ಶೌಚಾಲಯ ನಿರ್ಮಾಣ :  ಜು. ೧೩ ರಂದು ವಿಶೇಷ ಜಾಗೃತಿ ಕಾರ್ಯಗಾರ- ನಂಜಯ್ಯನಮಠ

ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಶೌಚಾಲಯಗಳ ನಿರ್ಮಾಣದಲ್ಲಿ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಕೊಪ್ಪಳ ಜಿಲ್ಲೆ ಹೆಚ್ಚು ಪ್ರಗತಿ ಸಾಧಿಸಿದ್ದು, ಮಹಿಳೆಯರಿಂದಲೇ ಮಹಿಳೆಯರಿಗೆ ಜಾಗೃತಿ ಮೂಡಿಸಲು ಜು. ೧೩ ರಂದು ಬೆಳಿಗ್ಗೆ ೧೦ ಗಂಟೆಗೆ ಕೊಪ್ಪಳ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಆಯೋಜಿಸಲಾಗುವುದು ಎಂದು ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆಯ ಭೌತಿಕ ಕಾಮಗಾರಿಗಳ ಪರಿಶೀಲನಾ ಸಮಿತಿಯ ಅಧ್ಯಕ್ಷರಾದ ನಂಜಯ್ಯನಮಠ ಎಸ್.ಜಿ. ಅವರು ಹೇಳಿದರು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖಾ ಭೌತಿಕ ಕಾಮಗಾರಿಗಳ ಪರಿಶೀಲನೆ ಕುರಿತು ಕೊಪ್ಪಳ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರದಂದು ಹಮ್ಮಿಕೊಳ್ಳಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  ಕೊಪ್ಪಳ ಜಿಲ್ಲೆಯಲ್ಲಿ ಪ್ರತಿಯೊಂದು ಕುಟುಂಬಗಳು ಶೌಚಾಲಯ ಹೊಂದಿರಬೇಕೆಂಬ ಕುರಿತು ಜನಜಾಗೃತಿ ಮೂಡಿಸಿದ ಪರಿಣಾಮವಾಗಿ ಸದ್ಯ ಜಿಲ್ಲೆಯಲ್ಲಿ ಶೇ.೭೦ ರಷ್ಟು ಶೌಚಾಲಯಗಳು ನಿರ್ಮಾಣಗೊಂಡಿದ್ದು, ಉಳಿದ ಶೇ.೩೦ ರಷ್ಟು ಶೌಚಾಲಯಗಳು ಶೀಘ್ರ ನಿರ್ಮಾಣವಾಗಬೇಕಿದೆ.  ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ, ಪಟ್ಟಣಗಳಲ್ಲಿ, ಮನೆ-ಮನೆಗೆ ಶೌಚಾಲಯ ನಿರ್ಮಾಣಗೊಂಡು ಅಕ್ಟೋಬರ್ ೦೨ ರೊಳಗಾಗಿ ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯಾಗಿ ಘೋಷಿಸುವ ಆಶಯವನ್ನು ಸರ್ಕಾರ ಹೊಂದಿದೆ.  ಶೌಚಾಲಯ ನಿರ್ಮಾಣದ ಕುರಿತು ಮಹಿಳೆಯರಿಗೆ ಮಹಿಳೆಯರಿಂದಲೇ ಜಾಗೃತಿ ಮೂಡಿಸುವದು ಸೂಕ್ತ, ಈ ನಿಟ್ಟಿನಲ್ಲಿ ಜಿಲ್ಲೆಯ ಆಶಾ ಕಾರ್ಯಕರ್ತರು, ಅಂಗನವಾಡಿ  ಮೇಲ್ವಿಚಾರಕಿಯರು, ಆಶಾ ಕಾರ್ಯಕರ್ತೆಯರು, ಸಂಜೀವಿನಿ ಯೋಜನೆ ಗ್ರಾಮ ಪಂಚಾಯತಿ ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷರು, ಸದಸ್ಯರನ್ನು ಒಗ್ಗೂಡಿಸಿ ಜಾಗೃತಿ ಕಾರ್ಯಗಾರವನ್ನು ಜುಲೈ ೧೩ ರಂದು ಕೊಪ್ಪಳದಲ್ಲಿ ಆಯೋಜಿಸಲಾಗುತ್ತಿದೆ.  ಅಕ್ಟೋಬರ್ ೦೨ ರಂದು ರಾಜ್ಯದ ಸುಮಾರು ೧೦ ರಿಂದ ೧೨ ಜಿಲ್ಲೆಯಗಳನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಗಳನ್ನಾಗಿ ಘೋಷಿಸುವ ಆಶಯವನ್ನು ಸರ್ಕಾರ ಹೊಂದಿದ್ದು, ಬಹಳಷ್ಟು ಜಿಲ್ಲೆಗಳು ಈ ನಿಟ್ಟಿನಲ್ಲಿ ಆಸಕ್ತಿಯಿಂದ ಕಾರ್ಯ ರೂಪಿಸುತ್ತಿವೆ.  