ಸಾಮಾಜಿಕ ಸುರಕ್ಷಾ (ಸಂಹಿತೆ) ಕಲ್ಯಾಣ ಮಸೂದೆ-೨೦೧೮ಯನ್ನು ಕೈಬಿಡಲು ಆಗ್ರಹಿಸಿ ಕಟ್ಟಡ ಕಾರ್ಮಿಕರಿಂದ ಜಿಲ್ಲಾಧಿಕಾರಿಗೆ ಮನವಿ

ಕೊಪ್ಪಳ:ಆ.೯: ಈಗಾಗಲೇ ನೋಟು ಅಮಾನ್ಯೀಕರಣ ಹಾಗೂ ಜಿಎಸ್‌ಟಿ ನೀತಿಗಳನ್ನು ಜಾರಿ ಮಾಡಿ ಕೋಟ್ಯಾಂತರ ಕಟ್ಟಡ ಕಾರ್ಮಿಕರನ್ನು ನಿರುದ್ಯೋಗಿಗಳನ್ನಾಗಿಸಿದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಇದೀಗ ಸಾಮಾಜಿಕ ಸುರಕ್ಷತಾ ಮಸೂದೆ-೨೦೧೮ಯನ್ನು ಜಾರಿಗೊಳಿಸುವ ಮೂಲಕ ನಾಲ್ಕು ಕೋಟಿ ಕಟ್ಟಡ ನಿರ್ಮಾಣ ಕಾರ್ಮಿಕರು ಈಗ ಪಡೆಯುತ್ತಿರುವ ಹಲವು ಸೌಲಭ್ಯಗಳನ್ನು ಕಸಿಯಲು ಹೊರಟಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಸಂಘಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ವಿವಿಧ ಕಟ್ಟಡ ಕಾರ್ಮಿಕ ಸಂಘಗಳ ಮುಖಂಡರು ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ಕೇಂದ್ರ ಸರಕಾರದ ಈ ನೀತಿಯ ವಿರುದ್ಧ ದೇಶವ್ಯಾಪಿ ಮುಷ್ಕರಕ್ಕೆ ಕಟ್ಟಡ ನಿರ್ಮಾಣ ವಲಯದ ಕಾರ್ಮಿಕರು ಸನ್ನದ್ದರಾಗುತ್ತಿದ್ದಾರೆ. ದೇಶದ ಕಾರ್ಮಿಕ ವರ್ಗದ ಸ್ವಾತಂತ್ರ್ಯ ಪೂರ್ವದಿಂದ ಹೋರಾಡುತ್ತಾ ಗಳಿಸಿದ್ದ ೪೪ ಕಾರ್ಮಿಕ ಕಾನೂನುಗಳನ್ನು ಮಾಲಿಕರ ಪರವಾಗಿ ತಿದ್ದುಪಡಿ ರದ್ದು ಮಾಡಲು ಮುಂದಾಗಿ ಹೀಗೆ ತಿದ್ದುಪಡಿ ಮಾಡಲು ಹೊರಟಿರುವ ಕಾನೂನು ತಿದ್ದುಪಡಿಗಳಲ್ಲಿ ದೇಶದ ಕೋಟ್ಯಾಂತರ ಕಟ್ಟಡ ನಿರ್ಮಾಣ ಕಾರ್ಮಿಕರು ನೊಂದಣಿಯಾಗಿರುವ ಹಾಗೂ ಸೌಲಭ್ಯ ಪಡೆಯುತ್ತಿರುವ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಕಾನೂನು ೧೯೯೬ ಹಾಗೂ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಸೆಸ್ ಕಾನೂನುಗಳು ಸೇರಿವೆ ಎಂಬುದು ಅತ್ಯಂತ ಆತಂಕದ ಸಂಗತಿಯಾಗಿದೆ. ಸಾಮಾಜಿಕ ಭದ್ರತಾ ಹಾಗೂ ಕಲ್ಯಾಣ ಮಸೂದೆ ಹಾಗೂ ವೃತ್ತಿ ಆಧಾರಿತ ಸುರಕ್ಷಾ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿ ಕುರಿತಾದ ಎರಡು ಕೋಡ್‌ಗಳು ಜಾರಿಯಾದರೆ ಈಗಿರುವ ನಮ್ಮ ಎರಡು ಕಟ್ಟಡ ಕಾರ್ಮಿಕ ಕಾನೂನುಗಳು ಸೇರಿ ರದ್ದಾಗಲಿವೆ.
