ಸಂಭ್ರಮದ ೭೧ನೇ ಹೈ ಕ ವಿಮೋಚನಾ ದಿನಾಚರಣೆ.

Koppal ಕೊಪ್ಪಳದಲ್ಲಿ ಸಂಭ್ರಮದ ೭೧ನೇ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ… ಧ್ವಜಾರೋಹಣ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಆರ್.ಶಂಕರ್.ಕೊಪ್ಪಳದ ಜಿಲ್ಲಾ ಕ್ರೀಡಾಂಗಣ ದಲ್ಲಿ ಗೌರವವಂದನೆ ಸಲ್ಲಿಸಿದ ವಿವಿಧ ತುಕಡಿಗಳು.. ಪೋಲಿಸ್, ಡಿಆರ್, ಸ್ಕೌಟ್ಸ್, ಗೈಡ್ಸ್ ಸೇರಿದಂತೆ ವಿವಿಧ ಶಾಲೆಗಳ ೧೭ ತುಕಡಿಗಳಿಂದ ಗೌರವ ವಂದನೆ ಸಮರ್ಪಣೆ…ಗಮನ ಸೆಳೆದ ಆಕರ್ಷಕ ಪಥಸಂಚಲನ… ಸಂಸದ ಕರಡಿ ಸಂಗಣ್ಣ, ಶಾಸಕ ರಾಘವೇಂದ್ರ ಹಿಟ್ನಾಳ, ಜಿ.ಪಂ.ಅದ್ಯಕ್ಷ ರಾಜಶೇಖರ ಹಿಟ್ನಾಳ, ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್, ಪೋಲಿಸ್ ವರಿಷ್ಠಾಧಿಕಾರಿ ರೇಣುಕಾ ಸುಕುಮಾರ್, ಸಿಇಓ ವೆಂಕಟರಾಜ್ ಸೇರಿದಂತೆ ಇತರ ಗಣ್ಯರು ಉಪಸ್ಥಿತಿ…

ಕೊಪ್ಪಳ ಸೆ. 17 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾಡಳಿತ ವತಿಯಿಂದ 71ನೇ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ಅಂಗವಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರದಂದು ಆಯೋಜಿಸಲಾದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಆರ್. ಶಂಕರ್ ಅವರು ಧ್ವಜಾರೋಹಣ ನೆರೆವೇರಿಸಿದರು.
ಕೊಪ್ಪಳದ ವಿವಿಧ ಶಾಲಾ ಮಕ್ಕಳು, ಪೊಲೀಸ್, ಎನ್.ಸಿ.ಸಿ. ಸೇವಾದಳ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಗೃಹರಕ್ಷಕದ ದಳದಿಂದ ಆಕರ್ಷಕ ಪಥಸಂಚಲನ ಜರುಗಿತು, ಬಳಿಕ ಜಿಲ್ಲಾ ಉಸ್ತುವಾರಿ ಸಚಿವರಿಂದ ಗೌರವ ರಕ್ಷೆ ಸ್ವೀಕಾರ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ, ಸ್ವಾತಂತ್ರ್ಯ ಯೋಧರಿಗೆ ಸನ್ಮಾನ ಜರುಗಿತು. ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಸಹ ನಡೆದವು. ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ವಹಿಸಿದ್ದರು. ಜಿ.ಪಂ. ಅಧ್ಯಕ್ಷ ಕೆ. ರಾಜಶೇಖರ ಹಿಟ್ನಾಳ, ಸಂಸದ ಕರಡಿ ಸಂಗಣ್ಣ, ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೇಣುಕಾ ಕೆ. ಸುಕುಮಾರ, ಉಪ ವಿಭಾಧಿಕಾರಿ ಸಿ.ಡಿ. ಗೀತಾ, ಐಎಎಸ್ ಪ್ರೊಬೆಷನರಿ ಅಧಿಕಾರಿ ಅಕ್ಷಯ್ ಶ್ರೀಧರ್, ಡಿಎಫ್‍ಒ ಯಶಪಾಲ್ ಕ್ಷೀರಸಾಗರ್ ಸೇರಿದಂತೆ ಹಲವು ಗಣ್ಯರು, ಉಪಸ್ಥಿತರಿದ್ದರು.

ಸಚಿವರ ಮಾತುಗಳು

ಕೊಪ್ಪಳ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹೈದ್ರಾಬಾದ್-ಕರ್ನಾಟಕ ವಿಮೋಚನಾ ದಿನಾಚರಣೆ ಅಂಗವಾಗಿ 2018 ರ ಸೆಪ್ಟಂಬರ್ 17 ರಂದು ಬೆಳಿಗ್ಗೆ 9 ಗಂಟೆಗೆ ರಾಷ್ಟ್ರ ಧ್ವಜಾರೋಹಣ ಮಾಡುವ ಸಂದರ್ಭದಲ್ಲಿ ಮಾನ್ಯ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ಶಂಕರ್ ರವರ ಭಾಷಣ.
