ಸಂವಿಧಾನ ಸುಟ್ಟ ಘಟನೆ : ಪ್ರಚೋದನೆಗೊಳಗಾಗುವುದು ಬೇಡ- ಸಿ.ಎಸ್.ದ್ವಾರಕಾನಾಥ

ದೆಹಲಿಯ ಜಂತರ್ ಮಂತರ್ ನಲ್ಲಿ ಸಂವಿಧಾನವನ್ನು ಸುಟ್ಟ ಸುದ್ದಿ ಈಗ ವೈರಲ್ ಆಗಿದೆ. ಕೆಲವು ಮಂದಿ ನನಗೆ ಪೋನ್ ಮಾಡಿ ತಾವೂ ಏನೇನನ್ನೋ ಸುಟ್ಟು ತಮ್ಮ ಪ್ರತಿಭಟನೆ ಮಾಡುತ್ತೇವೆಂದು ಹೇಳುತಿದ್ದಾರೆ. ಯಾವ ಕಾರಣಕ್ಕೂ ಆ ರೀತಿಯ ಪ್ರತಿಭಟನೆ ಮಾಡಬಾರದೆಂದು ನಾನು ವಿನಂತಿಸುತಿದ್ದೇನೆ.
ಬೆಂಕಿಗೆ ಬೆಂಕಿ ಉತ್ತರವಲ್ಲ, ಬೆಂಕಿಗೆ ನೀರೇ ಉತ್ತರ.. ಅವರ ಬಳಿ ಬೆಂಕಿ ಮಾತ್ರವಿದೆ, ಅವರು ಸುಡಬಲ್ಲರಷ್ಟೇ.. ನಮ್ಮ ಬಳಿ ನೀರು ಮಾತ್ರವಿದೆ..ಅದು ಬೆಂಕಿಯನ್ನು ಆರಿಸಬಲ್ಲದು ಅಷ್ಟೇ ಅಲ್ಲ, ನೀರು ಜೀವರಾಶಿಯನ್ನು ಜೀವಂತಗೊಳಿಸುತ್ತಲೇ ಇರುತ್ತದೆ..
ಮೊದಲು ಸಾವದಾನದಿಂದ ಸಂವಿಧಾನ ಸುಟ್ಟವರ ಉದ್ದೇಶಗಳನ್ನು ಅರ್ಥಮಾಡಿಕೊಳ್ಳೋಣ..?
1. ಸಂವಿಧಾನವನ್ನು ಸುಟ್ಟಾಗ ಅದರ ಪ್ರತಿಕ್ರಿಯೆ ಏನು ಬರುತ್ತದೆಂದು ಸೂಕ್ಷ್ಮವಾಗಿ ನೋಡುವುದು.
2. ಸಂವಿಧಾನವನ್ನು ಸುಟ್ಟು, ಡಾ.ಅಂಬೇಡ್ಕರ್ ರವರ ಮತ್ತು ಎಸ್.ಸಿ, ಎಸ್.ಟಿ ಗಳ ವಿರುದ್ದ ಘೋಷಣೆ ಕೂಗಿ ಪ್ರಚೋದಿಸುವುದು.
3. ಕಾನೂನಿನ ತೊಂದರೆ ಆಗುತ್ತದೆಯೇ? ಹಾಗೇನಾದರೂ ಆದರೆ ಯಾವ ಪ್ರಮಾಣದ್ದು? ಅದರಿಂದ ಸುಲಭವಾಗಿ ಹೇಗೆ ಹೊರಬರಬಹುದು? ಎಂಬುದನ್ನು ಕಾದು ನೋಡುವುದು.
4. ತಮ್ಮ ಪರ ಎಷ್ಟು ಬೆಂಬಲ ಅಥವಾ ರಾಜಕೀಯ ಬೆಂಬಲ ಬರಬಹುದೆಂದು ಪರೀಕ್ಷಿಸುವುದು.
5. ಮೀಸಲಾತಿ ವಿರುದ್ದ ಇರುವ ಮನಸ್ಥಿತಿಗಳನ್ನು ಓಲೈಸಿ ಅವರ ಬೆಂಬಲ ಪಡೆಯಲು ಪ್ರಯತ್ನಿಸುವುದು.
6. ಈಗಾಗಲೇ ಒಳಗೊಳಗೇ ಇರುವ ಸಂವಿಧಾನ ವಿರೋಧಿ ಚಳುವಳಿಗೆ ಇನ್ನಷ್ಟು ದೈರ್ಯ ಮತ್ತು ಬೆಂಬಲ ಕೊಡುವುದು.
7. ದೇಶದಲ್ಲಿ ಪ್ರಕ್ಷುಬ್ದತೆಯನ್ನು, ಸಿವಿಲ್ ವಾರ್ ಅನ್ನು ಹುಟ್ಟುಹಾಕುವುದು.