ಸಾಮಾಜಿಕ ಸುರಕ್ಷತಾ ಮಸೂದೆಯು ಕಾಯ್ದೆಯಾಗಿ ಜಾರಿಯಾದರೆ ಇರುವ ಅಪಾಯಗಳು. ೧೯೯೬ರಲ್ಲಿ ಜಾರಿಯಾದ ಕಟ್ಟಡ ಕಾರ್ಮಿಕ ಕಾನೂನು ಹಾಗೂ ಸೆಸ್ ಕಾನೂನುಗಳೆರಡು ರದ್ದಾಗುತ್ತವೆ. ಈಗಾಗಲೇ ನೊಂದಣಿಯಾಗಿರುವ ದೇಶದ ೪ ಕೋಟಿ, ಕರ್ನಾಟಕದ ಸುಮಾರು ೧೫ ಲಕ್ಷ ನೋಂದಾಯಿತ ಕಟ್ಟಡ ಕಾರ್ಮಿಕರ ಗುರುತಿನ ಚೀಟಿಗಳು ರದ್ದಾಗುತ್ತದೆ. ಅಂದರೆ ಈಗ ಕರ್ನಾಟಕದಲ್ಲಿ ಕಲ್ಯಾಣ ಮಂಡಳಿಯಲ್ಲಿ ತಮ್ಮ ಹೆಸರು ನೋಂದಾಯಿಸಿ ಸುಮಾರು ೬ ಲಕ್ಷ ಜನರು ವಿವಿಧ ಕಲ್ಯಾಣ ಸೌಲಭ್ಯಗಳಿಗೆ ಅರ್ಜಿ ಹಾಕಿದ್ದಾರೆ. ಅವರೆಲ್ಲರೂ ೧೪ ಸೌಲಭ್ಯಗಳನ್ನು ಪಡೆಯಲು ಅರ್ಹತೆ ಹೊಂದಿದ್ದಾರೆ. ಆದರೆ ಈ ಹೊಸ ಕಾನೂನು ಜಾರಿಯಾದರೆ ಮದುವೆ, ಪಿಂಚಣಿ, ಹೆರಿಗೆ ಭತ್ಯೆ, ವಿದ್ಯಾರ್ಥಿ ವೇತನಗಳು ಸೇರಿದಂತೆ ಹಲವು ಸೌಲಭ್ಯಗಳು ಇಲ್ಲದಂತೆ ಆಗುತ್ತವೆ.
ಹೊಸದಾಗಿ ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ‘ಸಲಹಾ ಮಂಡಳಿ’ಗಳು ರಚನೆಯಾಗುತ್ತವೆ ಮತ್ತು ಅವುಗಳು ಹಿಂದಿನಂತೆ ತೀರ್ಮಾನ ಕೈಗೊಳ್ಳುವ ಮಂಡಳಿಗಳಾಗಿರುವುದಿಲ್ಲ. ಅದರಲ್ಲಿ ಕಟ್ಟಡ ಕಾರ್ಮಿಕ ಸಂಘಗಳಿಗೆ ಹೆಚ್ಚಿನ ಪ್ರಾತಿನಿದ್ಯ ಇರುವುದಿಲ್ಲ ಬದಲಾಗಿ ಕೇವಲ ಅಧಿಕಾರಿಗಳು ಮತ್ತು ಮಾಲೀಕರು ತುಂಬಿರುತ್ತಾರೆ. ಹೊಸ ರಾಜ್ಯ ಕಲ್ಯಾಣ ಮಂಡಳಿಯಲ್ಲಿ ಈಗಿನಂತೆ ನೊಂದಣಿ ಕಡ್ಡಾಯವಿಲ್ಲ. ಕಾರ್ಮಿಕರು ೧೪ನೇ ವಯಸ್ಸಿನಿಂದ ನೊಂದಣಿ ಮಾಡಬಹುದು. ಇದರಿಂದ ಬಾಲ ಕಾರ್ಮಿಕ ಪದ್ದತಿಗೆ ಉತ್ತೇಜನ ನೀಡುತ್ತದೆ. ರಾಜ್ಯದ ಕಲ್ಯಾಣ ಮಂಡಳಿಗಳಲ್ಲಿ ಶೇಖರಿಸಲ್ಪಟ್ಟ ಸೆಸ್ ಹಣ ಕೇಂದ್ರ ಸರಕಾರದ ಕೈ ವಶವಾಗುತ್ತದೆ. ಇದರಿಂದ ಈಗಿನಂತೆ ಕಲ್ಯಾಣ ಮಂಡಳಿಗಳು ಸೌಲಭ್ಯಗಳ ಕುರಿತಾಗಿ ತೀರ್ಮಾನ ಕೈಗೊಳ್ಳುವಂತಿಲ್ಲ. ಹೀಗಾಗಿ ಕರ್ನಾಟಕದಲ್ಲಿ ಈಗ ಶೇಖರಣೆ ಆಗಿರುವ ಸುಮಾರು ೮ ಸಾವಿರ ಕೋಟಿ ಹಾಗೂ ಇಡೀ ದೇಶದ ವಿವಿಧ ಕಲ್ಯಾಣ ಮಂಡಳಿಯಲ್ಲಿ ಶೇಖರಣೆಯಾಗಿರುವ ಸುಮಾರು ೭೦ ಸಾವಿರ ಕೋಟಿ ಹಣ ಕೇಂದ್ರ ಸರಕಾರದ ಕೈ ವಶವಾಗಲಿದೆ.