ಹೈದ್ರಾಬಾದ-ಕರ್ನಾಟಕ ವಿಮೋಚನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ ಗೌರವಾನ್ವಿತ ಹಿರಿಯ ಸ್ವಾತಂತ್ರ್ಯ ಸೇನಾನಿಗಳೆ, ಮುದ್ದು ಮಕ್ಕಳೆ, ಹಿರಿಯ ನಾಗರಿಕರೆ, ಸಂಸದರೆ, ಜಿಲ್ಲೆಯ ಎಲ್ಲಾ ಶಾಸಕ ಮಿತ್ರರೆ, ಜಿಲ್ಲಾ ಪಂಚಾಯತಿ ಅಧ್ಯಕ್ಷರೆ, ಜಿಲ್ಲಾಧಿಕಾರಿಯವರೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೆ, ಜಿಲ್ಲಾ ರಕ್ಷಣಾಧಿಕಾರಿಗಳೆ ಹಾಗೂ ಇಲ್ಲಿ ನೆರೆದಿರುವ ಜನಪ್ರತಿನಿಧಿಗಳೆ, ಅಧಿಕಾರಿ ಹಾಗೂ ನೌಕರ ವರ್ಗದವರೆ, ಸಹೋದರ, ಸಹೋದರಿಯರೆ ಹಾಗೂ ಮಾಧ್ಯಮ ಪ್ರತಿನಿಧಿಗಳೆ………..ತಮಗೆಲ್ಲರಿಗೂ ಹೈದ್ರಾಬಾದ್-ಕರ್ನಾಟಕ ವಿಮೋಚನಾ ದಿನಾಚರಣೆಯ ಶುಭಾಷಯಗಳು.
ಹೈದ್ರಾಬಾದ್-ಕರ್ನಾಟಕ ಪ್ರದೇಶ ನಿಜಾಮರ ಆಳ್ವಿಕೆಯಿಂದ ಸ್ವಾತಂತ್ರ್ಯಗೊಂಡು 71 ವರ್ಷಗಳಾದ ನೆನಪಿನಲ್ಲಿ ಇಂದು ಏರ್ಪಡಿಸಿರುವ ವಿಮೋಚನಾ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ನನಗೆ ಸಂತೋಷವೆನಿಸುತ್ತದೆ. ಇದಕ್ಕಾಗಿ ಹೋರಾಡಿದ ಎಲ್ಲ ಮಹಾನೀಯರಿಗೆ ನಮ್ಮ ನಿಮ್ಮೆಲ್ಲರ ಪರವಾಗಿ ಗೌರವದ ವಂದನೆಗಳು.
ದೇಶದ ಎಲ್ಲ ಭಾಗಗಳಲ್ಲಿ ಆಗಸ್ಟ್ 15 ರಂದು ಮಾತ್ರ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದರೆ, ಹೈದ್ರಾಬಾದ್-ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಮಾತ್ರ ಆಗಸ್ಟ್ 15 ಮತ್ತು ಸೆಪ್ಟಂಬರ್ 17 ರಂದು ಹೀಗೆ ಎರಡೆರಡು ದಿನಗಳಂದು ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತಿದೆ.
ದೇಶಪ್ರೇಮಿಗಳ ಕೆಚ್ಚೆದೆಯ ಸುದೀರ್ಘ ಹೋರಾಟದ ಫಲವಾಗಿ ನಮ್ಮ ದೇಶ ಆಗಸ್ಟ್ 15, 1947 ರಂದು ಸ್ವಾತಂತ್ರ್ಯ ಪಡೆಯಿತು.
ಆದರೆ, ಹೈದರಾಬಾದ್ ನಿಜಾಮರ ಆಳ್ವಿಕೆಯ ಭಾಗವಾಗಿದ್ದ ಕೊಪ್ಪಳ, ರಾಯಚೂರು, ಗುಲಬರ್ಗಾ, ಯಾದಗಿರಿ, ಬೀದರ್ ಹಾಗೂ ಇತರ ಪ್ರದೇಶಗಳು ಸ್ವಾತಂತ್ರ್ಯಕ್ಕಾಗಿ ಒಂದು ವರ್ಷ ಹೆಚ್ಚು ಕಾಯಬೇಕಾಯಿತು. ಇಡೀ ದೇಶ ಸ್ವಾತಂತ್ರ್ಯದ ಸಂಭ್ರಮ ಅನುಭವಿಸುತ್ತಿದ್ದರೆ, ಹೈದ್ರಾಬಾದ್-ಕರ್ನಾಟಕ ಭಾಗದ ಜನರು ರಜಾಕಾರರ ದಬ್ಬಾಳಿಕೆಗೆ ಸಿಕ್ಕಿ ಶೋಷಣೆಯನ್ನು ಅನುಭವಿಸುತ್ತಿದ್ದರು.
ಬ್ರಿಟೀಷರ ಕುಮ್ಮಕ್ಕಿನಿಂದ ಹೈದರಾಬಾದ್ ಪ್ರಾಂತ್ಯವನ್ನು ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಂಡು ಆಡಳಿತ ನಡೆಸುತ್ತಿದ್ದ ನಿಜಾಮರು, ಭಾರತಕ್ಕೆ ಸ್ವಾತಂತ್ರ್ಯ ಬಂದರೂ ಭಾರತದ ಒಕ್ಕೂಟಕ್ಕೆ ಸೇರಲು ನಿರಾಕರಿಸಿದರು. ಸ್ವತಂತ್ರ ಭಾರತದಲ್ಲಿ ವಿಲೀನಗೊಳ್ಳದೆ ತಾನು ಪ್ರತ್ಯೇಕವಾಗಿ ಉಳಿದು, ತಮ್ಮದೇ ಒಂದು ದೇಶವನ್ನಾಗಿ ಆಳ್ವಿಕೆ ನಡೆಸುವ ಹಠಮಾರಿ ಧೋರಣೆಯಲ್ಲಿದ್ದರು ಹೈದ್ರಾಬಾದ ನಿಜಾಮರು.
