ಸಫಾಯಿ ಕರ್ಮಚಾರಿಗಳ ಮಕ್ಕಳಿಗೆ ಪಿ.ಯು.ಸಿ ವರೆಗೆ ಉಚಿತ ಶಿಕ್ಷಣ : ಎಂ.ಆರ್ ವೆಂಕಟೇಶ

: ಪೌರಕಾರ್ಮಿಕರು/ ಸಫಾಯಿ ಕರ್ಮಚಾರಿಗಳ ಮಕ್ಕಳಿಗೆ ಪಿ.ಯು.ಸಿ ವರೆಗೆ ಉಚಿತ ಶಿಕ್ಷಣ ನೀಡಲು, ಸರ್ಕಾರ ಪ್ರತಿಷ್ಠಿತ ಶಾಲೆಗಳಲ್ಲಿ ಮೀಸಲಾತಿ ನೀಡುವ ವ್ಯವಸ್ಥೆಯನ್ನು ಜಾರಿಗೊಳಿಸಿದೆ ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷರಾದ ಎಂ.ಆರ್ ವೆಂಕಟೇಶ ಅವರು ಹೇಳಿದರು.
ಬೆಂಗಳೂರು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ ಹಾಗೂ ಕೊಪ್ಪಳ ಜಿಲ್ಲಾಡಳಿತದ ಸಹಯೋಗದಲ್ಲಿ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಸೋಮವಾರದಂದು ಹಮ್ಮಿಕೊಳ್ಳಲಾಗಿದ್ದ, ಸಫಾಯಿ ಕರ್ಮಚಾರಿಗಳೊಂದಿಗಿನ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದ ಕಿತ್ತೂರು ರಾಣಿ ಚೆನ್ನಮ್ಮ ಇತ್ಯಾದಿ ಪ್ರತಿಷ್ಟಿತ ಶಾಲೆಗಳಲ್ಲಿ ಪೌರಕಾರ್ಮಿಕರ/ ಸಫಾಯಿ ಕರ್ಮಚಾರಿಗಳ ಮಕ್ಕಳಿಗೆ ಪ್ರವೇಶ ಪರೀಕ್ಷೆ ಇಲ್ಲದೇ ನೇರ ದಾಖಲಾತಿಗಾಗಿ ಸರ್ಕಾರ ಅನುವು ಮಾಡಿದ್ದು, ರಾಜ್ಯದಲ್ಲಿ ಪ್ರತಿಷ್ಠಿತ ಶಾಲೆಗಳಲ್ಲಿ ಇವರಿಗಾಗಿ ೧೮೩೦ ಸ್ಥಾನಗಳನ್ನು ಮೀಸಲಿಟ್ಟಿದೆ. ಇತರೆ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಾಹೆಯಾನ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ. ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮವನ್ನು ಕರ್ನಾಟಕ ರಾಜ್ಯ ಸರ್ಕಾರ ಸ್ಥಾಪಿಸಿದೆ. ಪೌರ ಕಾರ್ಮಿಕರಿಗೆ ೭.೫ ಲಕ್ಷ ವೆಚ್ಛದಲ್ಲಿ ಮನೆಗಳ ನಿರ್ಮಾಣ ಮಾಡಲು ಗೃಹ ಭಾಗ್ಯ ಯೋಜನೆ ಜಾರಿಗೊಳಿಸಲಾಗಿದೆ. ಈ ಯೋಜನೆಗೆ ರಾಜ್ಯದಲ್ಲಿ ೭೫ ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಸರ್ಕಾರವು ಕನಿಷ್ಠ ವೇತನ ವನ್ನು ಜಾರಿಗೊಳಿಸಲಾಗಿದ್ದು, ಇದರನ್ವಯ ಪಿ.ಎಫ್. & ಇ.ಎಸ್.ಐ ಒಳಗೊಂಡು ಕನಿಷ್ಠ ವೇತವನ್ನು ನೀಡುತ್ತಿದೆ. ಪೌರಕಾರ್ಮಿಕರಿಗೆ ಕರ್ನಾಟಕ ರಾಜ್ಯ ಸರ್ಕಾರ ನೀಡುತ್ತಿರುವಂತಹ ಸೌಲಭ್ಯಗಳು ದೇಶದ ಯಾವುದೇ ರಾಜ್ಯದಲ್ಲಿಯೂ ಇಲ್ಲ. ಇದರ ಜೊತೆ ಬೆಳಗಿನ ಉಪಹಾರ, ವಾರ್ಷಿಕ ಎರಡು ಜೊತೆ ಬಟ್ಟೆ, ಸುರಕ್ಷಾ ಪರಿಕರಗಳನ್ನು ಅವರ ಆರೋಗ್ಯದ ಹಿತದೃಷ್ಟಿಯಿಂದ ನೀಡಲಾಗುತ್ತಿದೆ. ಪೌರಕಾರ್ಮಿಕರಿಗೆ ಆರೋಗ್ಯ, ಮಕ್ಕಳ ಶಿಕ್ಷಣ, ಶೌಚಾಲಯ ನಿರ್ಮಾಣ, ವೈದ್ಯಕೀಯ ಸೇವೆ, ಇತ್ಯಾದಿ ವೈಯುಕ್ತಿಕ ಸೇವೆಗಳನ್ನು ಒದಗಿಸಲು ಶೇ. ೨೦% ಹಣವನ್ನು ಮೀಸಲಿಡಲಾಗಿದೆ. ಆರೋಗ್ಯ ಭದ್ರತೆಗಾಗಿ ೯.