ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ

ಕೊಪ್ಪಳ ನ್ಯೂಜ್ : ತುಮಕೂರಿನ ಸಿದ್ದಗಂಗಾ ಮಠದ ಡಾ | | ಶಿವಕುಮಾರ ಸ್ವಾಮೀಜಿಯವರು ಲಿಂಗೈಕ್ಯರಾದ ನೋವಿನಲ್ಲಿ ಇಡೀ ರಾಜ್ಯವೇ ಶೋಕಾಚರಣೆ ನಡೆಸುತ್ತಿರುವಾಗಲೇ , ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಪ್ರಿಯಾಂಕ ಖರ್ಗೆಯವರು ತಮ್ಮ ಇಲಾಖೆಯ ವತಿಯಿಂದ ದಿನಾಂಕ 22 . 01 . 2019 , ಮಂಗಳವಾರದಂದು ಆಯೋಜಿಸಿದ್ದ “ ಸಂವಿಧಾನ ಸಂಭಾಷಣೆ ” ಕಾರ್ಯಕ್ರಮವನ್ನು ಮುಂದೂಡದೇ ಇದ್ದುದನ್ನು ಭಾರತೀಯ ಜನತಾ ಪಾರ್ಟಿಯು ಖಂಡಿಸಿದೆ. ಶ್ರೀಗಳು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಅಧಿಕೃತ ಅಧಿಸೂಚನೆಯಂತೆ ಮೂರು ದಿನಗಳ ಕಾಲ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳನ್ನು ರದ್ದು ಪಡಿಸಿದರೂ ಸಹ ಸಮಾಜ ಕಲ್ಯಾಣ ಇಲಾಖೆಯ ಸಚಿವ ಪ್ರಿಯಾಂಕ ಖರ್ಗೆಯವರು ಮಾತ್ರ ತನಗೇನೂ ಶ್ರೀ ಸಿದ್ದಗಂಗಾ ಶ್ರೀಗಳ ಅಗಲಿಕೆಯು ಸಂಬಂಧವಿಲ್ಲವೆಂದು ವರ್ತಿಸಿರುವುದು ಖೇದಕರ ವಿಷಯವಾಗಿದೆ . ಅಲ್ಲದೇ ದೇಶ ವಿರೋಧಿ ಹೇಳಿಕೆಗಳನ್ನು ನೀಡಿದ್ದ ಕನ್ಹಯ್ಯಕುಮಾರ್‌ರಂತಹ ದೇಶದ್ರೋಹಿಗಳನ್ನು ಆಹ್ವಾನಿಸಿರುವುದನ್ನು ರಾಜ್ಯ ಬಿಜೆಪಿಯು ಗಂಭೀರವಾಗಿ ಪರಿಗಣಿಸುತ್ತದೆ . ಶೋಕಾಚರಣೆಯ ನಡುವೆಯೂ ಕಾರ್ಯಕ್ರಮ ನಡೆಸಿದ್ದರ ಬಗ್ಗೆ ಸುದ್ದಿ ಪ್ರಕಟಿಸಿದ್ದ ಮಾಧ್ಯಮಗಳನ್ನು ಉಗ್ರಗಾಮಿಗಳಿಗೆ ಹೋಲಿಸಿ ಹೇಳಿಕೆ ನೀಡಿರುವ ಸಚಿವ ಪ್ರಿಯಾಂಕ ಖರ್ಗೆಯವರ ವರ್ತನೆಯನ್ನು ಸಹ ಬಿಜೆಪಿಯು ಖಂಡಿಸುತ್ತದೆ . ಸಂವಿಧಾನಾತ್ಮಕವಾಗಿ ಕಾರ್ಯನಿರ್ವಹಿಸುವ ರಾಜ್ಯ ಸರ್ಕಾರವು ಹೊರಡಿಸಿದ ಆದೇಶವನ್ನು ಪಾಲಿಸುವ ಮೂಲಕ ತನ್ನ ಸಂವಿಧಾನಾತ್ಮಕ ಜವಾಬ್ದಾರಿಯನ್ನು ನಿರ್ವಹಿಸಬೇಕಿದ್ದ ಸಚಿವರೇ ಸರ್ಕಾರದ ಆದೇಶವನ್ನು ಧಿಕ್ಕರಿಸಿ ಕಾರ್ಯಕ್ರಮವನ್ನು ನಡೆಸಿರುವ ಮೂಲಕ ವಿಶ್ವವೇ ಗೌರವಿಸುವ ಸಿದ್ದಗಂಗಾ ಸ್ವಾಮೀಜಿಯವರಿಗೆ ಅಗೌರವ ತೋರಿದ ಹಾಗೂ ಮಾಧ್ಯಮದವರನ್ನು ಉಗ್ರಗಾಮಿಗಳಿಗೆ ಹೋಲಿಸಿ ಹೇಳಿಕೆ ನೀಡಿದ ಸಚಿವ ಪ್ರಿಯಾಂಕ ಖರ್ಗೆಯವರ ರಾಜೀನಾಮೆಯನ್ನು ಪಡೆಯಬೇಕೆಂದು ಭಾರತೀಯ ಜನತಾ ಪಾರ್ಟಿ ಆಗ್ರಹಿಸಿದೆ. ಈ ಕುರಿತು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಬಿಜೆಪಿಯ ಪದಾದಿಕಾರಿಗಳು ಮನವಿ ಸಲ್ಲಿಸಿದರು. ಈ ಜಿಲ್ಲಾಧಿಕಾರಿಗಳಿಗೆ ಮನವಿ ನೀಡುವ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಚಂದ್ರಶೇಖರಗೌಡ ಜಿ ಪಾಟೀಲ್ ಹಲಗೇರಿ, ಮಾಜಿ ನಗರಸಭಾ ಅಧ್ಯಕ್ಷರಾದ ಚಂದ್ರಶೇಖರ ಕವಲೂರು, ಜಿಲ್ಲಾ ಉಪಾಧ್ಯಕ್ಷ ರಾಜು ಬಾಕಳೆ, ಜಿಲ್ಲಾ ಮಾಧ್ಯಮ ಪ್ರಮುಖ ಬಿ.ಗಿರೀಶಾನಂದ ಜ್ಞಾನಸುಂದರ, ನಗರಾಧ್ಯಕ್ಷರಾದ ಸುನೀಲ ಹೆಸರೂರ, ಪಕ್ಷದ ಮುಖಂಡರಾದ ಬಿ.ಜಿ ಗದಗಿನಮಠ, ಶಿವಕುಮಾರ ಕುಕನೂರು, ಮಹೇಶ ಹಾದಿಮನಿ, ಉಮೇಶ ಕುರುಡೇಕರ ಹಾಗೂ ಇನ್ನೂ ಅನೇಕರು ಉಪಸ್ಥಿತರಿದ್ದರು.