ಆಗಿನ ಭಾರತದ ಕೇಂದ್ರ ಗೃಹ ಸಚಿವರಾಗಿದ್ದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲರು, ದಿಟ್ಟತನದಿಂದ ಕೈಗೊಂಡ ಸೈನಿಕ ಕಾರ್ಯಾಚರಣೆಯಲ್ಲಿ, ನಿಜಾಮರು ಶರಣಾಗಿ ಭಾರತದ ಒಕ್ಕೂಟಕ್ಕೆ ಸೇರಿದ್ದರಿಂದ ಹೈದ್ರಾಬಾದ್-ಕರ್ನಾಟಕ 1948 ಸೆಪ್ಟಂಬರ್ 17 ರಂದು ಸ್ವಾತಂತ್ರ್ಯ ಪಡೆಯಿತು. ಈ ಪ್ರದೇಶ ಮೊಗಲಾಯಿ ನಿಜಾಮಶಾಹಿ ಹಿಡಿತದಿಂದ ಪಾರಾಗಲು ಒಂದು ವರ್ಷ 1 ತಿಂಗಳು ಹೆಚ್ಚು ಕಾಯಬೇಕಾಯಿತು.
ಅಖಂಡ ಭಾರತದ ಒಕ್ಕೂಟ ವ್ಯವಸ್ಥೆಗೆ ಅಡ್ಡಗಾಲಾದ ನಿಜಾಮರ ವಿರುದ್ಧ ಹೋರಾಡಲು ಈ ಭಾಗದ ಜನತೆ, ಶ್ರೀ ಸ್ವಾಮಿ ರಮಾನಂದ ತೀರ್ಥರಂತಹ ಸ್ವಾತಂತ್ರ್ಯ ಪ್ರೇಮಿಗಳಿಂದ ಪ್ರೇರಿತರಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ನಿಜಾಮರ ವಿರುದ್ಧ ಹೋರಾಡಿದ್ದಾರೆ.
ಶಿವಮೂರ್ತಿ ಸ್ವಾಮಿ ಅಳವಂಡಿ ರವರು, ಪುಂಡಲೀಕಪ್ಪ ಜ್ಞಾನಮೋಠೆ ರವರು, ವೀರಭದ್ರಪ್ಪ ಶಿರೂರು ರವರು, ಸಿ.ಎಂ. ಚುರ್ಚಿಹಾಳ ಮಠ ರವರು, ಸೋಮಪ್ಪ ಡಂಬಳ ರವರು, ಯರಾಶಿ ಶಂಕ್ರಪ್ಪನವರು ಎಂ. ವಿರುಪಾಕ್ಷಪ್ಪನವರು, ನರಸಿಂಗರಾವ್, ಜನಾರ್ಧನರಾವ್ ದೇಸಾಯಿ, ದೇವೇಂದ್ರಕುಮಾರ ಹಕಾರಿ, ಡಾ: ಪಂಚಾಕ್ಷರಿ ಹಿರೇಮಠ ಹಾಗೂ ಇನ್ನೂ ಹಲವಾರು ಹೋರಾಟಗಾರರ ತ್ಯಾಗ ಬಲಿದಾನಗಳಿಂದ ಹೈದ್ರಾಬಾದ್-ಕರ್ನಾಟಕ ವಿಮೋಚನಾ ಹೋರಾಟ ಈ ನಾಡಿನ ಭವ್ಯ ಇತಿಹಾಸವಾಗಿ ಉಳಿದಿದೆ.
ಹೈದ್ರಾಬಾದ್-ಕರ್ನಾಟಕ ಪ್ರದೇಶದ ಜನತೆ ದೇಶಕ್ಕಾಗಿ ಹಾಗೂ ಮೊಗಲಾಯಿ ಗಳ ವಿರುದ್ಧ ಹೀಗೆ ಎರಡೆರಡು ಬಾರಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದು, ಈ ಭಾಗದ ಜನರ ದೇಶಪ್ರೇಮ ಮತ್ತು ಕೆಚ್ಚೆದೆಯನ್ನು ಬಿಂಬಿಸುತ್ತದೆ. ಸ್ವಾತಂತ್ರ್ಯ ಹೋರಾಟದ ರೋಚಕ ಇತಿಹಾಸ ಹಾಗೂ ಅದರ ಮಹತ್ವವನ್ನು ನಾವೆಲ್ಲರೂ ಅರಿತು, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನವನ್ನು ಸ್ಮರಿಸಿ, ಗೌರವಿಸಬೇಕಾದ್ದು, ನಮ್ಮೆಲ್ಲರ ಕರ್ತವ್ಯವಾಗಿದೆ.
