ಸಂಭ್ರಮದ ೬೩ನೇ ಕನ್ನಡ ರಾಜ್ಯೋತ್ಸವ ಆಚರಣೆ

ಕನ್ನಡ ರಾಜ್ಯೋತ್ಸವ – ೨೦೧೮ ರ  ಸಚಿವರ ಭಾಷಣ

ಈ ಪವಿತ್ರ ದಿನದಂದು ಇಲ್ಲಿ ನೆರೆದಿರುವ ಆತ್ಮೀಯ ಕನ್ನಡ ಬಂಧು ಭಗಿನಿಯರೆ, ವೇದಿಕೆಯ ಮೇಲೆ ಆಸೀನರಾಗಿರುವ ಶಾಸಕರೆ, ಸಂಸದರೆ, ಜಿಲ್ಲಾ ಪಂಚಾಯತ್ ಅಧ್ಯಕ್ಷರೆ ಹಾಗೂ ಜಿಲ್ಲಾಧಿಕಾರಿರವರೇ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೆ, ಜಿಲ್ಲಾ ರಕ್ಷಣಾಧಿಕಾರಿಗಳೆ ಹಾಗೂ ಈ ಸಮಾರಂಭಕ್ಕೆ ಆಗಮಿಸಿರುವ ಎಲ್ಲಾ ಜನಪ್ರತಿನಿಧಿಗಳೇ ಹಾಗೂ ನಾಗರಿಕ ಬಂಧುಗಳೇ, ವಿದ್ಯಾರ್ಥಿಗಳೇ, ಅಧಿಕಾರಿ ವರ್ಗದವರೇ ಹಾಗೂ ಮಾಧ್ಯಮ ಮಿತ್ರರೇ, ತಮಗೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
ಸ್ವಾತಂತ್ರ್ಯ ಪೂರ್ವದಿಂದಲೇ ಭಾಷವಾರು ಪ್ರಾಂತ್ಯ ರಚನೆಗೆ ಆಗ್ರಹಿಸಿ ಹೋರಾಟ ನಡೆಯುತ್ತಲೇ ಇತ್ತು. ದಶಕಗಳ ಹೋರಾಟದ ಫಲವಾಗಿ ೧೯೫೬ನೇ ನವೆಂಬರ್ ೧ ರಂದು ಅಖಂಡ ಕರ್ನಾಟಕದ ಚದುರಿದ ಪ್ರದೇಶಗಳಲ್ಲಾ ಒಗ್ಗೂಡಿದ ಮೈಸೂರು ರಾಜ್ಯ ಉದಯವಾಯಿತು.
ಭಾಷಾವಾರು ಪ್ರಾಂತ್ಯ ರಚನೆಯಾಗಿ ೬೨ಸಂವತ್ಸರಗಳ ಸಾಧನೆಯ ನಂತರ ಇಂದು ೬೩ ನೇಯ ಸಂಭ್ರಮದ ರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ಕನ್ನಡದ ಕುಲಪುರೋಹಿತ, ಏಕೀಕರಣದ ರೂವಾರಿ ಶ್ರೀ ಆಲೂರು ವೆಂಕಟರಾಯರು ೧೯೦೧ ರಲ್ಲಿಯೇ ಏಕೀಕರಣದ ಹೋರಾಟವನ್ನು ಆರಂಭಗೊಳಿಸಿದ್ದರು.ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ರಾಜ್ಯದಲ್ಲಿ ವಿಲೀನಗೊಳಿಸಲಾಯಿತು. ರಾಜ್ಯದ ಏಕೀಕರಣಕ್ಕೆ ದುಡಿದ ಅಸಂಖ್ಯ ಹೋರಾಟಗಾರರಿಗೆ, ಮುತ್ಸದ್ಧಿಗಳಿಗೆ, ಲೇಖಕರು, ಕವಿಗಳು ಹಾಗೂ ನಾಡಿನ ಪ್ರಾಜ್ಞರೆಲ್ಲರಿಗೆ ಕೃತಜ್ಞತೆ ಅರ್ಪಿಸಲು ನವೆಂಬರ್ ೧ ರಂದು ರಾಜ್ಯೋತ್ಸವವನ್ನು ಆಚರಿಸುತ್ತಾ ಬಂದಿದ್ದೇವೆ.
ಬ್ರಿಟೀಷರ ಆಳ್ವಿಕೆಗೆ ಒಳಪಟ್ಟಿದ್ದ ಮುಂಬೈ ಪ್ರಾಂತ್ಯ, ಮದರಾಸ್ ಪ್ರಾಂತ್ಯ ರಾಜ ಮನೆತನಗಳ ಆಳ್ವಿಕೆಯಲ್ಲಿದ್ದ ಮೈಸೂರು ಪ್ರಾಂತ್ಯ, ನಿಜಾಮರ ಆಳ್ವಿಕೆಯಲ್ಲಿದ್ದ ಹೈದರಾಬಾದ್ ಕರ್ನಾಟಕ ಹಾಗೂ ಕೊಡಗು ಪ್ರಾಂತ್ಯಗಳನ್ನು ಒಳಗೊಂಡ ಏಕೀಕೃತ ಮೈಸೂರು ರಾಜ್ಯ ೧೯೫೬ ರಲ್ಲಿ ಉದಯವಾಯಿತು. ರಾಜ್ಯದ ಸರ್ವಾಂಗೀಣ ಪ್ರಗತಿಗೆ ಭದ್ರ ಬುನಾದಿ ಹಾಕಿದ ಹಿಂದುಳಿದ ಜನ ವರ್ಗದ ಅಭ್ಯುದಯದ ಹರಿಕಾರ ಡಿ. ದೇವರಾಜ ಅರಸು ರವರು ೧೯೭೩ ರಲ್ಲಿ ಗಟ್ಟಿ ನಿರ್ಧಾರ ತೆಳೆದು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡಿದರು.
ಈ ಪ್ರಕ್ರಿಯೆಗಳಲ್ಲಿ ಕನ್ನಡ ನಾಡು ನುಡಿ ಹಾಗೂ ಸಂಸ್ಕೃತಿಗಳ ಉಳಿವು ಬೆಳವಣಿಗೆಗಾಗಿ ಶ್ರಮಿಸಿದ ಅಸಂಖ್ಯ ಜನರ ತ್ಯಾಗ ಬಲಿದಾನ ಸೇರಿವೆ. ಏಕೀಕರಣ ಹೋರಾಟಕ್ಕೆ ಸಮರ್ಪಿಸಿಕೊಂಡಿದ್ದವರಲ್ಲಿ ಡೆಪ್ಯೂಟಿ ಚನ್ನಬಸಪ್ಪ, ಆಲೂರು ವೆಂಕಟರಾಯರು, ಶ್ರೀ ಬಿ.ಎಂ.ಶ್ರೀಕಂಠಯ್ಯ, ಕುವೆಂಪು, ಯು.ರಾಮರಾವ್, ಬೆನಗಲ್ ಶಿವರಾಂ, ಬೆನಗಲ್ ರಾಮರಾವ್, ಮದವೀಡು ಕೃಷ್ಣರಾವ್, ಕಡಪ ರಾಘವೇಂದ್ರರಾವ್, ದೇಶ್‌ಪಾಂಡೆ, ಗಂಗಾಧರರಾವ್, ಗದಿಗೆಯ್ಯ, ಹೊನ್ನಪುರಮಠ್, ಹರ್ಡೇಕರ್‌ಮಂಜಪ್ಪ, ಹುಯಿಲಗೋಳನಾರಾಯಣರಾವ್, ಕಾರ್ನಾಡ್‌ಸದಾಶಿವರಾವ್, ಶ್ರೀನಿವಾಸಮಲ್ಯ, ಕೆ.ಆರ್.ಕಾರಂತ್, ಆರ್.ಆರ್.ದಿವಾಕರ್, ಡಾ:ನಾಗನಗೋಡ, ಅಂದಾನಪ್ಪ ದೊಡ್ಡಮೇಟಿ, ಜಿನರಾಜ್‌ಹೆಗಡೆ, ಸಿದ್ದವ್ವನಹಳ್ಳಿ ನಿಜಲಿಂಗಪ್ಪ ಮೊದಲಾದವರು ಪ್ರಮುಖರೆನಿಸಿದ್ದಾರೆ.
