ಸಫಾಯಿ ಕರ್ಮಚಾರಿಗಳಿಗಿರುವ ಯೋಜನೆಗಳ ಕುರಿತು ಜಾಗೃತಿ ಮೂಡಿಸಿ : ಎಂ.ಆರ್ ವೆಂಕಟೇಶ

: ಪೌರಕಾರ್ಮಿಕರು/ ಸಫಾಯಿ ಕರ್ಮಚಾರಿಗಳ ಕುಟುಂಬಗಳಿಗೆ ಸರ್ಕಾರವು ವಿವಿಧ ಯೋಜನೆಗಳನ್ನು ಜಾರಿಗೊಳಿಸಿದ್ದು, ಈ ಕುರಿತು ಅವರಲ್ಲಿ ಜಾಗೃತಿ ಮೂಡಿಸಲು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ಆರ್. ವೆಂಕಟೇಶ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದಿಂದ ಸಫಾಯಿ ಕರ್ಮಚಾರಿಗಳ/ ಪೌರಕಾರ್ಮಿಕರ ಕುಂದುಕೊರತೆಗಳ ಕುರಿತು ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರದಂದು ಆಯೋಜಿಸಲಾಗಿದ್ದ, ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನ್ಯಾಯಾಲಯದ ನಿರ್ದೇಶನದಂತೆ ಪೌರಕಾರ್ಮಿಕರು/ ಸಫಾಯಿ ಕರ್ಮಚಾರಿಗಳಿಗೆ ೨೦೧೩ರ ಕಾಯ್ದೆ ಪ್ರಕಾರ ಕನಿಷ್ಠ ವೇತನವನ್ನು ಜಾರಿಗೊಳಿಸಲಾಗಿದ್ದು, ಕಡ್ಡಾಯವಾಗಿ ಅವರಿಗೆ ಕನಿಷ್ಠ ವೇತನವನ್ನು ನೀಡಬೇಕು. ಈಗಾಗಲೆ ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಲಾಗಿದೆ. ಪಿ.ಎಫ್ ಇ.ಎಸ್.ಐ ಗಳ ನಂಬರ್ ಕುರಿತು ೧೫ ದಿನಗಳ ಒಳಗಾಗಿ ದಾಖಲೆಗಳನ್ನು ಸಲ್ಲಿಸಬೇಕು. ಕಾರ್ಮಿಕ ಅಧಿಕಾರಿಗಳು ಜಿಲ್ಲೆಯ ಎಲ್ಲ ನಗರಸಭೆ, ಪುರಸಭೆ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಭೇಟಿ ನೀಡಿ, ಅವರಿಗೆ ೨೦೧೩ರ ಕಾಯ್ದೆ ಪ್ರಕಾರ ವೇತನ ನೀಡಲಾಗುತ್ತಿದೆಯೇ ಇಲ್ಲವೆ ಎಂಬುದರ ಕುರಿತು ಪರಿಶೀಲಿಸಬೇಕು. ನಗರಸಭೆ, ಪುರಸಭೆ, ಪಟ್ಟಣ ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಪೌರಕಾರ್ಮಿಕರಿಗೆ ಕಡ್ಡಾಯವಾಗಿ ಆರೋಗ್ಯ ತಪಾಸಣೆ ನಡೆಸಬೇಕು. ಸಫಾಯಿ ಕರ್ಮಚಾರಿಗಳಿಗೆ ಸುರಕ್ಷತಾ ಪರಿಕರಗಳಾದ ಮಾಸ್ಕ್, ಕೈಗವಸು, ಟೋಪಿ, ಶೂ ಇವುಗಳನ್ನು ಕಡ್ಡಾಯವಾಗಿ ನೀಡಬೇಕು. ಸುರಕ್ಷತಾ ಪರಿಕರಗಳಿಲ್ಲದೆ ಯಾವುದೇ ಪೌರಕಾರ್ಮಿಕರು ಕರ್ತವ್ಯಕ್ಕೆ ತೆರಳದಂತೆ ನೋಡಿಕೊಳ್ಳಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಪೌರಕಾರ್ಮಿಕರ ಹಾಗೂ ಸಫಾಯಿ ಕರ್ಮಚಾರಿಗಳ ಆರೋಗ್ಯ ತಪಾಸಣೆ ಮಾಡಿಸಬೇಕು. ಅಂಬೇಡ್ಕರ್ ಅಭಿವೃದ್ಧಿ ನಿಗಮ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸಫಾಯಿ ಕರ್ಮಚಾರಿಗಳ ಕಾಲೋನಿಗಳಿಗೆ ಭೇಟಿ ನೀಡಿ, ಸರ್ಕಾರ ಜಾರಿಗೊಳಿಸಿರುವ ಯೋಜನೆಗಳ ಕುರಿತು ಜಾಗೃತಿ ಮೂಡಿಸಬೇಕು. ಜಾಹೀರಾತು ಫಲಕಗಳನ್ನು ಅಳವಡಿಸಬೇಕು. ಕೊಪ್ಪಳ ಜಿಲ್ಲೆಯ ಪ್ರತಿ ತಾಲೂಕು ಪಂಚಾಯತಿಗೆ ಒಂದರಂತೆ ಸಕ್ಕಿಂಗ್ ಮತ್ತು ಜೆಟ್ ಯಂತ್ರವನ್ನು ತಾಲೂಕು ಪಂಚಾಯತಿ ಕಚೇರಿಯಿಂದ ಕೂಡಲೆ ಖರೀದಿಸಬೇಕು ಎಂದು ಆಯೋಗದ ಅಧ್ಯಕ್ಷರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗೃಹ ಭಾಗ್ಯ ಯೋಜನೆಯಡಿ ಕೊಪ್ಪಳ ನಗರಸಭೆಯ ಪೌರಕಾರ್ಮಿಕರಿಗೆ ೩೦*೪೦ ಅಳತೆಯ ನಿವೇಶನವನ್ನು ಒದಗಿಸಿ, ಮನೆ ನಿರ್ಮಿಸಿಕೊಡಲು ಅವಕಾಶ ಮಾಡಿಕೊಟ್ಟಿರುವ ಕೊಪ್ಪಳ ಜಿಲ್ಲಾಧಿಕಾರಿಗಳ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದ್ದು, ಇದು ರಾಜ್ಯಕ್ಕೆ ಮಾದರಿಯಾಗಿದೆ. ಸ್ವಚ್ಛತೆಗೆ ಸಂಬಂಧಿಸಿದಂತೆ ಕೊಪ್ಪಳ ಹಾಗೂ ಗಂಗಾವತಿಯಲ್ಲಿ ಇನ್-ಸ್ಯಾನಿಟರಿ ಲ್ಯಾಟರೀನ್ ವ್ಯವಸ್ಥೆ ಇಂದಿಗೂ ಬಳಕೆಯಲ್ಲಿದ್ದು, ಈ ವ್ಯವಸ್ಥೆಯನ್ನು ಹೋಗಲಾಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಶಾಲಾ ಕಾಲೇಜುಗಳ ಆವರಣಗಳಲ್ಲಿ ಸ್ವಚ್ಛತೆಯನ್ನು ಕಾಪಾಡಲು ಗೊಡೆಗಳ ಮೇಲೆ ಸೂಚನಾ ಫಲಕಗಳನ್ನು ಅಳವಡಿಸಬೇಕು. ಬಸ್‌ನಿಲ್ದಾಣ, ಆಸ್ಪತ್ರೆ, ಇತ್ಯಾದಿ ಸಾರ್ವಜನಿಕ ಸ್ಥಳಗಳಲಿರುವ ಶೌಚಾಲಯಗಳನ್ನು ದುರಸ್ಥಿಪಡಿಸಿ, ಸಾರ್ವಜನಿಕ ಬಳಕೆಗೆ ಅನುಕೂಲ ಮಾಡಬೇಕು. ಬಯಲು ಬರ್ಹಿದೆಸೆಯನ್ನು ತಡೆಗಟ್ಟಿ, ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಿಕೊಳ್ಳಲು ಮತ್ತು ಅದರ ಬಳಕೆ ಕುರಿತು ನಗರಸಭೆಯ ಕಸವಿಲೇವಾರಿ ವಾಹನಗಳ ಮೂಲಕ ಅರಿವು ಮತ್ತು ಜಾಗೃತಿ ಮೂಡಿಸಿ ನೈರ್ಮಲ್ಯ ಸಮಾಜವನ್ನು ನಿರ್ಮಿಸಿ ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷರಾದ ಎಂ.ಆರ್ ವೆಂಕಟೇಶ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯರಾದ ಗೋಕುಲ ನಾರಾಯಣಸ್ವಾಮಿ, ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ ಶೆಟ್ಟಿ, ಸಹಾಯಕ ಆಯುಕ್ತ ಗುರುದತ್ ಹೆಗ್ಡೆ, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಉಪನಿರ್ದೇಶಕ ಮಂಜುನಾಥ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿಜಯ ಕುಮಾರ, ಕೊಪ್ಪಳ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಶ್ರೀಕಾಂತ, ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ನಗರಸಭೆ ಪೌರಾಯುಕ್ತರು, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು ಉಪಸ್ಥಿತರಿದ್ದರು.

Please follow and like us:
error