ಸರ್ಕಾರ ಹೈದ್ರಾಬಾದ ಕರ್ನಾಟಕ ಭಾಗದ ಜಿಲ್ಲೆಗಳ ಅಭಿವೃದ್ದಿಗಾಗಿ ಹಿಂದುಳಿದಿರುವಿಕೆಯನ್ನು ಮನಗಂಡು ವಿಶೇಷ ಅಭಿವೃದ್ದಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಇದಕ್ಕಾಗಿಯೇ ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಿ ಹಲವಾರು ಯೋಜನೆಗಳನ್ನು ಕೈಗೊಂಡು ಜನಪರ ನೀತಿ, ಸಾಮಾಜಿಕ ನ್ಯಾಯ ಮತ್ತು ರೈತರ ಹಿತಾಸಕ್ತಿಗೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದ್ದು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ.
ಪ್ರಸಕ್ತ ವರ್ಷ ಮುಂಗಾರು ಉತ್ತಮ ಆರಂಭವಾಗಿತ್ತಾದರೂ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಸಕಾಲದಲ್ಲಿ ಮಳೆ ಬಾರದ ಕಾರಣ ಬೆಳೆಗಳು ಒಣಗುವ ಹಂತದಲ್ಲಿವೆ. ಆದರೆ ಮಲೆನಾಡಿನಲ್ಲಿ ಉತ್ತಮ ಮಳೆಯಾದ ಕಾರಣ ತುಂಗಭದ್ರಾ ಜಲಾಶಯದಲ್ಲಿ ಸಂಪೂರ್ಣ ಭರ್ತಿಯಾಗಿದ್ದು ಆಶಾಭಾವನೆಯನ್ನು ಉಳಿಸಿದಂತಾಗಿದೆ.
ಕೊಪ್ಪಳ ಜಿಲ್ಲೆಯಲ್ಲಿ ಕುಕನೂರು, ಕನಕಗಿರಿ ಮತ್ತು ಕಾರಟಗಿ ಸೇರಿದಂತೆ ಒಟ್ಟು 03 ಹೊಸ ತಾಲೂಕುಗಳು ರಚನೆಯಾಗಿದ್ದು ನೂತನ ತಾಲೂಕುಗಳು 2018 ರ ಜನವರಿ 01 ರಿಂದ ಅಸ್ತಿತ್ವಕ್ಕೆ ಬಂದಿರುತ್ತವೆ. ಹೊಸ ತಾಲೂಕುಗಳಲ್ಲಿ ತಹಶೀಲ್ದಾರರ ಕಚೇರಿ ಕಾರ್ಯನಿರ್ವಹಿಸುತ್ತಿದ್ದು ಕಚೇರಿಗಳ ನಿರ್ವಹಣೆಗಾಗಿ ತಲಾ ರೂ.10 ಲಕ್ಷ ಬಿಡುಗಡೆ ಮಾಡಲಾಗಿದೆ.
ಸತತ ಬರ ಪರಿಸ್ಥಿತಿಯಿಂದ ಆತಂಕಕ್ಕೀಡಾಗಿರುವ ರೈತರನ್ನು ಸಂಕಷ್ಟದಿಂದ ಪಾರು ಮಾಡುವ ಉದ್ದೇಶದಿಂದ ಹಾಗೂ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಸಹಕಾರಿ ಸಂಘಗಳಲ್ಲಿ ರೈತರು ಪಡೆದಿರುವ ರೂ. ಒಂದು ಲಕ್ಷದವರೆಗಿನ ಚಾಲ್ತಿ ಸಾಲವನ್ನು ದಿನಾಂಕ;10-07-2018 ರ ಒಳಗಿನ ಸಾಲವನ್ನು ಮನ್ನಾ ಮಾಡಲಾಗಿದೆ. ಮತ್ತು ಸುಸ್ತಿದಾರರಾಗಿರುವವರು ಸಹ ಬಡ್ಡಿಯನ್ನು ಪಾವತಿಸಿ ಸಾಲ ಮನ್ನಾ ಸೌಲಭ್ಯ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಈ ಮೂಲಕ ನಮ್ಮ ಸರ್ಕಾರ ರೈತರ ಹಿತ ಕಾಪಾಡುವಲ್ಲಿ ಪ್ರಾಮಾಣಿಕ ಯತ್ನ ಮಾಡಿದೆ.
ರಾಷ್ಟ್ರೀಕೃತ ಬ್ಯಾಂಕ್‍ಗಳು ಹಾಗೂ ವಾಣಿಜ್ಯ ಬ್ಯಾಂಕ್‍ಗಳಲ್ಲಿನ ರೈತರ ಸಾಲ ಮನ್ನಾ ಮಾಡುವ ನಿಟ್ಟಿನಲ್ಲಿ ಈಗಾಗಲೇ ಸರ್ಕಾರ ಆದೇಶ ಹೊರಡಿಸಿದ್ದು ಖಾಸಗಿ ಲೇವಾದೇವಿ ಸಾಲ ಮನ್ನಾ ಮಾಡಲು ಸಹ ಕ್ರಮ ಕೈಗೊಳ್ಳುವ ಮೂಲಕ ಎಲ್ಲಾ ಸಾಲಗಳಿಂದಲೂ ಸಹ ರೈತರು ಋಣಮುಕ್ತರಾಗಿ ಸಾಲದ ಸಂಕೋಲೆಯಿಂದ ಹೊರಬಂದು ನೆಮ್ಮದಿಯಿಂದ ಬಾಳಿ, ಬದುಕಬೇಕೆನ್ನುವ ಗುರಿ, ಉದ್ದೇಶ ಸರ್ಕಾರದ್ದಾಗಿದೆ.
ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಯೋಜನೆ: 2018-19 ನೇ ಸಾಲಿಗೆ ಕೊಪ್ಪಳ ಜಿಲ್ಲೆಗೆ ಸಾಂಸ್ಥಿಕ ವಲಯದಲ್ಲಿ ರೂ.5584.69 ಲಕ್ಷ ಮತ್ತು ಮೂಲಭೂತ ಸೌಕರ್ಯ ವಲಯದಲ್ಲಿ ರೂ.4556.95 ಲಕ್ಷಗಳ ಅನುದಾನವನ್ನು ನಿಗದಿಪಡಿಸಲಾಗಿದ್ದು, ಸದರಿ ಅನುದಾನಕ್ಕೆ ಕ್ರಿಯಾ ಯೋಜನೆ ಅನುಮೋದನೆ ಹಂತದಲ್ಲಿದೆ.
ಬಡವರ ಹಸಿವನ್ನು ನೀಗಿಸುವ 5 ಇಂದಿರಾ ಕ್ಯಾಂಟೀನ್‍ಗಳು ಮಂಜೂರಿಯಾಗಿದ್ದು ತಲಾ ರೂ.92 ಲಕ್ಷಗಳಲ್ಲಿ ಕಟ್ಟಡ ನಿರ್ಮಾಣ ಆರಂಭಿಕ ಹಂತದಲ್ಲಿವೆ.
ನಗರೋತ್ಥಾನ ಹಂತ-3 ರಡಿ ಜಿಲ್ಲೆಯ 9 ನಗರ ಸ್ಥಳೀಯ ಸಂಸ್ಥೆಗಳಿಗೆ ರೂ.109.50 ಕೋಟಿ ಅನುದಾನ ಹಂಚಿಕೆಯಾಗಿದ್ದು, ಈಗಾಗಲೇ ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ.
ಎಸ್ ಎಫ್ ಸಿ ಮುಕ್ತನಿಧಿಯಡಿ ನಗರ ಸ್ಥಳೀಯ ಸಂಸ್ಥೆಗಳಿಗೆ ರೂ.12.54 ಕೋಟಿಗಳು ಹಂಚಿಕೆಯಾಗಿದ್ದು 101 ಕಾಮಗಾರಿಗಳಿಗೆ ಮಂಜೂರಾತಿ ನೀಡಿ ಕೆಲಸ ಪ್ರಗತಿಯಲ್ಲಿದೆ.
14 ನೇ ಹಣಕಾಸು ಸಾಮಾನ್ಯ ಮೂಲ ಅನುದಾನದಲ್ಲಿ ರೂ 18.88 ಕೋಟಿಗಳು ಹಂಚಿಕೆಯಂತೆ 117 ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ.
ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಯಲ್ಲಿ 212497 ಕುಟುಂಬಗಳನ್ನು ನೊಂದಾಯಿಸಿ ಜಾಬ್ ಕಾರ್ಡ್ ನವೀಕರಿಸಿ ದೃಡೀಕರಣಗೊಳಿಸಲಾಗಿದೆ.
ಉದ್ಯೋಗಕ್ಕಾಗಿ ಯಾರು ಸಹ ವಲಸೆ ಹೋಗದಂತೆ 2018-19 ನೇ ಸಾಲಿಗೆ ರೂ. 155.00 ಕೋಟಿಗಳಿಗೆ ಕ್ರಿಯಾ ಯೋಜನೆಯನ್ನು ತಯಾರಿಸಿ ಸೆಪ್ಟೆಂಬರ್ 14 ರ ವರೆಗೆ ಉದ್ಯೋಗ ನೀಡಿ 13.97 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ. ಇದಕ್ಕಾಗಿ ರೂ.72.19 ಕೋಟಿಗಳ ಅನುದಾನ ಬಳಕೆ ಮಾಡಲಾಗಿದೆ.
ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಡಿ ರೂ.3.10 ಕೋಟಿ ಹಾಗೂ ಗ್ರಾಮೀಣ ರಸ್ತೆಗಳ ನಿರ್ವಹಣೆಗಾಗಿ ರೂ.2.67 ಕೋಟಿ ಅನುದಾನ ನಿಗದಿಪಡಿಸಲಾಗಿದೆ.
ಕೊಪ್ಪಳ ಜಿಲ್ಲೆಗೆ ಸಮರ್ಪಕ ಕುಡಿಯುವ ನೀರಿನ ಪೂರೈಕೆಗಾಗಿ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯಡಿ ರೂ. 141.93 ಕೋಟಿಗಳಿಗೆ ಕ್ರಿಯಾ ಯೋಜನೆ ತಯಾರಿಸಿದೆ.