8. ಜನಾಂಗೀಯ ದ್ವೇಷ ಹರಡುವುದು.
9. ದೇಶದಲ್ಲಿ ಆರ್ಥಿಕ ಮತ್ತು ಸಾಮಾಜಿಕ ಅಸ್ಥಿರತೆ ಉಂಟು ಮಾಡುವುದು.
10. ಅಸಮಾನತೆ, ಕೋಮುದ್ವೇಶ, ಜಾತೀದ್ವೇಶ, ತಾರತಮ್ಯದಂತಹ ತತ್ವಗಳಿಗೆ ಪ್ರಚೋದನೆ ನೀಡುವುದು.
ನನಗೆ ಈ ಸದ್ಯಕ್ಕೆ ತೋಚಿದ್ದು ಇಷ್ಟು.. ಇದಕ್ಕೆ ನಮ್ಮ ಪ್ರತಿಭಟನೆಯನ್ನು ಹೇಗೆ ದಾಖಲಿಸಬೇಕು..?
ನಾವು ನಂಬಿರುವುದು ಸಂವಿಧಾನವನ್ನು, ನಮ್ಮ ನಿಷ್ಠೆ ಸಂವಿಧಾನಕ್ಕೆ, ಆದ್ದರಿಂದ ನಾವು ಸಂವಿಧಾನದ ಚೌಕಟ್ಟಿನಲ್ಲಿಯೇ ನಮ್ಮ ಪ್ರತಿಭಟನೆಯನ್ನು ದಾಖಲಿಸೋಣ. ಇದರೊಂದಿಗೆ ಸಂವಿಧಾನದ ಆಶಯಗಳನ್ನು ಇನ್ನಷ್ಟು ಒತ್ತಿ ಹೇಳೋಣ, ಅರಿವು ಮೂಡಿಸೋಣ..
ಸಂವಿಧಾನವನ್ನು ಸುಡುವುದು ದೇಶದ್ರೋಹ.. ಕಾನೂನಿನಡಿಯಲ್ಲಿ ರಾಷ್ಟ್ರದ್ವಜ, ರಾಷ್ಟ್ರಗೀತೆ, ಭಾರತದ ಭೂಪಟ ಮತ್ತು ಸಂವಿದಾನವನ್ನು ಅವಮಾನಿಸುವುದು ಅಪರಾಧ…
“The Prevention of Insults to National Honour Act, 1971” ಹೀಗೆ ಹೇಳುತ್ತದೆ.. “..is an Act of the Parliament of India which prohibits the desecration of or insult to the country’s national symbols, including the National Flag, The Constitution, the National Anthem and map of india.” ಆದ್ದರಿಂದ ತಪ್ಪಿತಸ್ತರಿಗೆ ಕಾನೂನು ತನ್ನದೇ ಆದ ಪಾಠಗಳನ್ನು ಕಲಿಸುತ್ತದೆ.
ನಾವು ಪ್ರಚೋದನೆಗೊಳ್ಳುವುದು ಬೇಡ.. ಈ ದೇಶವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದನ್ನು ಬಾಬಾಸಾಹೇಬರು ತಮ್ಮ ಸಂವಿಧಾನದ ಮೂಲಕ ಈ ದೇಶವಾಸಿಗಳಾದ ನಮ್ಮೆಲ್ಲರಿಗೂ ತಿಳಿಸಿಹೇಳಿದ್ದಾರೆ, ನಾವು ಆ ಹಾದಿಯಲ್ಲಿ ಹೋಗೋಣ…
– ಸಿ.ಎಸ್.ದ್ವಾರಕಾನಾಥ್

Please follow and like us:
error

Related posts