Breaking News
Home / Koppal News / ಸಾರ್ವಜನಿಕರಿಗೆ ಸುಲಭವಾಗಿ ಮರಳು ಲಭ್ಯವಾಗುವಂತೆ ಮಾಡಲು ಕ್ರಮ- ರಾಜಶೇಖರ ಬಿ. ಪಾಟೀಲ್
ಸಾರ್ವಜನಿಕರಿಗೆ ಸುಲಭವಾಗಿ ಮರಳು ಲಭ್ಯವಾಗುವಂತೆ ಮಾಡಲು ಕ್ರಮ- ರಾಜಶೇಖರ ಬಿ. ಪಾಟೀಲ್

ಸಾರ್ವಜನಿಕರಿಗೆ ಸುಲಭವಾಗಿ ಮರಳು ಲಭ್ಯವಾಗುವಂತೆ ಮಾಡಲು ಕ್ರಮ- ರಾಜಶೇಖರ ಬಿ. ಪಾಟೀಲ್

): ಬಡವರು, ಸಾರ್ವಜನಿಕರು ಮನೆ ಹಾಗೂ ಕಟ್ಟಡ ಕಟ್ಟಿಸಿಕೊಳ್ಳಲು ಸುಲಭವಾಗಿ ಮರಳು ಲಭ್ಯವಾಗುವಂತೆ ಮಾಡಲು ಶೀಘ್ರವೇ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಗಣಿ ಮತ್ತು ಭೂವಿಜ್ಞಾನ ಹಾಗೂ ಮುಜರಾಯಿ ಸಚಿವರಾದ ರಾಜಶೇಖರ ಬಿ. ಪಾಟೀಲ್ ಅವರು ಹೇಳಿದರು.
ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಮುಜರಾಯಿ ಇಲಾಖೆ ಅಭಿವೃದ್ಧಿ ಕುರಿತ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಡವರು, ಸಾರ್ವಜನಿಕರು ಮನೆ ಹಾಗೂ ಕಟ್ಟಡ ಕಟ್ಟಿಸಿಕೊಳ್ಳಲು ಸುಲಭವಾಗಿ ಮರಳು ಲಭ್ಯವಾಗುವಂತೆ ಮಾಡಲು ಶೀಘ್ರವೇ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು. ಜಿಲ್ಲೆಯಲ್ಲಿ ಬಡವರು, ಸಾರ್ವಜನಿಕರು ಮನೆ, ಕಟ್ಟಡಗಳನ್ನು ಕಟ್ಟಿಸಿಕೊಳ್ಳಲು ಮರಳು ದೊರೆಯದೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇದರಿಂದಾಗಿ ಜನರಿಂದ ತೀವ್ರ ಪ್ರತಿರೋಧ ವ್ಯಕ್ತವಾಗುತ್ತಿದೆ. ಈ ಕುರಿತು ಶೀಘ್ರ ಸಮಸ್ಯೆ ಇತ್ಯರ್ಥಪಡಿಸುವಂತೆ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಸಲ್ಲಿಸಿದ ಮನವಿಗೆ ಸಚಿವರು ಈ ರೀತಿ ಪ್ರತಿಕ್ರಿಯಿಸಿದರು.
ಮರಳು ಪೂರೈಕೆ ಬಗ್ಗೆ ಇಡೀ ರಾಜ್ಯದಲ್ಲಿ ಸಮಸ್ಯೆ ತಲೆದೋರಿದೆ. ಮಲೇಷಿಯಾ ದೇಶದಿಂದ ಮರಳನ್ನು ಆಮದು ಮಾಡಿಕೊಳ್ಳಲಾಗುತ್ತಿದ್ದು, ಎಂಎಸ್‌ಐಎಲ್ ಮೂಲಕ ವಿತರಣೆ ಮಾಡಲಾಗುತ್ತಿದೆ. ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆಯನ್ನು ತಡೆಗಟ್ಟಿ, ಸರ್ಕಾರಕ್ಕೆ ಬರುವ ಆದಾಯವನ್ನು ಹೆಚ್ಚಿಸಿಕೊಳ್ಳಲೂ ಕೂಡ ಕ್ರಮ ಕೈಗೊಳ್ಳಬೇಕಿದೆ. ಅದರ ಜೊತೆ ಜೊತೆಗೆ ಸಾರ್ವಜನಿಕರಿಗೆ ಮರಳು ಸುಲಭವಾಗಿ ಲಭ್ಯವಾಗುವಂತೆ ಮಾಡಬೇಕಿದೆ. ತಾವು ಸಚಿವರಾದ ಬಳಿಕ, ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ, ಮರಳು ಸೇರಿದಂತೆ ವಿವಿಧ ಗಣಿಗಾರಿಕೆ ಉದ್ಯಮದಲ್ಲಿ ಇರುವ ಸಮಸ್ಯೆಗಳ ಕುರಿತು ಮಾಹಿತಿ ಪಡೆಯುತ್ತಿದ್ದೇನೆ. ಮರಳು ಗಣಿಗಾರಿಕೆಯನ್ನು ಸುಗಮಗೊಳಿಸಲು ಹಾಗೂ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಒಂದು ತಿಂಗಳ ಒಳಗಾಗಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವ ರಾಜಶೇಖರ ಪಾಟೀಲ್ ಅವರು ಹೇಳಿದರು.
ಗ್ರಾನೈಟ್ ಲೀಸ್ ಅರ್ಜಿ ವಿಲೇವಾರಿಗೆ ಕ್ರಮ : ಕೊಪ್ಪಳ ಜಿಲ್ಲೆಯ ಕುಷ್ಟಗಿ, ಕುಕನೂರು, ಬಾಗಲಕೋಟೆ ಜಿಲ್ಲೆಯ ಇಲಕಲ್‌ನಲ್ಲಿನ ಗ್ರಾನೈಟ್‌ಗೆ ಉತ್ತಮ ಬೇಡಿಕೆ ಇದೆ. ಗ್ರಾನೈಟ್ ಉದ್ಯಮ ವ್ಯಾಪಕವಾಗಿದೆ. ಆದರೆ ಗ್ರಾನೈಟ್ ಕ್ವಾರಿ ಲೀಸ್, ಕ್ರಷರ್ ಗಳಿಗೆ ಅನುಮತಿ ಹಾಗೂ ನವೀಕರಣಕ್ಕೆ ಸಲ್ಲಿಸಿದ ಅರ್ಜಿಗಳ ವಿಲೇವಾರಿಯಲ್ಲಿ ಸಾಕಷ್ಟು ವಿಳಂಬವಾಗುತ್ತಿದೆ. ಅಕ್ರಮವಾಗಿ ಕ್ರಷರ್‌ಗಳು ನಡೆಯುತ್ತಿವೆ ಎಂಬ ದೂರುಗಳು ಕೇಳಿಬರುತ್ತಿವೆ ಎಂದು ಸಚಿವರು ಈ ಸಂದರ್ಭದಲ್ಲಿ ಹೇಳಿದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು, ಜಿಲ್ಲೆಯಲ್ಲಿ ಒಟ್ಟು ೪೮ ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಪೈಕಿ ೨೭ ಅರ್ಜಿಗಳನ್ನು ಟಾಸ್ಕ್‌ಫೋರ್ಸ್ ಸಮಿತಿ ಮೂಲಕ ಅನುಮೋದನೆ ನೀಡಿ ವಿಲೇವಾರಿ ಮಾಡಿದೆ. ೧೩ ಅರ್ಜಿಗಳು ಸರ್ಕಾರದ ಮಟ್ಟದಲ್ಲಿ ಬಾಕಿ ಇದೆ. ಅನಧಿಕೃತ ಗಣಿಗಾರಿಕೆ, ಗಣಿಗಾರಿಕೆ ನಡೆಸಿ, ಮಣ್ಣು ಮುಚ್ಚಿದ ಪ್ರಕರಣಗಳು ಹಾಗೂ ದಂಡ ವಿಧಿಸುವ ಪ್ರಕರಣಗಳ ಕುರಿತು, ಸೂಕ್ತ ಮಾರ್ಗಸೂಚಿಯ ಕೊರತೆಯಿಂದಾಗಿ ತ್ವರಿತವಾಗಿ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು. ಜಿಲ್ಲಾಧಿಕಾರಿಗಳು ಖುದ್ದು ಭೇಟಿ ನೀಡಿ, ಪರಿಶೀಲಿಸಿ, ಶೀಘ್ರ ಒಂದು ನಿರ್ಧಾರ ಕೈಗೊಳ್ಳಬೇಕು. ಪಟ್ಟಾ ಭೂಮಿ ಹಾಗೂ ಸಮರ್ಪಕ ದಾಖಲೆಗಳನ್ನು ಸಲ್ಲಿಸುವವರಿಗೆ ಸಮಿತಿ ಸಭೆಯಲ್ಲಿ ವರದಿ ಮಂಡಿಸಿ, ಅನುಮತಿ ನೀಡಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಡಿಎಂಎಫ್ ಮೊತ್ತ ಅಭಿವೃದ್ಧಿಗೆ ವಿನಿಯೋಗ: ಗಣಿಗಾರಿಕೆಯಿಂದ ಬಾಧಿತಗೊಳ್ಳುವ ಪ್ರದೇಶಗಳ ಅಭಿವೃದ್ಧಿಗಾಗಿ ಜಿಲ್ಲಾ ಖನಿಜ ಫೌಂಡೇಷನ್ ಟ್ರಸ್ಟ್ (ಡಿಎಂಎಫ್) ಸ್ಥಾಪಿಸಲಾಗಿದ್ದು, ಸರ್ಕಾರದ ಸೂಚನೆಯಂತೆ ಟ್ರಸ್ಟ್ ಅನ್ನು ನೋಂದಣಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಟ್ರಸ್ಟ್‌ನಲ್ಲಿ ೨೩. ೬೨ ಕೋಟಿ ರೂ. ಅನುದಾನ ಸಂಗ್ರಹವಾಗಿದ್ದು, ಗಣಿಗಾರಿಕೆ ಬಾಧಿತ ಪ್ರದೇಶದ ಅಭಿವೃದ್ಧಿಗಾಗಿ ೩೩ ಕಾಮಗಾರಿಗಳ ೬.೬೯ ಕೋಟಿ ರೂ. ಮೊತ್ತದ ಕ್ರಿಯಾ ಯೋಜನೆ ಅನುಮೋದಿಸಲಾಗಿದೆ. ಟ್ರಸ್ಟ್ ಹೆಸರಿನಲ್ಲಿ ಬ್ಯಾಂಕ್ ಖಾತೆಯನ್ನು ತೆರೆದು, ಖಜಾನೆಯಿಂದ ಹಣ ಪಾವತಿಯಾದ ಕೂಡಲೆ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಸಭೆಗೆ ವಿವರಿಸಿದರು.
ಎ-ಗ್ರೇಡ್ ದೇವಾಲಯಗಳ ಅಭಿವೃದ್ಧಿ : ಜಿಲ್ಲೆಯಲ್ಲಿ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನ ಮತ್ತು ಕನಕಗಿರಿಯ ಕನಕಾಚಲಪತಿ ದೇವಸ್ಥಾನಗಳು ಎ-ಗ್ರೇಡ್ ದೇವಾಲಯಗಳಾಗಿದ್ದು, ದೇವಾಲಯಗಳ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ದೇವಾಲಯಗಳ ಆವರಣದಲ್ಲಿ ಸೂಕ್ತ ಮೂಲಭೂತ ಸೌಕರ್ಯ ಹಾಗೂ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಹಾಗೂ ದೇವಾಲಯಗಳ ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿಪಡಿಸುವುದರ ಜೊತೆಗೆ ಭಕ್ತಾದಿಗಳಿಗೆ ಉತ್ತಮ ಸೌಕರ್ಯ ಒದಗಿಸಲು ಅಗತ್ಯ ವ್ಯವಸ್ಥೆ ಕೈಗೊಳ್ಳುವಂತೆ ರಾಜ್ಯ ಗಣಿ ಮತ್ತು ಭೂವಿಜ್ಞಾನ ಹಾಗೂ ಮುಜರಾಯಿ ಸಚಿವರಾದ ರಾಜಶೇಖರ ಬಿ. ಪಾಟೀಲ್ ಅವರು ಹೇಳಿದರು.
ಸಭೆಯಲ್ಲಿ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ಎನ್‌ಎಂಡಿಸಿ ವ್ಯವಸ್ಥಾಪಕ ನಿರ್ದೇಶಕ ನವೀನ್‌ರಾಜ್ ಸಿಂಗ್, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಉಪವಿಭಾಗಾಧಿಕಾರಿ ಸಿ.ಡಿ. ಗೀತಾ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ರಾವಲ್, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

About admin

Comments are closed.

Scroll To Top