ಜಿಲ್ಲೆಗೆ 16 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಮಂಜೂರಾಗಿರುತ್ತವೆ. ಇದರಿಂದ 148 ಗ್ರಾಮಗಳಿಗೆ ಶುದ್ಧ ನೀರು ಪೂರೈಸಲಾಗುತ್ತದೆ.
ಕುಷ್ಟಗಿ ಹಾಗೂ ಯಲಬುರ್ಗಾ ತಾಲೂಕಿನ 331 ಗ್ರಾಮಗಳ ಡಿ.ಬಿ.ಓ.ಟಿ. ಆಧಾರಿತ ಕುಡಿಯುವ ನೀರು ಸರಬರಾಜು ಯೋಜನೆಯನ್ನು ರೂ. 697.90 ಕೋಟಿಗಳಲ್ಲಿ ಕೈಗೊಳ್ಳಲಾಗುತ್ತಿದೆ.
ಕೊಪ್ಪಳ ಜಿಲ್ಲೆಗೆ ಇಲ್ಲಿಯವರೆಗೆ 694 ಕುಡಿಯುವ ನೀರಿನ ಶುದ್ಧೀಕರಣ ಘಟಕಗಳು ಮಂಜೂರಾಗಿದ್ದು, ಅದರಲ್ಲಿ ಇಲ್ಲಿಯವರೆಗೆ 515 ಘಟಕಗಳು ಪೂರ್ಣಗೊಂಡಿದ್ದು ಇನ್ನುಳಿದಂತೆ ಪ್ರಗತಿಯಲ್ಲಿವೆ.
ಕೀನ್ಯಾ ದೇಶದ ನಾಕೂರ ಲೋಗ್‍ಬೋರೋ ವಿಶ್ವವಿಧ್ಯಾಲಯದಲ್ಲಿ ಸ್ವಚ್ಛತೆ ಮತ್ತು ಆರೋಗ್ಯ ಕುರಿತು 41 ನೇ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ದೇಶದ ಏಕೈಕ ಪ್ರತಿನಿಧಿಯಾಗಿ ಜಿಲ್ಲಾ ಪಂಚಾಯತ್ ಪ್ರತಿನಿಧಿಸಿರುವುದು ರಾಜ್ಯ ಹಾಗೂ ರಾಷ್ಟ್ರಕ್ಕೆ ಹೆಮ್ಮೆಯ ವಿಷಯವಾಗಿರುತ್ತದೆ.
ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶದ ಒಟ್ಟು ಕುಟುಂಬಗಳ ಸಂಖ್ಯೆ 2,46,563 ಇದೆ. ಗುರಿಯನ್ವಯ 1,59,544 ಕುಟುಂಬಗಳು ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡಿದ್ದರಿಂದ ಸರ್ಕಾರ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿ ಘೋಷಿಸಿದೆ.
ಲೋಕೋಪಯೋಗಿ ಇಲಾಖೆಯಿಂದ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ರೂ. 9.97 ಕೋಟಿ ಅನುದಾನದಲ್ಲಿ 37 ಕಿ.ಮೀ ರಾಜ್ಯ ಹೆದ್ದಾರಿ ರಸ್ತೆ ಸುಧಾರಣೆ, ವಿಶೇಷ ಅಭಿವೃದ್ಧಿ ಯೋಜನೆಯಡಿ ರೂ. 14.87 ಕೋಟಿ ಮೊತ್ತದಲ್ಲಿ 24.70 ಕಿಮೀ ರಸ್ತೆಯನ್ನು ಸುಧಾರಣೆ ಮಾಡಲು ಯೋಜಿಸಲಾಗಿದೆ.
ಸಿಎಂಜಿಎಸ್‍ವೈ ರಡಿ ರಸ್ತೆ ರೂ. 9.75 ಕೋಟಿಗಳ ಅನುದಾನದಲ್ಲಿ 17.00 ಕಿಮೀ ರಸ್ತೆ ಸುಧಾರಣೆ ಮಾಡಲು ಹಾಗೂ ನಬಾರ್ಡ ರಸ್ತೆ & ಸೇತುವೆ ಕಾಮಗಾರಿಯನ್ನು ರೂ.2.25 ಕೋಟಿಗಳ ಅನುದಾನದಲಿ ಅಭಿವೃದ್ಧಿಪಡಿಸಲಾಗುತ್ತಿದೆ.
ಎಸ್‍ಸಿಪಿ ಹಾಗೂ ಟಿಎಸ್‍ಪಿ ಯೋಜನೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕಾಲೋನಿಗಳಲ್ಲಿ ರೂ. 25.11 ಕೋಟಿಗಳ ಅನುದಾನದಲ್ಲಿ 23 ಕಿಮೀ ಕಾಂಕ್ರೀಟ್ ರಸ್ತೆ ನಿರ್ಮಿಸಲು ಯೋಜಿಸಲಾಗಿದೆ.