ಸಾಹಿತ್ಯ ಕ್ಷೇತ್ರದಲ್ಲಿಯೂ ಕೂಡ ಕನ್ನಡ ಭಾಷೆಯ ಸಾಹಿತ್ಯ ಮುಂಚೂಣಿಯಲ್ಲಿದೆ. ಕುವೆಂಪುರವರು, ಬೆಂದ್ರೆಯವರು, ಮಾಸ್ತಿಯವರು, ಗೋಕಾಕ್‌ರವರು, ಶಿವರಾಮ ಕಾರಂತರವರು, ಅನಂತಮೂರ್ತಿಯವರು, ಗಿರೀಶ್ ಕಾರ್ನಾಡ್ ಮತ್ತು ಚಂದ್ರಶೇಖರ ಕಂಬಾರರವರು ಕನ್ನಡಕ್ಕೆ ಹೆಮ್ಮೆಯ ಜ್ಞಾನಪೀಠ ಪ್ರಶಸ್ತಿ ತಂದುಕೊಡಲು ಕಾರಣರಾಗಿದ್ದಾರೆ. ಪ್ರಾಚೀನ ಕವಿಗಳಾದ ಪಂಪ, ರನ್ನ, ರಾಘವಾಂಕ, ಕುಮಾರವ್ಯಾಸ, ಲಕ್ಷ್ಮೀಶ ಕವಿಗಳು ಸರ್ವಮಾನ್ಯವಾಗಿದ್ದಾರೆ.ತಮ್ಮ ಹಾಡುಗಳ ಮೂಲಕ ಜನಮನ ಗೆದ್ದಿರುವ ಪುರಂದರದಾಸರು ಮತ್ತು ಕನಕದಾಸರನ್ನು ಮರೆಯಲು ಸಾಧ್ಯವಿಲ್ಲ. ಅಲ್ಲದೆ ಈ ಸಂದರ್ಭದಲ್ಲಿ, ನಮ್ಮ ರಾಷ್ಟ್ರಕವಿಗಳಾದ ಗೋವಿಂದ ಪೈ ರವರು, ಕುವೆಂಪು ರವರು ಮತ್ತು ಜಿ.ಎಸ್.ಶಿವರುದ್ರಪ್ಪನವರನ್ನು ಸ್ಮರಿಸಬೇಕಿದೆ.
ಕರ್ನಾಟಕ ಏಕೀಕರಣದ ಇತಿಹಾಸವನ್ನು ಗಮನಿಸಿದರೆಕೊಪ್ಪಳ ಜಿಲ್ಲೆಯಅಳವಂಡಿ ಶಿವಮೂರ್ತಿಸ್ವಾಮಿ ರವರು, ಶಿರೂರು ವೀರಭದ್ರಪ್ಪ ತೆಗ್ಗಿನಮನಿ ರವರು, ಶಂಕರಗೌಡ್ರು, ಪ್ರಭುರಾಜ ಪಾಟೀಲ್ ಸಂಗನಾಳ ರವರು, ಪಂಚಾಕ್ಷರಿ ಹಿರೇಮಠ ರವರು, ಸೋಮಪ್ಪ ಡಂಬಳ ರವರು, ದೇವೆಂದ್ರಕುಮಾರ ಹಕಾರಿ ರವರು, ಭೀಮನಗೌಡ ಪಾಟೀಲ್ ರವರು, ಹನುಮರಡ್ಡಿ ಕಲ್ಗುಡಿ ರವರು, ಪಂಚಪ್ಪ ಶೆಟ್ಟರು, ಹಂಜಿ ಕೊಟ್ರಪ್ಪ ಹಾಗೂ ಮುಂತಾದವರು ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ್ದನ್ನು ನಾವು ಸ್ಮರಿಸಬೇಕಾಗಿದೆ.