೬೫ ಲಕ್ಷ ಹಣವನ್ನು ನಿಗಮದ ಜ್ಯೋತಿ ಸಂಜೀವಿನಿಗೆ ನೀಡಲಾಗಿದೆ. ಸಫಾಯಿ ಕರ್ಮಚಾರಿಗಳ ಸಮಗ್ರ ಅಭಿವೃದ್ಧಿ ಯೋಜನೆಯಡಿ ೧೦೦ ಕೋಟಿ ರೂ. ಗಳನ್ನು ಸರ್ಕಾರ ಬಜೆಟ್ ನಲ್ಲಿ ಮಿಸಲಿಟ್ಟಿದೆ. ಇದರಲ್ಲಿ ಸಫಾಯಿ ಕರ್ಮಚಾರಿಗಳ ಕಾಲೋನಿಯಲ್ಲಿ ಸಿ.ಸಿ ರಸ್ತೆ, ಕುಡಿಯುವ ನೀರು, ಕಾಲೋನಿ ನಿರ್ಮಾಣ, ರಸ್ತೆ, ಅಂಗನವಾಡಿ ಇತ್ಯಾದಿಗಳ ಅಭಿವೃದ್ಧಿ ಕಾರ್ಯಗಳು ಒಳಗೊಂಡಿವೆ. ಪೌರಕಾರ್ಮಿಕರು/ ಸಫಾಯಿ ಕರ್ಮಚಾರಿಗಳಿಗೆ ನಿಗಮದಿಂದ ವಾಹನ ಸಾಲ, ಕೌಶಲ್ಯಾಭಿವೃಧ್ಧಿ ತರಬೇತಿ, ವಾಹನ ಚಾಲನಾ ತರಬೇತಿ ಹಾಗೂ ವಿವಿಧ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷರಾದ ಎಂ.ಆರ್ ವೆಂಕಟೇಶ ಅವರು ಹೇಳಿದರು.
ಸಂವಾದ ಕಾರ್ಯಕ್ರಮದಲ್ಲಿ ಕೊಪ್ಪಳದ ಪೌರಕಾರ್ಮಿಕ ದೇವಪ್ಪ ಮಾತನಾಡಿ, ಪೌರಕಾರ್ಮಿಕರು/ ಸಫಾಯಿ ಕರ್ಮಚಾರಿಗಳು ಮರಣ ಹೊಂದಿದರೆ ಅನುಕಂಪದ ಆಧಾರದಮೇಲೆ ಅವರ ಮಕ್ಕಳಿಗೆ ಕೆಲಸಕ್ಕೆ ತೆಗೆದುಕೊಳ್ಳಲು ಕನಿಷ್ಠ ಎಸ್.ಎಸ್.ಎಲ್.ಸಿ ವಿದ್ಯಾರ್ಹತೆಯನ್ನು ಹೊಂದಿರಬೇಕು ಎಂಬ ನಿಯಮವನ್ನು ಸಡಿಲಿಸಬೇಕು. ನಗರದಲ್ಲಿ ೨೪ ಗುತ್ತಿಗೆ ಕಾರ್ಮಿಕರಿದ್ದು, ಸುಮಾರು ೧೮ ರಿಂದ ೨೦ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಸೇವೆಯನ್ನು ಖಾಯಂ ಗೊಳಿಸುವಂತೆ ಮನವಿ ಮಾಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಆಯೋಗದ ಅಧ್ಯಕ್ಷರು, ಪೌರಕಾರ್ಮಿಕರು/ ಸಫಾಯಿ ಕರ್ಮಚಾರಿಗಳ ಕೆಲಸಕ್ಕೆ ಯಾವುದೇ ವಿದ್ಯಾರ್ಹತೆಯನ್ನು ನಿಗದಿಪಡಿಲ್ಲ. ೨೦ ವರ್ಷಗಳ ಸೇವೆ ಸಲ್ಲಿಸಿದ ನೌಕರರಿಗೆ ಖಾಯಂ ಕೆಲಸ ಒದಗಿಸುವ ಕುರಿತು ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯರಾದ ಗೋಕುಲ ನಾರಾಯಣಸ್ವಾಮಿ, ಉಪನಿರ್ದೇಶಕ ಮಂಜುನಾಥ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿಜಯ ಕುಮಾರ, ಕೊಪ್ಪಳ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಶ್ರೀಕಾಂತ, ನಗರಸಭೆ ಪೌರಾಯುಕ್ತ ಪರಮೇಶ್ವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಜಿಲ್ಲೆಯ ವಿವಿಧೆಡೆಗಳಿಂದ ಪೌರಕಾರ್ಮಿಕರು ಹಾಗೂ ವಿವಿಧ ಇಲಾಖೆಗಳಡಿ ಕಾರ್ಯ ನಿರ್ವಹಿಸುವ ಸಫಾಯಿ ಕರ್ಮಚಾರಿಗಳು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Please follow and like us:
error