ಉನ್ನತ ಶಿಕ್ಷಣ ಹಾಗೂ ಹೆಚ್.ಕೆ.ಆರ್.ಡಿ.ಬಿ. ಅನುದಾನದಲ್ಲಿ ಯಲಬುರ್ಗಾ ತಾ; ತಳಕಲ್ ಗ್ರಾಮದಲ್ಲಿ ರೂ.100 ಕೋಟಿಗಳಲ್ಲಿ ಸರ್ಕಾರಿ ಇಂಜಿನೀಯರಿಂಗ್ ಕಾಲೇಜು ಕಟ್ಟಡ ನಿರ್ಮಾಣ ಹಾಗೂ ರೂ. 85 ಕೋಟಿಗಳಲ್ಲಿ ಸ್ನಾತಕೋತ್ತರ ಕೇಂದ್ರ ಮತ್ತು ವೃತ್ತಿ ಕೌಶಲ್ಯ ಅಭಿವೃದ್ಧಿ ಕೇಂದ್ರ ಕಟ್ಟಡ ನಿರ್ಮಾಣ ನಡೆಯುತ್ತಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 67 ವಿದ್ಯಾರ್ಥಿ ನಿಲಯಗಳು, 6 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು, 1 ಅಲೆಮಾರಿ ಜನಾಂಗದ ಆಶ್ರಮ ಶಾಲೆ ಕಾರ್ಯನಿರ್ವಹಿಸುತ್ತಿವೆ. 1 ರಿಂದ 10 ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಮಂಜೂರಾತಿಗಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಎಸ್.ಎಸ್.ಪಿ. ಸ್ಕಾಲರ್‍ಶಿಪ್ ಪೋರ್ಟಲ್ ತಂತ್ರಾಂಶವನ್ನು ಹೊಸದಾಗಿ ಜಾರಿಗೆ ತರಲಾಗಿದೆ.
ಸಮಾಜ ಕಲ್ಯಾಣ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ 61 ಮೆಟ್ರಿಕ್ ಪೂರ್ವ, ನಂತರದ ವಿದ್ಯಾರ್ಥಿ ನಿಲಯಗಳು, ಇದರಲ್ಲಿ ಗಂಡು ಮಕ್ಕಳ 43 ಹಾಗೂ ಹೆಣ್ಣು ಮಕ್ಕಳ 18 ವಿದ್ಯಾರ್ಥಿ ನಿಲಯಗಳು ಇರುತ್ತವೆ.
ಜಿಲ್ಲೆಯಲ್ಲಿ ಪ್ರಸ್ತುತ ವರ್ಷದಲ್ಲಿ ಪ್ರಾರಂಭವಾದ ಮೊರಾರ್ಜಿ ದೇಸಾಯಿ ವಸತಿ ಕಾಲೇಜ್ ಸಿದ್ದಾಪೂರ ಸೇರಿದಂತೆ ಒಟ್ಟು 24 ಮೊರಾರ್ಜಿ ದೇಸಾಯಿ/ಕಿತ್ತೂರು ರಾಣಿ ಚನ್ನಮ್ಮ/ಡಾ||ಬಿ.ಆರ್. ಅಂಬೇಡ್ಕರ್/ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು 4240 ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆಯಡಿ ಜಿಲ್ಲೆಯಲ್ಲಿ ಒಟ್ಟು 962 ಪ್ರಾಥಮಿಕ ಶಾಲೆಗಳು ಹಾಗೂ 155 ಪ್ರೌಢ ಶಾಲೆಗಳು ಸೇರಿದಂತೆ ಒಟ್ಟು 1117 ಸರ್ಕಾರಿ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಪ್ರಸ್ತುತ 656 ಪದವೀಧÀರ ಶಿಕ್ಷಕÀರ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ.
2018-19 ನೇ ಸಾಲಿನಲ್ಲಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯಡಿಯಲ್ಲಿ 2 ಹೊಸ ಪ್ರೌಢ ಶಾಲೆಗಳು ಮಂಜೂರಾಗಿರುತ್ತವೆ. (ಯಲಬುರ್ಗಾ ತಾಲೂಕಿನ ಹುಣಸಿಹಾಳ ಮತ್ತು ಕುಷ್ಟಗಿ ತಾಲೂಕಿನ ಕ್ಯಾದಿಗುಪ್ಪ)
ಆರೋಗ್ಯ ; ಕುಕನೂರ ಪಟ್ಟಣದಲ್ಲಿ ರೂ.9.50 ಕೋಟಿ ವೆಚ್ಚದಲ್ಲಿ 30 ಹಾಸಿಗೆಯುಳ್ಳ ಮಕ್ಕಳ ಆಸ್ಪತ್ರೆ ಹಾಗೂ ಗಂಗಾವತಿ ಪಟ್ಟಣದಲ್ಲಿ ರೂ.8 ಕೋಟಿಯಲ್ಲಿ 30 ಹಾಸಿಗೆಯುಳ್ಳ ಮಕ್ಕಳ ಆಸ್ಪತ್ರೆ ಮಂಜೂರಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ.