ಕೊಪ್ಪಳ ಜಿಲ್ಲೆಯಲ್ಲೂ ಕೂಡ ಬಾಕಿ ಇರುವ ಶೇ. ೩೦ ರಷ್ಟು ಶೌಚಾಲಯಗಳ ನಿರ್ಮಾಣವಾದಲ್ಲಿ, ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯಾಗಲಿದೆ.ಮಳೆಯ ಕೊರತೆಯಿಂದಾಗಿ ಜಿಲ್ಲೆಯಲ್ಲಿನ ನದಿಯಲ್ಲಿ ನೀರಿನ ಕೊರತೆ ಇದೆ.  ಹೀಗಾಗಿ ಪೂರ್ಣಗೊಂಡಿರುವ ಬಹುಗ್ರಾಮ ಯೋಜನೆಯಡಿ ನೀರು ಪೂರೈಕೆಯನ್ನು ಪ್ರಾರಂಭಿಸಲು ಅಡ್ಡಿಯುಂಟಾಗಿದೆ.  ಗ್ರಾಮೀಣ ಕುಡಿಯುವ ನೀರು ಮತ್ತು ನೈಮಲ್ಯ ಯೋಜನೆ ಹಾಗೂ ಬಹುಗ್ರಾಮ ಕುಡಿಯುವ ನೀರು ಯೋಜನೆಗಳಡಿ ಕೊಪ್ಪಳ ಜಿಲ್ಲೆಯ ವಿವಿಧ ಗ್ರಾಮಗಳ ಕೆರೆಗಳ ಹಾಗೂ ಕೊಳವೆಬಾವಿಗಳ ಅಭಿವೃದ್ಧಿ, ಟ್ಯಾಂಕರ ಮೂಲಕ ನೀರು ಪೂರೈಕೆ, ಖಾಸಗಿ ಕೊಳವೆಬಾವಿಗಳಿಂದ ನೀರು ಪೂರೈಕೆ ಇತ್ಯಾದಿಗಳಲ್ಲಿ ಇನ್ನೂ ಹೆಚ್ಚಿನ ಪ್ರಗತಿ ಸಾಧಿಸಿ ಎಂದು ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆಯ ಪರಿಶೀಲನಾ ಸಮಿತಿಯ ಅಧ್ಯಕ್ಷರಾದ ನಂಜಯ್ಯನಮಠ ಎಸ್.ಜಿ. ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಕೊಪ್ಪಳ ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ ಅವರು ಮಾತನಾಡಿ, ಕೊಪ್ಪಳ ಜಿಲ್ಲೆಯಲ್ಲಿ ೨,೧೯,೯೧೬ ಬೇಸ್ ಲೈನ್ ಪ್ರಕಾರ ಕುಟುಂಬಗಳಿದ್ದು, ೧,೫೪,೦೫೪ ಶೌಚಾಲಯ ಹೊಂದಿದ ಕುಟುಂಬಗಳಾದರೆ, ಇನ್ನೂ ೬೫.೮೬೨ ಕುಟುಂಬಗಳು ಶೌಚಾಲಯ ಹೊಂದಬೇಕಿದೆ.  ಜಿಲ್ಲೆಯಲ್ಲಿ ೨೮ ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳಾಗಿದ್ದು, ಹಿರೇಬಗನಾಳ, ಕಂದಕೂರು ಮತ್ತು ಶ್ರೀರಾಮನಗರ ಗ್ರಾಮಪಂಚಾಯತಿಗಳು ಬಯಲು ಬಹಿರ್ದೆಸೆ ಮುಕ್ತ ಗ್ರಾ.ಪಂ. ಗಳಾಗಿವೆ.  ಬೇಸ್‌ಲೈನ್ ಸರ್ವೆ ಪ್ರಕಾರ ತಾಲೂಕುಗಳಿಗೆ ನೀಡಿದ ಗುರಿ, ಸಾಧಿಸಿದ ಪ್ರಗತಿಯಲ್ಲಿ ಗಂಗಾವತಿ ಮೊದಲನೆ, ಕೊಪ್ಪಳ ಎರಡನೇ, ಕುಷ್ಟಗಿ ಮೂರನೇ ಹಾಗೂ ಯಲಬುರ್ಗಾ ಕೊನೆಯ ಸ್ಥಾನದಲ್ಲಿದೆ ಎಂಬುದಾಗಿ ಸ್ವಚ್ಛ ಭಾರತ ಮಿಷನ್‌ನ ಪ್ರಗತಿ ವರದಿ ಕುರಿತು ವಿವರಿಸಿದರು.   ಸಭೆಯಲ್ಲಿ ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆಯ ಭೌತಿಕ ಕಾಮಗಾರಿಗಳ ಪರಿಶೀಲನಾ ಸಮಿತಿಯ ಸದಸ್ಯ ಟಿ. ಜನಾರ್ಧನ ಹುಲಿಗಿ, ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್‌ರಾಜಾ, ಜಿ.ಪಂ. ಹಂಗಾಮಿ ಅಧ್ಯಕ್ಷೆ ಲಕ್ಷಮ್ಮ ಎಸ್. ನೀರಲೂಟಿ, ಉಪಕಾರ್ಯದರ್ಶಿ ಎನ್.ಕೆ. ತೊರವಿ, ಸೇರಿದಂತೆ ವಿವಿಧ  ಅಧಿಕಾರಿಗಳು ಉಪಸ್ಥಿತರಿದ್ದರು.

Please follow and like us:
error