ಕೊಪ್ಪಳ ಐತಿಹಾಸಿಕ ಹಿರಿಮೆಯನ್ನು ಹೊಂದಿದ ನಾಡು, ”ತಿರುಳ್ಗನ್ನಡದ ನಾಡು ” ಎಂದೇ ಅದು ಪ್ರಸಿದ್ದವಾಗಿದೆ. ಕೊಪ್ಪಳವು, ಕರ್ನಾಟಕದ ಪ್ರಮುಖ ರಾಜಮನೆತನಗಳ ಆಳ್ವಿಕೆಗೊಳಪಟ್ಟ, ರಾಜಕೀಯ, ಧಾರ್ಮಿಕ, ಸಾಮರಸ್ಯಕ್ಕೆ ಹೆಸರಾದ ಬೀಡು ಇದು ಪರಧರ್ಮ ಸಹಿಷ್ಣತೆಗೆ ಒಂದು ಮಾದರಿಯಾಗಿದೆ. ಈ ನಾಡನ್ನು ಸಾಂಸ್ಕೃತಿಕವಾಗಿ ಮತ್ತಷ್ಟು ಉನ್ನತ ಶಿಖರಕ್ಕೆ ತಲುಪಿಸಬೇಕಾದದ್ದು ಈ ನಾಡಿನ ಪ್ರತಿಯೊಬ್ಬರ ಕರ್ತವ್ಯವಾಗಿದೆ.
ಕಲಾ ಕ್ಷೇತ್ರಕ್ಕೂ ಕೊಪ್ಪಳ ಜಿಲ್ಲೆಯ ಕೊಡುಗೆ ಗಣನೀಯವಾಗಿದೆ. ವೃತ್ತಿ ರಂಗಭೂಮಿ ಮಂಡಳಿಗಳು, ಪೌರಾಣಿಕ, ಸಾಮಾಜಿಕ, ಹವ್ಯಾಸಿ ನಾಟಕಗಳು, ಜಾನಪದ ಕಲೆಗಳು, ಬಯಲಾಟ, ಚಿತ್ರಕಲೆ, ಸಂಗೀತ-ಸಾಹಿತ್ಯ ಕ್ಷೇತ್ರಗಳಿಗೂ ಸಹ ಕೊಪ್ಪಳ ಜಿಲ್ಲೆ ಪ್ರಸಿದ್ದಿಯಾಗಿದೆ. ಕಿನ್ನಾಳ ಕರಕುಶಲಕಲೆ, ಜಾನಪದ ಪ್ರದರ್ಶನ ಕಲೆಗಳು, ಶಿಲ್ಪಕಲೆಗಳಿಗೆ ಸಂಬಂಧಿಸಿದ ಕಲಾಪ್ರಕಾರಗಳು ಕೊಪ್ಪಳ ಜಿಲ್ಲೆಯಲ್ಲಿ ಇರುವುದು ಅಭಿಮಾನದ ಸಂಗತಿಯಾಗಿದೆ.
ಸ್ವಾತಂತ್ರ್ಯದ ನಂತರ ಹಾಗೂ ರಾಜ್ಯ ಉದಯವಾದ ಮೇಲೆ ಹಲವು ಕ್ಷೇತ್ರದಲ್ಲಿ ಅಭಿವೃದ್ದಿ ಹೊಂದಿದ್ದು ಇದರಲ್ಲಿ ಕೊಪ್ಪಳ ಜಿಲ್ಲೆಯು ಸೇರಿದೆ. ಸರ್ಕಾರ ಜಿಲ್ಲೆಯ ಅಭಿವೃದ್ದಿಗಾಗಿ ಅನೇಕ ಯೋಜನೆ, ಸೌಲಭ್ಯಗಳನ್ನು ಕಲ್ಪಿಸಿದೆ.
