ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ-೨೦೧೯ರ ಟ್ರೈಲರ್ ಸಾಂಗ್: ಬಿಡುಗಡೆ

ಕೊಪ್ಪಳ: ಸಂಸ್ಥಾನ ಶ್ರೀ ಗವಿಮಠ ಜಾತ್ರೆಯೂ ಪ್ರತಿ ವರ್ಷ ವಿಭಿನ್ನ, ವಿಶಿಷ್ಟ ರೂಪದಲ್ಲಿ ಅರ್ಥ ಪೂರ್ಣವಾಗಿ ಜರುಗುತ್ತಿದೆ. ೨೦೧೯ ರ ಈ ಬಾರಿಯೂ ಜನೇವರಿ ೨೨, ೨೩ & ೨೪ ರಂದು ನಡೆಯುವ ಅಜ್ಜನ ಜಾತ್ರೆಗೆ ಭಕ್ತರನ್ನು ಆಹ್ವಾನಿಸಲು ಹೊಸಪೇಟೆಯ ಪ್ರೋಮೋ ಮೇಕರ್ ಸಂಸ್ಥೆ ಹಾಗೂ ಗೆಳೆಯರ ಬಳಗವು ಸೃಜನಾತ್ಮಕ ಕಲ್ಪನೆಯಲ್ಲಿ ಅತ್ಯಾಧುನಿಕ ಕ್ಯಾಮರಾಗಳಲ್ಲಿ ಜಾತ್ರೆಯ ವೈಭವ ಮತ್ತು ಮಹಾದಾಸೋಹದವಿಸ್ಮಯ ಮೂಡಿಬಂದಿರುವ ಟ್ರೈಲರ್ ಸಾಂಗ್‌ನ್ನು ನಿರ್ಮಿಸಿದ್ದಾರೆ.

ಭಕ್ತಿಯ ಮನೆ ಮನಗಳಲ್ಲಿ
ಮುಕ್ತಿಯ ಕೆನೆ ನೆನಹಿನಲ್ಲಿ
ಓಂಕಾರವು ಕೋಟೆ ಕಟ್ಟಿ
ಬೆಟ್ಟಗಳು ಧ್ಯಾನದಲಿ
ಸಿದ್ದ ಪುರುಷ ಗವಿಸಿದ್ದನೇ
ಇಷ್ಟ ಪ್ರಾಣ ಭಾವದಲ್ಲಿ
ಜಾತ್ರೋತ್ಸವ ನಮ್ಮ ಯಾತ್ರೋತ್ಸವ –

ಎಂಬ ಸಾಹಿತ್ಯಕ್ಕೆ ಕೊಪ್ಪಳದ ಗಾಯಕ ಸದಾಶಿವ ಪಾಟೀಲರು ಮೈದುಂಬಿ ಹಾಡಿರುತ್ತಾರೆ. ಈ ಹಾಡಿನಲ್ಲಿ ವಿಶೇಷವಾಗಿ ಶ್ರೀಮಠದ ವಸತಿ ನಿಲಯದ ೨೦೦೦ ವಿದ್ಯಾರ್ಥಿಗಳು ಸುಮಾರು ೪೦೦೦ ಮೇಣದ ಬತ್ತಿಯನ್ನು ಬೆಳಗಿಸಿ ಅಜ್ಜನ ಜಾತ್ರೆಗೆ ಬನ್ನಿ ಎಂದು ಭಕ್ತರಿಗೆ ಆಹ್ವಾನಿಸುವ ಸನ್ನಿವೇಶ ಟ್ರೈಲರ್ ಸಾಂಗಿನ ವಿಶೇಷತೆಯಾಗಿದೆ.

ಸಾಹಿತಿ ಎಚ್ ಎಸ್ ಪಾಟೀಲರಿಂದ ಟ್ರೈಲರ್ ಸಾಂಗ್ ಬಿಡುಗಡೆ

ಕೊಪ್ಪಳ: ನಗರದ ಶ್ರೀ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದ ಸಭಾ ಭವನದಲ್ಲಿ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ-೨೦೧೯ರ ಟ್ರೈಲರ್ ಸಾಂಗ್ ಬಿಡುಗಡೆ ಕಾರ್ಯಕ್ರಮ ಜರುಗಿತು. ಸಾಹಿತಿ ಎಚ್ ಎಸ್ ಪಾಟೀಲರು
ಟ್ರೈಲರ್ ಸಾಂಗ್ ಬಿಡುಗಡೆ ಮಾಡಿ ಗವಿಸಿದ್ಧೇಶ್ವರ ಈ ನೆಲದ ಪಾವನ ಪುರುಷ. ಪವಾಡ ಪುರುಷ. ಭಕ್ತಿಯಿಂದ ನೆನೆದರೆ ಭವ ಬಂದನಗಳು ದೂರವಾಗುತ್ತವೆ. ಆ ಲೀಲಾ ಪುರುಷ ಶ್ರೀ ಗವಿಸಿದ್ಧೇಶ್ವರನ ಜಾತ್ರಾ ಮಹೋತ್ಸವ ದಕ್ಷಿಣ ಭಾರತದ ಮಹಾಕುಂಭಮೇಳವೆಂದೇ ಹೆಸರು ಪಡೆದಿರುತ್ತದೆ. ದೇಶ ವಿದೇಶಗಳಲ್ಲಿ ಸಹ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಮಹತ್ವ ಪಡೆದುಕೊಂಡಿರುತ್ತದೆ. ಆಧುನಿಕತೆಯ ಸ್ಪರ್ಶದಿಂದ ಟ್ರೈಲರ್ ಸಾಂಗ್‌ವೊಂದು ರಚಿಸಿರುವದು ಸೂಕ್ತವಾಗಿದ್ದೂ ಮತ್ತು ಅವಶ್ಯಕತೆಯಾಗಿದೆ. ಇದು ಭಕ್ತರಿಗೆ ಆಹ್ವಾನ ಪತ್ರದ ಮಾದರಿಯಲ್ಲಿಯೇ ಕರೆ ನೀಡುತ್ತಿರುವದು ಹೆಮ್ಮಯ ವಿಷಯವೆಂದರು. ಪ್ರಾಚಾರ್ಯ ಎಂಎಸ್ ದಾದ್ಮಿ, ತಂತ್ರಜ್ಞ ಮಂಜುನಾಥ ಉಲ್ಲತ್ತಿ ವಿದ್ಯಾರ್ಥಿಗಳು, ಅಧ್ಯಾಪಕರು ಇದ್ದರು. ಪ್ರಕಾಶ ಬಳ್ಳಾರಿ ನಿರೂಪಿಸಿದರು.

Please follow and like us:
error