫ ರಿಂದ ಇದುವರೆಗೆ ನಿರ್ವಹಣಾ ವೆಚ್ಚ ತೆಗೆದು ಸುಮಾರು ೭ ಲಕ್ಷ ರೂ. ಸಂಗ್ರವಾಗಿದೆ. ಸಾಮಾನ್ಯ ಜನರಿಗೆ ರೂ. ೨೦, ಮಕ್ಕಳಿಗೆ ರೂ. ೧೦ ಮತ್ತು ವಿಶೇಷವಾಗಿ ಶಾಲಾ ಮಕ್ಕಳಿಗೆ ೦೫ ರೂ. ಗಳ ಪ್ರವೇಶ ದರ ನಿಗದಿಪಡಿಸಲಾಗಿದೆ. ಉದ್ಯಾನವನದಲ್ಲಿ ಹಲವಾರು ಬಗೆಯ ಗಿಡಗಳನ್ನು ನಾಟಿಸಲಾಗಿದ್ದು, ಇನ್ನೂ ನಾಲ್ಕರಿಂದ ಐದು ವರ್ಷಗಳ ನಂತರ ಎಲ್ಲಾ ಗಿಡಗಳು ಮರಗಳಾಗಿ ಬೆಳೆಯಲಿವೆ. ಇದರಿಂದ ಉದ್ಯಾನವನವು ಸುಂದರವಾಗಿ ಕಾಣಲಿದ್ದು, ಇನ್ನಷ್ಟು ಆಕರ್ಷಣಿಯವಾಗಲಿದೆ. ಉದ್ಯಾನವನದಲ್ಲಿ ವನ್ಯ ಜೀವಿಗಳ ಹಾಗೂ ಪ್ರಾಕೃತಿಕ ಸೌಂದರ್ಯದೊಂದಿಗೆ ಆಕರ್ಷಕ ಕಲಾ ಕೃತಿಗಳನ್ನು ನಿರ್ಮಿಸಿದ್ದು, ನೋಡುಗರ ಮನ ಸೆಳೆಯುವಲ್ಲಿ ಯಶಸ್ವಿಯಾಗುತ್ತಿವೆ. ವನ್ಯ ಜವೀಗಳ ಕಲಾ ಕೃತಿಗಳ ಹತ್ತಿರ ನಿಂತು ಸಾರ್ವಜನಿಕರು ಪೋಟೋಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಈ ಕಲಾ ಕೃತಿಗಳಿಗೆ ಹಾನಿಯಾಗದಂತೆ ರಕ್ಷಣಾ ಕವಚವನ್ನು ನಿರ್ಮಿಸಬೇಕು ಎಂಬ ಮನವಿಯನ್ವಯ ಈ ಕುರಿತು ನಿರ್ಧಾರವನ್ನು ಕೈಗೊಳ್ಳಲಾಗುವುದು. ಉದ್ಯಾನವನ ವೀಕ್ಷಿಸಲು ತಂಡೋಪತಂಡವಾಗಿ ಸಾರ್ವಜನಿಕರು, ಪ್ರವಾಸಿಗರು ಬರುತ್ತಿದ್ದು, ವಾಹನ ನಿಲುಗಡೆ, ಉಪಹಾರ ಮಂದಿರ, ಕುಡಿಯುವ ನೀರು, ಇತ್ಯಾದಿ ಅಗತ್ಯ ವ್ಯವಸ್ಥೆಗಳನ್ನು ಶೀಘ್ರದಲ್ಲಿ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಉದ್ಯಾನವನದಲ್ಲಿ ಕೆಲಸ ಮಾಡಲು ಇನ್ನೂ ಕೆಲ ವಾಚ್‌ಮೆನ್‌ಗಳನ್ನು ಗೌರವಧನ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುವುದು. ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನವನದಲ್ಲಿ ಪ್ಲಾಸ್ಟಿಕ್ ನಿಷೇಧ ಕುರಿತು ಮೈಸೂರು ಮೃಗಾಲಯದಲ್ಲಿರುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು. ಸಭೆ, ಸಮಾರಂಭಗಳನ್ನು ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನವನದಲ್ಲಿ ಹಮ್ಮಿಕೊಳ್ಳಲು ಎಲ್ಲಾ ಇಲಾಖೆಗಳು ಸಹಕರಿಸಬೇಕು ಎಂದು ಕೊಪ್ಪಳ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಉದ್ಯಾನವನದ ಅಧ್ಯಕ್ಷರಾದ ಯಶ್‌ಪಾಲ್ ಕ್ಷೀರಸಾಗರ ಅವರು ಹೇಳಿದರು.
ಸಭೆಯಲ್ಲಿ ವಲಯ ಅರಣ್ಯಾಧಿಕಾರಿ ಎ.ಹೆಚ್. ಮುಲ್ಲಾ, ಸಾಮಾಜಿಕ ಅರಣ್ಯ ವಲಯದ ಅರಣ್ಯಾಧಿಕಾರಿ ಗಂಟಿ ರಾಜೇಶ, ವಿ.ಅ.ಸಂ.ಪ್ರಾ.ಅ. ಎಂ. ಪಾಂಡುರಂಗಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆ ವಿಷಯ ಪರಿವೀಕ್ಷ ಆರ್.ಹೆಚ್. ಪತ್ತಾರ, ಡಿ.ಡಿ.ಪಿ.ಯು. ಇಲಾಖೆಯ ಜಿ. ರಾಟಿಮನಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಪೂಜಾರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Please follow and like us:
error