ಸಹಕಾರ ಇಲಾಖೆಯಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಹಾಗೂ ಪಿಕಾರ್ಡ್ ಬ್ಯಾಂಕುಗಳ ಮೂಲಕ ರೂ.೧ ಲಕ್ಷದವರೆಗೆ ಅಲ್ಪಾವಧಿ ಸಾಲ ಪಡೆದು ಹೊರಬಾಕಿ ಇದ್ದಂತಹ ರೈತರ ಅಲ್ಪಾವಧಿ ಸಾಲವನ್ನು ಸರ್ಕಾರ ಮನ್ನಾ ಮಾಡಿದ್ದು, ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು ೩೨೬೭೧ ರೈತರು ರೂ.೧೦೦೮೮.೧೩ ಲಕ್ಷಗಳ ಸಾಲ ಮನ್ನಾ ಪ್ರಯೋಜನ ಪಡೆದಿರುತ್ತಾರೆ. ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಸಾಲ ಮನ್ನಾ ಮಾಡಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ.
ಕೃಷಿ ಇಲಾಖೆಯಿಂದ ಕೃಷಿ ಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ ೮೭೯೮ ಕೃಷಿಹೊಂಡ ಕಾಮಗಾರಿಗಳು ಪೂರ್ಣಗೊಂಡು ೮೨೭೨.೦೫ ಲಕ್ಷ ಹಾಗೂ ೨೦೧೮-೧೯ ನೇ ಸಾಲಿನಲ್ಲಿ ೨೫೯೩ ಕೃಷಿಹೊಂಡಗಳ ಗುರಿಯಿದ್ದು, ಈಗಾಗಲೇ ೧೩೧೨ ಕೃಷಿಹೊಂಡಗಳ ನಿರ್ಮಾಣ ಪೂರ್ಣಗೊಂಡಿದೆ. .
ಲೋಕೋಪಯೋಗಿ ಇಲಾಖೆಯಿಂದ ಕೊಪ್ಪಳ ವಿಭಾಗ ವ್ಯಾಪ್ತಿಯಲಿ ರೂ. ೯.೯೭ ಕೋಟಿ ಅನುದಾನದಲ್ಲಿ ೩೭.೦೦ ಕಿಮೀ ರಾಜ್ಯ ಹೆದ್ದಾರಿ ರಸ್ತೆ ಸುಧಾರಣೆ/ಜಿಲ್ಲಾ ಮುಖ್ಯ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಯೋಜಿಸಲಾಗಿ, ಈವರೆಗೂ ೨೧.೦೦ ಕಿಮೀ ರಾಜ್ಯ ಹೆದ್ದಾರಿ/ಜಿಲ್ಲಾ ಮುಖ್ಯ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದೆ.
ಎಸ್‌ಸಿಪಿ ಹಾಗೂ ಟಿಎಸ್‌ಪಿ ಯೋಜನೆ ಅಡಿ ರೂ. ೨೫.೧೧ ಕೋಟಿಗಳ ಅನುದಾನದಲ್ಲಿ ೨೩.೦೦ ಕಿಮೀ ಕಾಂಕ್ರೀಟ್ ರಸ್ತೆ, ವಿಶೇಷ ಅಭಿವೃದ್ಧಿ ಅಡಿಯಲ್ಲಿ ರೂ. ೧೪.೮೭ ಕೋಟಿ ಮೊತ್ತದಲ್ಲಿ ೨೪.೭೦ ಕಿಮೀ, ಸಿಎಂಜಿಎಸ್‌ವೈ ಅಡಿಯಲ್ಲಿ ರೂ. ೯.೭೫ ಕೋಟಿಗಳ ಅನುದಾನದಲ್ಲಿ ೧೭.೦೦ ಕಿಮೀ ರಸ್ತೆ ಸುಧಾರಣೆ ಮಾಡಲು ಯೋಜಿಸಲಾಗಿದೆ.
ಯಲಬುರ್ಗಾ ತಾಲೂಕಿನ ತಳಕಲ್ ಗ್ರಾಮದಲ್ಲಿ ಸರ್ಕಾರಿ ಇಂಜಿನೀಯರಿಂಗ್ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿಯು ರೂ. ೧೦೦ ಕೋಟಿಗಳ ಅನುದಾನ ಮಂಜೂರಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಮತ್ತು ವೃತ್ತಿ ಕೌಶಲ್ಯ ಅಭಿವೃದ್ಧಿ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿಯು ರೂ. ೮೫.೦೦ ಕೋಟಿಗಳಲ್ಲಿ ನಡೆಯುತ್ತಿದೆ.