ಇದೆಲ್ಲದಕ್ಕಿಂತ ಮುಖ್ಯವಾಗಿ ಕಾರ್ಮಿಕರ ನೋಂದಣಿ, ನವೀಕರಣ ಹಾಗೂ ಸೌಲಭ್ಯಗಳ ವಿತರಣೆಯನ್ನು ಖಾಸಗೀಯವರ ಕೈಗೆ ವಹಿಸಿ ಅವರಿಗೆ ಕಲ್ಯಾಣ ಮಂಡಳಿಯಲ್ಲಿ ಸಂಗ್ರಹವಾಗಿರುವ ಸಾವಿರಾರು ಕೋಟಿ ಹಣವನ್ನು ಧಾರೆ ಎರೆಯಲು ಕೇಂದ್ರ ಸರಕಾರ ನಡೆಸುತ್ತಿರುವ ಹುನ್ನಾರವಾಗಿದೆ.
ಕಾರ್ಮಿಕರು ಹಲವು ವರ್ಷಗಳ ಕಾಲ ಹೋರಾಟ ನಡೆಸಿ ಗಳಿಸಿದ ಕಾನೂನುಗಳನ್ನು ಮತ್ತು ಅದರಡಿ ದೊರಕುತ್ತಿದ್ದ ಸೌಲಭ್ಯಗಳನ್ನು ಇಲ್ಲದಂತೆ ಮಾಡುವ ಹುನ್ನಾರದ ವಿರುದ್ಧ ಕಟ್ಟಡ ಕಾರ್ಮಿಕ ಕಾನೂನು-೧೯೯೬ ಉಳಿಸಿ-ಕಟ್ಟಡ ಕಾರ್ಮಿಕ ಮಂಡಳಿ ಹಾಗೂ ಕಾರ್ಮಿಕರ ಬದುಕನ್ನು ರಕ್ಷಿಸಿ ಎನ್ನುವ ವಿಶಾಲ ಆಂದೋಲನವನ್ನು ಚುನಾವಣೆ ಪೂರ್ವದಲ್ಲೇ ರಾಜ್ಯದ ಲೋಕಸಭಾ ಸದಸ್ಯರ ಮನೆಗಳ ಎದುರು ನಾವೆಲ್ಲ ನಡೆಸಿದ್ದು ತಮಗೆಲ್ಲ ನೆನಪಿದೆ.
ಈ ಹಿನ್ನಲೆಯಲ್ಲಿ ಹೋರಾಟದ ಮುಂದುವರೆದ ಭಾಗವಾಗಿಯೇ ಜುಲೈ ೧೭ ರಂದು ಬೆಂಗಳೂರಿನಲ್ಲಿ ನಿವೃತ್ತ ನ್ಯಾಯಮೂರ್ತಿಗಳು, ಮಾಜಿ ಕಾರ್ಮಿಕ ಅಧಿಕಾರಿಗಳು, ಕಾನೂನು ತಜ್ಞರು, ಸಾಮಾಜಿಕ ಹಾಗೂ ಕಾರ್ಮಿಕ ಸಂಘಗಳ ನಾಯಕರನ್ನೊಳಗೊಂಡು ನಡೆಸಲಾದ ‘ದುಂಡು ಮೇಜಿನ ಸಭೆ’ ಈ ಸಭೆಯು ಕೇಂದ್ರ ಸರಕಾರ ಅಂಗೀಕರಿಸಿರುವ ಕಾರ್ಮಿಕ ಸಂಹಿತೆ ಮಸೂದೆಗಳನ್ನು ಕೂಡಲೇ ಕೈ ಬಿಡಬೇಕೆಂದು ಆಗ್ರಹಿಸಿ ಪ್ರಚಾರಾಂದೋಲನ ಕಾರ್ಯಕ್ರಮ ನಡೆಸಲು ಕರೆ ನೀಡಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನಿನ ಜಿಲ್ಲಾ ಕಾರ್ಯದರ್ಶಿ ಖಾಸಿಮಸಾಬ ಸರದಾರ, ಸುಂಕಪ್ಪ ಗದಗ, ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್, ಕವಲೂರ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಶರಣಯ್ಯ ಅಬ್ಬಿಗೇರಿ, ಉಪಾಧ್ಯಕ್ಷ ಸೈಯ್ಯದ್ ಬಾಷಾ ದೊಡ್ಡಮನಿ, ಖಜಾಂಚಿ ಶರಣಬಸಯ್ಯ ರಾಮಗಿರಿಮಠ, ಕಾರ್ಯದರ್ಶಿ ಮಹಾಲಿಂಗಯ್ಯ ಸಿಂದೋಗಿಮಠ, ಸಂಘಟನಾ ಕಾರ್ಯದರ್ಶಿ ಶಮಶುದ್ದೀನ್ ಮಕಾಂದರ, ವಿರುಪಾಕ್ಷಪ್ಪ ಸಂಕದಾಳ, ರಾಜೆಸಾಬ.ಎನ್.ತಹಶೀಲ್ದಾರ, ಸೈಯ್ಯದ್ ಜಾಫರಸಾಬ ಮಕಾಂದರ, ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾರ್ಮಿಕರ ಒಕ್ಕೂಟದ ಜಿಲ್ಲಾ ಅಧ್ಯಕ್ಷರಾದ ವಿರುಪಾಕ್ಷಪ್ಪ. ಎಂ. ಕಮ್ಮಾರ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Please follow and like us:
error