ಕುಷ್ಟಗಿ ತಾ ; ಹನುಮಸಾಗರ ಹಾಗೂ ಹನುಮನಾಳದಲ್ಲಿನ ಪಿ.ಹೆಚ್.ಸಿ.ಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಇದಕ್ಕಾಗಿ ರೂ.4 ಕೋಟಿ ಕಾಮಗಾರಿ ನಡೆಯುತ್ತಿದೆ. ಮುದೇನೂರು, ಚಳಗೇರಾ ಪಿ.ಹೆಚ್.ಸಿ, ವಸತಿ ಗೃಹಗಳನ್ನು ತಲಾ ರೂ.1.75 ಕೋಟಿಯಲ್ಲಿ ನಿರ್ಮಾಣ ಕಾಮಗಾರಿ ನಡೆಯುತ್ತಿವೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ; ಮಾತೃಪೂರ್ಣ ಯೋಜನೆಯಡಿ ಆಗಸ್ಟ್ ಅಂತ್ಯದವರೆಗೆ 15486 ಗರ್ಭಿಣಿಯರು, 12932 ಬಾಣಂತಿಯರು ಹಾಗೂ .ಕ್ಷೀರ ಭಾಗ್ಯ ದಡಿ 6 ತಿಂಗಳಿಂದ 6 ವರ್ಷದೊಳಗಿನ 131282 ಅಂಗನವಾಡಿ ಮಕ್ಕಳಿಗೆ ಹಾಲು ನೀಡಿ ರೂ. 83.00 ಲಕ್ಷ ವೆಚ್ಚ ಭರಿಸಲಾಗಿದೆ.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಕಳೆದ ವರ್ಷ ಕುಷ್ಟಗಿಯಲ್ಲಿ ಹೊಸದಾಗಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾರಂಭವಾಗಿದೆ.
ಯಲಬುರ್ಗಾದಲ್ಲಿ ಸರಕಾರಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಬಾಲಕಿಯರ ಪದವಿ ಪೂರ್ವ ವಸತಿ ಕಾಲೇಜು ಹಾಗೂ ಕಾರಟಗಿ ಯಲಬುರ್ಗಾ ಕೊಪ್ಪಳದಲ್ಲಿ ತಲಾ ಒಂದು ಅಲ್ಪಸಂಖ್ಯಾತರ ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯಗಳು ಪ್ರಾರಂಭವಾಗಿವೆ.
ಜಿಲ್ಲೆಯ ಪ್ರಸಿದ್ದ ಧಾರ್ಮಿಕ ಕ್ಷೇತ್ರವಾದ ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಅತ್ಯಾಧುನಿಕವಾಗಿ ಗೆಸ್ಟ್ ರೂಂಗಳನ್ನು ನಿರ್ಮಿಸಲು ರೂ.5.52 ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭಗೊಂಡಿದೆ.
ರೂ.90 ಲಕ್ಷಗಳಲ್ಲಿ ಶೌಚಾಲಯ ಹಾಗೂ ರೂ.154.41 ಲಕ್ಷಗಳಲ್ಲಿ ವಾಣಿಜ್ಯ ಮಳಿಗೆಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿವೆ.
ದೇವಸ್ಥಾನದಿಂದ ತುಂಗಭದ್ರಾ ನದಿ ದಂಡೆಯವರೆಗೆ ರೂ.96 ಲಕ್ಷಗಳಲ್ಲಿ ಸಿ.ಸಿ.ರಸ್ತೆ ಮತ್ತು ವಿದ್ಯುತ್ ದೀಪದ ಕಾಮಗಾರಿ ಮುಕ್ತಾಯಗೊಂಡಿದೆ.
ದೇವಸ್ಥಾನದ ಪ್ರದೇಶದಲ್ಲಿ ಸಮಗ್ರ ಒಳಚರಂಡಿ ಕಾಮಗಾರಿಗೆ ರೂ.482.10 ಲಕ್ಷ ಹಾಗೂ ರೂ.430 ಲಕ್ಷಗಳಲ್ಲಿ ಗೆಸ್ಟ್ ರೂಂಗಳ ಮೊದಲನೇ ಮಹಡಿ ನಿರ್ಮಾಣ ಕಾಮಗಾರಿಗೆ ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ.
ಹೈದರಾಬಾದ್-ಕರ್ನಾಟಕ ಸಮಗ್ರ ಅಭಿವೃದ್ಧಿಗಾಗಿ ನಾವೆಲ್ಲರೂ ಒಟ್ಟಾಗಿ ದುಡಿಯಬೇಕೆಂದು ಪಣತೊಡುತ್ತಾ ಮುಂಬರುವ ದಿನಗಳಲ್ಲಿ ಹೈದರಾಬಾದ್-ಕರ್ನಾಟಕ ಸರ್ವತೋಮುಖ ಅಭಿವೃದ್ಧಿ ಸಾಧಿಸುವುದೆಂಬ ದೃಢ ವಿಶ್ವಾಸ ಹೊಂದಿದ್ದೇನೆ. ಹೈದ್ರಾಬಾದ್ ವಿಮೋಚನಾ ದಿನದಲ್ಲಿ ಭಾಗವಹಿಸಿರುವುದು ನನಗೆ ಸಿಕ್ಕ ಸೌಭಾಗ್ಯವೆಂದು ಭಾವಿಸಿ ಎಲ್ಲರಿಗೂ ಮತ್ತೊಮ್ಮೆ ವಂದಿಸಿ ನನ್ನ ಮಾತುಗಳನ್ನು ಮುಗಿಸುತ್ತೇನೆ.
ಜೈ ಹಿಂದ್- ಜೈ ಕರ್ನಾಟಕ

Please follow and like us:
error