ಸಾರ್ವಜನಿಕ ಶಿಕ್ಷಣದಡಿ ಕೊಪ್ಪಳ ಜಿಲ್ಲೆಗೆ ರೂ: ೪೩೯೫೬.೭೩ ಲಕ್ಷಗಳ ಅನುದಾನ ಕಲ್ಪಿಸಲಾಗಿದೆ. ವಿವಿಧ ಕಾರ್ಯಕ್ರಮಗಳನ್ನು ಅನುಮೋದಿತ ಕ್ರಿಯಾ ಯೋಜನೆಯಂತೆ ನಿಯಮಾನುಸಾರ ಬಳಕೆ ಮಾಡಲಾಗುತ್ತದೆ.
ಅಕ್ಷರ ದಾಸೋಹ ಕಾರ್ಯಕ್ರಮದಡಿ ೨,೦೫,೪೩೭ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿ ಊಟ ವಿತರಣೆ ಮಾಡಲಾಗುತ್ತಿದೆ. ಕಳೆದ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆ ಶೇಕಡಾ ೮೦.೪೩ ಸಾಧನೆ ಮಾಡಿದ್ದು, ಈ ವರ್ಷದ ಫಲಿತಾಂಶವನ್ನು ಇನ್ನಷ್ಟು ಸುಧಾರಿಸಲು ಸೂಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ಪಶುಸಂಗೋಪನೆ :
ಪಶುಭಾಗ್ಯ ಯೋಜನೆ ಅಡಿಯಲ್ಲಿ ಹೈನುಗಾರಿಕೆಗೆ ಉತ್ತೇಜನ ನೀಡಲಾಗುತ್ತಿದೆ. ಆಕಸ್ಮಿಕವಾಗಿ ಮರಣಿಸಿದ ಕುರಿ/ಮೇಕೆಗಳಿಗೆ ಇಲಾಖೆಯ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮ(ನಿ)ದ ವತಿಯಿಂದ ಪ್ರತಿ ಕುರಿ/ಮೇಕೆಗೆ ರೂ, ೫೦೦೦/- ರಂತೆ ಪರಿಹಾರ ಧನವನ್ನು ವಿತರಿಸಲಾಗುತ್ತಿದೆ.
ಜಿಲ್ಲೆಯ ಅಂತರಿಕ ಮೇವಿನ ಲಬ್ಯತೆಯನ್ನು ಹೆಚ್ಚಿಸುವ ಹಿತಧೃಷ್ಟಿಯಿಂದ ಇಲಾಖೆಯ ವತಿಯಿಂದ ಆಸಕ್ತ ರೈತರುಗಳಿಗೆ ಮೇವಿನ ಕಿರುಪೊಟ್ಟಣಗಳನ್ನು ವಿತರಿಸಲಾಗುತ್ತಿದೆ.
ರಾಷ್ಟ್ರೀಯ ಜಾನುವಾರು ಅಭಿಯಾನದಡಿ (ಓಐಒ) ಗ್ರಾಮೀಣ ಹಿತ್ತಲ ಕೋಳಿ ಅಭಿವೃದ್ದಿ ಪಡಿಸುವ ರಾಜ್ಯದಲ್ಲಿ ಕೊಪ್ಪಳ, ಬೀದರ್ ಹಾಗು ಹಾಸನ ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.
ಈ.ಕ.ರ.ಸಾ.ಸಂಸ್ಥೆ
ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಸೇವಾಬದ್ದ ಜನಪರ ಸಂಸ್ಥೆಯಾಗಿ ಹಲವಾರು ಸಾಮಾಜಿಕ ಹೊಣೆಗಾರಿಕೆಗಳನ್ನು ನಿರ್ವಹಿಸುತ್ತಿದೆ. ಕೊಪ್ಪಳ ಘಟಕವನ್ನು ರೂ.೪ ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೇರಿಸುವ ಕಾಮಗಾರಿ, ಗಂಗಾವತಿ ಬಸ್ ಘಟಕ, ರೂ.೧ ಕೋಟಿಯಲ್ಲಿ ಕುಕನೂರು ಬಸ್ ಘಟಕ, ೩೭.೩೧ ಲಕ್ಷ ರೂ. ವೆಚ್ಚದಲ್ಲಿ ಯಲಬುರ್ಗಾ ಬಸ್ ಘಟಕ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ.
ಕೊಪ್ಪಳ ಬಸ್ ನಿಲ್ದಾಣದ ಪಾರ್ಕಿಂಗ್, ನೆಲಹಾಸು ಕಾಂಕ್ರೆಟ್‌ಗಾಗಿ ರೂ. ೫೦.೦೦ ಲಕ್ಷಗಳ ಕಾಮಗಾರಿ ಪ್ರಗತಿಯಲ್ಲಿರುತ್ತದೆ
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೊಪ್ಪಳ ಜಿಲ್ಲೆಯಲ್ಲಿ ೨೧೫೬೮೪ ಕುಟುಂಬಗಳನ್ನು ನೊಂದಾಯಿಸಿ ಉದ್ಯೋಗ ಚೀಟಿಗಳನ್ನು ನವೀಕರಿಸಿ ದೃಡೀಕರಣಗೊಳಿಸಲಾಗಿದೆ.
ಕೊಪ್ಪಳ ಜಿಲ್ಲೆಗೆ ರೂ. ೧೪೦.೦೦ ಕೋಟಿ ಕ್ರಿಯಾ ಯೋಜನೆಯನ್ನು ಗ್ರಾ.ಪಂ. ಮಟ್ಟದಲ್ಲಿ ತಯಾರಿಸಲಾಗಿದೆ. ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡಿ ೧೮.೩೦ ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ. ಹಾಗೂ ರೂ.೮೬.೧೯ ಕೋಟಿಗಳ ಅನುದಾನ ಬಳಕೆ ಮಾಡಲಾಗಿದೆ.
ಮುಖ್ಯ ಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಡಿ ಜಿಲ್ಲೆಗೆ ೩. ೧೦ ಕೋಟಿ ರೂ. ಅನುದಾನ ಒದಗಿಸಲಾಗಿದೆ.
ಕೊಪ್ಪಳ ಜಿಲ್ಲೆಗೆ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯಡಿ ಕ್ರಿಯಾ ಯೋಜನೆಯನ್ನು ರೂ. ೧೩೯೨೧.೦೧ ಲಕ್ಷಗಳಿಗೆ ತಯಾರಿಸಿ ಸಲ್ಲಿಸಿದೆ.
ಜಿಲ್ಲೆಯ ಕುಷ್ಟಗಿ ಹಾಗೂ ಯಲಬುರ್ಗಾ ತಾಲೂಕಿನ ೩೩೧ ಗ್ರಾಮಗಳ ಡಿ.ಬಿ.ಓ.ಟಿ ಆಧಾರಿತ ಕುಡಿಯುವ ನೀರು ಸರಬರಾಜು ಯೋಜನೆಯನ್ನು ಮೇ|| ಎಲ್.& ಟಿ. ಕನ್ಸಟ್ರಕ್ಷನ್ಸ ಇವರಿಗೆ ರೂ. ೬೯೭.೯೦ ಕೋಟಿಗಳಿಗೆ ವಹಿಸಿದ್ದು, ಕಾಮಗಾರಿ ಕೆಲಸ ಪ್ರಗತಿಯಲ್ಲಿದೆ.
ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶದ ಒಟ್ಟು ಕುಟುಂಬಗಳ ಸಂಖ್ಯೆ ೨,೪೬,೫೬೩ ಇದ್ದು, ಅದರಲ್ಲಿ ಬೇಸ್‌ಲೈನ್ ಸರ್ವೆ ಪ್ರಕಾರ ೧,೫೯,೫೪೪ ಕುಟುಂಬಗಳು ಶೌಚಾಲಯಗಳನ್ನು ನಿರ್ಮಿಸಿಕೊಳ್ಳಬೇಕಾಗಿತ್ತು. ಈವರೆಗೆ ೧,೫೯,೫೪೪ ಕುಟುಂಬಗಳು ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡಿರುವುದರಿಂದ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿ ಸರ್ಕಾರದಿಂದ ಘೋಷಿಸಲಾಗಿರುತ್ತದೆ.
