ಸಾಧನೆಗೆ ನಿರಂತರ ಪರಿಶ್ರಮ ಅಗತ್ಯ : ಬಿ. ಕಲ್ಲೇಶ

smart_career_academy_koppal
ಕೊಪ್ಪಳ : ಸತತ ಪರಿಶ್ರಮದಿಂದ ಸಾಧಿಸಲು ಸಾಧ್ಯ. ಅಭ್ಯರ್ಥಿಗಳು ನಿರಂತರ ಅಧ್ಯಯನದಲ್ಲಿ ತೊಡಗಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಬಿ.ಕಲ್ಲೇಶ ಸಲಹೆ ನೀಡಿದರು.
ನಗರದ ಸ್ಮಾರ್ಟ್ ಕರಿಯರ್ ಅಕಾಡೆಮಿಯಲ್ಲಿ ರವಿವಾರ ಆಯೋಜಿಸಿದ್ದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತಾ ಉಚಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ನಾವು ಶಿಕ್ಷಣ ಪಡೆಯುವ ಸಂದರ್ಭದಲ್ಲಿ ಯಾವುದೇ ಸೌಲಭ್ಯಗಳು ಇರಲಿಲ್ಲ. ಇರುವ ಸೌಲಭ್ಯವನ್ನೇ ಪಡೆದು ಉತ್ತಮ ಶಿಕ್ಷಣ ಪಡೆದು ಇಂದು ಉನ್ನತ ಸ್ಥಾನಕ್ಕೆ ಬಂದಿದ್ದೇವೆ. ಪ್ರಸ್ತುತ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಲ್ಗೊಳ್ಳಲು ವಿವಿಧ ಮಾಹಿತಿ ಹಾಗೂ ಸೌಲಭ್ಯಗಳು ಲಭ್ಯ ಇವೆ. ವಿವಿಧ ಸ್ಪರ್ಧಾ ಪುಸ್ತಕ, ತರಬೇತಿ ಪಡೆದು ಸಾಧನೆಯ ಹಾದಿಯಲ್ಲಿ ಮುನ್ನಡೆಯಿರಿ ಎಂದು ಸ್ಪರ್ಧಾರ್ಥಿಗಳಿಗೆ ಸಲಹೆ ನೀಡಿದರು.
ಪಿಎಸ್‌ಐ ಗಂಗಾಧರ ಬಡಿಗೇರ ಮಾತನಾಡಿ, ಸ್ಪರ್ಧಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಾವ ರೀತಿ ಪ್ರಶ್ನೆಗಳಿಗೆ ಉತ್ತರಿಸಬೇಕು ? ಯಾವ ರೀತಿ ಪ್ರಶ್ನೆಗಳನ್ನು ಅರ್ಥ ಮಾಡಿಕೊಳ್ಳಬೇಕು ? ಎನ್ನುವ ಕೌಶಲವನ್ನು ಕಲಿಯಬೇಕು. ಅಭ್ಯರ್ಥಿಗಳು ಆಳವಾದ ಅಧ್ಯಯನದಲ್ಲಿ ತೊಡಗಿದರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಅತ್ಯಂತ ಸುಲಭ ಹಾಗೂ ಸರಳವಾಗಿ ಎದುರಿಸಬಹುದು ಎಂದರು.
ಕಾರ್ಯಕ್ರಮದಲ್ಲಿ ಸ್ಮಾರ್ಟ್ ಕರಿಯರ್ ಅಕಾಡೆಮಿ ನಿರ್ದೇಶಕ ಶ್ರೀ ಜಿ.ಯರಿಸ್ವಾಮಿ, ರಾಜೀವಗಾಂಧಿ ಬಿ.ಇಡಿ ಕಾಲೇಜು ಪ್ರಾಚಾರ್ಯ ವಿನೋದ ಹೂಲಿ, ಧಾರವಾಡದ ಮಾನಸಿಕ ಸಾಮರ್ಥ್ಯ ವಿಷಯ ತಜ್ಞ ಮಲ್ಲು ಛಲವಾದಿ, ಶ್ರೀನಿವಾಸ, ಮಹೇಶ ಪೂಜಾರ, ನಿರಂಜನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply