You are here
Home > Koppal News > ಸಂತ ಸೇವಾಲಾಲ ಜಯಂತಿ : ಮಾ. ೦೧ ರಂದು ಸರ್ಕಾರಿ ಕಾರ್ಯಕ್ರಮವಾಗಿ ಆಚರಣೆ

ಸಂತ ಸೇವಾಲಾಲ ಜಯಂತಿ : ಮಾ. ೦೧ ರಂದು ಸರ್ಕಾರಿ ಕಾರ್ಯಕ್ರಮವಾಗಿ ಆಚರಣೆ

ಇದೇ ಮೊದಲ ಬಾರಿಗೆ ಸಂತ ಸೇವಾಲಾಲ್ ಅವರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಮಾ. ೦೧ ರಂದು ಆಚರಿಸಲಾಗುವುದು ಎಂದು ಕೊಪ್ಪಳ ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ಹೇಳಿದರು.
ಸಂತ ಸೇವಾಲಾಲ್ ಅವರ ಜಯಂತಿ ಆಚರಣೆ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರದಂದು ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇದೇ ಮೊದಲ ಬಾರಿಗೆ ಸರ್ಕಾರದಿಂದ ಸಂತ ಸೇವಾಲಾಲ್ ಜಯಂತಿ ಆಚರಿಸಲು ಆದೇಶ ಬಂದಿದ್ದು, ಜಿಲ್ಲಾಡಳಿತದಿಂದ ಜಿಲ್ಲಾ ಕೇಂದ್ರದಲ್ಲಿ ಸಂತ ಸೇವಾಲಾಲ್ ಅವರ ಜಯಂತಿಯನ್ನು ಫೆ. ೧೫ ರಂದು ಆಚರಿಸಬೇಕಿತ್ತು. ಆದರೆ ಸಮಾಜದ ಮುಖಂಡರ ಮನವಿ ಮೇರೆಗೆ ಮಾರ್ಚ. ೦೧ ರಂದು ಬೆಳಿಗ್ಗೆ ೧೧ ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ಆಚರಿಸಲಾಗುವುದು. ಕಾರ್ಯಕ್ರಮದ ಅಂಗವಾಗಿ ಅಂದು ಬೆಳಿಗ್ಗೆ ೧೧ ಗಂಟೆಗೆ ಕೊಪ್ಪಳದ ಸಾಹಿತ್ಯ ಭವನದಲ್ಲಿ ವೇದಿಕೆಯ ಸಮಾರಂಭ ಜರುಗಲಿದೆ. ಸಂತ ಸೇವಾಲಾಲ್ ಅವರ ಕುರಿತು ಉಪನ್ಯಾಸ ನೀಡಲು ಗಂಗಾವತಿಯ ಎಂ.ಎನ್.ಎಂ ಕಾಲೇಜಿನ ಪ್ರಾಧ್ಯಾಪಕರಾದ ರವಿ ಚೌಹಾಣ ಅವರನ್ನು ಆಹ್ವಾನಿಸಲಾಗುವುದು. ಸಮಾರಂಭದ ನಂತರ ಸಂತ ಸೇವಾಲಾಲ್‌ರವರ ಭಾವಚಿತ್ರದ ಮೆರವಣಿಗೆಯು ವಿವಿಧ ಕಲಾತಂಡಗಳೊಂದಿಗೆ ಸಾಹಿತ್ಯ ಭವನದಿಂದ ಬಹದ್ದೂರಬಂಡಿವರೆಗೆ ಅದ್ದೂರಿಯಾಗಿ ಜರುಗಲಿದೆ. ಜಿಲ್ಲೆಯ ವಿವಿಧ ಶಾಲಾ-ಕಾಲೇಜುಗಳಲ್ಲಿ ಫೆ. ೧೫ ರಂದೇ ಸಂತ ಸೇವಾಲಾಲ್ ಅವರ ಜಯಂತಿ ಆಚರಿಸಬೇಕು. ಸಮಾರಂಭದ ದಿನದಂದು, ರಸ್ತೆ ಸ್ವಚ್ಛತೆ, ಮೆರವಣಿಗೆಯಲ್ಲಿ ಹಾಗೂ ವೇದಿಕೆ ಸಮಾರಂಭದಲ್ಲಿ ಪಾಲ್ಗೊಳ್ಳುವ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಕೈಗೊಳ್ಳಬೇಕು. ಅಗತ್ಯ ಪೊಲೀಸ್ ಬಂದೋಬಸ್ತ್ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾದಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕಾರ್ಯಕ್ರಮದ ಯಶಸ್ವಿಗೆ ಎಲ್ಲ ಸಮಾಜದ ಮುಖಂಡರು, ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಯು. ನಾಗರಾಜ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ವಿವಿಧ ಸಮಾಜದ ಮುಖಂಡರುಗಳು ಭಾಗವಹಿಸಿ, ಉಪಯುಕ್ತ ಸಲಹೆ ಸೂಚನೆಗಳನ್ನು ನೀಡಿದರು

Top