ಈ ವರ್ಷ ೮ ಗ್ರಾಮ ಪಂಚಾಯತ್‌ಗಳಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕಗಳ ಅನುಷ್ಠಾನಕ್ಕಾಗಿ ಆಡಳಿತಾತ್ಮಕ ಮಂಜೂರಾತಿ ನೀಡಿ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಪ್ರಾರಂಭವಾಗಲಿದೆ.
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ ಸ್ವಚ್ಛ ಭಾರತ ಮಿಷನ್ (ಗ್ರಾ) ಯೋಜನೆ ಹಾಗೂ ಯುನಿಸೆಫ್ ಸಹಯೋಗದೊಂದಿಗೆ ಕಿನ್ಯಾ ದೇಶದ ನಾಕೂರ ಲೋಗ್‌ಬೋರೋ ವಿಶ್ವವಿದ್ಯಾಲಯದಲ್ಲಿ ಸ್ವಚ್ಛತೆ ಮತ್ತು ಆರೋಗ್ಯ ಕುರಿತ ೪೧ ನೇ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿ, ಕೊಪ್ಪಳ ಜಿಲ್ಲೆಯಲ್ಲಿ ಯಶಸ್ವಿ ಶೌಚಾಲಯ ನಿರ್ಮಾಣ ಹಾಗೂ ಬಳಕೆ ಕುರಿತು ಉಪನ್ಯಾಸ ನೀಡಿರುವುದು ಜಿಲ್ಲೆಗೆ, ರಾಜ್ಯಕ್ಕೆ ಹಾಗೂ ರಾಷ್ಟ್ರಕ್ಕೆ ಹೆಮ್ಮೆಯ ವಿಷಯವಾಗಿರುತ್ತದೆ.
ಹಸಿರು ಕರ್ನಾಟಕ ಯೋಜನೆಯಡಿ ರಾಜ್ಯದಲ್ಲಿ ೧೦ ಕೋಟಿ ಸಸಿ ನೆಡುವ ಯೋಜನೆಯನ್ನು ಹೊಂದಲಾಗಿದೆ. ಕೊಪ್ಪಳ ಸಾಮಾಜಿಕ ಅರಣ್ಯ ವಿಭಾಗದಿಂದ ಈ ಮಳೆಗಾಲದಲ್ಲಿ ೧೦೫ ಕಿ.ಮೀ ರಸ್ತೆಬದಿ ಸಸಿನೆಟ್ಟು ರೈತರು, ಸಾರ್ವಜನಿಕರಿಗೆ, ಸಂಘ, ಸಂಸ್ಥೆ, ಶಾಲಾ ಕಾಲೇಜುಗಳಿಗೆ ೧.೭೫ ಲಕ್ಷ ಸಸಿಗಳನ್ನು ವಿತರಿಸಲಾಗಿದೆ.
ಜಿಲ್ಲೆಯ ಅಭಿವೃದ್ದಿಗೆ ಇನ್ನೂ ಹಲವು ಇಲಾಖೆಗಳ ಮೂಲಕ ಅಭಿವೃದ್ದಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ.
ಈ ಸುಸಂದರ್ಭದಲ್ಲಿ, ಕನ್ನಡ ನಾಡು ನುಡಿ ಬಗ್ಗೆ ಮಾನ್ಯ ಕುವೆಂಪುರವರು ರಚಿಸಿದ ಎಲ್ಲಾದರು ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು, ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಗೀತೆಯನ್ನು ನೆನಪಿಸುತ್ತಾ, ಕನ್ನಡ ರಾಜ್ಯೋತ್ಸವದ ಈ ಸಂದರ್ಭದಲ್ಲಿ ನಾನು ತಮ್ಮೆಲ್ಲರಿಗೂ ಮತ್ತೊಮ್ಮೆ ಶುಭ ಕೋರುತ್ತಾ, ನನ್ನ ಭಾಷಣವನ್ನು ಮುಗಿಸುತ್ತೇನೆ.

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ, ಜೈ ಕರ್ನಾಟಕ.

Please follow and like us:
error